ಕಥೆ-542
ಹೊಸ ಗಿಡಗಳನ್ನು ನೆಟ್ಟು ಬೆಳೆಸೋಣ.
ರಾಮು ಎಂಬ ಒಬ್ಬ ಕಳ್ಳನಿದ್ದ. ಅವನಿಗೆ ನಾಲ್ಕು ಜನ ಮಕ್ಕಳು ಮಕ್ಕಳ ಮೇಲೆ ರಾಮುವಿಗೆ ಬಹಳ ಪ್ರೀತಿ. ಅದರಲ್ಲಿ ಕೊನೆಯವನು ಪಿಂಟು. ಪಿಂಟು ತುಂಬಾ ಜಾಣ ಅವನು ಶಾಲೆಯಲ್ಲೂ ಚುರುಕಾಗಿದ್ದ. ಅವನಿಗೆ ಕಾಡು, ಪ್ರಕೃತಿ ಪರಿಸರವೆಂದರೆ ಬಹಳ ಇಷ್ಟ. ತನ್ನ ಶಾಲೆಯ ಮೇಷ್ಟ್ರು ಕಾಡು ಉಳಿಸಬೇಕು ಬೆಳೆಸಬೇಕು, ಮರಗಳಿದ್ದರೇನೇ ನಮ್ಮ ಪರಿಸರ ಸಮತೋಲನದಲ್ಲಿರುವುದು, ಮರಗಳಿಂದಲೇ ಕಾಲಕಾಲಕ್ಕೆ ಮಳೆಯಾಗುವುದು, ನಮಗೆ ಕುಡಿಯಲು ನೀರು, ಉಸಿರಾಡಲು ಗಾಳಿ ಎಲ್ಲವು ಸಿಗುವುದು ಎಂದೆಲ್ಲಾ ಹೇಳುವುದನ್ನು ಕೇಳಿದ್ದ. ಅದರಂತೆ ಪ್ರಕೃತಿಯನ್ನು ಬಹಳ ಪ್ರೀತಿಸುತ್ತಿದ್ದ.
ರಾಮು ಕಷ್ಟಪಟ್ಟು ದುಡಿಯದೆ ಹಣಕ್ಕಾಗಿ ಕಳ್ಳದಾರಿ ಹಿಡಿದಿದ್ದ. ಒಂದು ಕಳ್ಳರ ಗುಂಪಿನಲ್ಲಿ ಸೇರಿ ರಾತ್ರಿಯ ಕತ್ತಲಲ್ಲಿ ಆ ಕಳ್ಳರಿಗೆ ಕಾಡಿನ ಮರಗಳನ್ನು ಕಡಿದು ಹೊರಗೆ ಸಾಗಿಸಲು ಸಹಾಯ ಮಾಡುತ್ತಿದ್ದ. ಪಿಂಟೂಗೆ ಇದು ಗೊತ್ತಿತ್ತು. ಈ ರೀತಿ ಮಾಡುವುದು ತಪ್ಪೆಂದು ಅಪ್ಪನಿಗೆ ಬಹಳ ಸಲ ಹೇಳಿದರೂ ರಾಮು ಕೇಳುತ್ತಿರಲಿಲ್ಲ. ಇದೇ ರೀತಿ ಅಪ್ಪ ಮಾಡುತ್ತಿದ್ದರೆ ಒಂದು ದಿನ ನಮ್ಮ ಸುತ್ತಮುತ್ತಲಿನ ಕಾಡೇ ಮಾಯವಾಗಿ ಬಿಡಬಹದೆಂದು ಪಿಂಟೂಗೆ ಅನಿಸಿತು. ಇದಕ್ಕಾಗಿ ಅವನು ಬಹಳ ಯೋಚಿಸಿ ಒಂದು ಉಪಾಯ ಮಾಡಿದ.
ಒಂದು ದಿನ ಅಪ್ಪ ಕಳ್ಳರ ಗುಂಪಿನೊಡನೆ ಹೊರಡಲು ತಯಾರಿ ನಡೆಸುತ್ತಿದ್ದ. ಆಗ ಪಿಂಟು ಅಲ್ಲಿಗೆ ಬಂದ.
'ಅಪ್ಪಾ ನಮಗೆ ನೀನು ತಂದೆ, ಮನೆಯ ಒಳಗಿರುವ ಅಮ್ಮ ತಾಯಿ, ಆದರೆ ಮರಗಳಿಗೆ ಯಾರು ತಂದೆ ತಾಯಿ?' ಎಂದು ಕೇಳಿದ.
ರಾಮು ಹೇಳಿದ 'ಮಗನೇ ಮರಗಳಿಗೆ ಪ್ರಕೃತಿಯೇ ತಾಯಿ, ಮಳೆರಾಯನೇ ತಂದೆ'
ಪಿಂಟು ಕೇಳಿದ, "ಅಪ್ಪಾ ನಿನಗಿಷ್ಟೊಂದು ಜನ ಮಕ್ಕಳಿದ್ದಾರಲ್ಲಾ, ಯಾರಾದರೂ ನಮಗೆ, ಅಂದರೆ ನಿನ್ನ ಮಕ್ಕಳಿಗೆ ಹೊಡೆದರೆ, ಗಾಯಮಾಡಿದರೆ ಅಥವಾ ಸಾಯಿಸಿದರೆ ನೀನೇನು ಮಾಡುತ್ತೀ?'
ರಾಮು ಕೋಪದಿಂದ ನುಡಿದ 'ನಾನೇನು ಅವರನ್ನು ಸುಮ್ಮನೆ ಬಿಡುವೆನೇ? ನನ್ನ ಮಕ್ಕಳಿಗೆ ಯಾರಾದರೂ ಅಪಾಯ ಮಾಡಿದರೆ ಅವರನ್ನು ಕೊಚ್ಚಿ ಹಾಕುತ್ತೇನೆ. ನನ್ನ ಮಕ್ಕಳೆಂದರೆ ನನಗೆ ಪ್ರಾಣ' ಪಿಂಟು ಈಗ ರಾಮುನ ಕಣ್ಣುಗಳನ್ನೇ ನೋಡುತ್ತಾ, "ಅಪ್ಪಾ ನಮಗೇನಾದರೂ ಸಣ್ಣ ಪೆಟ್ಟು ತಗುಲಿದರೂ ನಿಂಗೆ ನೋವಾಗುತ್ತೆ. ಆದರೆ ನೀನು ಹಣಕ್ಕಾಗಿ ಮರಗಳನ್ನು ಕಡಿಯುತ್ತೀಯಲ್ಲಾ ಆ ಪ್ರಕೃತಿ ತಾಯಿಗೆ ಎಷ್ಟು ನೋವಾಗಬಹುದು? ಮಳೆರಾಯನಿಗೆ ಎಷ್ಟು ದುಃಖವಾಗಬಹುದು?' ಎಂದನು. ರಾಮುನ ಮನಸ್ಸಿಗೆ ಆ ಮಾತು ಬಲವಾಗಿ ನಾಟಿತು. ಅವನು, "ಅಲ್ಲ ಮಗನೇ ..' ಎಂದು ಸಮಜಾಯಿಸಿ ಹೇಳಲು ಹೋದ. ಪಿಂಟು ಅಷ್ಟಕ್ಕೆ ಅವನನ್ನು ತಡೆದು 'ಹೌದಪ್ಪಾ ನಿಮಗೆ ಆದ ಹಾಗೆ ಮರಗಳ ತಂದೆ ತಾಯಿಗಳಿಗೂ ದುಃಖವಾಗುತ್ತದೆ. ರೋಷ ಬರುತ್ತದೆ. ಹಾಗೆ ಪ್ರಕೃತಿಗೆ ರೋಷ ಬಂದಾಗಲೇ ಭೂಕಂಪವಾಗುವುದು,ಪ್ರಳಯ ಆಗುವುದು. ಮಳೆರಾಯನಿಗೆ ಕೋಪ ಬಂದರೆ ಜಲಪ್ರಳಯವನ್ನೇ ಮಾಡುತ್ತಾನೆ. ಬರವನ್ನು ತರುತ್ತಾನೆ, ನಾವು ಮರಗಳನ್ನು ನಮ್ಮ ಜೊತೆಗಾರರಂತೆ ಸ್ನೇಹದಿಂದ ಪ್ರೀತಿಯಿಂದ ನೋಡಿಕೊಂಡರೆ ಪ್ರಕೃತಿಯೂ ಮಳೆರಾಯನೂ ಶಾಂತವಾಗಿರುತ್ತಾರೆ. ಇಷ್ಟಕ್ಕೂ ಮರಗಳು ನಮಗೇನು ಅಪಕಾರ ಮಾಡಿವೆ? ನೆರಳು, ಹಣ್ಣು, ಹೂವು, ನಾವು ಸೇವಿಸಲು ಪರಿಶುದ್ಧ ಗಾಳಿ, ಸುಂದರ ಪರಿಸರ ಎಲ್ಲವನ್ನು ನಿಸ್ವಾರ್ಥದಿಂದ ಕೊಡುತ್ತವೆ, ಪ್ರತಿಯಾಗಿ ನಮ್ಮನ್ನು ಅವು ಏನೂ ಕೇಳುವುದಿಲ್ಲ. ಆದರೆ ನಾವು ಅವುಗಳನ್ನು ಎಷ್ಟು ಕೆಟ್ಟದಾಗಿ ನಡೆಸಿಕೊಳ್ಳುತ್ತೇವೆ ಇದು ತಪ್ಪಲ್ಲವೇನಪ್ಪಾ?' ಎಂದನು. ಪಿಂಟುವಿನ ವಿವೇಚನೆಗೆ ರಾಮುವಿನ ಮನಸ್ಸು ಮೃದುವಾಗಿತ್ತು. ಅವನು ಹೇಳಿದ್ದು ಸರಿ ಎನ್ನಿಸಿತ್ತು, "ನೀನು ಹೇಳುವುದು ಸರಿ ಮಗಾ. ನಾನು ಇನ್ನೆಂದೂ ಮರಗಳನ್ನು ಅನಾವಶ್ಯಕವಾಗಿ ಕಡಿಯುವುದಿಲ್ಲ. ಮರಗಳ್ಳರಿಗೆ ಸಹಾಯ ಮಾಡುವುದಿಲ್ಲ. ನನ್ನ ತಂಡದವರಿಗೂ ತಿಳಿಸಿ ಹೇಳಿ ಅವರ ಮನ ಪರಿವರ್ತನೆ ಮಾಡಲು ಯತ್ನಿಸುತ್ತೇನೆ. ಹಾಗೆ ಕೇಳದವರ ಬಗ್ಗೆ ಅರಣ್ಯ ಇಲಾಖೆಗೆ ಸುದ್ದಿ ಮುಟ್ಟಿಸುತ್ತೇನೆ' ಎಂದ. ಬೇರೆ ಉದ್ಯೋಗ ಮಾಡಿ ನಿಮ್ಮನ್ನು ಸಲವುತ್ತೇನೆ ಎಂದ. ಪಿಂಟುವಿಗೆ ಸಂತೋಷವಾಯಿತು. 'ಅಪ್ಪಾ ಈ ಖುಷಿಯಲ್ಲಿ ನಾವು ಒಂದಿಷ್ಟು ಹೊಸ ಮರಗಳನ್ನು ನೆಟ್ಟು ಬೆಳೆಸೋಣ' ಎಂದ. ಈ ಕಥೆಯಲ್ಲಿ ಬರುವ ಪಿಂಟುವಿನ ಕಾಳಜಿ ನಮಗೂ ಸ್ವಲ್ಪ ಬಂದಿದ್ದೆ ಆದರೆ, ನಾವು ಸ್ವಲ್ಪ ಗಿಡಗಳನ್ನು ಬೆಳೆಸಲು ಸಾಧ್ಯವಾಗುತ್ತದೆ. ಕೇವಲ ಗಿಡಗಳನ್ನು ನೆಟ್ಟು ಫೋಟೋ ತೆಗೆಸಿಕೊಂಡರೆ ಸಾಧ್ಯವಿಲ್ಲ, ಅವುಗಳನ್ನು ಕನಿಷ್ಠ 2 ರಿಂದ 3 ವರ್ಷ ಅವುಗಳನ್ನು ನಮ್ಮ ತಾಯಿಯ ರೂಪದಲ್ಲಿ ಕಾಳಜಿ ಮಾಡಿ ಬೆಳೆಸಬೇಕಿದೆ.
ಆಧಾರ : ಉದಯವಾಣಿ