ಕಥೆ-577
ನಮ್ಮ ತಲೆಯ ಮೇಲೆ ನಮ್ಮದೇ ಕೈ
ಮನುಷ್ಯನ ಜೀವನವೆಂದರೆ ಹಾಗೆಯೇ. ಏನಾದರೊಂದು ಸಮಸ್ಯೆ ಇದ್ದೇ ಇರುತ್ತದೆ. ಕಾರಣ ಮಾತ್ರ ನಿಗೂಢ ಅವ್ಯಕ್ತ. ಕೆಲವೊಮ್ಮೆ ಸಮಸ್ಯೆಗಳ ಸರಮಾಲೆಯೇ ಬಂದೊದಗಿದಾಗ ಕೈಕಾಲು ಬಿಡುವುದುಂಟು. ಹೇಗಾದರೂ ಮಾಡಿ ಅದರ ಮೂಲವನ್ನು ಕಂಡು ಹಿಡಿದು ಓಡಿಸಿ ಬಿಡಬೇಕೆನ್ನುವಷ್ಟು ಬೇಸರ ತರಿ ಸುತ್ತದೆ.ಆದರೆ, ಪರಿಹಾರ ಹೇಗೆ ? ಯಾರನ್ನು ಕೇಳೋಣ? ವೈದ್ಯರನ್ನು ಕೇಳಿದರೆ, ವಾತ, ಪಿತ್ಥ ಇತ್ಯಾದಿ ಧಾತುಗಳ ವಿಕಾರ, ಪಥ್ಯ ಮಾಡಬೇಕು ಎನ್ನುತ್ತಾರೆ. ಜ್ಯೋತಿಷಿಗಳನ್ನು ಕೇಳಿದರೆ, ಯಾವುದೋ ಗ್ರಹದ ಬಾಧೆ ಪರಿಹಾರ ಮಾಡಬೇಕು ಎಂದು ಬಿಡುತ್ತಾರೆ. ಮಾಂತ್ರಿಕರನ್ನೋ ಮತ್ತಿನ್ನಾರನ್ನೋ ಕೇಳಿದರೆ, ಏನೋ ಭೂತ-ಪ್ರೇತಗಳ ಬಾಧೆ ಇರಬೇಕು ಎನ್ನುತ್ತಾರೆ. ಹಿರಿಯರನ್ನು, ವೇದಾಂತಿಗಳನ್ನು ಕೇಳಿದರೆ ಜನ್ಮಾಂತರದ ಕರ್ಮ, ಅನುಭವಿಸಲೇಬೇಕು ಎಂದು ಹೇಳಿಬಿಡುತ್ತಾರೆ. ಒಟ್ಟಾರೆ ಸ್ಪಷ್ಟ ಉತ್ತರ ಎಲ್ಲೂ ಸಿಗುವುದಿಲ್ಲ. ಪ್ರಾಯಶಃ ಎಲ್ಲಾ ಸಮಸ್ಯೆಗಳ ಮೂಲ ಕಾರಣಗಳು ನಮ್ಮೊಳಗೇ ಹುದುಗಿರುತ್ತದೆ. ಜೊತೆಗೆ ಪರಿಹಾರವೂ. ಹೊರಗೆ ಎಲ್ಲೋ ಹುಡುಕುವುದನ್ನು ನಿಲ್ಲಿಸಬೇಕು. ಅಂತರಂಗದ ಕದ ತೆರೆದಾಗ ಎಲ್ಲದಕ್ಕೂ ಉತ್ತರ ಸಿಗುತ್ತದೆ. ಹೊರಗಿನವರು ಎಷ್ಟಾದರೂ ಸಲಹೆ ಕೊಡಲಷ್ಟೇ ಸಮರ್ಥರು. ಪರಿಹಾರ ನಮ್ಮ ಕೈಯಲ್ಲಿದೆ
👍💐💐💐