ಕಥೆ-590
ಸಂತೃಪ್ತಿ, ನೆಮ್ಮದಿಗಾಗಿ ಸೇವೆ.... ಸೇವೆಯೇ ನೆಮ್ಮದಿ ಸಾಧನ
ಶ್ರೀರಾಮಕೃಷ್ಣ ಪರಮಹಂಸರ ಬದುಕಲ್ಲಿ ನಡೆದ ಒಂದು ಘಟನೆ. ಬಂಗಾಳದಲ್ಲಿ ಪ್ರಸಿದ್ಧರಾಗಿದ್ದ ವೈದ್ಯರೊಬ್ಬರಿದ್ದರು. ತಮ್ಮ ಬಳಿ ಬರುತ್ತಿದ್ದ ಎಲ್ಲ ರೋಗಿಗಳನ್ನೂ ಗುಣಪಡಿಸುವುದರಲ್ಲಿ ತಜ್ಞರಾಗಿದ್ದು, ಎಲ್ಲರಿಗೂ ಚಿರಪರಿಚಿತರಾಗಿದ್ದರು. ಪ್ರತಿದಿನ ರೋಗಿಗಳನ್ನು ಕಂಡು ಅವರ ಸಮಸ್ಯೆಗಳನ್ನೆಲ್ಲ ಪರಿಹರಿಸಿದ ನಂತರ ಮನೆಗೆ ತೆರಳುವರು. ಪ್ರಸಿದ್ದಿ ಪಡೆದ ತೃಪ್ತಿಯಿದ್ದರೂ, ಅದೊಂದು ಬಗೆಯ ನಿರಾಸೆ ಮತ್ತು ನಿರುತ್ಸಾಹ ಅವರಲ್ಲಿತ್ತು. ಮನಸ್ಸಿನ ಗೊಂದಲಕ್ಕೆ ಕಾರಣ ತಿಳಿಯಲು ರಾಮಕೃಷ್ಣ ಪರಮಹಂಸರ ಬಳಿ ತೆರಳಿ ಸಮಸ್ಯೆಯನ್ನು ಹೇಳಿಕೊಂಡು ಪರಿಹಾರ ಕೇಳಿದರು.
'ಗುರುಗಳೇ ನನ್ನ ಕಾಯಕವನ್ನು ಶ್ರದ್ದೆಯಿಂದಲೇ ನಿರ್ವಹಿಸುತ್ತೇನೆ. ಪ್ರತಿದಿನ ರೋಗಿಗಳನ್ನು ಗುಣಪಡಿಸಿ ಅವರನ್ನು ಕಂಡು ಸಂತೋಷಿಸುತ್ತೇನೆ, ಆದರೆ ಮನಸಿಗೆ ನೆಮ್ಮದಿಯಿಲ್ಲ, ಇದಕ್ಕೆ ಕಾರಣ ಗೊತ್ತಾಗುತ್ತಿಲ್ಲ' ಎಂದರು. ರಾಮಕೃಷ್ಣರು- 'ನೀನು ವೃತ್ತಿಯಲ್ಲಿ ಪರಿಣಿತ ಮತ್ತು ಹೆಸರುವಾಸಿ ಎಂದು ಗೊತ್ತು. ನೂರಾರು ರೋಗಿಗಳನ್ನು ಗುಣಪಡಿಸಿರುವುದೂ ಗೊತ್ತು. ನೀನು ಮಾಡುತ್ತಿರುವ ಕೆಲಸದ ಬಗ್ಗೆ ಒಮ್ಮೆ ಯೋಚಿಸಿ ನೋಡು, ದಿನವೂ ರೋಗಿಗಳನ್ನು ಗುಣಪಡಿಸಿ ಅದರಿಂದ ಬರುವ ಹಣದಿಂದ ತೃಪ್ತಿಯಿದೆ, ಆದರೆ ಜೀವನಪ್ರೀತಿಯಿಲ್ಲ, ಆಗಾಗ ರೋಗಿಗಳಿಂದ ಹಣ ಪಡೆಯದೆ ಸೇವೆಯೆಂದು ಭಾವಿಸಿ ಅವರನ್ನು ಗುಣಪಡಿಸಿ ನೋಡು, ನಿನಗೆ ನೆಮ್ಮದಿ ದೊರೆಯುವುದು' ಎಂದರು. ಹಲವು ತಿಂಗಳುಗಳ ನಂತರ ವೈದ್ಯರು ಪರಮಹಂಸರ ಬಳಿ ಬಂದು ಗುರುಗಳೇ ನೀವಂದಂತೆ ಹಣ ಪಡೆಯದೆ ಸೇವೆ ಮಾಡಿದೆ, ಬದುಕಲ್ಲಿ ಈಗ ನಾನು ಅರಸುತ್ತಿದ್ದ ನೆಮ್ಮದಿಯಿದೆ, ಮತ್ತು ಧನ್ಯತೆ ಕಂಡುಕೊಂಡಿದ್ದೇನೆ' ಎಂದು ಅವರ ಪರಮಹಂಸರ ಕಾಲಿಗೆರಗಿದರು.
ನಮ್ಮ ಬದುಕಲ್ಲಿ ನಾವು ಉನ್ನತಕ್ಕೇರಿದಾಗ ಸಿಗುವ ಮನ್ನಣೆಗಿಂತ, ಸಾರ್ಥಕ ಸೇವೆಯೇ ಧನ್ಯತೆ ಮೂಡಬೇಕಿದೆ. ಹಣಕ್ಕಾಗಿ ಜೀವನ ನಡೆಸುವುದಕ್ಕಿಂತ ಅನ್ಯರಿಗೆ ಮಾಡುವ ಸಣ್ಣ ಸಣ್ಣ ಉಪಕಾರಗಳೇ ಜೀವನಪ್ರೀತಿಯನ್ನು ಸಾಕಾರಗೊಳಿಸುತ್ತವೆ.
ಅಪೇಕ್ಷೆ ಪಡದೆ ಸಹಾಯ ಮಾಡುವ ಗುಣವಿದ್ದಲ್ಲಿ ಹಸ್ತಗಳನ್ನು ಚಾಚಿರಿ. ಇಲ್ಲವಾದರೆ ಕೈ ಮುಗಿಯಿರಿ, ಅನ್ಯರಿಗೆ ದಾರಿ ಬಿಡಿ - ವಿವೇಕಾನಂದರು...
ನಮ್ಮಿಂದ ಯಾರಿಗಾದರೂ ಸಹಾಯವಾದಲ್ಲಿ ನಮ್ಮ ಕರ್ತವ್ಯ ಮಾಡಿದೆವು ಎಂಬ ಭಾವನೆ ಸಾಕು! ಬದಲಾಗಿ ಉಪಕಾರ ಮಾಡಿದೆವೆಂಬ ಅಲ್ಪಭಾವನೆ ಬಂದರೂ ನಮ್ಮ ಕೆಲಸ ವ್ಯರ್ಥ....
ಅನ್ಯರಿಗೆ ಹಿತವುಂಟುಮಾಡುವ ಯಾವ ಕೆಲಸವಾದರೂ ಸಾರ್ಥಕ ವಾದದ್ದು' ಎನ್ನುತ್ತದೆ ಒಂದು ಸುಭಾಷಿತ. ಯಾರನ್ನಾದರೂ ಮೆಚ್ಚಿಸುವುದಕ್ಕಾಗಲೀ ಅಥವಾ ಎಲ್ಲರಿಂದ ಭೇಷ್ ಎನ್ನಿಸಿಕೊಳ್ಳುವುದು ನಮ್ಮ ಗುರಿ ಆಗಿರಬಾರದು. ಜಗತ್ತಿನಲ್ಲಿ ತನಗೇನಿಲ್ಲದಿದ್ದರೂ ಕಷ್ಟದಲ್ಲಿ ಇರುವವರಿಗೆ ಸಹಾಯಹಸ್ತ ಚಾಚುವವರನ್ನು ನಾವು ನೋಡುತ್ತೇವೆ. ನಮಗೆ ಫಲ ನೀಡುವ ಭೂಮಿಗಾಗಲೀ, ಮಳೆ ಸುರಿಸುವ ಮೋಡಗಳಿಗಾಗಲೀ ನಮ್ಮ ಹೊಗಳಿಕೆಯಿಂದ ಆಗಬೇಕಾದದ್ದೇನಿಲ್ಲ. ಹಾಗಾಗಿ, ಜೀವನ ಪಥದಲ್ಲಿ ಸಂತೃಪ್ತಿ, ನೆಮ್ಮದಿಗಾಗಿ ಸೇವೆ ಮಾಡಬೇಕಿದೆ.
ಕೃಪೆ : ನೆಟ್