ಕಥೆ-593
ನಮ್ಮ ಕೆಲಸ ಆತ್ಮ ತೃಪ್ತಿ ಕೊಟ್ಟರೆ ಅದೇ ಶ್ರೇಷ್ಠ...
ನಾವು ಪ್ರತಿ ಕೆಲಸ ಮಾಡುವುದಕ್ಕೂ ಹೊರಟಾಗ, ಹಲವರು ನಮ್ಮ ಬಗ್ಗೆ ಮಾತನಾಡುತ್ತಾರೆ. ಕೆಲವರು ನಾವು ಮಾಡುತ್ತಿರುವ ಕೆಲಸ ಸರಿ ಎಂದರೆ, ಕೆಲವರು ತಪ್ಪು ಎನ್ನುತ್ತಾರೆ. ಯಾವುದು ಸರಿ, ಯಾವುದು ತಪ್ಪು ಎಂಬ ಜಿಜ್ಞಾಸೆ ಗೊಂದಲಗಳಲ್ಲೇ ನಾವು ಕಳೆದು ಹೋಗುತ್ತೇವೆ. ಎಷ್ಟೋ ಬಾರಿ ನಾವು ಮಾಡುತ್ತಿರುವುದು ತಪ್ಪಿರಬಹುದು ಎಂಬ ಭಯದಲ್ಲಿ, ಕೈಗೆತ್ತಿಕೊಂಡ ಕೆಲಸವನ್ನು ಅರ್ಧಕ್ಕೆ ಬಿಟ್ಟುಬಿಡುತ್ತೇವೆ. ಪ್ರತಿಯೊಬ್ಬರಿಗೂ ಒಂದು ವಿಷಯದ ಕುರಿತು ಅವರದ್ದೇ ಆದ ಸರಿ-ತಪ್ಪುಗಳಿರುತ್ತವೆ. ಈ ಜಿಜ್ಞಾಸೆಯಿಂದ ಮಾಡುವ ಕೆಲಸವೇ ನಿಂತುಹೋಗುತ್ತದೆ. ಏನೇ ಮಾಡುವುದಕ್ಕೆ ಹೋದರೂ 4 ಜನರ ಅಭಿಪ್ರಾಯಗಳು ನಾನಾ ರೀತಿಯಾಗಿರುತ್ತವೆ, ಅವುಗಳನ್ನು ಕೇಳಿ ನಾವೇ ಕಳೆದು ಹೋಗಬಾರದು. ಅದನ್ನೆಲ್ಲ ಕೇಳುತ್ತಾ, ಅದರಲ್ಲಿ ಧನಾತ್ಮಕ ಅಂಶಗಳನ್ನು ಮಾತ್ರ ಸ್ವೀಕರಿಸಿ ಮುಂದೆ ನಡೆಯಬೇಕು
ನಮ್ಮ ಮನಸ್ಸಿಗೆ, ಆತ್ಮಕ್ಕೆ, ಹೃದಯಕ್ಕೆ ಸರಿ ಅನ್ನಿಸುವುದನ್ನು ಮಾಡಬೇಕು. ಏಕೆಂದರೆ, ಆ ಕೆಲಸವನ್ನು ಮಾಡಬೇಕಾಗಿರುವುದು ನಾವು. ಅದನ್ನು ದಡ ಮುಟ್ಟಿಸಬೇಕಾಗಿರುವುದು ನಾವು. ಹಾಗಾಗಿ, ಈ ಕೆಲಸ ಮಾಡುವುದಕ್ಕೆ ನಮ್ಮಿಂದ ಸಾಧ್ಯ ಎಂದರೆ ಸಾಧ್ಯ.. ಇಲ್ಲವೆಂದರೆ ಸಾಧ್ಯವಿಲ್ಲ ... ವಿದ್ಯಾರ್ಥಿಗಳು ಸಹ ಕೆಲವು ವಿಷಯಗಳು ಕಠಿಣ ಎಂದು ಮನಸ್ಥಿತಿಯನ್ನು ಇಟ್ಟುಕೊಂಡರೆ, ಅವು ಕಠಿಣವಾಗುತ್ತವೆ. ಅವುಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದರೆ ಕಠಿಣತೆಯಿಂದ ಸರಳತೆಗೆ ಬಂದಿರುತ್ತವೆ ...
ಯಾವುದೇ ಕೆಲಸವಾದರೂ ಮಾಡಬಹುದು, ನಾವು ಮಾಡುವ ಆ ಕೆಲಸದಲ್ಲಿ ನಮ್ಮ ಸಂಕಲ್ಪವಿರಬೇಕು ಅಷ್ಟೇ...