ಕಥೆ-595
ಛಲ ಮತ್ತು ಆತ್ಮವಿಶ್ವಾಸ
ಜೀವನವು ಒಂದು ಪ್ರವಾಹ. ಅದು ನಿರಂತರ ಹರಿಯುತ್ತಿರಬೇಕು. ಮಳೆಯ ನೀರು ನೆಲಕ್ಕೆ ಬೀಳುವುದೇ ತಡ ಹರಿಯಲು ಆರಂಭಿಸುತ್ತದೆ. ಗುಡ್ಡಬೆಟ್ಟಗಳನ್ನು ಸುತ್ತಿ, ಕೊಳ್ಳ-ಕಂದರಗಳನ್ನು ದಾಟಿ, ಹರಿದು ಹರಿದು, ಒಂದು ದಿನ ಸಾಗರವನ್ನು ಸೇರಿ ಸಾಗರವೇ ಆಗುತ್ತದೆ. ಹಾಗೆ ನಮ್ಮ ಜೀವನದಿಯೂ ಕೂಡಾ ನಿರಂತರವಾಗಿ ಹರಿದು ಪ್ರಪಂಚದ ಎಡರು ತೊಡರುಗಳನ್ನೆಲ್ಲ ದಾಟಿ ಸಾಗರವನ್ನು ತಲುಪಬೇಕು.
ಒಂದು ಪುಟ್ಟ ನೀರಿನ ಹನಿಯು ಹುಲ್ಲು ಕಡ್ಡಿಯ ಮೇಲೆ ಕುಳಿತು ಆಗಸದತ್ತ ಮುಖ ಮಾಡಿತ್ತು. ಅಲ್ಲಿಗೆ ಬಂದಿದ್ದ ನಾಡ-ನಲೆಗಾರನು ನೀರಿನ ಹನಿಗೆ ಕೇಳಿದ- 'ಇಲ್ಲೇನು ಮಾಡತ್ತಿರುವಿ?' ಹನಿ ಹೇಳಿತು - 'ಆಗಸದೆತ್ತರಕ್ಕೆ ಏರುವ ಕನಸನ್ನು ಕಾಣುತ್ತಿರುವೆನು' ನಲೆಗಾರ- 'ನಿನ್ನ ದೇಹ ನೋಡಿದರೆ ಒಂದು ಸಾಸುವೇ ಗಾತ್ರದಷ್ಟಿಲ್ಲ. ನೀನೇನು ಆಗಸದೆತ್ತರಕ್ಕೆ ಏರುತ್ತೀ?' ನೀರಿನ ಹನಿ ಹೇಳಿತು - 'ನೋಡುತ್ತಿರು, ಅದು ಹೇಗೆ ಏರುತ್ತೇನೆ!' ಸೂರ್ಯೋದಯವಾಗುವುದೇ ತಡ ನೀರಿನ ಹನಿಯು ಸೂರ್ಯನ ಪ್ರಖರ ಕಿರಣಗಳಿಗೆ ಒಂದೆರಡು ಕ್ಷಣ ಮೈಯೊಡ್ಡಿತು. ತಕ್ಷಣ ಆವಿಯಾಗಿ ಮೇಲೇರಿ ಆಗಸದಲ್ಲಿ ಮೇಘವಾಗಿ ತೇಲತೊಡಗಿತು. ಆ ಪುಟ್ಟ ನೀರಿನ ಹನಿಯ ಛಲವ ಕಂಡು ನಲೆಗಾರನು ಸಂತಸದಿಂದ ಮುನ್ನಡೆದನು. ಆ ನೀರಿನ ಹನಿಯ ಛಲ ಮತ್ತು ಆತ್ಮವಿಶ್ವಾಸ ನಮಗೂ ಸ್ಪೂರ್ತಿದಾಯಕ.
: ಡಾ.ಶ್ರದ್ಧಾನಂದ