ಕಥೆ-601
ಗಟ್ಟಿ ಮನಸ್ಸಿದ್ದರೆ ದಾರಿ ಗಟ್ಟಿ..
ಒಂದ್ದಾರಿ ಗಟ್ಟಿಯಾಗಿ ಹೇಳಿ ಬಿಡು... ಆ ಕೆಲಸ ನೀನೇ ಮಾಡುತ್ತೀಯಾ ಎಂದು... ಆಗೇ ಆಗುತ್ತದೆ. ನಿನ್ನಿಂದ ಮಾತ್ರ ಸಾಧ್ಯ... ತಂದೆ ಹೀಗೆ ಹೇಳುತ್ತಲಿದ್ದ...
ಆದರೂ ಮಗ ಊಹೂಂ... ಕದಲಲಿಲ್ಲ. ಸಾಧ್ಯವೇ ಇಲ್ಲ... ನನ್ನಿಂದಾಗದು.. ಎಂದು ಮತ್ತೆ ಮತ್ತೆ ಕನಲಿದ....
ನಿರ್ಧಾರ ನಿನ್ನ ಕೈಲಿದೆ. ಕೆಲಸಕ್ಕೆ ಪ್ರವೇಶ ಮಾಡುವ ಸಂಕಲ್ಪ ಮಾಡು ಆ ಕೆಲಸ ಮುಂದಿನ ದಾರಿಯನ್ನು ತೋರಿಸುತ್ತದೆ. ಕೈಗೊಳ್ಳುವ ಗಟ್ಟಿ ನಿರ್ಧಾರಗಳು ಅರ್ಧ ಕೆಲಸ ಮುಗಿದಂತೆಯೇ. ಮತ್ತೆ ಅಪ್ಪ ಪೇರಣೆಯನ್ನು ಕೊಟ್ಟ....
ಕೊನೆಗೆ ಮಗನ ತಲೆಯಲ್ಲಿ ಸಾವಿರಾರು ಹುಳುಗಳು ಒಮ್ಮೆಲೆ ಎದ್ದು ಗುಂಗುಟ್ಟಿದಂತಾಯಿತು.
ನನಗೆ ಗೊತ್ತಿಲ್ಲ. ಒಂದು ವೇಳೆ ಈ ವ್ಯವಹಾರದಲ್ಲಿ ಲಾಸ್ ಆಗಿ ಬಿಟ್ಟರೆ.... ಜನರು ನನಗೆ ಮೋಸಮಾಡಿಬಿಟ್ಟರೆ... ಯಾರೂ ಉದ್ರಿ ಕೊಡದೇ ಹೋದರೆ...? ಗ್ರಾಹಕರು ಬಾರದೇ ಇದ್ದರೇ.... ಅದೋ ಚಾವಡಿ ರಸ್ತೆಯ ಸಂಗಮೇಶ ಲಾಸ್ ಆಗಿಲ್ಲವೇ..? ಈ ಎಲ್ಲ ವಿಚಾರಗಳನ್ನು ಮತ್ತೆ ಹೊರ ಹಾಕಿದ.... ತಂದೆಗೆ ಸಿಟ್ಟು ಬಂತು. ಮಾಡುತ್ತೇನೆ ಎಂಬ ಧೈರ್ಯವಿಲ್ಲದ ನಿನೆಂಥ ಮಗನೋ ಎಂದು ಕೂಗಿದ.... ಲಾಸ್ ಆದ್ರೆ ನಾನು ಹೊಣೆಗಾರನಲ್ಲ ನೋಡು.... ಎಂದ ಮಗನ ಮಾತಿಗೆ ತಂದೆ ಮತ್ತೆ ಹೇಳಿದ.... ಲಾಸ್ ಆದ್ರೆ ಆಗಲಿ ಬಿಡು... ತಲೆಗೆ ಹಕ್ಕೋಬೇಡ... ಮಾಡಲು ಮನಸ್ಸು ಮಾಡು ಮೊದಲು.... ಅಪ್ಪ ಮತ್ತೊಮ್ಮೆ ಕೂಗಿ ಹೇಳಿದ....
ಈ ಮೇಲಿನ ದೃಶ್ಯ ತಂದೆ ಮಗನ ನಡುವೆ ನಡೆದ ವ್ಯವಹಾರವೊಂದನ್ನು ಆರಂಭಿಸುವ ಕುರಿತಾದ ಸಂಭಾಷಣೆ.... ಕಾರ್ಯ ಪ್ರವೃತ್ತನಾಗುವ ಮೊದಲು ಕಾರ್ಯವನ್ನು ಮಾಡುವ ಸಂಕಲ್ಪವನ್ನು ಮಾಡಬೇಕು. ನಿರ್ಧಾರವೆಂಬುದು ದೊಡ್ಡದು. ಯಾವುದೇ ಕೈಗೊಳ್ಳುವ ಕೆಲಸದ ನಿರ್ಧಾರಕ್ಕೆ ಅನುಮಾನವೆಂಬುದು ಶತ್ರು. ಅನುಮಾನ ಇರಲೇಬಾರದು ಎಂತಲ್ಲ. ಇರಬೇಕು. ಅನುಮಾನ ಎಚ್ಚರಿಕೆಯ ಹಂತಕ್ಕೆ ಇರಬೇಕೇ ವಿನಃ ಪಲಾಯನಮಾಡುವಷ್ಟು ಸಾಂದ್ರವಾಗಿರಕೂಡದು. ಅದಕ್ಕೆ ಕೆಲಸಕ್ಕೆ ಮೊದಲು ಗಟ್ಟಿಯಾಗಿ ಹೇಳುವ ಮಾತು ಮತ್ತು ನಿರ್ಧಾರ ಇವು ಆ ಯಶಸ್ಸಿನತ್ತ ಕೊಂಡೊಯ್ಯುತ್ತವೆ ಎಂಬುದರಲ್ಲಿ ಎರಡು ಮಾತಿಲ್ಲ.. ಚಂಚಲತೆ ದೂಡಿ ಅಚಲತೆಯನ್ನು ಮೈಗೂಡಿಸಿಕೊಳ್ಳಬೇಕು.
ನಮ್ಮ ನಿರ್ಧಾರಗಳಲ್ಲಿ ಅನುಮಾನಗಳೇ ಇರಕೂಡದು.. ಅದೊಂದು ಅದಮ್ಯ ನಂಬಿಕೆಯ ಮೇಲೆ ನಾವು ನಿರ್ಧಾರ ಕೈಗೊಳ್ಳಬೇಕು.
ಕೆ. ಎಸ್. ಆಚಾರ್ಯ