ಕಥೆ-602
ಕರ್ಮ ನಿಯಮ
ಒಂದು ದಿನ ಬುದ್ದನ ಬಳಿ ಯುವಕನೊಬ್ಬ ಬಂದ, ಯುವಕ ಬೇಸರದಲ್ಲಿದ್ದ ಬುದ್ಧ 'ಏಕೆ ಇಷ್ಟೊಂದು ಚಿಂತೆಯಲ್ಲಿರುವಿ?' ಎಂದು ಕೇಳಲು ಯುವಕ 'ತಂದೆಯವರು ನಿಧನರಾಗಿದ್ದಾರೆ. ಅವರ ಅಗಲಿಕೆಯನ್ನು ಸಹಿಸಿಕೊಳ್ಳುವುದು ಕಷ್ಟವಾಗುತ್ತಿದೆ. ಈಗ ನನ್ನ ತಂದೆಯವರ ಆತ್ಮ ಸ್ವರ್ಗಕ್ಕೆ ಹೋಗಲು ಅದಕ್ಕೆ ಪೂರಕವಾದ ಧಾರ್ಮಿಕ ವಿಧಿ ವಿಧಾನಗಳನ್ನು ಮಾಡಬೇಕಿದೆ. ನಿಮ್ಮ ಕೈಯಿಂದ ಅದನ್ನು ಮಾಡಿಸಿ, ಆ ಮೂಲಕ ನೀವು ಅವರ ಆತ್ಮವನ್ನು ಸ್ವರ್ಗಕ್ಕೆ ಕಳಿಸಬೇಕು' ಎಂದು ಬೇಡಿಕೊಂಡ.
ಆಗ ಬುದ್ಧ 'ಸರಿ, ಹಾಗಾದರೆ ಎರಡು ಮಡಿಕೆಗಳು, ಬೆಣ್ಣೆ ಮತ್ತು ಬೆಣಚು ಕಲ್ಲುಗಳನ್ನು ತೆಗೆದುಕೊಂಡು ಬಾ' ಎಂದ. ಯುವಕ ಅವುಗಳನ್ನೆಲ್ಲ ತೆಗೆದುಕೊಂಡು ಬಂದ. ಬುದ್ಧ ಒಂದು ಮಡಿಕೆಯಲ್ಲಿ ಬೆಣ್ಣೆ ಮತ್ತು ಇನ್ನೊಂದರಲ್ಲಿ ಬೆಣಚುಕಲ್ಲುಗಳನ್ನು ತುಂಬಿ ಹತ್ತಿರದ ಕೊಳವೊಂದರಲ್ಲಿ ಮುಳುಗಿಸಲು ಹೇಳಿದ. ನಂತರ ಅದಕ್ಕೆ ಕೋಲಿನಿಂದ ಒಡೆಯಿರಿ ಎಂದಾಗ ಯುವಕ ಅದನ್ನೂ ಹಾಗೇ ಮಾಡಿದ. ಆಗ ಮಡಿಕೆಯಲ್ಲಿದ್ದ ಬೆಣ್ಣೆನೀರಿನ ಮೇಲ್ಪದರಲ್ಲಿ ತೇಲಲಾರಂಭಿಸಿತು. ಬೆಣಚುಕಲ್ಲುಗಳು ಕೊಳದ ತಳ ಸೇರಿದವು.
ಬುದ್ದ ಹೇಳಿದ; ಬೆಣಚುಕಲ್ಲುಗಳು ನೀರಿಗಿಂತ ಭಾರವಾಗಿದ್ದರಿಂದ ತಳದಲ್ಲೇ ಮುಳುಗಿದವು. ಬೆಣ್ಣೆ ನೀರಿಗಿಂತ ಹಗುರ, ಹಾಗಾಗಿ ನೀರಿನ ಮೇಲೆ ತೇಲಲಾರಂಭಿಸಿತು. ಇದು ಪ್ರಕೃತಿಯ ನಿಯಮ. ಇದಕ್ಕೆ ವಿರುದ್ದವಾಗಿ ನಡೆದುಕೊಳ್ಳುವುದು ಸರಿಯಲ್ಲ. ನಿನ್ನ ತಂದೆಯವರು ಜೀವನದಲ್ಲಿ ಹೇಗಿದ್ದರು ಎನ್ನುವುದು ಬಹಳ ಮುಖ್ಯವಾದುದು. ತಪ್ಪುಗಳನ್ನು ಮಾಡಿದ್ದರೆ ಅವರು ಬೆಣಚುಕಲ್ಲುಗಳಂತೆ ತಳ ಸೇರುತ್ತಾರೆ, ಎಲ್ಲರಿಗೂ ಒಳ್ಳೆಯದನ್ನೇ ಮಾಡಿದ್ದರೆ ಅವರನ್ನೂ ಯಾರೂ ಕೆಳಕ್ಕೆ ತಳ್ಳಲು ಸಾಧ್ಯವಿಲ್ಲ' ಎಂದು ಹೇಳಿದ. ಬುದ್ಧನ ಮಾತುಗಳನ್ನು ಅರ್ಥ ಮಾಡಿಕೊಂಡ ಯುವಕ ತನ್ನ ಮನೆಯತ್ತ ನಡೆದ. ಇದು ಬುದ್ದ ತಿಳಿಸಿದ ಕರ್ಮ ನಿಯಮ.