ಕಧೆ-605
ಬದುಕು ಗರಿಗೆದರಿ ಹಾರಾಡುವ ಹಕ್ಕಿಯಂತೆ..
ವರಕವಿ ಬೇಂದ್ರೆ ತಮ್ಮ ಕವನವೊಂದರಲ್ಲಿ ಜೀವನದ ಬ್ಯಾಸರ ಹರಿಸಾಕ, ಹಾಡು ನುಡಿಸಾಕ.. ಹೆಚ್ಚಿಗೇನು ಬೇಕು. ಒಂದು ಹೂತ ಹುಣಿಸೆಮರ ಸಾಕು. ಎಂದು ಸಾರುವ ಮೂಲಕ ಜೀವನದ ವ್ಯಾಖ್ಯೆಯನ್ನೇ ಬರೆದು ಬಿಟ್ಟಿದ್ದಾರೆ. ಜೀವನೋತ್ಸಾಹಕ್ಕಾಗಿ ಹಣ ಬೇಕಿಲ್ಲ. ಸುಖದ ಸುಪ್ಪತ್ತಿಗೆ ಬೇಕಾಗಿಲ್ಲ. ಪ್ರಕೃತಿಯಲ್ಲಿ ಎದುರೇ ಇರುವ ಒಂದು ಹೂ ಬಿಟ್ಟ ಹುಣಿಸೆಮರದ ನೋಟ ಸಾಕು. ಪರಿಸರದಲ್ಲಿಯೇ ಸುತ್ತ ಮುತ್ತ ಸುಖ ಲಾಸ್ಯವಾಡುತ್ತಿರುವಾಗ ಕಸ್ತೂರಿ ಮೃಗದಂತೆ ಸುವಾಸನೆ ಅರಸುತ್ತ ಸಾಗುವ ನಮಗೆ ಜೀವನೋತ್ಸಾಹ ಮರೀಚಿಕೆ ಆಗಿಬಿಡುತ್ತದೆ.
ಹತಾಶರಾಗಿ. ಬದುಕಿನಲ್ಲಿ ಉತ್ಸಾಹ ಕಳೆದುಕೊಳ್ಳುತ್ತೇವೆ. ಕಾರಣವಿಲ್ಲದೇ ಋಣಾತ್ಮಕ ಭಾವನೆ ಬೆಳೆಸಿಕೊಳ್ಳುತ್ತೇವೆ. ಚಿಕ್ಕ-ಪುಟ್ಟ ಮಾತಿಗೂ ಏನೋ ಅರ್ಥ ಹಚ್ಚಿ ಮನಸ್ಸು ಮುದುಡಿಸಿಕೊಳ್ಳುತ್ತೇವೆ. ಧೈರ್ಯ ಕಳೆದುಕೊಳ್ಳುತ್ತೇವೆ. ಆಪತ್‌ಕಾಲದಲ್ಲಿ ಪರರಿಗೆ ಸಹಾಯ ಮಾಡುವಾಗ ನಮ್ಮ ಜೀವನೋತ್ಸಾಹದ ತವನಿಧಿಯಾಗುತ್ತದೆ. ಸಹಾಯಹಸ್ತ ಚಾಚಿ ಪ್ರತಿಫಲ ನಿರೀಕ್ಷಿಸುತ್ತೇವೆ.
ಬದುಕಿನ ಪ್ರತಿಯೊಂದು ಕ್ಷಣವನ್ನು ಸುಖಿಸುವ ಮನದ ಸ್ಥಿತಿ ನಮ್ಮದಾಗಬೇಕಿದೆ. ಕನಸು ಮನಸಿನಲಿ ಇತರರಿಗೆ ತೊಂದರೆ ನೀಡುವ ವಿಕೃತ ಸುಖದ ಸೆರೆಯಿಂದ ಹೊರ ಬರಬೇಕಿದೆ. ನಮ್ಮೆಲ್ಲ ಮನೋವ್ಯಾಧಿಗಳ ಮೂಲ ಅಸೂಯೆ, ಅಹಂಕಾರ, ತೀರಲಾರದ ಹಣದ ಹಸಿವು. ಪರನಿಂದೆ ಹಾಗೂ ಭವಿಷ್ಯದ ಕುರಿತು ಕಾರಣವಿಲ್ಲದ ಭಯ.
ಇವುಗಳೆಲ್ಲವನ್ನು ದಾರ್ಶನಿಕನಂತೆ ಕಂಡ ಕವಿ, ಎರಡೇ-ಎರಡು ಸಾಲುಗಳ ಪಲ್ಲವಿಯಲ್ಲಿ ಜೀವನದ ಸಾರ ಸರ್ವಸ್ವವನ್ನು ಹಿಡಿದಿಟ್ಟ ಹಾಗೆ ಹೇಳುತ್ತಾನೆ... ಜೀವನೆಂದರೆ ಏನು ? ಅದರಲ್ಲಿ ಎಲ್ಲವೂ ಅಡಗಿದೆ. ಮಮತೆ, ಕರುಣೆಯಿಂದ ಕೂಡಿದ ಹೃದಯ, ಮನಕ್ಕೆ ಮುದನೀಡುವ ಮಾತುಗಳು. ಈ ಮನೋಜ್ಞ ಮಾತುಗಳು ನಮ್ಮ ನಿಮ್ಮೆಲ್ಲ ಬಾಳ ಸಂಗಾತಿಗಳಾಗಲಿ. ಆಗ ಬದುಕು ಗರಿಗೆದರಿ ಹಾರಾಡುವ ಹಕ್ಕಿಯಂತಾಗುತ್ತದೆ...