Wednesday, December 18, 2024

ಕಥೆ-614 
 ಸದಾ ನೀಡುವ ಮರ 
 ಒಂದಾನೊಂದು ಕಾಲದಲ್ಲಿ ಊರಹೊರಗೆ ಬಂದು ದೊಡ್ಡ ಮಾವಿನ ಮರವಿತ್ತು. ಒಬ್ಬ ಪುಟ್ಟ ಹುಡುಗ ದಿನಾಲು ಅಲ್ಲಿಗೆ ಬಂದು ಮರದ ಕೆಳಗೆ ಆಟವಾಡುತ್ತ, ನಿದ್ರೆಮಾಡುತ್ತಾ ಸಮಯ ಕಳೆಯುತ್ತಿದ್ದ. ಬೇಸಿಗೆ ಕಾಲ ಬಂತೆಂದರೆ ಆತ ಸರಸರನೇ ಮರವನ್ನೇರಿ ತನಗೆ ಬೇಕಾದಷ್ಟು ಮಾವಿನ ಹಣ್ಣುಗಳನ್ನು ಕಿತ್ತು ಕೊಂಡು ತಿನ್ನುತ್ತಿದ್ದ. ಮಗು ತನ್ನ ಹಣ್ಣು ತಿಂದಾಗಲೆಲ್ಲ ಮರಕ್ಕೆ ತುಂಬ ಸಂತೋಷವಾಗುತ್ತಿತ್ತು. ಕಾಲಚಕ್ರ ತಿರುಗಿತು. ಮಗು ಬೆಳೆದು ದೊಡ್ಡವನಾದ. ಈಗ ಆತನಿಗೆ ಮರದ ಕೆಳಗೆ ಬಂದು ಆಟವಾಡುವ ಮನಸ್ಸಿಲ್ಲ. ಅವನ ಹವ್ಯಾಸಗಳೇ ಬೇರೆಯಾಗಿದ್ದವು. ಆದರೂ ಒಂದು ದಿನ ಹುಡುಗ ಮರದ ನೆರಳಿಗೆ ಬಂದ. ಮರಕ್ಕೆ ತುಂಬ ಸಂತೋಷ, ಹುಡುಗ ಮತ್ತೆ ಬಂದಿದ್ದಾನಲ್ಲ ಎಂದು ಹುಡುಗ ಯಾಕೋ ದುಃಖದಲ್ಲಿದ್ದಂತೆ ಕಂಡಿತು. ಕರುಣೆಯಿಂದ ಮರ ಕೇಳಿತು. 'ಯಾಕೆ ಮಗೂ ಸಪ್ಪಗಿದ್ದೀಯಲ್ಲ, ಏನಾಯಿತು?' ಆತ ಮುಖ ಊದಿಸಿಕೊಂಡು ಹೇಳಿದ, 'ನನಗೆ ಈಗ ಮರದ ನೆರಳಿನಲ್ಲಿ ಒಬ್ಬನೇ ಆಡುವ ಮನಸ್ಸಿಲ್ಲ. ನನಗೆ ಆಟಕ್ಕೆ ಆಟಿಕೆ ಸಾಮಾನುಗಳು ಬೇಕು. ಆದರೆ ಮನೆಯಲ್ಲಿ ಯಾರೂ ಹಣ ಕೊಡುತ್ತಿಲ್ಲ.' ಆಗ ಮರ ಹೇಳಿತು, 'ಏನೂ ಚಿಂತೆ ಬೇಡ. ನನ್ನ ಹತ್ತಿರ ಹಣವಿಲ್ಲ, ಆದರೆ ನೀನು ನನ್ನ ಹಣ್ಣುಗಳನ್ನು ಕಿತ್ತುಕೊಂಡು ಹೋಗಿ ಮಾರಿ ಹಣ ಪಡೆದುಕೋ' ಹುಡುಗ ಹಿಗ್ಗಿನಿಂದ ಹಾಗೆಯೇ ಮಾಡಿದ, ಸಂತೋಷದಿಂದ ನಡೆದ. ಮತ್ತೆ ಎಷ್ಟೋ ವರ್ಷ ಮರ ಅವನನ್ನು ಕಾಣಲಿಲ್ಲ. ಮರಕ್ಕೆ ಅವನನ್ನು ನೋಡುವ ಅಪೇಕ್ಷೆ ಆಗುತ್ತಿತ್ತು. ಒಂದು ದಿನ ಹುಡುಗ ಬಂದ. ಅವನೀಗ ಗಟ್ಟಿ ಮುಟ್ಟಾದ ತರುಣನಾಗಿದ್ದ. 'ಬಾ ಮಗೂ, ನನ್ನ ಕೊಂಬೆಗಳನ್ನೇರು, ಆಟವಾಡು' ಎಂದಿತು ಮರ. 'ಛೇ ಛೇ, ನಾನೇನು ಹುಡುಗನೇ ಮರ ಹತ್ತಿ ಆಟವಾಡಲು ನನ್ನ ಕಷ್ಟಗಳೇ ನನಗೆ ಸಾಕಾಗಿವೆ' ಎಂದ ತರುಣ. 'ನಿನಗೇನು ತೊಂದರೆಯಪ್ಪ?' ಆತಂಕದಿಂದ ಕೇಳಿತು ಮರ. 'ನನಗೆ ಮನೆ ಕಟ್ಟಿಕೊಳ್ಳಬೇಕು. ಸಂಸಾರಕ್ಕೆ ನೆಲೆ ಬೇಕಲ್ಲ. ಏನು ಮಾಡಲಿ?' ಎಂದು ಅವಲತ್ತುಗೊಂಡ ತರುಣ. ಒಂದು ಕ್ಷಣ ಯೋಚಿಸಿದ ಮರ ಹೇಳಿತು. 'ಚಿಂತೆ ಬೇಡ ಮಗೂ, ನೀನು ನನ್ನ ಎಲ್ಲ ಕೊಂಬೆಗಳನ್ನು ಕಡಿದುಕೊಂಡುಬಿಡು. ನಿನಗೆ ಮನೆ ಕಟ್ಟಿಕೊಳ್ಳಲು ಬೇಕಾದಷ್ಟು ಮರ ದೊರೆತೀತು.' ತರುಣ ಮರದ ಎಲ್ಲ ಕೊಂಬೆಗಳನ್ನು ಕತ್ತರಿಸಿ ಗಾಡಿಗಳನ್ನು ತುಂಬಿಸಿಕೊಂಡು ಉತ್ಸಾಹದಿಂದ ಹೊರಟ ತನ್ನಿಂದ ತರುಣನಿಗೆ ಪ್ರಯೋಜನವಾಯಿತಲ್ಲ ಎಂದು ಮರಕ್ಕೆ ಸಂತೋಷವಾಯಿತು. ಮತ್ತೆ ಎಷ್ಟೋ ವರ್ಷಗಳು ಉರುಳಿದವು. ತನ್ನ ಕೊಂಬೆಗಳನ್ನೆಲ್ಲ ಕಳೆದು ಕೊಂಡ ಮರ ಬಾಲಕನಿಗೆ ಕಾಯುತ್ತಲೇ ಇತ್ತು. ಆತ ಬಂದ. ಆದರೆ ಈಗ ಆತ ಮಧ್ಯವಯಸ್ಕನಾಗಿದ್ದಾನೆ. ಹಿಗ್ಗಿನಿಂದ ಮರ ಕೂಗಿತು. 'ಬಾ ಮಗೂ, ಎಷ್ಟು ದಿನವಾಯಿತಲ್ಲೋ ನಿನ್ನ ನೋಡಿ ಚೆನ್ನಾಗಿದ್ದೀಯಾ?' 'ಏನು ಚೆನ್ನವೋ? ಸಾಕಾಗಿ ಹೋಗಿದೆ ಈ ಸಂಸಾರದಲ್ಲಿ ಜೀವನ ಸಾಗಿಸುವುದಕ್ಕೆ ಒಂದು ಹಾದಿ ಬೇಕು. ನನಗೆ ನಾವೆ ನಡೆಸಲು ಬರುತ್ತದೆ. ಆದರೆ ನಾವೆ ಇಲ್ಲ. ಅದನ್ನು ಕೊಳ್ಳಲು ನನ್ನಲ್ಲಿ ಹಣವೆಲ್ಲಿದೆ?' ಎಂದು ಗೊಣಗಿದ. ಒಂದು ಕ್ಷಣ ಚಿಂತಿಸಿ, ನಿಟ್ಟುಸಿರುಬಿಟ್ಟು ಮರ ಹೇಳಿತು, 'ಮಗೂ ನನ್ನ ಹತ್ತಿರ ಇನ್ನೇನೂ ಉಳಿ ದಿಲ್ಲ. ಆಗಲಿ ನೀನು ನನ್ನ ಕಾಂಡವನ್ನು ಪೂರ್ತಿ ಕತ್ತರಿಸಿಕೊಂಡು ಬಿಡು ಆ ಮರದಿಂದ ನಾವೆಯಾಗುತ್ತದೆ.' ಮನುಷ್ಯ ಹಾಗೆಯೇ ಮಾಡಿ ಕುಣಿಯುತ್ತ ಹೋದ. ಎಷ್ಟೋ ವರ್ಷಗಳ ನಂತರ ಮುದುಕನಾಗಿ ಬಂದ. ಮರ ಹೇಳಿತು, 'ಮಗೂ ನನ್ನ ಹತ್ತಿರ ಏನೂ ಉಳಿದಿಲ್ಲವಲ್ಲ. ಏನು ಕೊಡಲಿ ನಿನಗೆ?' 'ನನಗೆ ಈಗ ಏನೂ ಬೇಡ, ಜೀವನದಲ್ಲಿ ಬಳಲಿ, ಬೆಂಡಾಗಿ ಬಂದಿದ್ದೇನೆ. ನನಗೊಂದಿಷ್ಟು ಶಾಂತಿ, ವಿಶ್ರಾಂತಿ ಬೇಕು' ಎಂದ. 'ಹಾಗಾದರೆ ನನ್ನ ಉಳಿದ ಬೇರುಗಳಿಗೆ ತಲೆ ಕೊಟ್ಟು ನಿದ್ರೆ ಹೋಗು. ನಾನು ನಿನ್ನ ತಲೆ ತಟ್ಟುತ್ತೇನೆ' ಎಂದಿತು ಮರ. ಮುದುಕ ಮಲಗಿದ. ಮರ ತಾನು ಹೀಗಾದರೂ ಪ್ರಯೋಜನವಾದೆನಲ್ಲ ಎಂದು ಸಂತೋಷ ದಿಂದ ಕಣ್ಣೀರು ಸುರಿಸಿತು. ನಮ್ಮೆಲ್ಲರ ಬಾಳೂ ಹೀಗೆಯೇ. ಆ ಮರ ನಮ್ಮ ತಂದೆತಾಯಿಗಳಿದ್ದಂತೆ. ನಾವು ಅವರಿಂದ, ದೇಹ, ಮನಸ್ಸು, ಶಕ್ತಿ, ಮಾರ್ಗದರ್ಶನ, ಹಣ ಎಲ್ಲವನ್ನೂ ಪಡೆಯುತ್ತೇವೆ. ಸಂಕಟ ಬಂದಾಗಲೆಲ್ಲ ಅವರೆಡೆಗೆ ಧಾವಿಸುತ್ತೇವೆ. ಅವರು ನಮ್ಮನ್ನೆಂದೂ ನಿರಾಸೆಗೊಳಿಸುವುದಿಲ್ಲ. ಆದರೆ ಬಹುಪಾಲು ಮಕ್ಕಳು ಅವರಿಂದ ಪಡೆದ ತಕ್ಷಣ ಅವರನ್ನು ಮರೆತು ಬಿಡುತ್ತಾರೆ. ನಮ್ಮಿಂದ ಏನನ್ನೂ ಅಪೇಕ್ಷಿಸದೇ ತಮ್ಮೆಲ್ಲವನ್ನೂ ಧಾರೆ ಎರೆಯುವ ಎರಡೇ ಜೀವಗಳೆಂದರೆ ತಾಯಿ-ತಂದೆ. ಅವು ಸದಾ ನೀಡುವ ಮರವಿದ್ದಂತೆ. -ಗುರುರಾಜ ಕರ್ಜಗಿ

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು