ಕಥೆ-673
ಸ್ಥಿತಪ್ರಜ್ಞರು ಅಂದುಕೊಂಡದ್ದನ್ನು ಸಾಧಿಸದೆ ಅವರು ವಿರಮಿಸೋದಿಲ್ಲ ಭಾಗ-2
https://basapurs.blogspot.com/
ಶಾಸಕರ ಮನೆ ಅಂದರೆ
ಹಾಗೆ.... ಉಳ್ಳಾಲ ಶಾಸಕ ಯುಟಿ ಫರೀದ್ ಅವರ ಮನೆ ದಿನಾ ಬೆಳಗಾದ್ರೆ ಸಾಕು ಒಂದಷ್ಟು ಅಹವಾಲು ಹೊತ್ತ ಜನರಿಂದ ತುಂಬಿರುತ್ತಿತ್ತು. ಹತ್ತು ಗಂಟೆವರೆಗೂ ಜನರೊಂದಿಗೆ ಮಾತನಾಡ್ತಾ ಅವರ ದೂರುಗಳನ್ನು ಸ್ವೀಕರಿಸ್ತಾ ಇದ್ದ ಶಾಸಕರು, ಆಮೇಲೆ ತಮ್ಮ ಬಾಕಿ ಕಾರ್ಯಕ್ರಮಗಳಿಗೆ ಹೊರಟು ಬಿಡ್ತಾ ಇದ್ರು. ಕಳೆದ ಮೂರು ನಾಲ್ಕು ದಿನದಿಂದ ಅವನ್ಯಾವನೋ ಒಬ್ಬ ಹರಕಲು ಅಂಗಿ ಲುಂಗಿ ಕುರುಚಲು ಕೂದಲಿನ ಸಣಕಲು ದೇಹದ ಮನುಷ್ಯ ದಿನಾ ಬೆಳಗಾದ್ರೆ ಜಗಲಿಯಲ್ಲಿ ಬಂದು ಕೂರುತ್ತಿದ್ದ.
ಉಳಿದ ಅಹವಾಲುದಾರರು ಮನೆ ಒಳಗೆ ಬಂದು ಕೂರುತ್ತಿದ್ದರೂ ಈತ ಮಾತ್ರ ಜಗಲಿಯಲ್ಲೇ ಕುಕ್ಕರುಗಾಲು ಮಾಡಿ ಮುಖಕ್ಕೆ ಕೈಕೊಟ್ಟು ಕೂರುತ್ತಿದ್ದ. ಒಳ ಬಂದವರ ಅರ್ಜಿ ವಿಲೇವಾರಿ ಆದ ನಂತರ ಹೊರಟು ಬಿಡುತ್ತಿದ್ದ ಫರೀದ್ ಅವರಿಗೆ ಹೊರಗಡೆ ಬಾಗಿಲು ಕಾಯುತ್ತಿದ್ದ ಈ ಆಸಾಮಿ ಒಂದೆರಡು ದಿನ ಗಮನಕ್ಕೇ ಬಂದಿರಲಿಲ್ಲ. ಏನೋ... ಮಗಳ ಮದುವೆ, ಮನೆ ಕಟ್ಟೋದಿದೆ.. ರೇಶನ್ನು ಕಾರ್ಡು,.. ಹೆಂಡತಿಗೆ ಆಪರೇಶನ್ನು.. ಹೀಗೆ ಏನೋ ಒಂದು ಗೋಳು ಹೇಳ್ಕೊಂಡು ಬಂದಿರ್ತಾನೆ ಅಂತ ಶಾಸಕರ ಜತೆಗಿದ್ದವರೂ ಈ ಜಗಲಿ ಪಾರ್ಟಿಯನ್ನು ಅಷ್ಟಾಗಿ ಗಮನಿಸಿರಲಿಲ್ಲ.
ಕಡೆಗೂ ಒಂದು ದಿನ ಆತ ಫರೀದರ ಕಣ್ಣಿಗೆ ಬಿದ್ದ ನೋಡಿ.. ಬಾರಪ್ಪಾ ಅಲ್ಯಾಕೆ ನೆಲದಲ್ಲಿ ಕೂತಿದ್ಯಾ ಮೇಲೆ ಕೂತ್ಕೋ ಅಂದ್ರು... ಆದರೆ ಅವನಿಗೆ ಮುಜುಗರ ಬಿಡಲಿಲ್ಲ. ಫರೀದ್ ಎಳೆದು ಸೋಫಾದ ಮೇಲೆ ಕೂರಿಸಿದರು. ಏನಪ್ಪಾ ಪ್ರಾಬ್ಲಮ್ಮು ಅಂದ್ರು... ಅವ ಕೊಟ್ಟ ಉತ್ತರಕ್ಕೆ ವಯೋವೃದ್ಧ ಫರೀದರು ದಂಗು ಬಡಿದು ಹೋದ್ರು.. ಅಂಗಿಯ ಬಟನನ್ನೂ ಸರಿಯಾಗಿ ಹಾಕಿಕೊಳ್ಳೋ ಅಭ್ಯಾಸ ಇರದ ಆ ಬರಿಗೈ ಫಕೀರ ಹೇಳ್ತಾನೆ ...ನನ್ನ ಊರಿನ ಮಕ್ಕಳಿಗೆ ಕಲಿಯೋದಿಕ್ಕೆ ಶಾಲೆ ಇಲ್ಲ. ನಾನು ಒಂದು ಶಾಲೆ ಕಟ್ಟಬೇಕು ಅಂತ ಇದ್ದೀನಿ ಸಾರು....!! ಶಾಸಕ ಫರೀದ್ ಅವರಿಗೆ ಈ ಮಾತು ಕೇಳಿ ದಿಗ್ಭ್ರಮೆಯಾಯ್ತು.
ಅವರು ಕೇಳ್ತಾರೆ. ಏನು ಮಾಡ್ಕೊಂಡಿದ್ದೀಯಾ ನೀನು...? ಅವನು ಹೇಳಿದ ಹಂಪನಕಟ್ಟೆ ಬಸ್ ಸ್ಟ್ಯಾಂಡಲ್ಲಿ ಬುಟ್ಟಿಯಲ್ಲಿ ಹೊತ್ತು ಕಿತ್ತಾಳೆ ಮಾರ್ತೀನಿ.. ಶಾಲೆ ಕಟ್ಟೋದಿಕ್ಕೆ ಕಿತ್ತಾಳೆ ಮಾರಿ ಉಳಿಸಿದ ಸ್ವಲ್ಪ ಚಿಲ್ಲರೆ ದುಡ್ಡಿದೆ. ಮತ್ತೆ ಯಾರಾದ್ರು ಪುಣ್ಯಾತ್ಮರು ಸಹಾಯ ಮಾಡಿಯಾರು ಅಂತ ಹೇಳಿ, ಆ ಮನುಷ್ಯ ಕಣ್ಣಗಲಿಸಿ ತಲೆ ಕೆರೆದುಕೊಂಡ. ಫರೀದ್ ಅವರಿಗೆ ತನ್ನ ಕಣ್ಣು ಕಿವಿಗಳನ್ನೇ ನಂಬಲಾಗಲಿಲ್ಲ. ಇವನು ಶಾಲೆ ಮಾಡೋದು ಅಂದ್ರೆ ಏನೂಂತ ತಿಳ್ಕೊಂಡಿದ್ದಾನೆ.? ಶಾಸಕರಾದ ನಾವೇ ವರ್ಷಗಟ್ಟಲೆ ಒದ್ದಾಡಿದರೂ ಒಂದು ಶಾಲೆ ಮಂಜೂರು ಮಾಡೋಕಾಗಲ್ಲ. ಬಸ್ಸಿಂದ ಬಸ್ಸಿಗೆ ಜಿಗಿದು ಕಿತ್ತಳೆ ಮಾರಿದಷ್ಟು ಸುಲಭಾನಾ..? ಆದರೆ ಇವನಿಗೆ ಅದರ ಹಿಂದಿರುವ ಕಷ್ಟ ವಿವರಿಸೋದು ಹೇಗೆ..?
ನೋಡಪ್ಪಾ ನಿನ್ನ ಊರಿನ ಶಾಲೆಗೆ ಪ್ರಸ್ತಾವನೆಯನ್ನ ನಾನು ಮಾಡ್ತೀನಿ ಆದ್ರೆ ಇದರಲ್ಲಿ ತುಂಬಾ ಓಡಾಟ ಇದೆ.
ಯಾವ ಇಲಾಖೆ, ಯಾರು ಅಧಿಕಾರಿ ಹುಡುಕ ಬೇಕು.. ಕೊಡಬೇಕು.. ಇದೆಲ್ಲಾ ನಿನ್ನಿಂದ ಆದೀತೋ..? ಅಂತ ಕೇಳಿ ಅವನ ಮುಖ ನೋಡಿದರು.
ಸಾರು... ನೀವು ಮೇಲೆ ಬರೆದು ಹಾಕಿ ಸಾಕು. ಆಮೇಲೆ ನಾನು ನೋಡಿಕೊಳ್ತೇನೆ ನಾನು ಮಂಗಳೂರಿನಲ್ಲೇ ಇರೋದು. ಎಲ್ಲಾ ಕೆಲಸ ನಾನೇ ಮಾಡಿಸ್ತೇನೆ ಅಂದ.
ಅವನ ಸುಕ್ಕುಗಟ್ಟಿದ ಕಪ್ಪು ಮುಖದಲ್ಲಿ ಚಿಮ್ಮಿದ ಉತ್ಸಾಹದ ಹಿರಿನಗೆ ಕಂಡು ಫರೀದ್ ಅವರಿಗೂ ತಡೆಯಲಾಗಲಿಲ್ಲ. ಕೂಡಲೆ ಪ್ರಾಥಮಿಕ ಶಾಲೆ ಮಂಜೂರು ಮಾಡುವಂತೆ ಇಲಾಖೆಗೆ ಬರೆದು ಹಾಕಿದರು. ಅಲ್ಲೇ ಇದ್ದ ಒಂದಿಬ್ಬರು ಪುಸುಕ್ಕನೆ ನಕ್ಕರು. ಅದು ಪಂಜಿ ಮುಡಿಯ ಹಾಜಬ್ಬ ಅಲ್ವಾ..? ಅವನಿಗೆ ಎಂಥ ಶಾಲೆಯ ಮರ್ಲ್ ಸುರುವಾಗಿದ್ದು ಮಾರ್ರೆ.. ?
ಹೌದು ಹಾಜಬ್ಬನಿಗೆ ಶಾಲೆ ಕಟ್ಟುವ ಹುಚ್ಚು ತಲೆಗೆ ಅಡರಿತ್ತು.
ಶಾಸಕ ಫರೀದ್ ಅವರಿಂದ ಭರವಸೆ ಸಿಕ್ಕಿದ್ದೇ ತಡ ಆರಂಭವಾಯ್ತು ನೋಡಿ ಅಕ್ಷರದ ಹುಚ್ಚನ ಕಚೇರಿ ಅಲೆದಾಟದ ರಂಪು.
ಈ ಮನುಷ್ಯನನ್ನು ಸರಿಯಾಗಿ ನೋಡಿದರೆ ಈತ ಎದುರಿಗೆ ಬಾಗದೆ ಹಿಂದಕ್ಕೆ ವಾಲುತ್ತಾರೆ. ಇದು ಸರಕಾರಿ ಅಧಿಕಾರಿಗಳು ಇವರನ್ನು ಆರು ವರ್ಷಗಳ ಕಾಲ ಕಚೇರಿಯಿಂದ ಕಚೇರಿಗೆ ಅಲೆದಾಡಿಸಿ ಬೆನ್ನು ಮೂಳೆಯ ಬೆಂಡೆತ್ತಿದ ನಿಶಾನಿ. ಮದ್ಯಾಹ್ನದವರೆಗೆ ಕಿತ್ತಾಳೆ ಮಾರಿ ಮದ್ಯಾಹ್ನ ಒಂದು ಪರೋಟ ತಿಂದು ದುಡಿದ ದುಡ್ಡಿನಲ್ಲಿ ಶಾಲೆಗಾಗಿ ಹೋರಾಟ...
ಅಲೆಯದ ಕಚೇರಿ ಇಲ್ಲ.. ಕಾಣದ ಅಧಿಕಾರಿಗಳಿಲ್ಲ.. ಹಿಡಿಯದೆ ಉಳಿದ ಪುಡಾರಿಗಳ ಕೈಕಾಲಿಲ್ಲ. ಕಡತಗಳ ನಡುವೆ ಅಪ್ಪಚ್ಚಿಯಾದ ಜಿರಳೆಯಂತಾಗಿದ್ದ ಹಾಜಬ್ಬರನ್ನು ಅಧಿಕಾರಿಗಳು ಹಾವು ಏಣಿ ಆಟ ಆಡಿಸಿದರು. ಕೆಲವು ಅಧಿಕಾರಿಗಳಿಗೆ ಈ ಕಿತ್ತಳೆ ವ್ಯಾಪಾರಿಯ ಶಿಕ್ಷಣದ ಬಗ್ಗೆ ಇರುವ ಒಲವು ಕಂಡು ಅಚ್ಚರಿಯಾಗಿ ತಮ್ಮಿಂದ ಆದ ಸಹಾಯವನ್ನು ಮಾಡಿದರು. ಕೊನೆಗೂ 1999ರಲ್ಲಿ ಹಾಜಬ್ಬನ ಬರಿಗಾಲ ಸವೆತಕ್ಕೆ ಅಕ್ಷರಲಕ್ಷ್ಮಿಯ ಭಾಗ್ಯದ ಬಾಗಿಲು ತೆರೆದುಕೊಂಡಿತು. ಅಲ್ಲಿನ ಮದರಸಾವೊಂದರಲ್ಲೇ ತಾತ್ಕಾಲಿಕ ಪ್ರಾಥಮಿಕ ಶಾಲೆ ಆರಂಭವಾಯಿತು.
ಆರು ವರ್ಷದ ಭಗೀರಥ ಶ್ರಮ ಕೊನೆಗೂ ಫಲನೀಡಿತು. ಕಿತ್ತಳೆ ಬುಟ್ಟಿಯಿಂದ ಅಕ್ಷರ ಕ್ರಾಂತಿ ಹೊಮ್ಮಿತು. ಮಳೆಗಾಲಕ್ಕೆ ಸೋರುವ ತನ್ನ ಮುರುಕಲು ಮನೆಯಲ್ಲಿ ಅರೆ ಹೊಟ್ಟೆಯಲ್ಲಿ ಮಲಗಿದ ಮಕ್ಕಳು ಮತ್ತು ಉಬ್ಬಸ ಪೀಡಿತ ಹೆಂಡತಿಯ ಕೆಮ್ಮಿನ ನಡುವೆಯೂ ಹಾಜಬ್ಬನಿಗೆ ಶಾಲೆಗೊಂದು ಸ್ವಂತ ಕಟ್ಟಡ ಇಲ್ಲವಲ್ಲ ಅನ್ನುವ ಚಟಪಡಿಕೆ ಕಾಡತೊಡಗಿತು. ಅವರಿವರ ಕೈ ಕಾಲು ಹಿಡಿದು ಅಲ್ಲೇ ಇದ್ದ ಸರಕಾರಿ ಭೂಮಿಯಲ್ಲಿ ಸಣ್ಣ ಕಟ್ಟಡವೊಂದನ್ನು ಹಾಜಬ್ಬ ಕಟ್ಟಿಸಿದರು.