ಕಥೆ-799
5 ವರ್ಷದ ಬಾಲಕಿ ಬರೆದ ಪುಸ್ತಕ ಗಿನ್ನೀಸ್ ದಾಖಲೆ
5 ವರ್ಷದ ಮಕ್ಕಳಿಗೆ ಸರಿಯಾಗಿ ತಮ್ಮ ಗೊಣ್ಣೆಯನ್ನು ತೆಗೆಯಲೂ ಸಹ ಬರುವುದಿಲ್ಲ. ಅಂತದ್ದರಲ್ಲಿ " ಪುಸ್ತಕ ಬರೆಯುವುದೆಂದರೇನು?! ನಿಜಕ್ಕೂ ಆಶ್ಚ ರ್ಯವಾಗುತ್ತದೆ. ಹೌದು, ಈ 5 ವರ್ಷದ ಬಾಲಕಿ ಪುಸ್ತಕ ಬರೆದು, ಅದರ ಸಾವಿರಕ್ಕೂ ಹೆಚ್ಚು ಪ್ರತಿ ಗಳು ಮಾರಾಟವಾಗಿ ಈಗ ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಗೆ ಸೇರಿದೆ. ಹೌದು, ಯುನೈಟೆಡ್ ಕಿಂಗಮ್ಮಿನ ವೆಮೌತ್ನಲ್ಲಿರುವ ಬೆಲ್ಲಾ ಜೆ.ಡಾರ್ಕ್ಳೇ ಆ ಪುಟ್ಟ ಬಾಲಕಿ. ಜನವರಿ 31, 2022 ರಂದು ಬೆಲ್ಲಾ ಬರೆದ, ದಿ ಲಾಸ್ಟ್ ಕ್ಯಾಟ್ ಪುಸ್ತಕವನ್ನು ಲೋಕಾರ್ಪಣೆ ಮಾಡಿತು. ಅಂದಿನಿಂದ 1,000 ಪ್ರತಿಗಳು ಮಾರಾಟ ವಾಗಿವೆ. ಇದರ ಬೆಲೆ 6 ಪೌಂಡ್ (ಸುಮಾರು 571 ರು.) ಇದ್ದು, ಈ ಪುಸ್ತಕವನ್ನು ವಾಟರ್ಸ್ಟೋನ್ಸ್ ಅಥವಾ ಅಮೇಝಾನ್ನಲ್ಲಿ ಖರೀದಿಸಬಹುದು. ಬೆಲ್ಲಾ, ಸದಾ ಕನಸು ಕಾಣುತ್ತಾ, ಕಾಲ್ಪನಿಕ ಲೋಕದಲ್ಲಿ ವಿಹರಿಸುವ ಹುಡುಗಿ.
ಅದೊಂದು ದಿನ ಅಮ್ಮಾ, ನಾನು ಪುಸ್ತಕ ಬರೀತಿನಿ ಅಂದಳು ತಾಯಿ ಚೆಲ್ಸಿ ಸೈಮ್ ಗೆ. ಆಗ ರೂಪುಗೊಂಡಿದ್ದೇ ಈ ದಿ ಲಾಸ್ಟ್ ಕ್ಯಾಟ್ ಪುಸ್ತಕ. ಇನ್ನೂ ವಿಚಿತ್ರವೆಂದರೆ ಬೆಲ್ಲಾ, ಈ ಪುಸ್ತಕವನ್ನು ಕೇವಲ 5 ದಿನಗಳಲ್ಲಿ ಬರೆದು ಮುಗಿಸಿದ್ದಾಳಂತೆ! ಮನೆ ಬಿಟ್ಟು ಹೊರಗೆ ಬರುವ ಸ್ಕೋವಿ ಹೆಸರಿನ ಬೆಕ್ಕಿನ ಮರಿಯೊಂದು ಅನಾಥವಾಗಿ, ಒಬ್ಬಂಟಿಯಾಗಿ ಪಯಣಿಸುವ ಬಗೆ ದಾರಿತಪ್ಪಿ ಹೋಗುತ್ತಿರುವ ಈ ಪುಟ್ಟ ಬೆಕ್ಕು, ತನ್ನ ಅಮ್ಮನಿಲ್ಲದೆ ಹೊರಗೆ ಹೋಗಬಾರದು ಎಂದು ಅರಿತುಕೊಂಡ ಬಗೆ. ಅದರಿಂದ ಸ್ಕೋವಿಗೆ( ಬೆಕ್ಕಿನ ಮರಿಗೆ) ಆಗುವ ಸಮಸ್ಯೆ. ಹೀಗೆ, ಓದುಗರಿಗೆ ಉತ್ತಮ ಸಂದೇಶದ ಕಥಾಹಂದರವನ್ನು ಈ ಪುಸ್ತಕ ಒಳಗೊಂಡಿದೆ. ಪುಸ್ತಕದ ಬೆನ್ನುಪುಟಕ್ಕೆ ಬೆಲ್ಲಾಳ ಸಹೋದರಿ ಲೇಸಿ-ಮೆ ರೇಖಾಚಿತ್ರವನ್ನು ಬರೆದುಕೊಟ್ಟರೆ ಒಳಪುಟ, ಮುಖಪುಟಗಳಲ್ಲಿ ಕಂಡುಬರುವ ಎಲ್ಲಾ ಚಿತ್ರಗಳನ್ನು ಸ್ವತಃ ಬೆಲ್ಲಾಳೇ ರಚಿಸಿದ್ದಾಳೆಂಬುದು ವಿಶೇಷ.
ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡಬಹುದು ಎಂಬುದಕ್ಕೆ ಈ ಪುಟ್ಟ ಬಾಲಕಿ ನಮಗೆ ಪ್ರೇರಣೆಯಾಗುತ್ತಾಳೆ..
-ಎಲ್.ಪಿ.ಕುಲಕರ್ಣಿ