Wednesday, July 23, 2025

 ಕಥೆ-800 

ನಮ್ಮೊಳಗಿರುವ ವಜ್ರಗಳು

ಹಫೀಜ್ ಅಲಿಗೆ ತನ್ನ ಊರಿನ ಬಗ್ಗೆ ಬೇಜಾರು ಬಂದಿತ್ತು. ಅವನು ಇದ್ದದ್ದು ಆಫ್ರಿಕಾ ದೇಶದ ಒಂದು ಗ್ರಾಮದಲ್ಲಿ. ಅಲ್ಲಿ ಮಳೆಯಾಗದೇ ಮೂರು ವರ್ಷವಾಗಿತ್ತು. ಬೆಳೆಯಂತೂ ದೂರವೇ ಉಳಿಯಿತು. ತನ್ನ ಜೊತೆಯಲ್ಲೇ ಇದ್ದ ದನಕರುಗಳನ್ನು, ಮನೆಯವರನ್ನು ಸಾಕುವುದೇ ಕಷ್ಟವಾಗಿತ್ತು.

ಅವನ ಮನೆಗೆ ಸ್ನೇಹಿತ ಚಾರ್ಲಿ ಮೇಲಿಂದ ಮೇಲೆ ಬರುತ್ತಿದ್ದ. ಇವನ ಮನಸ್ಸಿನಲ್ಲಿ ತನ್ನ ಕನಸುಗಳನ್ನು ಬಿತ್ತುತ್ತಿದ್ದ. "ಹಫೀಜ್, ಎಲ್ಲರೂ ನಮ್ಮ ದೇಶದ ಬಗ್ಗೆ ಹಗುರಾಗಿ ಮಾತನಾಡುತ್ತಾರೆ. ಆದರೆ ನಮ್ಮಂತಹ ಶ್ರೀಮಂತ ದೇಶ ಯಾವುದೂ ಇಲ್ಲ. ನಮ್ಮ ದೇಶದಲ್ಲಿ ಇರುವಂತಹ ವಜ್ರದ ಗಣಿಗಳು ಎಲ್ಲಿವೆ? ಏನೋ ನಿನ್ನ ದೈವ ಚೆನ್ನಾಗಿಲ್ಲ, ನಮ್ಮ ಊರಿನಲ್ಲಿ ಗಣಿಗಳಿಲ್ಲ" ಎಂದು ನಿಟ್ಟಿಸಿರು ಬಿಡುತ್ತಿದ್ದ. ಚಾರ್ಲಿ ಹೀಗೆ ಹೇಳಿದಾಗಲೆಲ್ಲ ಹಫೀಜ್‌ನ ಮನದಾಳದಲ್ಲಿ ಏನೇನೋ ಆಸೆಗಳು ಮೊಳೆಯುತ್ತಿದ್ದವು.


ಒಂದು ದಿನ ಹಫೀಜ್ ತೀರ್ಮಾನ ಮಾಡಿದ. ತನ್ನ ಮನೆ, ಹೊಲ, ದನಕರುಗಳನ್ನು ಮಾರಿ ಹಣದ ಗಂಟು ಕಟ್ಟಿಕೊಂಡು ಆಫ್ರಿಕಾ ಖಂಡವನ್ನು ಅಲೆಯಬೇಕು. ಅಲ್ಲಿ ಎಲ್ಲಿಯಾದರೂ ವಜ್ರದ ಗಣಿ ದೊರೆಯುವುದಾದರೆ ಅದನ್ನು ಕೊಂಡುಕೊಳ್ಳಬೇಕು. ಗಣಿ ಕೊಳ್ಳುವುದು ಅಸಾಧ್ಯವಾದರೆ ತನ್ನ ಬಳಿ ಇರುವ ಹಣಕ್ಕೆ ದೊರೆಯುವಷ್ಟು ವಜ್ರಗಳನ್ನು ಕೊಳ್ಳಬೇಕು. ಆ ವಜ್ರಗಳನ್ನು ಬ್ಯಾಂಕಿನಲ್ಲಿ ಲಾಕರ್‌ಗಳಲ್ಲಿ ಇಡಬೇಕು. ಒಂದು ನಾಲೈದು ವರ್ಷ ಅಲ್ಲಲ್ಲಿ ಕೆಲಸಮಾಡಿದರೂ ಅಡ್ಡಿ ಇಲ್ಲ. ಅನಂತರ ಆ ವಜ್ರಗಳ ಬೆಲೆ ತುಂಬ ಹೆಚ್ಚಾಗಿರುತ್ತದೆ. ಚಾರ್ಲಿ ಹೇಳಿರಲಿಲ್ಲವೇ? ವಜ್ರದ ಬೆಲೆ ವರ್ಷದಿಂದ ವರ್ಷಕ್ಕೆ ಎರಡು ಪಟ್ಟಾಗುತ್ತದೆ. ಇನ್ನೊಮ್ಮೆ ಆತನೇ ಹೇಳಿದ್ದ. "ಹಫೀಜ್ ನಿನ್ನ ಬಳಿ ಹೆಬ್ಬೆಟ್ಟಿನ ಗಾತ್ರದ ವಜ್ರವಿದ್ದರೆ ನಮ್ಮ ಇಡೀ ಊರನ್ನೇ ಕೊಳ್ಳಬಹುದು. ಒಂದು ಮೊಟ್ಟೆಯಾಕಾರದ ವಜ್ರವೇನಾದರೂ ದೊರೆತರೆ ನಮ್ಮ ದೇಶವನ್ನೇ ಆಳಬಹುದು". ಹಫೀಜ್‌ನಿಗೆ ಈ ಮಾತು ಸತ್ಯವೆನಿಸಿತ್ತು.


ಮರುದಿನವೇ ಎಲ್ಲವನ್ನೂ ಮಾರಿ. ತನ್ನ ಪರಿವಾರದವರನ್ನು ನೆರೆಹೊರೆಯವರ ಮನೆಯಲ್ಲಿ ಬಿಟ್ಟು ವಜ್ರದ ಬೇಟೆಗೆ ಹೊರಟ. ಇಡೀ ಆಫ್ರಿಕಾ ಖಂಡವನ್ನು ಅಲೆದ. ಆದರೆ ತನ್ನ ಮನಸ್ಸಿಗೆ ತಕ್ಕುದಾದ ವಜ್ರ ದೊರೆಯಲಿಲ್ಲ. ಇದ್ದ ಹಣ ಖರ್ಚಾಯಿತೇ ವಿನ: ವಜ್ರ ದೊರಕಲಿಲ್ಲ. 


ಆ ಹೊತ್ತಿಗೆ ಹಫೀಜ್, ದೈಹಿಕವಾಗಿ, ಮಾನಸಿಕವಾಗಿ ಮತ್ತು ಆರ್ಥಿಕವಾಗಿ ಪೂರ್ತಿ ಕುಸಿದುಹೋಗಿದ್ದ.


ಇನ್ನು ಬೇರೆ ದಾರಿ ಕಾಣಲಿಲ್ಲ. ಎಷ್ಟು ದಿನ ತನ್ನವರನ್ನು ಪಕ್ಕದ ಮನೆಯವರಲ್ಲಿ ಉಳಿಸುವುದು. ಅವರನ್ನು ಕರೆದುಕೊಂಡು ಬೇರೆಲ್ಲಿಗೋ ಹೋಗಿ ಕೆಲಸ ಮಾಡಿ ಜೀವನ ನಡೆಸುವುದೆಂದು ನಿರ್ಧರಿಸಿ ಮರಳಿ ತನ್ನೂರಿಗೆ ಬಂದ. ಅವನ ಊರಿನ ಲಕ್ಷಣವೇ ಬದಲಾಗಿ ಹೋಗಿದೆ. ಸಣ್ಣ ಗ್ರಾಮ ಮರೆಯಾಗಿ ಅತ್ಯಂತ ಶ್ರೀಮಂತ ನಗರವಾಗಿದೆ! ಅದನ್ನೀಗ ವಜ್ರದ ನಗರವೆಂದು ಕರೆಯುತ್ತಾರೆ. ಹಫೀಜ್‌ನ ಹೆಂಡ್ತಿ ಹೇಳಿದಳು, "ನಾವು ಮಾರಿದ ಹೊಲವನ್ನು ಕೊಂಡ ವ್ಯಕ್ತಿ ವ್ಯವಸಾಯ ಮಾಡಲೆಂದು ಬಾವಿ ತೆಗೆಸಿದ. ಆಗ ಅವನಿಗೊಂದು ಹೊಳೆಹೊಳೆಯುವ ಕಲ್ಲು ದೊರಕಿತು. ಅದನ್ನು ತಜ್ಞರಿಗೆ ತೋರಿಸಿದಾಗ ಅದೊಂದು ಬಹು ಬೆಲೆಬಾಳುವ ವಜ್ರವೆಂದು ತಿಳಿಯಿತು. ಅಲ್ಲದೆ ಇಡೀ ಹೊಲವೇ ಅತ್ಯಂತ ಶ್ರೇಷ್ಠ ವಜ್ರಗಳ ಗಣಿಯೆಂದು ಗೊತ್ತಾಗಿ ಈಗ ವಜ್ರಗಳನ್ನು ತೆಗೆಯುತ್ತಿದ್ದಾರೆ. ನಮ್ಮಿಂದ ಹೊಲ ಕೊಂಡವನು ಇಂದು ಪ್ರಪಂಚದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದಾನೆ". ಹಫೀಜ್ ಹಣೆ ಹಣೆ ಬಡಿದುಕೊಂಡು ಅತ್ತ.... ವಜ್ರವನ್ನು ಹುಡುಕಿಕೊಂಡು ಪ್ರಪಂಚವನ್ನೇ ಸುತ್ತಿದವನಿಗೆ ತನ್ನ ಕಾಲಡಿಯಲ್ಲೇ ವಜ್ರದ ಗಣಿಯೇ ಇರುವುದು ತಿಳಿಯದೇ ಹೋಯಿತು.

ನಮ್ಮಲ್ಲಿರುವ ಆತ್ಮಶಕ್ತಿಯನ್ನರಿಯದೇ, ಸಣ್ಣ ಸಣ್ಣ ಶಕ್ತಿಗಳನ್ನರಸಿ ಜಗತ್ತು ಸುತ್ತಿ ಶ್ರಮಪಡುತ್ತೇವೆ. ಯಾವುಯಾವುದೋ ಆಕರ್ಷಣೆಗಳಿಗೆ ಮನಸ್ಸನ್ನು ತೆತ್ತು, ದೀಪದ ಹುಳುಗಳಂತೆ ಶಕ್ತಿ ಕಳೆದುಕೊಳ್ಳುತ್ತೇವೆ. ಪ್ರಪಂಚದ ಅತ್ಯಂತ ಶ್ರೇಷ್ಠ ಹಾಗೂ ಸನಾತನವಾದ ಸಂಸ್ಕೃತಿಯ ವಾರಸುದಾರರು ನಾವು ಎಂಬ ಹಿರಿಮೆಯನ್ನೇ ಕಳೆದುಕೊಳ್ಳುತ್ತೇವೆ. ಹಫೀಜ್‌ನಂತೆ ನಮ್ಮತನವನ್ನು ಮರೆತು ಯಾವುದೋ ಸಣ್ಣದಕ್ಕೆ ಕೈ ಚಾಚಿ, ಅದನ್ನು ಪಡೆಯದೇ, ಇರುವುದನ್ನು ಕಳೆದುಕೊಂಡು ಮರುಗುತ್ತೇವೆ." ನಮ್ಮೊಳಗಿರುವ ಶಕ್ತಿ ನಾವು ಅರಿತುಕೊಳ್ಳಬೇಕಿದೆ...

-ಕರುಣಾಳು ಬಾ ಬೆಳಕೆ

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು