ಕಥೆ-803
ಓದು : ನೆನಪಿಡುವುದು ಹೇಗೆ?
ಪರಿಶ್ರಮದಿಂದ ಓದುವುದು ಒಂದು ಕಡೆ ಆದರೆ, ಇಷ್ಟಪಟ್ಟುವುದು ಇನ್ನೊಂದು ಕಡೆ, ಅದೆಲ್ಲವನ್ನು ನೆನಪಿಡುವುದು ಒಂದು ರೀತಿಯ ಶ್ರಮವೇ, ಸ್ಪರ್ಧಾತ್ಮಕ ಪರೀಕ್ಷೆಗೆ ಆಗಲಿ, ತರಗತಿ ಪರೀಕ್ಷೆಗಳಿಗೆ ಆಗಲಿ ಓದುವ ಬಹುಸಂಖ್ಯಾತರಿಗೆ ಕಾಡುವ ಒಂದೇ ಒಂದು ಪ್ರಶ್ನೆ ಓದಿದ್ದನ್ನು ಹೇಗೆ ನೆನಪಿನಲ್ಲಿಡುವುದು ಎಂಬುದು. ಇನ್ನೂ ಕೆಲವರಿಗೆ ಓದಿದ್ದೆಲ್ಲ ಕಾಲಕ್ರಮೇಣ ಕನ್ ಪ್ಯೂಸ್ ಆಗುವ ಸಮಸ್ಯೆ ಕಾಡುವುದು. ಮತ್ತು ಮರೆತು ಹೋಗುವುದು. ಇಂತಹ ಒಂದಲ್ಲ ಒಂದು ಸಮಸ್ಯೆ ಎಲ್ಲರಿಗೂ ಇದ್ದದ್ದೆ. ಸಾಮಾನ್ಯವಾಗಿ ಒಮ್ಮೆ ಓದಿದನ್ನು ನೆನಪಿಸಿಕೊಂಡು ಬರೆದರೆ ಮಾತ್ರ ಅದು ಮರುಕಳಿಸುತ್ತದೆ ಹಾಗೆ ದೀರ್ಘಕಾಲ ನೆನಪಿನಲ್ಲಿ ಉಳಿಯುತ್ತದೆ. ಅಗತ್ಯ ಸಂದರ್ಭದಲ್ಲಿ, ಓದಿದ ಯಾವುದೇ ಮಾಹಿತಿಗಳನ್ನು ನೆನಪಿಗೆ ತಂದಕೊಳ್ಳಲು ಕೆಲವು ವಿಧಾನಗಳಿವೆ. ಬಹಳಷ್ಟು ವಿದ್ಯಾರ್ಥಿಗಳು ಇದರಲ್ಲಿ ಸಫಲರೂ ಆಗಿದ್ದಾರೆ. ಅಂತಹ ಕೆಲವು ವಿಧಾನಗಳನ್ನು ಈ ಕೆಳಗಿನಂತೆ ನೀಡಲಾಗಿದೆ.
ಮಾಹಿತಿ ಸರಿಯಾಗಿ ಅರ್ಥ ಮಾಡಿಕೊಳ್ಳಿ ಪುಸ್ತಕ, ನೋಟ್ಸ ಯಾವುದರಲ್ಲೇ ಓದಿದರೂ ಸಹ ಮಾಹಿತಿಗಳನ್ನು ಸ್ಪಷ್ಟವಾಗಿ ಅರ್ಥವಾಗುವಂತೆ ಓದಿಕೊಳ್ಳಿ. ಅಸ್ಪಷ್ಟವಾಗಿದ್ದರೆ, ಗೊಂದಲಗಳಿಂದ ತುಂಬಿದ್ದರೆ ಅದನ್ನು ನೆನಪಿನಲ್ಲಿ ಇಟ್ಟುಕೊಳ್ಳುವುದು ಕಷ್ಟ, ಅದನ್ನು ಅರ್ಥ ಮಾಡಿ ಕೊಂಡಾಗ ಮಾತ್ರ ಬೇಕಾದಾಗ ಸ್ಮರಿಸಬಹುದು. ಹಾಗೂ ನಿಮ್ಮದೇ ಆದ ಪದಗಳಲ್ಲಿ ಟಿಪ್ಪಣಿ ಮಾಡಿಕೊಂಡು ಮೆದುಳೆಂಬ ಕಂಪ್ಯೂಟರ್ ಒಳಗೆ ಭರ್ತಿ ಮಾಡಿ. ಇದು ನಿಮಗೆ ಸಾಧ್ಯವಾಗಲಿಲ್ಲ ಎಂದರೆ ನೀವದನ್ನು ಅರ್ಥ ಮಾಡಿಕೊಡಿಲ್ಲ ಎಂದೇ ಅರ್ಥ.
ಮಾಹಿತಿ ಸಂಗ್ರಹ ಕ್ರಮಬದ್ಧವಾಗಿರಲಿ
ಓದಿದ ಮಾಹಿತಿಯನ್ನು ಬೇರೆ ಬೇರೆ ವಿಭಾಗಗಳಲ್ಲಿ ಕ್ರೋಡೀಕರಿಸಿ. ಉದಾಹರಣೆಗೆ ನೀವು ಇಂಗ್ಲಿಷ್ ಭಾಷೆ ವಿಷಯ ಓದುತ್ತಿದ್ದೀರಿ ಎಂದಲ್ಲಿ ಅದರಲ್ಲಿ ಒಂದೇ ಅರ್ಥ ಬರುವ ಬೇರೆ ಬೇರೆ ಶಬ್ದಗಳನ್ನು ಒಂದು ವಿಭಾಗದಲ್ಲಿ ಕ್ರೋಢೀಕರಿಸಿ ಸ್ಮರಣೆಯಲ್ಲಿ ಇಟ್ಟುಕೊಳ್ಳಬಹುದು. 10 ನಂಬರಗಳ ಮೊಬೈಲ್ ಉದ್ದನೆಯ ನಂಬರ್ ಅನ್ನು ಹೇಗೆ ತುಂಡು ತುಂಡಾಗಿ ಮಾಡಿ ನೆನಪಿನಲ್ಲಿ ಇಟ್ಟುಕೊಳ್ಳುತ್ತೇವೆಯೋ. ಹಾಗೆಯೇ ಇತಿಹಾಸಕ್ಕೆ ಸಂಬಂಧಪಟ್ಟಂತೆ ಓದುವಾಗ ಕಾಲಾನುಕ್ರಮದಲ್ಲಿ, ಆಡಳಿತ ನಡೆಸಿದ ರಾಜ ಕುಟುಂಬಗಳಿಗೆ ಅನುಗುಣವಾಗಿ ಓದಿಕೊಳ್ಳಬೇಕು.
ಪಠ್ಯಕ್ಕಿಂತ ಚಿತ್ರವನ್ನು ನೆನಪಿಸಿಕೊಳ್ಳುವುದು ಸುಲಭ. ಇದನ್ನೇ ವಿವರಗಳಿಗೂ ಅನ್ವಯಿಸಬಹುದು. ಯಾವುದೋ ಸಂಕೀರ್ಣವಾದ ಗಣಿತದ ಸಮಸ್ಯೆ ಅಥವಾ ಗೊಂದಲದ ವಿವರಗಳಿದ್ದರೆ ಪಠ್ಯದಲ್ಲಿರುವ ವಿವರಗಳನ್ನು ಪದೇ ಪದೇ ನೋಡಿ ಮೆದುಳಿನಲ್ಲಿ ಪ್ರತ್ಯೇಕರಿಸಲು ಪ್ರಯತ್ನಿಸಿ. ಕ್ಲಿಷ್ಟಕರವಾದ ಸೂತ್ರಗಳನ್ನು, ಮಾಹಿತಿಗಳನ್ನು ಸರಳವಾಗಿ ಅರ್ಥವಾಗುವ ರೀತಿ ಚಾರ್ಟ್ ಮಾಡಿಕೊಂಡು
ಶಬ್ದಗಳ ಹೊಂದಾಣಿಕೆ ಓದಿನ ವಿಷಯದಲ್ಲಿನ ಶಬ್ದಗಳನ್ನು ಅಥವಾ ಘಟನೆಗಳನ್ನು ಸ್ಥಳಕ್ಕೆ, ಭಾವನೆಗಳಿಗೆ, ವ್ಯಕ್ತಿಗಳಿಗೆ, ಸಂದರ್ಭಗಳಿಗೆ ಹೋಲಿಕೆ ಮಾಡಬೇಕಾಗುತ್ತದೆ.
ನಮ್ಮ ಮೆದುಳು ತನಗೆ ಪರಿಚಿತವಾದದ್ದನ್ನು ಸ್ಮರಣೆಯಲ್ಲಿ ಇಟ್ಟುಕೊಳ್ಳುತ್ತದೆ.
ಪ್ರತಿದಿನ ವ್ಯಾಯಾಮ
ಓದು ಸ್ಪರ್ಧಾತ್ಮಕ ಪರೀಕ್ಷೆಗೆ ಆಗಲಿ, ಶೈಕ್ಷಣಿಕ ಕೋರ್ಸ್‌ಗಳಿಗೆ ಆಗಲಿ, ಪ್ರತಿದಿನ 20 ನಿಮಿಷ ವ್ಯಾಯಾಮ ಮಾಡುವುದರಿಂದ ಮೆಮೊರಿ ಪವರ್ ಹೆಚ್ಚಿಸಲು ಬೂಸ್ಟ ನೀಡಿದ ಹಾಗೆ ಆಗುತ್ತದೆ.
ಜೋರಾಗಿ ಓದುವುದು
ಕೆಲವರಿಗೆ ಮಾತ್ರ ಇದು ವರ್ಕ್ ಆಗಬಹುದು. ಜೋರಾಗಿ ಓದುವುದು ಸ್ವಲ್ಪ ಕ್ರೇಜಿ ಎನಿಸಬಹುದು. ಆದರೆ ಕೆಲವರಿಗೆ ಹೀಗೆ ಓದುವುದರಿಂದ ತಲೆಯಲ್ಲಿ ಉಳಿಯುತ್ತದೆ. ಮನಸ್ಸಿನಲ್ಲಿ ಅಥವಾ ಪಿಸುಗುಟ್ಟುವ ರೀತಿ ಓದುವ ಬದಲು ಜೋರಾಗಿ ಓದಿಕೊಳ್ಳಿ. ಆದರೆ ಗ್ರಂಥಾಲಯಗಳಲ್ಲಿ ಈ ರೀತಿ ಓದಿಕೊಳ್ಳಲು ಆಗುವುದಿಲ್ಲ, ಅಲ್ಲಿ ಇಂತಹ ಪ್ರಯತ್ನಗಳನ್ನು ಮಾಡಲೂಬಾರದು.
ಓದಿದ್ದನ್ನು ಇತರರಿಗೆ ಬೋಧಿಸಿ
ಸಾಧ್ಯವಾದರೆ ನೀವು ಓದಿದ್ದನ್ನು ಮತ್ತೊಬ್ಬರಿಗೆ ಸರಳವಾಗಿ ಬೋಧಿಸಲು ಪ್ರಯತ್ನಿಸಿ. ಹೀಗೆ ಮಾಡುವುದರಿಂದ ಹೆಚ್ಚುಕಾಲ ಯಾವುದೇ ವಿಷಯಗಳು ತಲೆಯಲ್ಲಿ ಉಳಿಯುತ್ತವೆ.
ಓದದ ವಿಷಯಗಳ ಬಗ್ಗೆ ವಿಡಿಯೋ
ಅದು ಇತಿಹಾಸವೇ ಆಗಲಿ, ವಿಜ್ಞಾನವೇ ಆಗಲಿ, ಓದುವ ಟಾಪಿಕ್ ಗಳಿಗೆ ಸಂಬಂಧಿಸಿದಂತೆ ವಿಡಿಯೋಗಳು ಲಭ್ಯವಿದ್ದಲ್ಲಿ ಒಮ್ಮೆ ನೋಡಿ. ಸಾಕ್ಷ್ಯ ಚಿತ್ರಗಳನ್ನು ನೋಡುವುದರಿಂದ ಯಾವುದೇ ವಿಷಯ ಬಹುಬೇಗ ಅರ್ಥವಾಗುತ್ತದೆ.
ನಿರಂತರ ಓದಿನ ನಡುವೆ ವಿರಾಮ ಇರಲಿ
ನಿರಂತರ ಆಲೋಚನೆಯ ಮೆದುಳಿಗೆ ಆಗಾಗ ಬ್ರೇಕ್ ಇರಲಿ, ಕನಿಷ್ಠ 45-60 ನಿಮಿಷಗಳಿಗೆ ಒಮ್ಮೆ ಓದಿನ ನಡುವೆ ಬ್ರೇಕ್ ತೆಗೆದುಕೊಳ್ಳಿ. ಹೀಗೆ ಮಾಡುವುದರಿಂದ ಓದಿನ ಮೇಲೆ ಹೆಚ್ಚು ಫೋಕಸ್ ಸಾಧ್ಯ. ಹಾಗೆ ಸದಾಸ್ಪೂರ್ತಿಯಿಂದ ಓದಲು ಉತ್ಸುಕತೆಯನ್ನು ಕಾಯ್ದುಕೊಳ್ಳಬಹುದು.
ಧ್ಯಾನ ಮಾಡಿರಿ
ಮಾನಸಿಕ ಒತ್ತಡಗಳನ್ನು ಕಡಿಮೆ ಮಾಡುವ ಬಹುಮುಖ್ಯ ವಿಧಾನಗಳಲ್ಲಿ ಧ್ಯಾನ ಮಾಡುವುದು ಪ್ರಮುಖ ಪಾತ್ರ ವಹಿಸುತ್ತದೆ. ವಿದ್ಯಾರ್ಥಿಗಳು ಪರೀಕ್ಷೆ ಹತ್ತಿರದಲ್ಲಿ ದಿನನಿತ್ಯ ಧ್ಯಾನ ಮಾಡುವುದರಿಂದ ಪರೀಕ್ಷೆ ಬಗ್ಗೆ ಇರುವ ಭಯವನ್ನು ಹೋಗಲಾಡಿಸಬಹುದು. ಮೆಂಟಲ್ ಮತ್ತು ಫಿಸಿಕಲ್ ಎರಡು ಬಗೆಯ ಆರೋಗ್ಯವನ್ನು ಸುಸ್ಥಿತಿಯಲ್ಲಿಡಬಹುದು. ಇದರಿಂದ ಮೆಮೊರಿ ಪವರ್ ಸಹ ಹೆಚ್ಚುತ್ತದೆ.
ಇದರಲ್ಲಿ ನಿಮಗೆ ಯಾವ ವಿಧಾನ ಅನುಕೂಲಕರವಾಗಿದೆ ಅದನ್ನು ಆಯ್ಕೆ ಮಾಡಿಕೊಂಡು ಓದಿದ್ದನ್ನು ನೆನಪಿಡಲು ಪ್ರಯತ್ನಿಸಿರಿ...
👍