ಕಥೆ-806
ನಕ್ಷತ್ರಗಳ ಜೀವನ ಯಾತ್ರೆ..
ವಿಶದಲ್ಲಿ ಹೈಡೋಜನ್ ಅನಿಲ ದುಂಡಗಾಗಿ ಒಂದು ನಕ್ಷತ್ರ ಹುಟ್ಟುತ್ತದೆ. ಇದನ್ನೇ 'ಆದಿ ನಕ್ಷತ್ರ' ಎನ್ನುತ್ತಾರೆ. ಆಗ ತಾನೇ ಹುಟ್ಟಿದ ಮಗು ಎಷ್ಟು ಸೋಜಿಗವೋ ಅಷ್ಟೇ ವಿಸ್ಮಯ ಈ 'ಆದಿ ನಕ್ಷತ್ರ'. ಹುಟ್ಟಿದ ಮಗು ಕೆಲವೇ ತಿಂಗಳಲ್ಲಿ ತನ್ನ ಆಟ ಪಾಠಗಳನ್ನು ಆರಂಭಿಸುವಂತೆ, ಆದಿ ನಕ್ಷತ್ರ ತನ್ನದೇ ಆದ ಗುರುತ್ವದಿಂದ ಕುಸಿಯುತ್ತಾ ಹೋಗುತ್ತದೆ. ಇದರಿಂದ ಕ್ರಮೇಣ ಉಷ್ಣತೆ ಹೆಚ್ಚುತ್ತಾಹೋಗುತ್ತದೆ. ಆದಿ ನಕ್ಷತ್ರದ ಒಳಭಾಗದಲ್ಲಿ ಮಿಲಿಯನ್ ಡಿಗ್ರಿಗಳಷ್ಟು ಉಷ್ಣತೆ ಉಂಟಾದಾಗ ಮತ್ತೊಂದು ವಿಶೇಷ ಕ್ರಿಯೆ ನಡೆಯುತ್ತೆ. ಅದೇ 'ಹೈಡೋಜನ್ ಮಿಲನ ಕ್ರಿಯೆ'. ಇದರಿಂದ ಮತ್ತೊಂದು ವಿಶೇಷ ಧಾತು 'ಹೀಲಿಯಂ' ರೂಪುಗೊಳ್ಳುತ್ತೆ.
ಮನುಷ್ಯ ತನ್ನ ಹದಿಹರೆಯದ ಸ್ಥಿತಿಯಲ್ಲಿ ಹೇಗೆ ತನ್ನ ಮಾನಸಿಕ ಸ್ಥಿತಿಗಳಿಂದ ಜರ್ಝರಿತಗೊಳ್ಳುತ್ತಾನೆಯೋ ಹಾಗೆಯೇ ಈ ನಕ್ಷತ್ರದ ಸ್ಥಿತಿಯೂ ಕೂಡ! ನಕ್ಷತ್ರದ ಈ ಸ್ಥಿತಿಯಲ್ಲಿ ಎರಡು ಬಹು ಮುಖ್ಯ ಕ್ರಿಯೆಗಳು ಈ ನಕ್ಷತ್ರವನ್ನು ಹಣ್ಣುಗಾಯಿ-ನೀರುಗಾಯಿ ಮಾಡಿಬಿಡುತ್ತವೆ.
ಉಷ್ಣತೆ ಮತ್ತು ಗುರುತ್ವ - ಬದ್ಧವೈರಿಗಳು
ನಿಮಗೆ ಆಶ್ಚರ್ಯವೆನಿಸಬಹುದು ! ಮೊದಲು ಬಂದ ಗುರುತ್ವ ನಕ್ಷತ್ರವನ್ನು ಕುಗ್ಗಿಸುತ್ತಾ ಹೋದರೆ, ಆನಂತರ ಏರಿದ ಉಷ್ಣತೆ ನಕ್ಷತ್ರವನ್ನು ಹಿಗ್ಗಿಸುತ್ತಾ ಹೋಗುತ್ತದೆ. ಈ ಹಿಗ್ಗುವಿಕೆ ಮತ್ತು ಕುಗ್ಗುವಿಕೆ ಸಮನಾದಾಗ ನಕ್ಷತ್ರ ಸ್ಥಿರ ಸ್ಥಿತಿಯನ್ನು ಪಡೆಯುತ್ತದೆ. ಇದನ್ನೇ 'ಸ್ಥಿರ ನಕ್ಷತ್ರ' ಎನ್ನುತ್ತಾರೆ. ಸ್ಥಿರ ನಕ್ಷತ್ರಕ್ಕೆ ಒಂದು ಉದಾಹರಣೆ ನಮ್ಮ ಸೂರ್ಯ ! ಈಗಾಗಲೇ ಸೂರ್ಯ ಐದು ಬಿಲಿಯನ್ ವರ್ಷಗಳನ್ನು ಪೂರೈಸಿದ್ದಾನೆ. ಸೂರ್ಯನಿಗೆ ಇನ್ನೂ ಐದು ಬಿಲಿಯನ್ ವರ್ಷಗಳ ಆಯುಸ್ಸಿದೆ !
ನಕ್ಷತ್ರದ ಮಧ್ಯ ವಯಸ್ಕ ಸ್ಥಿತಿ – ಕೆಂಪು ದೈತ್ಯ
ಮನುಷ್ಯ ಮಧ್ಯವಯಸ್ಥ ಸ್ಥಿತಿಗೆ ಬಂದಾಗ ಸಾಮಾನ್ಯ ವಾಗಿ ಹೊಟ್ಟೆ ಉಬ್ಬಿ ದಪ್ಪನಾಗಿ ಕಾಣುತ್ತಾನೆ. ಅಂತೆಯೇ ನಮ್ಮ 'ಸ್ಥಿರ ನಕ್ಷತ್ರ' ಕೂಡಾ ಹಿಗ್ಗಿ ದೊಡ್ಡವನಾಗಿ ಬಿಡ್ತಾನೆ. ಯಾಕೆ ಗೊತ್ತಾ? ಸ್ಥಿರ ನಕ್ಷತ್ರದ ಮಧ್ಯಭಾಗ ಹೀಲಿಯಂ ತುಂಬಿದ ಮೇಲೆ ಹೊರಕವಚದಲ್ಲಿನ ಹೈಡೋಜನ್ ಸಮ್ಮಿಲನದಿಂದ ಉಷ್ಣತೆ ಹೆಚ್ಚಿ ಕೆಂಪು ಕೆಂಪಾಗಿ ಉಬ್ಬಿ ದೊಡ್ಡವನಾಗ್ತಾನೆ. ಇದನ್ನೇ ಕೆಂಪು ದೈತ್ಯ ಎನ್ನುತ್ತಾರೆ.
ಒಂದು ನಕ್ಷತ್ರದ ಸಾವಿನ ನಿರ್ಧಾರ ಈ ಹಂತದಿಂದ ಪ್ರಾರಂಭವಾಗುತ್ತದೆ. ಈ ಹಂತದಲ್ಲಿ ನಕ್ಷತ್ರದ ದ್ರವ್ಯರಾಶಿ ಪ್ರಮುಖ ಪಾತ್ರ ವಹಿಸುತ್ತದೆ. 'ಕೆಂಪು ದೈತ್ಯ' ಸ್ಥಿತಿಯಲ್ಲಿ ಅಪಾರ ಉಷ್ಣತೆಯಿಂದ ಹೊರಕವಚ ಉಬ್ಬಿ ಕಳಚಿಕೊಂಡು ವಸ್ತುರಾಶಿ ಹೊರಕ್ಕೆ ಚಿಮ್ಮುತ್ತದೆ. ಈಗ ಉಳಿಯುವ ನಕ್ಷತ್ರದ ವಸ್ತು ರಾಶಿ ಅದರ ಮುಂದಿನ ಹಂತಗಳು ಹಾಗೂ ಸಾವಿನ ಸ್ಥಿತಿಯನ್ನು ನಿರ್ಧರಿಸುತ್ತದೆ.
ಸೂರ್ಯನ ರಾಶಿಗಿಂತ 14 ರಾಶಿ ಕಡಿಮೆ ಇರುವ ನಕ್ಷತ್ರಗಳ ಸಾವು ಒಂದು ಸೋಜಿಗ ! ಈ ಹಂತದಲ್ಲಿ ಸಮ್ಮಿಲನ ಕ್ರಿಯೆ ನಿಂತು ಹೋಗುವುದರಿಂದ ಉಷ್ಣತೆ ಕ್ರಮೇಣ ಕಡಿಮೆಯಾಗುತ್ತ ಹೋಗುತ್ತದೆ. ಇದರಿಂದಾಗಿ ನಕ್ಷತ್ರ ಗಾತ್ರದಲ್ಲಿ ಕಡಿಮೆಯಾಗಿ 'ಶ್ವೇತ ಕುಬ್ಬ' ಹಂತವನ್ನು ತಲುಪುತ್ತದೆ.
ಶ್ವೇತ ಕುಬ್ಬದ ನಂತರದ ಹಂತ ಕೃಷ್ಣ ಕುಬ್ಬ
ವೃದ್ಧಾಪ್ಯದ ಕೊನೆಯ ಹಂತ. ಕಾಲಾನಂತರದಲ್ಲಿ ಶ್ವೇತ ಕುಬ್ಬದ ತಾಪ ಕಡಿಮೆಯಾಗುತ್ತ ಹೋದಂತೆ ಹೆಚ್ಚು ಹೆಚ್ಚು ಮಸುಕಾಗುತ್ತ ಹೋಗುತ್ತದೆ. ಹೀಗೆ ಕ್ರಮೇಣ ಬೆಳಕು ಹೊರಹೊಮ್ಮುವುದು ನಿಲ್ಲುತ್ತದೆ. ಈಗ ಇದು ತಣ್ಣಗಾಗಿರುವ ಕಪ್ಪು ನಕ್ಷತ್ರ. ಈ ಹಂತವನ್ನು 'ಕೃಷ್ಣ ಕುಬ್ಬ' ಎಂದು ಕರೆಯುತ್ತಾರೆ. ಇದೇ ನಕ್ಷತ್ರದ ಕೊನೆಯ ಹಂತದಲ್ಲಿ ವಿಶ್ವದಿಂದ ಮರೆಯಾಗುತ್ತದೆ.
ಸೂರ್ಯನ ಐದು ಪಟ್ಟು ಅಥವಾ ಅದಕ್ಕೂ ಹೆಚ್ಚಿನ ರಾಶಿಯ ನಕ್ಷತ್ರಗಳು ಸಾಯುವ ರೀತಿ ಮಧ್ಯಮ ವರ್ಗದ ಜನ ಸ್ವಲ್ಪ ಆಸ್ತಿಯನ್ನು ಮಾಡಿ ಸಾಯುವಂತೆ ಈ ರಾಶಿಯ ನಕ್ಷತ್ರಗಳು ತಮ್ಮ ಗರ್ಭದಲ್ಲಿ ಹೀಲಿಯಂ ಧಾತುಗಳು ಪುನಃ ಪುನಃ ಸಮ್ಮಿಲನಗೊಂಡು ಕಾರ್ಬನ್, ಆಕ್ಸಿಜನ್, ಮೆಗ್ನಿಷಿಯಂ ಸಿಲಿಕಾನ್, ಕೊನೆಯಲ್ಲಿ ಗರ್ಭ. ಕಬ್ಬಿಣವನ್ನು ಉತ್ಪಾದಿಸುವ ಹೊತ್ತಿಗೆ ನಕ್ಷತ್ರ ಅಪಾರ ಉಷ್ಣತೆಯಿಂದ ಕುದಿಯತೊಡಗುತ್ತದೆ. ಕೊನೆಗೊಮ್ಮೆ ನಕ್ಷತ್ರ ತನ್ನ ಅಪಾರ ಉಷ್ಣತೆಯಿಂದ ಸ್ಫೋಟಗೊಳ್ಳುತ್ತದೆ. ಈ ಸ್ಪೋಟವನ್ನೇ 'ಸೂಪರ್ ನೋವಾ' ಎನ್ನುತ್ತಾರೆ.
-ಕೆ.ನಟರಾಜ