ಕಥೆ-820
ರಕ್ಷಾಬಂಧನ
ರಾಖಿ ಎಂಬುದು ಕೇವಲ ನೂಲಲ್ಲ, ಸಹೋದರ ಸಹೋದರಿ ಸಂಬಂಧಗಳ ಅಭೇದ್ಯ ಅನುಬಂಧ..
ಕನಸುಗಳು ನೂರಿರಲಿ, ಸಂರಕ್ಷಣೆ ಹೊಣೆ ನನಗಿರಲಿ ಎಂಬ ಸಂದೇಶ ಸಾರುವ ಸೋದರತೆಯ ಸಂಭ್ರಮದ ಹಬ್ಬ...
ಶ್ರಾವಣ ಮಾಸದ ಶುಕ್ಲ ಪಕ್ಷದ ನೂಲು ಹುಣ್ಣಿಮೆಯ ಈ ದಿನ ರಕ್ಷಾಬಂಧನದ ಸಂಭ್ರಮ.. ಈ ರಕ್ಷಾ ಬಂಧನದ ‘ರಾಖಿ ಹಬ್ಬ’, ‘ಅಣ್ಣ-ತಂಗಿ, ಅಕ್ಕ-ತಮ್ಮರ ಜನುಮ ಜನುಮದ ಅನುಬಂಧ. ಸಹೋದರ ಸಹೋದರಿಯರ ನಡುವಿನ ಬಂಧವನ್ನು ಗಟ್ಟಿಗೊಳಿಸಿ, ತಂಗಿಗೆ ಅಣ್ಣನಾದವನು ನಾನಿದ್ದೇನೆ ನಿನ್ನ ಬೆನ್ನಿಗೆ... ಅಣ್ಣನಿಗೆ ತಂಗಿಯ ಶ್ರೀರಕ್ಷೆ ಮತ್ತು ಶುಭ ಹಾರೈಕೆಯ ಪ್ರತೀಕವಾಗಿದೆ...
ಸಹೋದರಿಯರು ತಮ್ಮ ಸಹೋದರರಿಗೆ ಒಳ್ಳೆಯದಾಗಲೆಂದು ಹಾರೈಸುತ್ತ ಅವರಿಗೆ ಆರತಿ ಬೆಳಗಿ ಕುಂಕುಮ ಹಚ್ಚಿ ಸಿಹಿ ತಿನ್ನಿಸಿ ಅವರ ಕೈಯ ಮಣಿಕಟ್ಟಿನ ಮೇಲೆ ತಮ್ಮ ಪ್ರೀತಿ ಮತ್ತು ಸ್ನೇಹದ ಸಂಕೇತವಾದ ರಾಖಿಯನ್ನು ಕಟ್ಟಿ ದೀರ್ಘಾಯುಷ್ಯವನ್ನು ಹಾರೈಸಿ ಆಶೀರ್ವಾದ ಪಡೆಯುತ್ತಾರೆ. ಇದಕ್ಕೆ ಪ್ರತಿಯಾಗಿ ಸಹೋದರ ಸಹೋದರಿಯನ್ನು ರಕ್ಷಿಸುವ ಭರವಸೆ ನೀಡುತ್ತಾರೆ. ಅಲ್ಲದೇ ಸಹೋದರರು ತಮ್ಮ ಸಹೋದರಿಯರಿಗೆ ಅವರ ಪ್ರೀತಿಯ ಸಂಕೇತವಾಗಿ ಅವರಿಗಿಷ್ಟವಾದ ಉಡುಗೊರೆಗಳನ್ನು ನೀಡುವುದು ಸಾಮಾನ್ಯವಾಗಿದೆ.
ರಕ್ಷಾಬಂಧನವು ಸಹೋದರತೆ ಬಾಂಧವ್ಯವನ್ನು ಗಟ್ಟಿಗೊಳಿಸಿ, ಒಡಹುಟ್ಟಿದವರ ನಡುವೆ ಪ್ರೀತಿ ಮತ್ತು ಬೆಂಬಲವನ್ನು ಹೆಚ್ಚಿಸುತ್ತದೆ. ಸಹೋದರಿಯರು ತಮ್ಮ ಸಹೋದರರ ಸಮೃದ್ಧಿ ಮತ್ತು ಸಂತೋಷಕ್ಕಾಗಿ ಪ್ರಾರ್ಥಿಸಿದರೆ ಸಹೋದರರು ಸಹೋದರಿಯರನ್ನು ರಕ್ಷಿಸುವ ಪ್ರತಿಜ್ಞೆ ಮಾಡುತ್ತಾರೆ. ರಕ್ಷಾಬಂಧನ ಯುಗಯುಗಾಂತರಗಳಿಂದ ಬಂದಿರುವ ಒಂದು ಸಾಂಪ್ರದಾಯಿಕ ಹಬ್ಬ... ಇದು ಕುಟುಂಬದ ನಡುವೆ ಪ್ರೀತಿ, ಒಗ್ಗಟ್ಟು ಮತ್ತು ಸಾಮರಸ್ಯವನ್ನು ಮೂಡಿಸುತ್ತದೆ..
ರಕ್ಷಾಬಂಧನದ ಶುಭಾಶಯಗಳು
- ಶಂಕರಗೌಡ ಬಸಾಪುರ