Tuesday, August 12, 2025

 ಕಥೆ-824

ಸಮಸ್ಯೆಯ ನಡುವೆ ಬದುಕುವ ಕಲೆ


ಒಂದು ಊರಿನಲ್ಲಿ ಜ್ಞಾನಿಯಾದ ವ್ಯಕ್ತಿಯೊಬ್ಬನಿದ್ದ. ಜನರು ಆತನ ಬಳಿ ಸಮಸ್ಯೆಗಳನ್ನು ಹೊತ್ತು ಬರುತ್ತಿದ್ದರು. ಬದುಕಿನಲ್ಲಿ ಸಮಸ್ಯೆಗಳು ಇದ್ದೇ ಇರುತ್ತವೆ. ಆದರೆ ನಾವು ನಮ್ಮ ದೃಷ್ಟಿಕೋನವನ್ನು ಬದಲಾಯಿಸಿಕೊಂಡರೆ ಕೆಲವಾದರೂ ಪರಿಹಾರವಾಗುತ್ತವೆ ಎಂದು ಅವನು ಅದೆಷ್ಟೇ ಹೇಳಿದರೂ ಜನರಿಗೆ ಅದು ಅರ್ಥವಾಗುತ್ತಿರಲಿಲ್ಲ. ಹಾಗಾಗಿ ಅಂತಹವರಿಗೆ ಅರ್ಥವಾಗುವಂತೆ ಮನದಟ್ಟು ಮಾಡಬೇಕೆಂದು ಆತ ಕಾಯುತ್ತಿದ್ದ. 

ಒಮ್ಮೆ ಒಂದು ದಿನ ಆತ ನದಿಯ ದಡದಲ್ಲಿ ದಿನವಿಡೀ ಕುಳಿತಿದ್ದ. ಬೆಳಿಗ್ಗಿನಿಂದ ಸಂಜೆಯವರೆಗೂ ಆತ ಕುಳಿತ ಜಾಗ ಬಿಟ್ಟು ಕದಲದೇ ಇದ್ದುದನ್ನು ನೋಡಿ ಊರಿನ ಜನರು ಬಂದು ಯಾಕೆ ಹೀಗೆ ಕುಳಿತಿದ್ದೀರಿ ಎಂದು ಕೇಳುತ್ತಾರೆ. “ಈ ನದಿ ಪೂರ್ತಿಯಾಗಿ ಒಣಗುತ್ತದೆಂದು ಕಾಯುತ್ತ ಕುಳಿತಿದ್ದೇನೆ. ಇದು ಒಣಗಿದ ಮೇಲೆ ನಾನು ಆಚೆ ದಡಕ್ಕೆ ನಡೆದುಕೊಂಡು ಹೋಗಬೇಕು“ ಎಂದ ಆತ. ಅದಕ್ಕೆ ಊರ ಜನರು ನಕ್ಕು ́ಹಾಗಾದರೆ ನೀವು ಎಂದಿಗೂ ಆಚೆದಡ ತಲುಪಲು ಸಾಧ್ಯವೇ ಇಲ್ಲʼ ಎನ್ನುತ್ತಾರೆ. 

ಆಗ ಆ ವ್ಯಕ್ತಿ ಮುಗುಳ್ನಕ್ಕು ಹೇಳಿದ, “ಇದನ್ನೇ ನಾನು ನಿಮಗೆ ಅದೆಷ್ಟೋ ವರ್ಷಗಳಿಂದ ಹೇಳಲು ಪ್ರಯತ್ನಿಸುತ್ತಿದ್ದೇನೆ. ಈ ನದಿ ನಮ್ಮ ಬದುಕಿನ ಸಮಸ್ಯೆಗಳ ಹಾಗೆ. ಅದು ಬತ್ತುವುದೇ ಇಲ್ಲ. ನದಿಯ ಆಚೆದಡಕ್ಕೆ ಹೋಗಲು ಈಜಿಕೊಂಡು ಹೋಗಬೇಕು ಅಥವಾ ದೋಣಿಯಲ್ಲಿ ಹೋಗಬೇಕು. ನದಿ ದಾಟಲು ದೋಣಿಯನ್ನು ಬಳಸುತ್ತೇವೆ. ದೋಣಿಯೇ ಇಲ್ಲವೆಂದರೆ ಈಜುವುದನ್ನು ಕಲಿಯುತ್ತೇವೆ. ಸೇತುವೆ ಕಟ್ಟಲು ಪ್ರಯತ್ನಿಸುತ್ತೇವೆ. ನದಿ ಬತ್ತುವುದಿಲ್ಲವೆಂದೋ, ದೋಣಿ ಇಲ್ಲವೆಂದೋ ಅಳುತ್ತ ಕುಳಿತುಕೊಂಡರೆ ಸಮಸ್ಯೆ ಪರಿಹಾರವಾಗುವುದಿಲ್ಲ. ಅದೇ ರೀತಿ ಬದುಕಿನಲ್ಲಿ ಸಮಸ್ಯೆಗಳಿಗೆ ಕೊನೆಯೇ ಇಲ್ಲ! ಸಮಸ್ಯೆಗಳಿಗೆ ಪರಿಹಾರ ಹುಡುಕುತ್ತ ಅವುಗಳ ನಡುವೆಯೇ ಬದುಕುವುದನ್ನು ಕಲಿಯಬೇಕು. ಪಶ್ಚಾತ್ತಾಪ ಹೇಗೆ ಆಗಿಹೋದ ಸಂಗತಿಗಳನ್ನು ಬದಲಾಯಿಸದೋ ಹಾಗೆ ಚಿಂತೆ ಭವಿಷ್ಯವನ್ನು ಸುಧಾರಿಸದು. ಈಸಬೇಕು ಈಸಿ ಜೈಸಬೇಕು ಎಂದು ಹಿರಿಯರು ಸುಮ್ಮನೇ ಹೇಳಿದ್ದಾರೆಯೇ” ಎಂದ.

ಇಂದು ಸಾಮಾಜಿಕ ಜಾಲತಾಣದಲ್ಲಿ ಸೆಲೆಬ್ರಿಟಿಗಳ ಆಡಂಬರದ ವಿವಾಹ, ವೈಭವದ ಜೀವನಶೈಲಿ ಇವುಗಳನ್ನು ನೋಡಿ ಯುವಜನರು ಹಣವಿದ್ದುಬಿಟ್ಟರೆ ಸಮಸ್ಯೆಗಳೇ ಬದುಕಲ್ಲಿ ಬರುವುದಿಲ್ಲ ಎಂದುಕೊಂಡುಬಿಡುತ್ತಾರೆ. ತತಕ್ಷಣ ಹಣಮಾಡುವ ಹುಚ್ಚಿಗೆ ಬಿದ್ದು ಅಪರಾಧಗಳನ್ನು ಎಸಗುತ್ತಾರೆ. ಮತ್ತೆ ಕೆಲವರು ಸಮಸ್ಯೆಗಳಿರುವುದು ತಮ್ಮ ಬದುಕಿನಲ್ಲಿ ಮಾತ್ರ ಎಂದು ಯೋಚಿಸಿ ಖಿನ್ನತೆಗೆ ಜಾರುತ್ತಾರೆ. ಮತ್ತೆ ಕೆಲವರು ಜೀವನೋತ್ಸಾಹವಿಲ್ಲದೇ ನಿರುತ್ಸಾಹದಿಂದ ಬದುಕುತ್ತಿರುತ್ತಾರೆ. ಆದರೆ ಇಂದು ನಾವು ಬದುಕಲು ಬೇಕಾದ ಅತ್ಯಂತ ಕನಿಷ್ಟಮಟ್ಟದ ಜ್ಞಾನ ಯಾವುದೆಂದರೆ ಸಮಸ್ಯೆಗಳಿಲ್ಲದೇ ಯಾರ ಜೀವನವೂ ಇಲ್ಲ ಎನ್ನುವುದನ್ನು ಅರ್ಥ ಮಾಡಿಕೊಳ್ಳುವುದು. ಕೆಲವರ ಸಮಸ್ಯೆ ಹೊರಜಗತ್ತಿಗೆ ಕಾಣದಿರಬಹುದು ಆದರೆ ಸವಾಲುಗಳಿಲ್ಲದ ಬದುಕು ಯಾರದ್ದೂ ಇಲ್ಲ. ಕಡ್ಡಿಯನ್ನು ಗುಡ್ಡವಾಗಿಸಿಕೊಳ್ಳುವುದೋ, ಗುಡ್ಡವಿದ್ದರೂ ಕಡ್ಡಿಯೆಂದುಕೊಂಡು ಮುನ್ನಡೆವುದೋ ಅದು ನಮ್ಮ ನಮ್ಮ ದೃಷ್ಟಿಕೋನದ ಮೇಲೆ ನಿರ್ಧಾರಿತ. ಅಷ್ಟೇ. 

-ದೀಪಾ ಹಿರೇಗುತ್ತಿ

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು