ಕಥೆ-915
ಹಣದ ಬೆಲೆ
https://basapurs.blogspot.com/
ಒಬ್ಬ ವ್ಯಾಪಾರಿ ಇದ್ದ. ಅವನು ತನ್ನ ವ್ಯವಹಾರದಲ್ಲಿ ಉತ್ತಮ ಹೆಸರು ಗಳಿಸಿದ್ದ. ಜತೆಗೆ ಸಾಕಷ್ಟು ಸಂಪಾದನೆಯೂ ಇದ್ದುದರಿಂದ ಅವನ ಸುಖ ಜೀವನಕ್ಕೆ ಯಾವುದೇ ತೊಂದರೆ ಇರಲಿಲ್ಲ. ಆದರೆ, ಅವನಿಗೆ ಮಗನದ್ದೇ ಚಿಂತೆ. ತಾಯಿ ಇಲ್ಲದ ಮಗ ಎಂದು ತುಸು ಹೆಚ್ಚೇ ಪ್ರೀತಿಯಿಂದ ಬೆಳೆಸಿದ್ದ. ಶ್ರೀಮಂತಿಕೆಯ ಸುಪ್ಪತ್ತಿಗೆಯಲ್ಲಿ ಬೆಳೆದ ಹುಡುಗನಿಗೆ ಖರ್ಚು ವೆಚ್ಚ ಯಾವುದರ ಬಗ್ಗೆಯೂ ಕಾಳಜಿಯಾಗಲಿ ಜವಾಬ್ದಾರಿಯಾಗಲಿ ಇರಲಿಲ್ಲ.
ತನ್ನ ನಂತರ ವ್ಯವಹಾರ ನೋಡಿಕೊಂಡು ಹೋಗಬೇಕಾದ ಮಗ ಈ ರೀತಿಯಾದರೆ ಮುಂದಿನ ಭವಿಷ್ಯವೇನು ಎಂಬ ಚಿಂತೆ ತಂದೆಗೆ ಕಾಡುತ್ತಿತ್ತು. ಮಗನಿಗೆ ಹಲವು ರೀತಿಯಿಂದ ಬುದ್ದಿ ಹೇಳಿ ಸೋತಿದ್ದ. ಮಗನನ್ನು ಹೇಗಾದರೂ ಮಾಡಿ ಸರಿದಾರಿಗೆ ತರಬೇಕೆಂದು ಪ್ರಯತ್ನದಲ್ಲಿದ್ದ ತಂದೆಗೆ ಒಂದು ಉಪಾಯ ಹೊಳೆಯಿತು. ಮಗನನ್ನು ಕರೆದು ಸಾವಿರ ರೂಪಾಯಿ ಕೊಟ್ಟು ಅದನ್ನು ಮನೆಯ ಪಕ್ಕದ ನೀರಿಲ್ಲದ ಹಾಳು ಬಾವಿಗೆ ಎಸೆದು ಬರುವಂತೆ ಹೇಳಿದ. ಆ ಹುಡುಗ ಹಿಂದೂ ಮುಂದೂ ಯೋಚಿಸದೆ ತಂದೆ ಹೇಳಿದಂತೆ ಬಾವಿಗೆ ಎಸೆದು ಬಂದ. ಇದು ಹೀಗೆ ಒಂದು ವಾರ ಮುಂದುವರಿಯಿತು. ನಂತರ ತಂದೆ ಮಗನಿಗೆ ಹೇಳಿದ, 'ಇಂದು ಸಂಜೆಯೊಳಗೆ ನೀನೇ ಸ್ವಂತವಾಗಿ ಸಾವಿರ ರೂಪಾಯಿ ದುಡಿದು ತರಬೇಕು. ಯಾರ ಬಳಿಯೂ ಹಣವನ್ನು ಕೇಳಕೂಡದು. ಪ್ರಾಮಾಣಿಕವಾಗಿ ನೀನೇ ದುಡಿದು ತರಬೇಕು' ಎಂದ.
ಇದೆಲ್ಲ ಯಾವ ಲೆಕ್ಕ ಆರಾಮವಾಗಿ ತರಬಹುದೆಂದುಕೊಂಡ ಮಗ. ಆದರೆ, ಆತನೆಣಿಸಿದಂತೆ ಅಷ್ಟು ಸಲೀಸಾಗಿ ಯಾರು ಕೆಲಸ ಕೊಟ್ಟಾರು? ಅಲ್ಲದೆ, ಅವರು ಹೇಳುವ ಕೆಲಸ ಇವನಿಂದ ಸಾಧ್ಯವಾಗುವಂಥದ್ದು ಆಗಿರಲಿಲ್ಲ. ಆದರೂ ಕೂಲಿ ಮಾಡಿ ಕಷ್ಟಪಟ್ಟು ಸಾವಿರ ರೂಪಾಯಿ ಗಳಿಸಿ ಖುಷಿಯಿಂದ ತಂದೆಗೆ ಕೊಟ್ಟ. ತಂದೆಗೆ ಮಗನ ಬಗ್ಗೆ ಖುಷಿಯಾದರೂ ತೋರ್ಪಡಿಸಿಕೊಳ್ಳದೆ ಆ ಹಣವನ್ನು ಬಾವಿಗೆ ಎಸೆದುಬಾ ಎಂದ. ಅಷ್ಟು ಕಷ್ಟಪಟ್ಟು ದುಡಿದು ತಂದ ಹಣವನ್ನು ಇಷ್ಟು ಸಲೀಸಾಗಿ ಬಾವಿಗೆ ಎಸೆದು ಬಿಡು ಅಂದುಬಿಟ್ಟರಲ್ಲ ಎಂದು ತಂದೆಯೊಡನೆ ವಾದಿಸಿದ. ಆಗ ಮಗನನ್ನು ನೋಡಿ ತಂದೆ ನಗುತ್ತಾ ಹೇಳಿದ. 'ಇಷ್ಟು ದಿನ ನಾನು ಸಂಪಾದಿಸಿದ ಹಣವನ್ನು ಕೊಟ್ಟು ಎಸೆದು ಬಾ ಎಂದಾಗ ಆ ಹಣವನ್ನು ಹೇಗೆ ಕಷ್ಟಪಟ್ಟು ಸಂಪಾದಿಸಬಹುದು ಎಂಬುದನ್ನು ಯೋಚಿಸದೆ ಹೋದೆಯಲ್ಲ. ಈಗ ನೀನೇ ಶ್ರಮವಹಿಸಿ ಸಂಪಾದಿಸಿದಾಗ ಅದರ ಬೆಲೆ ಗೊತ್ತಾಗಿರಬೇಕಲ್ಲ?' ಎಂದ. ಮಗನಿಗೆ ತನ್ನ ತಪ್ಪಿನ ಅರಿವಾಯಿತು. ಸುಮ್ಮನೆ ಆರಾಮವಾಗಿ ಹಣ ಬರಲಾರದು, ಅದನ್ನು ಕಷ್ಟಪಟ್ಟು ಸಂಪಾದಿಸಬೇಕು, ದುಡಿದು ಸಂಪಾದಿಸಿ ಖರ್ಚು ಮಾಡಿದರೆ ಹೆಚ್ಚು ಉತ್ತಮ ಎಂಬುದನ್ನು ಅರಿತುಕೊಂಡ. ನಂತರ ತಂದೆ ಕೆಲಸದಲ್ಲಿ ಜವಾಬ್ದಾರಿ ತೆಗೆದುಕೊಂಡು ನಿಭಾಯಿಸತೊಡಗಿದ. ದುಡಿಯದೇ ಗಳಿಸಿದ ಹಣದ ಮಹತ್ವ ಗೊತ್ತಾಗದು. ಪರಿಶ್ರಮದಿಂದ ಗಳಿಸಿದರೆ ಮಾತ್ರ ಅದರ ಬೆಲೆ ತಿಳಿಯುತ್ತದೆ.
-ಶಿಲ್ಪಾ ಗಾಂಷ್ಕರ ಬಿದ್ರೆಮನೆ