ಕಥೆ-919
ನಿಸರ್ಗದ ಸಾನ್ನಿಧ್ಯ ಸುಖವೇ ಶಾಶ್ವತ!
https://basapurs.blogspot.com/
ಒಂದು ಸಿರಿವಂತರ ಮನೆ. ಅಲ್ಲಿ ಒಂದು ಎರಡು ಮೂರು ವರುಷದ ಪುಟ್ಟ ಮಗು. ತಾಯಿಯು ಮಗುವಿಗೆ ಸ್ನಾನ ಮಾಡಿಸಿ,ಹೊಸ ಬಟ್ಟೆಗಳನ್ನು ತೊಡಿಸಿ, ಬೆಲೆಬಾಳುವ ಆಭರಣಗಳಿಂದ ಅಲಂಕರಿಸಿದ್ದಾಳೆ. ಹೊರಗೆ ಮಳೆ ಸಣ್ಣದಾಗಿ ತುಂತುರ ಹನಿಯ ಮುತ್ತು ಉದುರಿಸುತ್ತಿದೆ. ನೆರೆಹೊರೆ ಮಕ್ಕಳೆಲ್ಲ ಮಳೆಯಲ್ಲಿ ಕುಣಿದು ಕುಪ್ಪಳಿಸುತ್ತಿವೆ. ಅದನ್ನು ನೋಡಿದ ಕೂಡಲೇ ಸಿರಿವಂತರ ಮನೆಯ ಮಗುವೂ ಮನೆಯ ಹೊರಗೆ ಮಳೆಯಾಟ ಆಡಲು ಹೊರಟಿತು. ಅದನ್ನು ನೋಡಿದ ತಾಯಿಯು ಓಡಿ ಬಂದು ಮಗುವನ್ನು ತಡೆದು ಹೇಳಿದಳು “ಇದೀಗ ನಿನ್ನನ್ನು ಅಲಂಕರಿಸಿದ್ದೇನೆ. ಇನ್ನು ನೀನು ಮಳೆಯಲ್ಲಿ ಹೋದರೆ ನಾನು ನಿನಗೆ ತೊಡಿಸಿದ ಬಟ್ಟೆ-ಬರೆ, ಉಡುಗೆ ತೊಡುಗೆಗಳೆಲ್ಲ ಕೊಳೆಯಾಗುತ್ತವೆ. ಆದ್ದರಿಂದ ನೀನು ಮಳೆಯಾಟ ಆಡಲು ಹೋಗಬೇಡ. ಮಗು ಹೇಳಿತು “ನಿನ್ನ ಬಟ್ಟೆ ಬರೆ, ಉಡುಗೆ, ತೊಡುಗೆ ನಿನಗೇ ಇರಲಿ ನಾನು ಹೊರಗೆ ಹೋಗಲೇಬೇಕು”. ಇಷ್ಟು ಹೇಳಿದ್ದೇ ತಡ ಮಗು ತನಗೆ ತೊಡಿಸಿದ್ದ ಬೆಲೆಬಾಳುವ ಎಲ್ಲ ಆಭರಣ ಬಟ್ಟೆ ಬರೆಗಳನ್ನು ತೆಗೆದು ತಾಯಿಯ ಹತ್ತಿರ ಎಸೆದು ಒಂದೇ ಜಿಗಿತಕ್ಕೆ ಹೊರಗೆ ಹೋಗಿ ಗೆಳೆಯರೊಂದಿಗೆ ಮಳೆಯಲ್ಲಿ ಕುಣಿಯತೊಡಗಿತು! ಅದನ್ನು ನೋಡಿದ ತಾಯಿಗೂ ತನ್ನ ಬಾಲ್ಯದ ಲೀಲೆಗಳ ನೆನಪಾಗಿ, ಕ್ಷಣಹೊತ್ತು ಬಾಲ್ಯದ ಮಧುರ ಸ್ಮೃತಿಯಲ್ಲಿ ಮಿಂದು ಹೊರ ಬಂದಾಗ, ಎಂಥ ಆನಂದ. ನಿಸರ್ಗದ ಮಡಿಲಲ್ಲಿರುವ ಸಂತಸ ಇನ್ನಾವುದರಲ್ಲಿಯೂ ಇಲ್ಲವೆಂಬರಿವು ತಾಯಿಗೆ ಬರಲು ತಡವಾಗಲಿಲ್ಲ. ನಶ್ವರ ಸಿರಿ-ಸಂಪದದ ಸಂತಸ ಕ್ಷಣಿಕವಾದರೆ, ಶಾಶ್ವತ ಸತ್ಯದ ಪ್ರತಿ ರೂಪವೇ ಆಗಿರುವ ನಿಸರ್ಗದ ಸಾನ್ನಿಧ್ಯ ಸುಖವೇ ಶಾಶ್ವತ!
ಶ್ರೀ *ಸಿದ್ಧೇಶ್ವರ ಸ್ವಾಮೀಜಿ*