ಕಥೆ-931
ಸುಖ-ದುಃಖಗಳು ಜೀವನದ ಎರಡು ಶಾಶ್ವತ ದಂಡೆಗಳು.
ಮನುಷ್ಯ ಈ ಜಗತ್ತಿಗೆ ಬರುತ್ತಲೇ ತಾಯಿ-ತಂದೆ ವಾತ್ಸಲ್ಯದ ಧಾರೆ ಎರೆಯುವರು. ಅಣ್ಣ-ತಮ್ಮ, ಬಂಧು-ಬಳಗ ಎಲ್ಲರೂ ಪ್ರೀತಿಯ ಹೊಳೆಯನ್ನೇ ಹರಿಸುವರು. ಉಣಿಸಿ-ತಿನಿಸಿ, ಎತ್ತಿ ಮುದ್ದಾಡಿ ಬೆಳೆಸುವರು.ಓದು ಬರಹ, ಆಟ-ಪಾಠ ಕಲಿಸಿ ಜ್ಞಾನದ ಕ್ಷಿತಿಜ ವಿಸ್ತರಿಸುವರು. ಅದರಿಂದ ದೇಹ ಬಲ, ಮನೋಬಲ, ಆತ್ಮಬಲ ಗಳಿಸಿಕೊಂಡು ಮನುಷ್ಯ ಸಿರಿವಂತನಾಗಿ, ವಿದ್ಯಾವಂತನಾಗಿ, ಜೀವನ್ಮುಕ್ತನಾಗಿ ಸಂತಸದ ಸಾಗರದಲ್ಲಿ ತೇಲಬಹುದು!
ಇದು ಜೀವನದ ಬೆಳಕಿನ ಮುಖದ ಪರಿಚಯವಷ್ಟೆ, ಇದರೊಂದಿಗೆ ದೈಹಿಕ- ಮಾನಸಿಕ ಕಾಯಿಲೆಗಳು, ಅಪಮಾನ, ಅಪಕೀರ್ತಿ,ದಾರಿದ್ರ್ಯ ದುಃಖ ಸಾವು-ನೋವು, ಏಳು-ಬೀಳು, ಉಪವಾಸ-ವನವಾಸ ಎಲ್ಲವೂ ಇದೆ, ಬೆಳಕು ಕತ್ತಲೆ, ಸುಖ- ದುಃಖ, ಸಿಹಿ-ಕಹಿ, ನೋವು-ನಲಿವು ಈ ಬಗೆಯಾದ ದ್ವಂದ್ವಗಳಿಂದ ಕೂಡಿದ್ದೇ ಮಾನವನ ಬದುಕು. ಈ ದ್ವಂದ್ವವನ್ನು ನಾವು ಎಂದಿಗೂ ತಪ್ಪಿಸಲಿಕ್ಕಾಗುವುದಿಲ್ಲ.
ಒಂದು ಬಡಿಗೆಗೆ ಎರಡು ತುದಿಗಳು, ಒಂದೇ ತುದಿಯ ಬಡಿಗೆ ಈ ಜಗತ್ತಿನಲ್ಲಿಯೇ ಇಲ್ಲ. ಆ ಬಡಿಗೆಯ ಒಂದು ತುದಿ ತೆಗೆಯಬೇಕೆಂದು
ನಾವು ಅದನ್ನು ನೂರಾರು ಬಾರಿ ಕತ್ತರಿಸಬಹುದು. ಆಶ್ಚರ್ಯವೆಂದರೆ ಬಡಿಗೆಯ ಆ ನೂರಾರು ತುಂಡುಗಳಿಗೂ ಎರಡು ತುದಿಗಳು ಉಳಿದೇ ಬಿಡುತ್ತವೆ! ಸುಖ-ದುಃಖಗಳು ಮಾನವ ಜೀವನದ ಎರಡು ಶಾಶ್ವತ ದಂಡೆಗಳು.
ಶ್ರೀ *ಸಿದ್ಧೇಶ್ವರ ಸ್ವಾಮೀಜಿ*