ಕಥೆ-935
ಯಾವುದೇ ಕರ್ಮ ಬಂಧನಕಾರಿ
ಯಾಗುವುದಿಲ್ಲ.
https://basapurs.blogspot.com/
ಮನುಷ್ಯ ಈ ಜಗತ್ತಿಗೆ ಬರುತ್ತಲೇ ತಾಯಿ-ತಂದೆ ವಾತ್ಸಲ್ಯದ ಧಾರೆ ಎರೆಯುವರು. ಅಣ್ಣ-ತಮ್ಮ, ಬಂಧು-ಬಳಗ ಎಲ್ಲರೂ ಪ್ರೀತಿಯ ಹೊಳೆಯನ್ನೇ ಹರಿಸುವರು. ಉಣಿಸಿ-ತಿನಿಸಿ, ಎತ್ತಿ ಮುದ್ದಾಡಿ ಬೆಳೆಸುವರು.ಓದು ಬರಹ, ಆಟ-ಪಾಠ ಕಲಿಸಿ ಜ್ಞಾನದ ಕ್ಷಿತಿಜ ವಿಸ್ತರಿಸುವರು. ಅದರಿಂದ ದೇಹ ಬಲ, ಮನೋಬಲ, ಆತ್ಮಬಲ ಗಳಿಸಿಕೊಂಡು ಮನುಷ್ಯ ಸಿರಿವಂತನಾಗಿ, ವಿದ್ಯಾವಂತನಾಗಿ, ಜೀವನ್ಮುಕ್ತನಾಗಿ ಸಂತಸದ ಸಾಗರದಲ್ಲಿ
ತೇಲಬಹುದು!
ಇದು ಜೀವನದ ಬೆಳಕಿನ ಮುಖದ ಪರಿಚಯವಷ್ಟೆ, ಇದರೊಂದಿಗೆ ದೈಹಿಕ- ಮಾನಸಿಕ ಕಾಯಿಲೆಗಳು, ಅಪಮಾನ, ಅಪಕೀರ್ತಿ,ದಾರಿದ್ರ್ಯ ದುಃಖ ಸಾವು-ನೋವು, ಏಳು-ಬೀಳು, ಉಪವಾಸ-ವನವಾಸ ಎಲ್ಲವೂ ಇದೆ ! ಸಂತಸದ ಕವಿ ಬೆಳಕನ್ನು ಯಾವುದೇ ಕ್ಷಣದಲ್ಲಿ ನುಂಗಿ ಹಾಕಬಲ್ಲ
ಘನಕತ್ತಲೆ ಇದು! ಬೆಳಕು ಕತ್ತಲೆ, ಸುಖ- ದುಃಖ, ಸಿಹಿ-ಕಹಿ, ನೋವು-ನಲಿವು ಈ ಬಗೆಯಾದ ದ್ವಂದ್ವಗಳಿಂದ ಕೂಡಿದ್ದೇ ಮಾನವನ ಬದುಕು. ಈ ದ್ವಂದ್ವವನ್ನು ನಾವು ಎಂದಿಗೂ ತಪ್ಪಿಸಲಿಕ್ಕಾಗುವುದಿಲ್ಲ.
ಒಂದು ಬಡಿಗೆಗೆ ಎರಡು ತುದಿಗಳು, ಒಂದೇ ತುದಿಯ ಬಡಿಗೆ ಈ ಜಗತ್ತಿನಲ್ಲಿಯೇ ಇಲ್ಲ. ಆ ಬಡಿಗೆಯ ಒಂದು ತುದಿ ತೆಗೆಯಬೇಕೆಂದು
ನಾವು ಅದನ್ನು ನೂರಾರು ಬಾರಿ ಕತ್ತರಿಸಬಹುದು. ಆಶ್ಚರ್ಯವೆಂದರೆ ಬಡಿಗೆಯ ಆ ನೂರಾರು ತುಂಡುಗಳಿಗೂ ಎರಡು ತುದಿಗಳು ಉಳಿದೇ ಬಿಡುತ್ತವೆ! ಸುಖ-ದುಃಖಗಳು ಮಾನವ ಜೀವನದ ಎರಡು ಶಾಶ್ವತ ದಂಡೆಗಳು. ಯಾರೇ ಇರಲಿ ದೇಹಧಾರಿಯಾಗಿ
ಈ ಜೀವನದಲ್ಲಿ ಬಂದದ್ದಾದರೆ ಅವರಿಗೆ ಈ ಸುಖ-ದುಃಖಗಳ ಚಕ್ರ ಬಿಟ್ಟಿದ್ದಲ್ಲ! ಈ ತಿಳುವಳಿಕೆಯನ್ನು ಕೊಡುವುದು ಬುದ್ಧಿಯ ಕರ್ಮ. ಆ ತಿಳುವಳಿಕೆಯೊಂದಿಗೆ ಮಾಡಿದ ಯಾವುದೇ ಕರ್ಮ ಬಂಧನಕಾರಿ
ಯಾಗುವುದಿಲ್ಲ. ಇದು ಕರ್ಮಯೋಗ!
ಶ್ರೀ *ಸಿದ್ಧೇಶ್ವರ ಸ್ವಾಮೀಜಿ*