ಕಥೆ-943
ಮುದ್ದು ಮಕ್ಕಳಿಗೆ...
ಮಕ್ಕಳ ದಿನಾಚರಣೆಯ ಶುಭಾಶಯಗಳು..💐💐💐
( ಇಂದು ಮಕ್ಕಳ ದಿನಾಚರಣೆ ನಿಮಿತ್ತ ಶಾಲೆಯಲ್ಲಿ ಹಮ್ಮಿಕೊಂಡ ಪಾಲಕ/ ಪೋಷಕ ಮತ್ತು ಶಿಕ್ಷಕರ ಸಭೆಯಲ್ಲಿ ನನಗೆ ನೀಡಿದ ಶಾಲಾ ಅಭಿವೃದ್ಧಿಯಲ್ಲಿ ಪಾಲಕರ ಪಾತ್ರದ ಬಗ್ಗೆ ನನ್ನ ಅನಿಸಿಕೆ)
ಎಲ್ಲಕ್ಕಿಂತ ದೊಡ್ಡ ಸಂಪತ್ತು ಆರೋಗ್ಯ ಸಂಪತ್ತು, ನಿಜವಾದ ಸಂಪನ್ಮೂಲ ಮಾನವ ಸಂಪನ್ಮೂಲ... ಪ್ರಪಂಚದಲ್ಲಿ ಅತ್ಯಂತ ಹೆಚ್ಚು ಮಾನವ ಸಂಪನ್ಮೂಲ ಹೊಂದಿರುವ ದೇಶ ಎಂದರೆ ಅದು ನಮ್ಮ ಭಾರತ ದೇಶ ...
ನಮ್ಮ ದೇಶದ ಮಾನವ ಸಂಪನ್ಮೂಲ ಸದ್ಬಳಕೆಯಾದರೆ ದೇಶಕ್ಕೆ ಒಳ್ಳೆಯದು... ಮಾನವ ಸಂಪನ್ಮೂಲದ ಭವಿಷ್ಯವೆಂದರೆ ನಮ್ಮ ಮಕ್ಕಳು... ಭವಿಷ್ಯದ ಆಸ್ತಿ ಅಂದರೆ ನಮ್ಮ ಮಕ್ಕಳೇ.
ಪಂಡಿತ್ ಜವಾಹರಲಾಲ್ ನೆಹರು ಅವರಿಗೆ ಮಕ್ಕಳೆಂದರೆ ಅಪಾರ ಪ್ರೀತಿ, ಹೀಗಾಗಿ ಅವರು ಹುಟ್ಟಿದ ದಿನವನ್ನು ಮಕ್ಕಳ ದಿನಾಚರಣೆ ಎಂದು ಆಚರಿಸಲಾಗುತ್ತದೆ.... ನೆಹರು ಅವರಿಗೆ ದೇಶದ ಭವಿಷ್ಯ ಹೇಗೆ ನಿರ್ಧಾರ ಮಾಡುತ್ತೀರಿ ಅಂದರೆ, ಅವರು ಹೇಳ್ತಾರೆ ನಾನು ದೇಶದ ಭವಿಷ್ಯವನ್ನು ಮಕ್ಕಳ ಕಣ್ಣುಗಳಲ್ಲಿ ಕಾಣುತ್ತೇನೆ.. ಒಂದು ವೇಳೆ ಮಕ್ಕಳ ಕಣ್ಣುಗಳು ಪ್ರಜ್ವಲಿಸುತ್ತಿದ್ದರೇ ಅಥವಾ ಹೊಳೆಯುತ್ತಿದ್ದರೆ ನಮ್ಮ ದೇಶಕ್ಕೆ ಉತ್ತಮ ಭವಿಷ್ಯವಿದೆ ಎಂದರ್ಥ ಇಲ್ಲದಿದ್ದರೆ ಉತ್ತಮ ಭವಿಷ್ಯವಿಲ್ಲ ಎನ್ನುತ್ತಿದ್ದರು... ಇವತ್ತು ಮಕ್ಕಳ ಉತ್ತಮ ಭವಿಷ್ಯ ನಿರ್ಮಾಣವಾಗುತ್ತಿರುವುದು ಶಾಲೆಯಲ್ಲಿ..
ಶಾಲೆಯೇ ದೇವಾಲಯ ಎಂದು ಹೇಳುತ್ತೇವೆ, ಶಾಲೆ ವಿಶೇಷ ದೇವಾಲಯವಾಗುತ್ತದೆ, ಏಕೆಂದರೆ ಇಲ್ಲಿ ಜೀವಂತ ದೇವರುಗಳಿವೆ.
ಅದು ಮಕ್ಕಳು...
ಅಂಬೇಡ್ಕರ್ ಅವರು ಹೇಳುವಂತೆ ಯಾವ ದೇಶದಲ್ಲಿ ಶಾಲೆ ಗಂಟೆಗಿಂತ ಹೆಚ್ಚು ದೇವಸ್ಥಾನಗಳ ಗಂಟೆ ಬಾರಿಸುತ್ತೋ ಆ ದೇಶ ಇನ್ನೂ ಅಂಧಕಾರದಲ್ಲಿ ಇದೆ ಎಂದರ್ಥ..
ದೇವಸ್ಥಾನ ನಂಬಿ ಸಾಕಷ್ಟು ಜನ ಬಿಕ್ಷುಕರಾಗಬಹುದು ಆದರೆ ಶಾಲೆ, ಗ್ರಂಥಾಲಯಗಳನ್ನು ನಂಬಿದರೆ ಶಿಕ್ಷಿತರಾಗುತ್ತಾರೆ... ಹೀಗಾಗಿ ದೇವಸ್ಥಾನಗಳಿಗೆ ನಿಲ್ಲುವ ಸರದಿ ಸಾಲುಗಳು, ಗ್ರಂಥಾಲಯಕ್ಕೆ ನಿಲ್ಲಬೇಕಿದೆ.. ಅಂದಾಗ ಜ್ಞಾನಿಗಳ ಸಂಖ್ಯೆ ಹೆಚ್ಚಾಗುತ್ತದೆ..
ಶಾಲಾ ಅಭಿವೃದ್ಧಿ ಎಂದರೇನು?
ಶಾಲಾ ಅಭಿವೃದ್ಧಿ ಅಂದರೆ ಕೇವಲ ಆಕರ್ಷಕ ಬಣ್ಣ ಸುಣ್ಣಗಳ ಗೋಡೆಗಳಿಂದ ಆದ ಕಟ್ಟಡವೇ, ಅಲ್ಲ.. ಕೇವಲ ಬಾಹ್ಯ ಬದಲಾವಣೆ ಶಾಲಾ ಅಭಿವೃದ್ಧಿ ಅಲ್ಲ, ಅದರ ಜೊತೆಗೆ ಶಾಲಾ ಮಕ್ಕಳ ಆಂತರಿಕ ಬದಲಾವಣೆಯೇ ನಿಜವಾದ ಶಾಲಾ ಅಭಿವೃದ್ಧಿ..
ಪಾಲಕರು ಶಾಲಾ ಅಭಿವೃದ್ಧಿ ಜವಾಬ್ದಾರಿಯನ್ನು ಕೇವಲ ಶಿಕ್ಷಕರ ಮೇಲೆ ಹೊರಿಸಿದರೆ ಸಂಪೂರ್ಣ ಶಾಲಾ ಅಭಿವೃದ್ಧಿ ಸಾಧ್ಯವೇ... ಇಲ್ಲ .. ಮುಗ್ಧ ಮಕ್ಕಳ ಅಭಿವೃದ್ಧಿಗೆ ಶಿಕ್ಷಕರೆಂಬ ಒಂದು ಕೈ, ಪಾಲಕರು ಎಂಬ ಮತ್ತೊಂದು ಕೈ ಜೋಡಿಸಿದಾಗ ಚಪ್ಪಾಳೆ ಎಂಬ, ಅಭಿವೃದ್ಧಿ ಶಬ್ದದ ನಾದ ಸಾಧ್ಯವಾಗುತ್ತದೆ...
ಶಾಲೆಯ ಅಭಿವೃದ್ಧಿಯನ್ನು ನಾವು ಮೂರು ವಿಭಾಗಗಳಲ್ಲಿ ಹೆಚ್ಚಿಸುವಂತದ್ದು..
1.ಮೂಲ ಸೌಕರ್ಯ 2.ಆಡಳಿತ ಮತ್ತು
3.ಶೈಕ್ಷಣಿಕತೆ
ಇವುಗಳಲ್ಲಿ ಮೇಲಿನ ಎರಡು ಮೂಲಸೌಕರ್ಯ ಮತ್ತು ಆಡಳಿತಾತ್ಮಕತೆ ಸರಿಯಾದ ಕ್ರಮದಲ್ಲಿ ನಡೆದರೆ ಶಿಕ್ಷಣ ತನ್ನಷ್ಟಕ್ಕೆ ತಾನೇ ಕೈ ಹಿಡಿಯುತ್ತದೆ... ಅದು ಶಾಲಾ ಅಭಿವೃದ್ಧಿಗೆ ನಾಂದಿಯಾಗುತ್ತದೆ...
ಶಾಲಾ ಅಭಿವೃದ್ಧಿಯಲ್ಲಿ ಪಾಲಕರಾದ ನಾವು ಪ್ರಮುಖ ಪಾತ್ರವಹಿಸಬೇಕಿದೆ...
ಮನೆಯಲ್ಲಿ........
1.ಮನೆಯಲ್ಲಿ ಮಕ್ಕಳ ಕಲಿಕಾ ವಾತಾವರಣಕ್ಕೆ ಅವಕಾಶವನ್ನು ನಾವು ನೀಡಿದ್ದೇವಾ ಎಂದು ಪ್ರಶ್ನಿಸಿಕೊಳ್ಳಬೇಕಿದೆ.. ( ಪ್ರತಿ ಮನೆಯಲ್ಲಿ ದೇವರಿಗೆ, ದೇವರ ಕೋಣೆ, ಅಡುಗೆ ಮನೆಗೆ ಅಡುಗೆ ಕೋಣೆಯಂತೆ ಮಕ್ಕಳ ಓದಿಗೆ ಒಂದು ಕೋಣೆ ಅವಕಾಶ ನೀಡಿದ್ದೇವಾ.. ಮನೆ ಚಿಕ್ಕದಾಗಿದ್ದರೆ ಒಂದು ಚಿಕ್ಕ ಜಾಗವನ್ನಾದರೂ ಅವರ ಓದಿಗೆ ಮೀಸಲಿಟ್ಟಿದ್ದೇವಾ)
2.ಮಕ್ಕಳು ಓದುವಾಗ, ಆಗಾಗ ಅವರಿಗೆ ಸಮಯವನ್ನು ನೀಡುತ್ತೇವಾ.. ಮಕ್ಕಳಿಗೆ ಓದಲು ಒತ್ತಡ ಹಾಕೋ ಅವಶ್ಯಕತೆ ಇಲ್ಲ.. ಅವಶ್ಯಕ ವಸ್ತುಗಳನ್ನು ಮಾತ್ರ ಮಕ್ಕಳಿಗೆ ಕೊಡಿಸಬೇಕು.. ಅನವಶ್ಯಕ ವಸ್ತು ಒಂದನ್ನು ಮಗು ಕೇಳಿದರೆ ಹತ್ತು ಕೊಡಿಸುವ ಪಾಲಕರಾಗಿದ್ದೇವೆ.. ಮಕ್ಕಳಿಗೆ ವಸ್ತುವಿನ ಬೆಲೆ, ಮೌಲ್ಯ ಗೊತ್ತಾಗಬೇಕು.. ಒಂದು ವೇಳೆ ಮಕ್ಕಳು ಕೇಳಿದ ವಸ್ತುಗಳನ್ನು ಕೊಡಿಸಲು ತೀರ್ಮಾನಿಸಿದರೆ, ಅದಕ್ಕೆ ಕೆಲವೊಂದು ಗುರಿ ಸಾಧಿಸುವ ಶರತ್ತು ಹಾಕಬೇಕು.. ಆಗ ಮಕ್ಕಳಲ್ಲಿ ಪ್ರಯತ್ನ ಪಟ್ಟರೆ ಫಲ ಎಂಬ ಮೌಲ್ಯ ಬೆಳೆಯುತ್ತದೆ.. ಮಕ್ಕಳ ಸಹಜ ಆಸಕ್ತಿರಂಗಗಳನ್ನು ಪೋಷಿಸಲು, ಓದುವ ಹವ್ಯಾಸವನ್ನು ಉತ್ತೇಜಿಸಲು ಸಮಯ ನೀಡುತ್ತೇವಾ.. ( ಈಗ ಮಕ್ಕಳಿಗೆ ನಾವು ಸಮಯ ನೀಡದಿದ್ದರೆ ಮತ್ತು ಪ್ರೀತಿಸದಿದ್ದರೆ ಮುಂದೆ ಅವರು ನಮಗೆ ಸಮಯ ಕೊಡದಿರುವ ಪರಿಸ್ಥಿತಿ ಬರಬಹುದು)
3 ಮಕ್ಕಳೊಂದಿಗೆ ಸಕಾರಾತ್ಮಕವಾಗಿ ವರ್ತಿಸುವುದರ ಜೊತೆಗೆ ಸ್ವಾವಲಂಬನೆ ಬೆಳೆಸುವುದು
4.ಮಕ್ಕಳಲ್ಲಿ ಮೌಲ್ಯಗಳನ್ನು ಬಯಸುವ ನಾವು ಅವುಗಳನ್ನು ಅನುಸರಿಸಿ ತೋರಿಸಬೇಕಾಗುತ್ತದೆ... ಇದು ಮಕ್ಕಳ ಓದುವ ಹವ್ಯಾಸದ ಜೊತೆಗೆ ಆಂತರಿಕ ಬದಲಾವಣೆಗೆ ಕಾರಣವಾಗುತ್ತದೆ..
ಶಾಲೆಯಲ್ಲಿ ಪಾಲಕರ ಪಾತ್ರ
1.ಶಾಲಾ ಅಭಿವೃದ್ಧಿಗೆ ಶ್ರಮಿಸುತ್ತಿರುವ ಶಿಕ್ಷಕರಿಗೆ ಪ್ರೋತ್ಸಾಹ ನೀಡುವುದು..
2.ಶಾಲೆಯ SDMC ಸಹಕಾರ ಪಡೆಯುವುದು..
3.ಶಾಲಾ ಅಭಿವೃದ್ಧಿಗಾಗಿ SDMC & ದಾನಿಗಳ ಸಹಕಾರದಿಂದ ಶಾಲೆಗೆ ಅಗತ್ಯವಿರುವ ಮತ್ತು ಅಭಿವೃದ್ಧಿಗೆ ಪೂರಕವಾದಂತಹ ವಾರ್ಷಿಕ, ದ್ವೈವಾರ್ಷಿಕ, ಮತ್ತು ತ್ರೈವಾರ್ಷಿಕ ಯೋಜನೆಗಳನ್ನು ಹಮ್ಮಿಕೊಳ್ಳುವುದು... ಅದನ್ನು ಅನು ಪಾಲನೆ ಮಾಡೋದು ಅಷ್ಟೇ ಮುಖ್ಯ
( ಕೊಡುವ ದಾನಿಗಳು ಸಾಕಷ್ಟಿರುತ್ತಾರೆ.. ಈಗಾಗಲೇ ಶಾಲೆಯಲ್ಲಿ ಶಿಕ್ಷಕರು, ಹಳೆ ವಿದ್ಯಾರ್ಥಿಗಳು ಮತ್ತು ಶಿಕ್ಷಣ ಪ್ರೇಮಿಗಳ ಸಹಕಾರದಿಂದ ಅಂದಾಜು 70 ಸಾವಿರಕ್ಕೂ ಹೆಚ್ಚು ರೂ.ಗಳಿಂದ ಶಾಲಾ ಗಾರ್ಡನ್ ನಿರ್ಮಿಸಿದ್ದಾರೆ, ಅಲ್ಲದೆ ವಿಜ್ಞಾನ ಪ್ರಯೋಗಾಲಯಕ್ಕೆ ಅಂದಾಜು ಎರಡು ಲಕ್ಷ ರೂಪಾಯಿಗಳ ಕೆಲಸ ಮಾಡಿಸಿರುತ್ತಾರೆ..)
4.ಶಾಲೆಗಾಗಿ ನಾವು ಮತ್ತು ನೀವು ಕಾರ್ಯಕ್ರಮ ಹಮ್ಮಿಕೊಳ್ಳುವುದು..
5.ಹಳೆ ಬೇರು ಹೊಸ ಚಿಗುರು ಕಾರ್ಯಕ್ರಮ..
6.ಹಳೆ ವಿದ್ಯಾರ್ಥಿಗಳ ಸಂಘ ರಚನೆ ಮಾಡಿ ಸಹಕಾರ ಪಡೆಯುವುದು
ಮಕ್ಕಳು ದೇವರ ಸಮಾನ, ಮಕ್ಕಳ ಸೇವೆ ನಿಜವಾಗಿ ದೇವರ ಸೇವೆ ಶಾಲೆ ಅಭಿವೃದ್ಧಿಯಾದರೆ ಮಕ್ಕಳು ಅಭಿವೃದ್ಧಿ ಆದಂತೆ.. ಪಾಲಕರದ ನಾವು ಮಕ್ಕಳಿಗಾಗಿ ಆಸ್ತಿ ಮಾಡದೆ ಮಕ್ಕಳನ್ನೇ ಆಸ್ತಿಯನ್ನಾಗಿಸೋಣ.. ಒಳ್ಳೆಯ ಸಮಾಜದ ನಿರ್ಮಾಣಕ್ಕೆ ಆಸ್ತಿಯನ್ನಾಗಿಸೋ ಪ್ರಯತ್ನ ನಮ್ಮದಾಗಬೇಕಿದೆ...
ಮುದ್ದು ಮಕ್ಕಳಿಗೆ ಮತ್ತೊಮ್ಮೆ ಮಕ್ಕಳ ದಿನಾಚರಣೆ ಶುಭಾಶಯಗಳು..
-ಶ್ರೀ ಶಂಕರಗೌಡ ಬಸಾಪೂರ
.jpeg)