ಕಥೆ-970
ಭಾವ ವಿಕಸನದ ಸುಗಮ ಸಾಧನ!(ಹೂದೋಟ)
https://basapurs.blogspot.com
ಭಾವ ವಿಕಾಸದ ಎರಡನೆಯ ಸಾಧನ-ಒಳಿತನ್ನೇ ನೋಡುವುದು,
ಒಳಿತನ್ನೇ ಕೇಳುವುದು, ಒಳ್ಳೆಯ ನೋಟ, ಒಳ್ಳೆಯ ಶ್ರವಣದಿಂದ ಭಾವ
ಹಸನಾಗುತ್ತದೆ, ಹರವಾಗುತ್ತದೆ. ಆಕಸ್ಮಿಕವಾಗಿ ಕೆಡಕನ್ನು ನೋಡಿದರೂ
ನೋಡದಂತೆ, ಕೇಳಿದರೂ ಕೇಳದಂತೆ ಇರಬೇಕು.
ಒಂದು ಸುಂದರ ಹೂದೋಟ, ಅಲ್ಲಿ ನೂರಾರು ಗುಲಾಬಿಯ ಹೂಗಂಟಿ. ಸುತ್ತಮುತ್ತ ಸುಗಂಧ ಸೂಸಿದೆ. ಸೌಂದರ್ಯ ಹರಡಿಕೊಂಡಿದೆ. ಓರ್ವ ವ್ಯಕ್ತಿ ಅಲ್ಲಿಗೆ ಬಂದ. ಹೂಬನದ ಸೌಂದರ್ಯ ಸವಿಯುತ್ತ
ಅತ್ತಿತ್ತ ಅಲೆದಾಡುತ್ತಿದ್ದ. ಆಕಸ್ಮಿಕವಾಗಿ ಒಂದು ಹೂಗಂಟೆಗೆ ಆತನ ಬಟ್ಟೆ ಸಿಕ್ಕಿ ಹರಿದು ಹೋಯಿತು. ತಕ್ಷಣ ಆ ವ್ಯಕ್ತಿ- “ಏನೀ ಹೂಗಂಟಿ ಎಂದು ಮರುಕ್ಷಣ ಹೂಗಂಟೆ ಆತನಿಗೆ ಹೇಳಿತು- “ಏಕಯ್ಯಾ ನನ್ನನ್ನು
ಸುಮ್ಮನೆ ತೆಗಳುವಿಯಲ್ಲ?” ವ್ಯಕ್ತಿ- "ನನ್ನ ಬೆಲೆಯುಳ್ಳ ಬಟ್ಟೆಯನ್ನು ಹರಿದುಹಾಕಿದ ನಿನ್ನನ್ನು ಹೊಗಳ ಬೇಕಾಗಿತ್ತೇನು?” ಹೂಗಂಟಿ-“ಹೊಗಳುವುದು ಬೇಡ ತೆಗಳುವುದೂ ಬೇಡ ಎಚ್ಚರಿಕೆಯಿಂದ ನಡೆದರೆ ಸಾಕು!” ವ್ಯಕ್ತಿ- “ಹಾಗೆಂದರೆ?” ಹೂಗಂಟೆ- “ಮುಳ್ಳುಗಳಿರುವುದು
ನನ್ನ ಮಮತೆಯ ಮಕ್ಕಳಾದ ಹೂಗಳ ಸಂರಕ್ಷಣೆಗಾಗಿ ಮೇಲಾಗಿ ನಿನ್ನ ಲಕ್ಷ ಬರೀ ಮುಳ್ಳಿನತ್ತ ಏಕೆ? ಮುಳ್ಳನ್ನೇ ಮುಚ್ಚಿಹಾಕಿದ ಪುಷ್ಪರಾಶಿ ನಿನಗೇ ಕಾಣದೇನಯ್ಯಾ!” ಹೂಗಂಟೆಯ ಈ ದಿವ್ಯ ಭಾಷೆ
ಕೇಳುತ್ತಲೇ ವ್ಯಕ್ತಿಯ ಕಣ್ಣು ತೆರೆಯಿತು! ಹೂಬನದಲ್ಲಿ ಸುತ್ತಮುತ್ತ ಮೆತ್ತಿದ ಸೌಂದರ್ಯ ಸುಗಂಧ ಮಕರಂದ ಸವಿದು ಆನಂದತುಂದಿಲನಾದ!
ಈ ಜಗವೊಂದು ಸುಂದರ ಹೂಬನ. ಅಸಂಖ್ಯ ಜೀವರಾಶಿಗಳೇ ಅಲ್ಲಿ ಅರಳಿನಿಂತ ಸುಂದರ ಸುಮಗಳು! ಇರಬಹುದು ಅದರಲ್ಲಿಯೂ ಎಲ್ಲೋ ಒಬ್ಬಿಬ್ಬರು ಮುಳ್ಳಿನಂಥವರು, ಮೃದು-ಮಧುರ ಹೂಗಳ ಸಂರಕ್ಷಣೆಗಾಗಿ ಇರಬಹುದು
ಭಕ್ತಿಭಾಂಡಾರಿ ಬಸವಣ್ಣನವರ
ಪಕ್ಕದಲ್ಲಿಯೇ ಕೊಂಡೆಯ ಮುಂಚಣ್ಣ, ಇರಲಿಲ್ಲವೇ? ನಮ್ಮ ಲಕ್ಷ್ಯ ನಮ್ಮ ಶ್ರದ್ಧೆ ಹೂವಿನಂಥ ಸಂತರ ಶರಣರತ್ತ ಇರಬೇಕು. ಮುಳ್ಳಿನಂಥವರನ್ನು ನಾವು ಕಂಡೂ ಕಾಣದಂತಿರಬೇಕು! ಹೀಗೆ ಹಂಸಕ್ಷೀರ ನ್ಯಾಯದಂತೆ ನಾವು ಸದಾ ಗುಣಗ್ರಾಹಿಗಳಾಗಿ ಇರುವುದೇ ಭಾವ ವಿಕಸನದ ಸುಗಮ ಸಾಧನ!
ಶ್ರೀ ಸಿದ್ಧೇಶ್ವರ ಸ್ವಾಮೀಜಿ