Monday, December 29, 2025

 ಕಥೆ-989

ಸಾಮಾನ್ಯರ ಅಸಾಮಾನ್ಯತೆ

ವರ್ಣಭೇದನೀತಿಯೆಂಬುದು ಮನುಷ್ಯರನ್ನು ಪ್ರಾಣಿಗಳಂತೆ ನಡೆಸಿಕೊಳ್ಳುತ್ತಿದ್ದ ಒಂದು ವ್ಯವಸ್ಥೆ. ಜಗತ್ತಿನ ಅತ್ಯಂತ ಮುಂದುವರೆದ ರಾಷ್ಟ್ರವೆಂದು ಹೇಳಿಸಿಕೊಳ್ಳುವ ಅಮೆರಿಕಾ ಸಂಯುಕ್ತ ಸಂಸ್ಥಾನ ಈ ಅತ್ಯಂತ ಹೀನಾಯವಾದ ಪದ್ಧತಿಯನ್ನು ಕಳೆದ ಕೆಲವೇ ದಶಕಗಳ ಹಿಂದೆಯೂ ಆಚರಿಸುತ್ತಿತ್ತು. 

ಅಮೆರಿಕದ ರಾಜ್ಯ ಅಲಬಾಮಾದ ಸಾರ್ವಜನಿಕ ಬಸ್ಸುಗಳಲ್ಲಿ ಒಂದು ನಿಯಮವಿತ್ತು. ಅದೆಂದರೆ ಬಸ್ಸಿನ ಮುಂದಿನ ಆಸನಗಳು ಬಿಳಿಯರಿಗಾಗಿ ಮೀಸಲಾಗಿದ್ದವು. ಕರಿಯ ಪ್ರಯಾಣಿಕರು ಬಸ್ಸಿನ ಹಿಂದಿನ ಆಸನಗಳಲ್ಲಿ ಕೂರಬೇಕಿತ್ತು. ಬಸ್ಸು ಜನರಿಂದ ತುಂಬಿ ತುಳುಕಿದಾಗ ಕರಿಯರು ತಮ್ಮ ಆಸನಗಳನ್ನು ಬಿಳಿಯರಿಗೆ ಬಿಟ್ಟು ಕೊಡಬೇಕಿತ್ತು. ಅಷ್ಟೇ ಅಲ್ಲ, ಮುಂದಿನ ಸೀಟುಗಳು ಖಾಲಿಯಿದ್ದರೂ ಕರಿಯರು ಅವುಗಳಲ್ಲಿ ಕುಳಿತುಕೊಳ್ಳುವ ಹಾಗಿರಲಿಲ್ಲ. ಈ ನಿಯಮ ಅಮೆರಿಕಾದ ಹಲವಾರು ದಕ್ಷಿಣದ ರಾಜ್ಯಗಳಲ್ಲಿ ಇತ್ತು. 

1955ರ ಡಿಸೆಂಬರ್‌ ಒಂದನೇ ತಾರೀಕು ರೋಸಾ ಪಾರ್ಕ್ಸ್‌ ಎನ್ನುವ ಕರಿಯ ಮಹಿಳೆ ಅಲಬಾಮಾದ ರಾಜಧಾನಿ ಮೊಂಟ್ಗೊಮರಿಯಲ್ಲಿ ಬಸ್ಸಿನ ಹಿಂದಿನ ಭಾಗದ ಮೊದಲ ಸಾಲಿನ ಆಸನದಲ್ಲಿ ಕುಳಿತಿದ್ದರು. ಆಗತಾನೇ ಬಸ್‌ ಹತ್ತಿದ ಬಿಳಿಯರಿಗೆ ಸೀಟು ಕೊಡುವಂತೆ ರೋಸಾ ಮತ್ತು ಉಳಿದ ಮೂವರು ಪ್ರಯಾಣಿಕರಿಗೆ ಚಾಲಕ ಹೇಳಿದ. ಉಳಿದವರು ಎದ್ದು ಹಿಂದೆ ಹೋದರು. ಆದರೆ ರೋಸಾ ಎದ್ದೇಳಲು ನಿರಾಕರಿಸಿದರು. ಆಕೆಗೂ ಈ ಭೇದಭಾವವನ್ನು ಅನುಭವಿಸಿ ಸಾಕಾಗಿತ್ತು. ತಾನು ಹಿಂದೆ ಹೋಗುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದರಾಕೆ. ಕಾನೂನು ಉಲ್ಲಂಘನೆ ಮಾಡಿದ್ದಕ್ಕೆ ಅವರನ್ನು ಬಂಧಿಸಲಾಯಿತು. 

ರೋಸಾ ಅವರ ಬಂಧನ ಮೊಂಟ್ಗೊಮರಿಯ ಜನರಲ್ಲಿ ಜಾಗೃತಿಯನ್ನುಂಟು ಮಾಡಿತು. ರೋಸಾ ಅವರ ಶಾಂತಿಯುತ ಪ್ರತಿಭಟನೆ ಅವರ ಸಮುದಾಯದ ಜನರಲ್ಲಿ ಸ್ಫೂರ್ತಿ ತುಂಬಿ ಅವರು ಬಸ್‌ ಪ್ರಯಾಣವನ್ನೇ ಕೈಬಿಟ್ಟರು. ಅದೂ ಪೂರ್ತಿ ಒಂದು ವರ್ಷ! ಮಾರ್ಟಿನ್‌ ಲೂಥರ್‌ ಕಿಂಗ್‌ ಜೂನಿಯರ್‌ ಈ ಪ್ರತಿಭಟನೆಯನ್ನು ಮುನ್ನಡೆಸಿದರು. ಜನರು ಓಡಾಟಕ್ಕೆ ಎಷ್ಟೇ ಕಷ್ಟವಾದರೂ ಪ್ರತಿಭಟನೆ ಕೈಬಿಡಲಿಲ್ಲ. 381 ದಿನಗಳ ನಂತರ ಅಮೆರಿಕದ ಸುಪ್ರೀಂ ಕೋರ್ಟು ಬಸ್ಸಿನಲ್ಲಿ ಆಸನಗಳ ಪ್ರತ್ಯೇಕತೆ ಅಸಂವಿಧಾನಿಕ ಎಂದು ತೀರ್ಪು ಕೊಟ್ಟಿತು. ರೋಸಾ ಪಾರ್ಕ್ಸ್‌ ಅವರ ಧೈರ್ಯದ ಕೆಚ್ಚಿನ ಮತ್ತು ಆತ್ಮವಿಶ್ವಾಸದ ಒಂದು ನಡೆ ಈ ಐತಿಹಾಸಿಕ ತೀರ್ಮಾನಕ್ಕೆ ಕಾರಣವಾಯಿತು. ದೇಶಾದ್ಯಂತ ಬದಲಾವಣೆಗೆ ಕಾರಣವಾಯಿತು. 

ಜಗತ್ತನ್ನು ಬದಲಾಯಿಸಲು ದೊಡ್ಡ ದೊಡ್ಡ ಕೆಲಸಗಳನ್ನೇ ಮಾಡಬೇಕೆಂದಿಲ್ಲ. ನಮಗೆ ಸರಿ ಅನ್ನಿಸದ ಸಂಗತಿಗಳನ್ನು ನಮ್ಮದೇ ಆದ ರೀತಿಯಲ್ಲಿ ವಿರೋಧಿಸಬಹುದು. ಅನ್ಯಾಯವೆಂದು ಅನ್ನಿಸಿದ ಕಡೆ ನಮ್ಮ ಧ್ವನಿ ಎತ್ತಬಹುದು. ಒಂಟಿ ಧ್ವನಿಯೂ ದೊಡ್ಡ ಪರಿಣಾಮ ಉಂಟು ಮಾಡಬಹುದು. ಹಲವಾರು ಜನರ ಬದುಕನ್ನು ಬದಲಾಯಿಸಬಹುದು.  

ಅಷ್ಟೇ ಅಲ್ಲ ಈ ದೊಡ್ಡ ಪರಿಣಾಮ ಉಂಟು ಮಾಡುವ ಪುಟ್ಟ ಪುಟ್ಟ ಕೆಲಸಗಳನ್ನು ದೊಡ್ಡವರೇ ಮಾಡಬೇಕೆಂದೂ ಇಲ್ಲ. ನಮ್ಮ ನಿಮ್ಮಂತಹ ಸಾಮಾನ್ಯ ಜನರೂ ಮಾಡಬಹುದು. ಬಲವಾದ ನೈತಿಕ ಮೌಲ್ಯಗಳನ್ನು ಹೊಂದಿದ ಅತ್ಯಂತ ಸಾಧಾರಣ ವ್ಯಕ್ತಿಗಳಿಗೆ ಕೂಡ ವಿರೋಧಿಸುವ ತಾಕತ್ತು ಇರುತ್ತದೆ. ಯುದ್ಧಗಳನ್ನು ಗೆಲ್ಲಲು ಕತ್ತಿ ಕೋವಿಗಳಿಂದ ಮಾತ್ರವಲ್ಲ ಅಹಿಂಸಾತ್ಮಕ ಮಾರ್ಗಗಳಿಂದಲೂ ಸಾಧ್ಯ ಎಂಬುದನ್ನು ಈ ಘಟನೆ ಸಾಬೀತುಪಡಿಸಿತು. ರೋಸಾ ಅವರ ಈ ಮೌನ ಹೋರಾಟದ ಗೆಲುವು ಇಂದಿಗೂ ಒಂದು ಭರವಸೆಯ ಕಿರಣವಾಗುಳಿದಿದೆ. ಸ್ಫೂರ್ತಿಯ ಸೆಲೆಯೂ ಆಗಿದೆ. 

-ದೀಪಾ ಹಿರೇಗುತ್ತಿ

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು