ಕಥೆ-997
ಜೀವನದಲ್ಲಿ ಯಾವುದೂ ಸುಲಭವಾಗಿ ಸಿಗುವುದಿಲ್ಲ.
ಈ ಪ್ರಪಂಚದಲ್ಲಿ ನಾವೆಲ್ಲರೂ ಅಂದುಕೊಳ್ಳುತ್ತೇವೆ, ನೂರಾರು ಕಾಲ ಬದುಕಬೇಕು,ಜೀವನದಲ್ಲಿ ಏನನ್ನಾದರೂ ಶ್ರೇಷ್ಠವಾದುದನ್ನು, ಉನ್ನತವಾದುದನ್ನು
ಸಾಧಿಸಬೇಕು ಎಂಬುದು.. ವರುಷ ವರುಷಗಳವರೆಗೆ ಬದುಕುವ ಸುವರ್ಣವಕಾಶ ನಮಗೆ ದೊರೆತಿದೆ. ಅದರ ಸದುಪಯೋಗ ಮಾಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ. ವಿಶಾಲವಾದ ವಿಶ್ವದ ತುಂಬಾ ಕಣ್ಣಾಡಿಸಬೇಕು. ಜೀವನದ ಕ್ಷಣಕ್ಷಣವನ್ನೂ ಹಿತಮಿತವಾಗಿ ಬಳಸಬೇಕು. ಸಂತರ, ಶರಣರ (ಗುರುಗಳ) ಜೀವನದಿಂದ ನಾವು ಬದುಕುವುದನ್ನು ಕಲಿಯಬೇಕು.
ಜೀವನದಲ್ಲಿ ಏನಾದರೂ ಉನ್ನತವಾದುದನ್ನು ಸಾಧಿಸಬೇಕಾದರೆ ಅದಕ್ಕೆ ಕೆಲವು ಸಾಧನ- ಸಲಕರಣೆಗಳು ಅವಶ್ಯ. ಅವುಗಳಲ್ಲಿ ಅತ್ಯಂತ
ಪ್ರಮುಖವಾದುದೆಂದರೆ ಮನೋದಾರ್ಡ್ಯ. ಎಂಥ ಕಷ್ಟ ನಷ್ಟಗಳೇ ಬಂದರೂ ನಮ್ಮ ನಿರ್ಧಾರ ಅಲುಗಾಡಬಾರದು. ಜೀವನದಲ್ಲಿ ಏನನ್ನಾದರೂ ಸಾಧಿಸಲು ದೃಢವಾದ ಛಲ, ನಿರ್ಣಯ, ಬದ್ಧತೆ ಅತ್ಯವಶ್ಯ. ಬಹಿರಂಗದಲ್ಲಾಗಲಿ, ಅಂತರಂಗದಲ್ಲಾಗಲಿ ಏನನ್ನಾದರೂ ಶ್ರೇಷ್ಠವಾದುದನ್ನು ಸಾಧಿಸುವುದಕ್ಕೆ ಅಂಥ ಮನೋದಾರ್ಡ್ಯ ಬೇಕು. ಜೀವನದಲ್ಲಿ ಯಾವುದೂ ಸುಲಭವಾಗಿ ಸಿಗುವುದಿಲ್ಲ. ಕಠಿಣ ಪರಿಶ್ರಮ,ಅಚಲ ನಿರ್ಧಾರ, ಬದ್ಧತೆ ಉಳ್ಳವರು ಮಾತ್ರ ಬದುಕಿನಲ್ಲಿ ಏನಾದರೂ ಸಾಧಿಸಲು ಸಾಧ್ಯ. ಯಾರಿಗೆ ಕಷ್ಟ-ನಷ್ಟಗಳಿಲ್ಲ ಹೇಳಿ, ಎಲ್ಲರಿಗೂ ಇರುತ್ತವೆ. ಆದರೆ ಮನೋದಾರ್ಡ್ಯ ಉಳ್ಳವರು ಮಾತ್ರ ಎಲ್ಲ ಕಷ್ಟ-ನಷ್ಟಗಳನ್ನು ಎದುರಿಸಿ ಸಿದ್ಧಿಯ ಶ್ರೀಗಿರಿಯನ್ನು ತಲುಪುತ್ತಾರೆ.
ಪೂಜ್ಯ ಶ್ರೀ ಸಿದ್ಧೇಶ್ವರ