ಕಥೆ-1006
ಸೂಡಿಯಲ್ಲಿ ಮಕರ ಸಂಕ್ರಮಣ (Local Vocal)
ಇವತ್ತು ಮಕರ ಸಂಕ್ರಮಣ.. ಅಧಿಕೃತವಾಗಿ ಚಳಿಗಾಲದ ಅಂತ್ಯ ಮತ್ತು ಬೇಸಿಗೆಯ ಆರಂಭ ಎನ್ನುವ ದಿನ.. ಶಾಲೆಗೆ ಬೇರೆ ರಜೆ, ಶ್ರೀಮತಿ ಅವರು ಬುತ್ತಿ ಕಟ್ಕೊಂಡು ಹೋಗಿ ಹೊರಗಡೆ ಊಟ ಮಾಡಿ ಬರೋಣರೀ ಅಂದಾಗ... ಜನ ಸಾಂದ್ರತೆ ಇರುವ ಪ್ರದೇಶದಲ್ಲಿ ಹೋಗಾಕ ಇಷ್ಟವಿಲ್ಲ.. ಪಕ್ಕದ ಅನೇಕ ಐತಿಹಾಸಿಕ ಸ್ಥಳಗಳನ್ನು ನಾವು ನೋಡಿರುವುದಿಲ್ಲ.. ಅನ್ನೋದು ವಿಚಾರ ಮಾಡ್ಲಿಕ್ಕೆ ಶುರು ಮಾಡಿದಾಗ, ನೆನಪಿಗೆ ಬಂದಿದ್ದು ಪಕ್ಕದ ಸೂಡಿ ಗ್ರಾಮ..ಅನೇಕ ಬಾರಿ ಸೂಡಿಗೆ ಹೋಗಿದ್ದರೂ, ದೂರದಿಂದಲೇ ರಸ್ತೆಯಲ್ಲಿ ಜೋಡಿ ಗೋಪುರದ ದೇವಸ್ಥಾನ ನೋಡ್ತಾ ಹೋಗ್ತಿದ್ದೆ, ಆ ದೇವಸ್ಥಾನಗಳ ಬಗ್ಗೆ ಕುತೂಹಲವಿತ್ತು, ಅಲ್ಲದೆ ಅಲ್ಲೊಂದು ಬಾವಿಯ ಬಗ್ಗೆ ಕೇಳಿದ್ದೆ, ಆದರೆ ಸ್ವತಹ ಸಮೀಪದಿಂದ ನೋಡಲು ಸಾಧ್ಯವಾಗಿರಲಿಲ್ಲ.. ಇವತ್ತು ಸೂಡಿ ನೋಡುವ ಸಮಯ ಅಂದುಕೊಂಡೆ.. ಕುಟುಂಬದೊಂದಿಗೆ ಸೂಡಿ ಗ್ರಾಮದ ಕಡೆಗೆ ಪಯಣ ಶುರುವಾಯಿತು, ಹಿರೇಮ್ಯಾಗೇರಿ ಮೂಲಕ ಸಂಕನೂರ ನಂತರ ಸೂಡಿ ಗ್ರಾಮದ ಪ್ರವೇಶ ಆಯಿತು.. ಬಾಳೆಹಣ್ಣು ಮಾರುವ ಅಜ್ಜಿಯ ಮೂಲಕ ಸೂಡಿ ಗ್ರಾಮದ ಪ್ರಸಿದ್ಧ ಸ್ಥಳಗಳ ಹಾದಿ ತಿಳಿದುಕೊಂಡೆ.. ಬಸ್ ನಿಲ್ದಾಣದ ಸಮೀಪ ಅಂಟಿಕೊಂಡ ಪಕ್ಕದಲ್ಲಿ ಮಲ್ಲಿಕಾರ್ಜುನ ದೇವಸ್ಥಾನ, ಕಲ್ಲಿನ ಕೆತ್ತನೆಗಳು ಐಹೊಳೆ ಪಟ್ಟದಕಲ್ಲು ನೆನಪಿಸುವಂತಿದ್ದವು... ಆ ಕೆತ್ತನೆ ಇಟ್ಟಿಗೆ ಕಲ್ಲಾದ ಕಾರಣ ಶಿಲೆಗಳ ಶೀಥಲೀಕರಣ ಕಂಡುಬರುತ್ತಿದೆ.. ಜೀರ್ಣೋದ್ಧಾರಕ್ಕೆ ಕಾಯುತ್ತಿವೆ.. ಪಕ್ಕದಲ್ಲಿನ ಅನುದಾನಿತ ಶ್ರೀ ಮಹಾಂತ ಸ್ವಾಮಿ ಪ್ರಾಥಮಿಕ ಶಾಲೆಯ ಕೆಲವು ವಿದ್ಯಾರ್ಥಿಗಳು ಈ ದೇವಸ್ಥಾನದ ಬಗ್ಗೆ ಮಾಹಿತಿ ನೀಡಿದರು...
ನಂತರ ಜೋಡು ಕಳಸದ ದೇವಸ್ಥಾನ (ನಾಗಲಿಂಗೇಶ್ವರ ದೇವಸ್ಥಾನ).. ನಿಜಕ್ಕೂ ಆಕರ್ಷಕ, ಸುಂದರವಾದ ಶಿಲ್ಪ ಕಲೆಗಳ ಐತಿಹಾಸಿಕ ದೇವಸ್ಥಾನ...ವಾಸ್ತವವಾಗಿ ಪ್ರವಾಸಿಗರ ಬದಲಾಗಿ, ಪುಂಡ ಪೋಕರಿಗಳ ಸ್ಥಳ ಆಗಿದೆ... ಅದೇ ಗ್ರಾಮದ ಮಾರುತಿ ಎಂಬವರು ಆ ದೇವಸ್ಥಾನದ ಬಗ್ಗೆ ಸಾಕಷ್ಟು ಮಾಹಿತಿ ನೀಡಿದರು..
ಹಿಂದೆ ಸೂಡಿ ಕ್ರಿ.ಶ. 1000 ರ ಅವಧಿಯಲ್ಲಿ ಕಲ್ಯಾಣಿ ಚಾಲುಕ್ಯರ ಪ್ರಮುಖ ಪಟ್ಟಣವಾಗಿತ್ತು. ನಂತರ ಕ್ರಿ.ಶ. 1100 ರಲ್ಲಿ ಸೂಡಿ ಕಲ್ಯಾಣಿ ಚಾಲುಕ್ಯರ ರಾಜಧಾನಿ ಸ್ಥಾನಮಾನದ ಕೇಂದ್ರವಾಗಿತ್ತು, ಕಲ್ಯಾಣಿ ಚಾಲುಕ್ಯರ ರಾಜನ ಮಗಳು ಅಕ್ಕದೇವಿ ಈ ಸ್ಥಳವನ್ನು ಆಳುತ್ತಿದ್ದಳು. ಆ ಸಂದರ್ಭದಲ್ಲಿ ಸುಂದರ ಕೆತ್ತನೆಯುಳ್ಳ ಮಲ್ಲಿಕಾರ್ಜುನ ದೇವಾಲಯ ನಿರ್ಮಾಣವಾಯಿತು ಎಂದು ಹೇಳಲಾಗುತ್ತದೆ..
ಸಾಮಂತಾಧಿಪತಿ ನಾಗದೇವರು ಅವರ ನೇತೃತ್ವದಲ್ಲಿ ಅವಳಿ ಗೋಪುರದ ದೇವಾಲಯ (ನಾಗಲಿಂಗೇಶ್ವರ ದೇವಸ್ಥಾನ) ಮತ್ತು ನಾಗಕುಂಡ ( ಕಲ್ಲು ಮತ್ತು ಕೆತ್ತನೆಗಳಿಂದ ನಿರ್ಮಿಸಲಾದ ದೊಡ್ಡ ಬಾವಿ) ನಿರ್ಮಾಣಗೊಂಡಿದೆ ಎಂದು ಹೇಳಲಾಗುತ್ತದೆ..
ಜೋಡು ಕಳಶ ದೇವಾಲಯ,( ನಾಗಲಿಂಗ ದೇವಾಲಯ) ಎರಡು ಗರ್ಭಗೃಹಗಳನ್ನು ಹೊಂದಿರುವ ಅಪರೂಪದ ವಿನ್ಯಾಸದಿಂದ ಕೂಡಿದೆ, ಎರಡು ಶಿಖರಗಳು, ಸಮಾಂತರವಾಗಿ ಏರಿರುವುದು ವಿಶೇಷವಾಗಿ ಗಮನ ಸೆಳೆಯುತ್ತದೆ.ಪ್ರತಿ ಗರ್ಭಗೃಹದ ಮೇಲಿರುವ ಗೋಪುರಗಳು ಶಿಲ್ಪಕಲೆಯೊಂದಿಗೆ ಅಲಂಕರಿಸಲ್ಪಟ್ಟಿವೆ...
ನಾಗಕುಂಡ( ಭಾವಿ) ನೋಡಲು ವಿಶೇಷವಾಗಿದ್ದು, ಕನಕಗಿರಿಯ ವೆಂಕಟಪ್ಪ ಬಾವಿಗಿಂತ ವಿಭಿನ್ನವಾಗಿದೆ, ಪುಷ್ಕರಣಿಯಂತೆ ಕಂಡರೂ, ಅನೇಕ ಮೆಟ್ಟಲುಗಳನ್ನು ಹೊಂದಿರುವ ಕೆರೆಯಂತಿದೆ, ಅದರ ಗೋಡೆಗಳ ಮೇಲೆ ದೇವಾಲಯಗಳ ಶೈಲಿಯ ಶಿಲ್ಪ ಕಲೆಗಳ ಕೆತ್ತನೆಗಳ ವಿನ್ಯಾಸಗೊಳಿಸಿದ್ದು, ಕೆರೆಯ ಒಳಗೆ ಬ್ರಹ್ಮಾಂಡ ಶಿಲ್ಪಶೈಲಿ ನಿರ್ಮಿಸಿದಂತಾಗಿದೆ..
ನಿಜಕ್ಕೂ ಸೂಡಿ ಗ್ರಾಮ ಅನೇಕ ತನ್ನ ಒಳ ಸಂಗತಿಗಳನ್ನು ನನಗೆ ಮತ್ತು ಕುಟುಂಬಕ್ಕೆ ತಿಳಿಸಿ ಬೀಳ್ಕೊಟ್ಟಂತಿತ್ತು..
ಆ ಐತಿಹಾಸಿಕ ಸ್ಥಳಗಳನ್ನು ಯೋಜನಾ ಬದ್ಧವಾಗಿ ಜೀರ್ಣೋದ್ಧಾರ ಮಾಡಿದ್ದೆ ಆದರೆ ಸೂಡಿ ಒಂದು ಪ್ರವಾಸಿ ಸ್ಥಳ ಆಗುವುದರಲ್ಲಿ ಸಂದೇಹವಿಲ್ಲ..
ಪಕ್ಕದ ಅನೇಕ ಐತಿಹಾಸಿಕ ಸ್ಥಳಗಳನ್ನು ನಾವೇ ನೋಡಿರುವುದಿಲ್ಲ.. ಅವುಗಳನ್ನು ತಿಳಿದುಕೊಂಡಾಗ ನಮ್ಮ ಊರಿನ ಬಗ್ಗೆ ಮತ್ತು ಪಕ್ಕದ ಊರುಗಳ ಹೆಮ್ಮೆ ಅನ್ನಿಸುತ್ತದೆ ಅದಕ್ಕೆ ಹೇಳೋದು Local Vocal...
ಭರವಸೆಯ ಬೇಸಿಗೆಯ.. ಮಕರ ಸಂಕ್ರಾಂತಿಯ ಶುಭಾಶಯಗಳು
💐💐💐
- ಶ್ರೀ ಶಂಕರಗೌಡ ಬಸಾಪೂರ
