ಕಥು-996
ಮಣ್ಣಿಂದ ಕಾಯ
ಮಣ್ಣಲ್ಲೇ ಆಡಿ ಬೆಳೆದ 90ರ ದಶಕದ ನಮ್ಮ ಬಾಲ್ಯಕ್ಕೆ ಹೋಲಿಸಿದರೆ ಇಂದಿನ ಡಿಜಿಟಲ್ ಯುಗದ ಬಾಲ್ಯ ಏನೇನೂ ಇಲ್ಲ.
ಮಕ್ಕಳು ಮಣ್ಣಿನಲ್ಲಿ ಆಟವಾಡುವುದು ಕೇವಲ ಬಾಲ್ಯದ ಒಂದು ಭಾಗವಲ್ಲ, ಅದು ಅವರ ಸರ್ವಾಂಗೀಣ ಬೆಳವಣಿಗೆಯ ಅಡಿಪಾಯ. ಆದರೆ ಇಂದು ನೆಲವನ್ನೆಲ್ಲಾ ಕಾಂಕ್ರಿಟ್ ಆವರಿಸಿಕೊಂಡು ಬಿಟ್ಟಿದೆ.
ಮಕ್ಕಳು ಮಣ್ಣಿನಲ್ಲಿ ಹೊರಳಾಡುವುದನ್ನು ಕಂಡಾಗ ಅದೆಷ್ಟೋ ಪೋಷಕರಿಗೆ 'ಕೊಳೆಯಾಗುತ್ತಿದೆ' ಎಂಬ ಆತಂಕ ಶುರುವಾಗುತ್ತದೆ. ಆದರೆ, ವಾಸ್ತವದಲ್ಲಿ ಮಣ್ಣು ಮಗುವಿನ ಮೊದಲ ಆಟ ಮತ್ತು ಪಾಠಶಾಲೆ.
ಒಂದು ಮಣ್ಣಿನ ಮುದ್ದೆ ಮಗುವಿನ ಕೈಯಲ್ಲಿ ಆನೆಯಾಗಬಲ್ಲದು, ಅರಮನೆಯಾಗಬಲ್ಲದು. ಪ್ಲಾಸ್ಟಿಕ್ ಆಟಿಕೆಗಳು ಸೀಮಿತ ಕಲ್ಪನೆಯನ್ನು ನೀಡಿದರೆ, ಮಣ್ಣು ಅನಂತ ಸಾಧ್ಯತೆಗಳನ್ನು ತೆರೆದಿಡುತ್ತದೆ. ಇದು ಅವರಲ್ಲಿ ಕಲ್ಪನಾ ಶಕ್ತಿಯನ್ನು ಹೆಚ್ಚಿಸುತ್ತದೆ.
ಮಣ್ಣಿನಲ್ಲಿ ಗಿಡ ನೆಡುವುದು ಅಥವಾ ಮಣ್ಣಿನ ಮನೆ ಕಟ್ಟುವುದು ಮಗುವಿಗೆ ತಾಳ್ಮೆಯನ್ನು ಕಲಿಸುತ್ತದೆ. ಪ್ರಕೃತಿಯ ಲಯಕ್ಕೆ ಒಗ್ಗಿಕೊಳ್ಳುವುದು ಮಗುವಿನ ಮಾನಸಿಕ ಸ್ಥಿಮಿತಕ್ಕೆ ಬಹಳ ಮುಖ್ಯ.
ಮಣ್ಣಿನ ವಾಸನೆ, ಅದರ ಸ್ಪರ್ಶ ಮಗುವಿನಲ್ಲಿ ಪ್ರಕೃತಿಯ ಬಗ್ಗೆ ಪ್ರೀತಿ ಮತ್ತು ಗೌರವವನ್ನು ಮೂಡಿಸುತ್ತದೆ. ಇದು ಅವರನ್ನು ಮುಂದಿನ ದಿನಗಳಲ್ಲಿ ಪರಿಸರ ಸ್ನೇಹಿ ನಾಗರಿಕರನ್ನಾಗಿ ಮಾಡುತ್ತದೆ.
ಮಣ್ಣಿನ ನಂಟು, ಅಮ್ಮನ ಮಡಿಲಷ್ಟೇ ಸುರಕ್ಷಿತ. ಹೌದು! ಇದು ಸತ್ಯ.
ಇಂದಿನ 'ಹೈಜೀನ್ ಹೈಪೋಥೆಸಿಸ್' ಪ್ರಕಾರ, ಅತಿಯಾದ ಸ್ವಚ್ಛತೆ ಮಕ್ಕಳನ್ನು ದುರ್ಬಲರನ್ನಾಗಿ ಮಾಡುತ್ತಿದೆ.
ಮಣ್ಣು ನೈಸರ್ಗಿಕ ಲಸಿಕೆಯಂತೆ ಕೆಲಸ ಮಾಡುತ್ತದೆ. ಮಣ್ಣಿನಲ್ಲಿ ಲಕ್ಷಾಂತರ ಬ್ಯಾಕ್ಟೀರಿಯಾಗಳಿರುತ್ತವೆ. ಮಗು ಮಣ್ಣಿನಲ್ಲಿ ಆಡಿದಾಗ ಈ ಸೂಕ್ಷ್ಮಜೀವಿಗಳು ದೇಹವನ್ನು ಪ್ರವೇಶಿಸುತ್ತವೆ. ಇದು ಮಗುವಿನ ರೋಗನಿರೋಧಕ ವ್ಯವಸ್ಥೆಯನ್ನು ಬಲಪಡಿಸಿ, ಆಸ್ತಮಾ ಮತ್ತು ಅಲರ್ಜಿಗಳಂತಹ ಸಮಸ್ಯೆಗಳಿಂದ ದೂರವಿಡುತ್ತದೆ ಎಂದು ಹೇಳಲಾಗುತ್ತದೆ.. ಜಾನಪದ ಹಾಡಿನಲ್ಲಿ, ಆಡಿ ಬಾ ನನ್ನ ಕಂದ ಅಂಗಾಲ ತೊಳದೇನ... ಎಂಬುದು ಹಿರಿಯರಿಗೆ ಮಕ್ಕಳು ಮಣ್ಣಲ್ಲಿ ಆಡಲಿ ಬಿಡು ಎಂಬ ಕಲ್ಪನೆ ಇತ್ತು..
ಮಣ್ಣಿನಲ್ಲಿ Mycobacterium vaccae ಎಂಬ ಸ್ನೇಹಿ ಬ್ಯಾಕ್ಟೀರಿಯಾ ಇರುತ್ತದೆ. ವಿಜ್ಞಾನದ ಪ್ರಕಾರ, ಇದು ಮೆದುಳಿನಲ್ಲಿ ಸೆರೊಟೋನಿನ್ ಎಂಬ ಹಾರ್ಮೋನ್ ಅನ್ನು ಬಿಡುಗಡೆ ಮಾಡುತ್ತದೆ. ಇದು ಮಗುವಿನ ಆತಂಕವನ್ನು ಕಡಿಮೆ ಮಾಡಿ, ಮನಸ್ಸನ್ನು ಪ್ರಫುಲ್ಲವಾಗಿಡುತ್ತದೆ.
ಮಣ್ಣಿನ ತಂಪು, ಅದರ ಒರಟುತನ, ತೇವಾಂಶ - ಇವುಗಳನ್ನು ಸ್ಪರ್ಶಿಸುವುದರಿಂದ ಮಗುವಿನ ಸ್ಪರ್ಶ ಜ್ಞಾನವಷ್ಟೇ ಅಲ್ಲದೆ, ಕಣ್ಣು ಮತ್ತು ಕೈಗಳ ಸಮನ್ವಯ [Eye-hand coordination] ಉತ್ತಮಗೊಳ್ಳುತ್ತದೆ.
"ಮಗುವಿನ ಬಟ್ಟೆಯ ಮೇಲಿರುವ ಮಣ್ಣಿನ ಕಲೆಗಳು ಅವರು ಪಡೆದ ಅತ್ಯುತ್ತಮ ಶಿಕ್ಷಣದ ಪ್ರಮಾಣಪತ್ರಗಳೆಂದರೆ ತಪ್ಪಾಗಲಾರದು.
ಇವತ್ತಿನ ಸ್ಮಾರ್ಟ್‌ಫೋನ್‌ನ ಗಾಜಿನ ಪರದೆಯ ಮೇಲೆ ಬೆರಳು ಆಡಿಸುವ ಮಗುವಿಗಿಂತ, ಮಣ್ಣಿನ ಗೂಡು ಕಟ್ಟುವ ಮಗು ಹೇಗಾದರೂ ಜೀವನ ರೂಪಿಸಿಕೊಳ್ಳುವುದು, ಅಡೆತಡೆಗಳನ್ನು ಎದುರಿಸಲು ಸಿದ್ಧವಾಗಿರುತ್ತದೆ."
ಕಾಂಕ್ರಿಟ್ ರಸ್ತೆಗಳಿಲ್ಲದ, ಸ್ಮಾರ್ಟ್ ಫೋನ್ ಕಾಣದ 90ರ ದಶಕದ ನಮ್ಮ ಬಾಲ್ಯ ಎಷ್ಟು ಅಮೂಲ್ಯವಾಗಿತ್ತಲ್ವೇ?
ಅಂದು ಮಣ್ಣಿನೊಂದಿಗೆ ಆಡಿದ ನಾವು ಇಂದು ಮಣ್ಣನ್ನೇ ಮರೆತ ಸ್ಮಾರ್ಟ್‌ಫೋನ್ ಲೋಕದ ಕೈದಿಗಳಾಗಿದ್ದೆವೆ. ಇವತ್ತಿನ ಆಧುನಿಕ ಭರಾಟೆಯಲ್ಲಿ, ಕಾಂಕ್ರೀಟ್ ಅಂಗಳವನ್ನು ನಿರ್ಮಿಸಿದ್ದೇವೆ.. ಅಲ್ಲದೆ ಮಣ್ಣಿನ ಮಾಲಿನ್ಯವನ್ನು ಹೆಚ್ಚಿಸುತ್ತಿದ್ದೇವೆ.. ಹೀಗಾಗಿ ಸದ್ಯದ ಮಕ್ಕಳಿಗೆ ಮಣ್ಣು ಬಲು ದೂರವಾಗಿದೆ..
ಮಣ್ಣನ್ನು ಪ್ರೀತಿಸಿದವನು ತನ್ನ ನೆಲೆಯನ್ನೇ ಪ್ರೀತಿಸಿದವನಾಗಿರುತ್ತಾನೆ.
“ಮಣ್ಣಿನಲ್ಲಿ ಬೆವರು ಸುರಿಸಿದರೆ, ಜೀವನದಲ್ಲಿ ಫಲ ಖಂಡಿತ ದೊರೆಯುತ್ತದೆ.”
“ಮಣ್ಣಿನ ತೇವದ ವಾಸನೆಗೆ ತಾಯಿಯ ಪ್ರೀತಿಯ ಸುಗಂಧ ಇರುತ್ತದೆ.”
“ ಮಣ್ಣಿನ ಜೊತೆಗಿನ ಸಂಬಂಧ ಮರೆಯದವನು ಎಂದಿಗೂ ದಾರಿ ತಪ್ಪುವುದಿಲ್ಲ.”
“ಎಷ್ಟು ಎತ್ತರಕ್ಕೆ ಹಾರಿದರೂ, ಕೊನೆಗೆ ಮರಳಬೇಕಾಗುವುದು ಮಣ್ಣಿಗೇ.”
“ಮಣ್ಣಿನ ಮೇಲೆ ನಿಂತು ಕನಸು ಕಂಡವನು ಮಾತ್ರ ಆಕಾಶವನ್ನು ಮುಟ್ಟುತ್ತಾನೆ.”
“ಮಣ್ಣನ್ನು ಕಾಪಾಡಿದರೆ, ಮಣ್ಣು ನಮ್ಮನ್ನು ಕಾಪಾಡುತ್ತದೆ" ..
ಕೃಪೆ :ನೆಟ್