ಕಥೆ-1038
ಉಪಕಾರದ ಸಹಜ ಧರ್ಮ (ಉಬುಂಟು)
ದಕ್ಷಿಣ ಆಫ್ರಿಕಾದ ತಂತ್ರಜ್ಞಾನಿ ಮತ್ತು ಉದ್ಯಮಿ ಮಾರ್ಕ್ ಶಟಲ್ ವರ್ತ್ 2004ರಲ್ಲಿ ಮುಕ್ತ ಆಪರೇಟಿಂಗ್ ಸಿಸ್ಟಮ್‌ನ ಮೊದಲ ಆವೃತ್ತಿಯನ್ನು ಜನರ ಬಳಕೆಗೆ ಲಭ್ಯವಾಗಿಸಿದರು. ಅದಕ್ಕೆ ಅವರು ಇಟ್ಟ ಹೆಸರು ‘ಉಬುಂಟು’. ಇದರ ಅರ್ಥ, ‘ನಿಮ್ಮಿಂದಾಗಿ ನಾನು’ ಎಂದು. I am because we are ನಾವೆಲ್ಲರೂ (ಜೊತೆಗೆ) ಇರುವುದರಿಂದ ನಾನೂ ಅಸ್ತಿತ್ವದಲ್ಲಿದ್ದೇನೆ ಅನ್ನುವುದು ಇದರ ವಿಸ್ತೃತ ಅರ್ಥ. ಇದು ದಕ್ಷಿಣ ಆಫ್ರಿಕಾದ ಸಂಸ್ಕೃತಿಯ ಮೂಲ ತತ್ವ. ಇದರ ಕುರಿತಾಗಿ ಸುಂದರವಾದ ಕತೆಯೊಂದಿದೆ.
ಒಮ್ಮೆ ಮಾನವಶಾಸ್ತ್ರಜ್ಞನೊಬ್ಬ ದಕ್ಷಿಣ ಆಫ್ರಿಕಾದ ಹಳ್ಳಿಯೊಂದಕ್ಕೆ ಭೇಟಿ ಕೊಟ್ಟ. ಅಲ್ಲಿನ ಮಕ್ಕಳೊಡನೆ ಆಡುತ್ತಾ, ದೂರದಲ್ಲೊಂದು ಹಣ್ಣಿನ ಬುಟ್ಟಿ ಇಟ್ಟು, ‘ಯಾರು ಮೊದಲು ಆ ಬುಟ್ಟಿಯ ಬಳಿ ತಲುಪ್ತಾರೋ ಅವರಿಗೇ ಎಲ್ಲಾ ಹಣ್ಣು’ ಅಂದ. ಮಕ್ಕಳು ಮುಖ ಮುಖ ನೊಡಿಕೊಂಡರು. ಅಕ್ಕಪಕ್ಕ ಸಾಲಾಗಿ ನಿಂತು, ಒಬ್ಬರೊಬ್ಬರ ಕೈಹಿಡಿದು ಬುಟ್ಟಿಯತ್ತ ಓಡಿದರು. ಬುಟ್ಟಿಯಲ್ಲಿದ್ದ ಹಣ್ಣನ್ನು ಎಲ್ಲರೂ ಹಂಚಿಕೊಂಡರು.
ಆ ವಿದೇಶಿಗನಿಗೆ ಅಚ್ಚರಿ. ‘ಅರೆ! ಒಬ್ಬರೇ ಓಡಿ ಹೋಗಿದ್ದರೆ ಒಬ್ಬರಿಗೇ ಎಲ್ಲಾ ಸಿಗ್ತಾ ಇತ್ತಲ್ಲ?’ ಕೇಳಿದ. ಆ ಹುಡುಗರಲ್ಲೊಬ್ಬ ಮುಂದೆ ಬಂದು ಅವನಿಗೂ ಒಂದು ಹಣ್ಣು ಕೊಡುತ್ತಾ, ‘ಉಬುಂಟು’ ಅಂದ. ‘ಉಬುಂಟು… ಎಲ್ಲರೂ ಬೇಸರದಲ್ಲಿರುವಾಗ ಒಬ್ಬ ಮಾತ್ರ ಖುಷಿಯಾಗಿರಲು ಹೇಗೆ ಸಾಧ್ಯ?’
ಮಾರ್ಕ್ ಶಟಲ್ ವರ್ತ್ ಕೂಡ ಇದೇ ಚಿಂತನೆಯನ್ನು ಆಧರಿಸಿ, ತಂತ್ರಜ್ಞಾನವು ಎಲ್ಲರಿಗೂ ಉಚಿತವಾಗಿ ಮತ್ತು ಮುಕ್ತವಾಗಿ ಸಿಗಬೇಕೆಂಬ ಆಶಯದಿಂದ ಉಬುಂಟು OS ಆರಂಭಿಸಿದ್ದು. ಇದು ಒಬ್ಬರು ಗಳಿಸಿ ಮತ್ತೊಬ್ಬರಿಗೆ ನೀಡುವುದಕ್ಕಿಂತ ವಿಶೇಷವಾದದ್ದು. ಆ ಮಕ್ಕಳಲ್ಲಿ ಒಬ್ಬ ಹುಡುಗ ಎಲ್ಲರಿಗಿಂತ ಮೊದಲು ಬುಟ್ಟಿಯನ್ನು ಮುಟ್ಟಿ, ತಾನು ಗೆದ್ದ ಹಣ್ಣುಗಳನ್ನು ಹಂಚಬಹುದಿತ್ತು. ಆದರೆ ಅವರಲ್ಲಿ ಯಾವೊಬ್ಬ ಹುಡುಗನೂ ಹಾಗೆ ಮಾಡಲಿಲ್ಲ. ಎಲ್ಲರೂ ಒಗ್ಗಟ್ಟಿನಿಂದ ಬಹುಮಾನ ದಕ್ಕಿಸಿಕೊಂಡರು. ಅಲ್ಲಿ ಗೆಲ್ಲುವ ಅಹಂಕಾರವಾಗಲೀ ನೀಡುವ ಅಹಂಕಾರವಾಗಲೀ, ಸೋತ ಬೇಸರವಾಗಲೀ ಪಡೆಯುವ ಕೀಳರಿಮೆ ಅಥವಾ ಹಿಂಜರಿಕೆಯಾಗಲೀ ಉಂಟಾಗಲು ಅವಕಾಶವನ್ನೆ ಕೊಡಲಿಲ್ಲ.
ನಾವು ದಕ್ಕಿಸಿಕೊಳ್ಳಬೇಕಾದ್ದು ಹೀಗೆ. ಕೊಡುವುದೂ ಅಲ್ಲ, ಪಡೆಯುವುದೂ ಅಲ್ಲ, ಹಂಚಿಕೊಳ್ಳುವುದು ಕೂಡ ಅಲ್ಲ. ಪರಸ್ಪರ ಸಹಕಾರದಿಂದ ಒಟ್ಟಿಗೆ ದಕ್ಕಿಸಿಕೊಳ್ಳಬೇಕು, ಹೊಂದಬೇಕು.ಕಂಪ್ಯೂಟರ್ ಗೆ ಅದು ಕಾರ್ಯನಿರ್ವಹಿಸಲು ಒಂದು ಆಪರೇಟಿಂಗ್ ಸಿಸ್ಟಮ್ ಹಾಕಿಕೊಳ್ಳಲೇಬೇಕು.. ಬಿಲ್ ಗೇಟ್ಸ್ ರ Windows OS ಹಾಕಿಕೊಳ್ಳಲು ಹಣ ಪಾವತಿಸಬೇಕಾಗುತ್ತದೆ, ಆದರೆ ಮಾರ್ಕ್ ಶಟಲ್ ವರ್ತ್ ಅವರು ಅಭಿವೃದ್ಧಿಪಡಿಸಿದ Ubautu (ಉಬುಂಟು) OS ನ್ನು ಉಚಿತವಾಗಿ ನೀಡಿರುವುದು.. ಅವರು ಮನುಕುಲಕ್ಕೆ ನೀಡಿದ ಉದಾರತೆಯನ್ನು ತೋರಿಸುತ್ತದೆ.. ಸರ್ಕಾರಿ ಕಂಪ್ಯೂಟರ್ಗಳಲ್ಲಿ, ಲ್ಯಾಪ್ಟಾಪ್ ಗಳಲ್ಲಿ ಮತ್ತು ಶಾಲೆ ಕಂಪ್ಯೂಟರಲ್ಲಿ ಉಚಿತವಾದ ಈ Ubantu OS ಅನ್ನು ನಾವು ಕಾಣಬಹುದು. ಅನೇಕ ಜನ ಕಂಪ್ಯೂಟರ್ನಲ್ಲಿ ಉಪಜೀವನ ನಡೆಸಲು, ಕೆಲಸ ಮಾಡಲು, ಹೊಸದನ್ನು ಕಲಿಯಲು ಉಚಿತವಾಗಿ ಸಹಾಯಕವಾಗಿರುವುದು Ubuntu..
ಸಮಾಜಕ್ಕೆ ಕೊಡುವುದರಲ್ಲಿದೆ ಬಹುದೊಡ್ಡ ಖುಷಿ..
- ಚೇತನಾ ತೀರ್ಥಹಳ್ಳಿ