ಕಥೆ-1041
ಸೂಫಿ ನಾಯಿ ಗುರು
ನಾಯಿನ ನೋಡಿ ಪಾಠ ಕಲಿತ ಸೂಫಿ ಕತೆಯಿಂದ ನಾವೇನು ಪಾಠ ಕಲೀಬಹುದು? ಓದಿ ನೋಡಿ… ।
ಒಂದೂರಲ್ಲೊಬ್ಬ ಸೂಫಿ ಇದ್ದ. ತಾನಾಯ್ತು, ತನ್ನ ಪಾಡಾಯ್ತು ಅಂತ ಇದ್ದವನು. ಅವನು ತುಂಬಾ ಸಾಧನೆ ಮಾಡಿದ್ರೂ ಯಾರನ್ನೂ ತನ್ನ ಶಿಷ್ಯರಾಗಿ ಸ್ವೀಕರಿಸ್ತಿರಲಿಲ್ಲ. ಯಾರಾದ್ರೂ ಕೇಳಿದ್ರೆ, ‘ನಾನೇ ಇನ್ನೂ ಕಲಿಯೋದಿದೆ, ಯಾರಿಗೇನು ಕಲಿಸ್ಲಿ” ಅಂದುಬಿಡ್ತಿದ್ದ.
ಈ ಸೂಫಿಯಲ್ಲಿ ಒಂದು ವಿಶೇಷ ಗುಣ ಇತ್ತು. ಅದೇನಪ್ಪಾ ಅಂದ್ರೆ, ಪ್ರತಿಯೊಂದನ್ನೂ ಗಮನವಿಟ್ಟು ನೋಡೋದು, ಕುತೂಹಲದಿಂದ ನೋಡೋದು. ಅವನ ನೋಟದಲ್ಲಿ ಇದನ್ನ ಸುಮಾರು ಸಲ ನೋಡಾಗಿದೆ, ಇದ್ನೇನು ನೋಡೋದು ಅನ್ನೋ ಉಡಾಫೆಯಾಗ್ಲೀ, ಅದೇನು ಅಂತ ನಂಗ್ ಗೊತ್ತಿದೆ ಅದಕ್ಯಾಕೆ ಗಮನ ಕೊಡ್ಬೇಕು ಅನ್ನೋ ಧೋರಣೆಯಾಗ್ಲೀ ಕಂಡಿದ್ದೇ ಇಲ್ಲ.
ಆ ರಾಜ್ಯದ ರಾಜಂಗೆ ಈ ಸೂಫಿ ಬಗ್ಗೆ ಆಸಕ್ತಿ ಕೆರಳ್ತು. ಆ ಸೂಫಿನ ಕರ್ಕೊಂಡ್ ಬನ್ನಿ ಅಂದ. ಆದ್ರೆ ಅವ ಬರ್ಲಿಲ್ಲ.
ಸರಿ ಇನ್ಮೇನ್ ಮಾಡೋದು ಅಂತ ರಾಜ ತಾನೇ ಸೂಫಿ ಹತ್ರ ಬಂದ. ಅವ್ನು ಬಂದಾಗ ಒಂದು ನಾಯಿ ಮುಂದೆ ಕೂತು "ಏಕತಾರಿ ಮೀಟ್ತಾ" ಹಾಡು ಹಾಡ್ತಿದ್ದ ಸೂಫಿ. ಅವ ಎದ್ದಿದ್ದು ಹಾಡು ಮುಗಿದ ಮೇಲೇನೇ.
ರಾಜನಿಗೆ ಸತ್ಕಾರ ಮಾಡಿ ಏನು ಬಂದಿದ್ದು ಅಂತ ವಿಚಾರಿಸಿದ. ರಾಜನಿಗೋ, ಈ ಸೂಫಿಯ ಗುರು ಯಾರು, ಇವ್ನಿಗೆ ದಾರಿ ತೋರಿಸಿದ್ದು ಯಾರು ಅನ್ನೋ ಕುತೂಹಲ. ಅದನ್ನೇ ಕೇಳಿದ.
‘ಈ ನಾಯಿ…ಸೂಫಿ ತನ್ನೆದುರು ತೂಕಡಿಸುತ್ತ ಕೂತಿದ್ದ ನಾಯಿನ ತೋರಿಸ್ತಾ ಹೇಳಿದ.
ರಾಜನಿಗೆ ಇವ್ನೆಲ್ಲೋ ನನ್ಗೆ ತಮಾಷೆ ಮಾಡ್ತಿರಬೇಕು, ಈ ಸೂಫಿ ಗೀಫಿಗಳೆಲ್ಲ ವಿಚಿತ್ರ ಮನುಷ್ಯರಂತೆ. ಇವ್ನೂ ಹಂಗೇ ಇರ್ಬೇಕು ಅಂದುಕೊಳ್ತಾ ‘ಆ!?’ ಅಂದ.
‘ಈ ನಾಯಿನೇ ನನ್ನ ಗುರು’ ಖಾತ್ರಿಪಡಿಸಿದ ಸೂಫಿ.
‘ಅದು ಹೇಗೆ? ಈ ನಾಯಿ ಏನು ಕಲಿಸ್ತು ನಿಂಗೆ?’ ರಾಜನ ಪ್ರಶ್ನೆ.
‘ಅವತ್ತೊಂದಿನ ಈ ನಾಯಿ ಕೊಳದ ಅಂಚಲ್ಲಿ ನಿಂತ್ಕೊಂಡು ತನ್ನ ಬಿಂಬ ನೋಡ್ಕೊಂಡು ನೀರಿಗಿಳಿಯೋಕೆ ಹೆದರಿಕೊಳ್ತಾ ಇತ್ತು. ತನ್ನದೇ ಪ್ರತಿಬಿಂಬ ನೋಡಿ ಬೇರೆ ಯಾವ್ದೋ ನಾಯಿ ಅಂದ್ಕೊಂಡು ಭಯ ಪಡ್ತಾ ಇತ್ತು. ಆದ್ರೆ ಕೊಳದಲ್ಲಿ ಅದರದೊಂದು ಮರಿ ಬಿದ್ದೋಗಿತ್ತು. ಈ ನಾಯಿ ಕೊಳಕ್ಕಿಳಿದು ಅದನ್ನ ಕಚ್ಕೊಂಡು ಬರ್ಲೇಬೇಕಿತ್ತು. ಕೊನೆಗೂ ಇದು ಧೈರ್ಯ ಮಾಡಿ ಕೊಳಕ್ಕೆ ಜಿಗಿದೇ ಬಿಡ್ತು. ಅದು ಜಿಗಿದ ಕೂಡ್ಲೇ ಪ್ರತಿಬಿಂಬಾನೂ ಮಾಯ, ಭಯಾನೂ ಮಾಯ! ಇದ್ರಿಂದ ನಾನು ಪಾಠ ಕಲಿತ್ಕೊಂಡೆ. ನಮಗೆ ನಾವೇ ಅಡ್ಡಿ. ನಾವು ಹೆಚ್ಚು ಭಯ ಪಡೋದು ನಮಗೇನೇ. ಒಂದು ಸಲ ಆ ಭಯ ದಾಟಿಬಿಟ್ರೆ ನಮ್ಮನ್ನ ಯಾರೂ ತಡೆಯೋಕಾಗಲ್ಲ’ ಅಂದ ಸೂಫಿ.
ಸೂಫಿ ಮಾತು ಕೇಳಿ ರಾಜ ಅವಾಕ್ಕಾದ. ಇಷ್ಟು ಚಿಕ್ಕ ಚಿಕ್ಕ ಸಂಗತಿಗಳಲ್ಲಿ ದೊಡ್ಡ ದೊಡ್ಡ ಪಾಠ ಕಾಣುವ ಈ ಮಹಾತ್ಮನ್ನ ದರ್ಬಾರಿನ ಗೋಡೆಗಳಲ್ಲಿ ಬಂಧಿಸೋಕೆ ಆಗಲ್ಲ ಅನ್ನೋದು ಅವನಿಗೆ ಮನದಟ್ಟಾಯ್ತು. ಕಾಣಿಕೆ ಸಲ್ಲಿಸಿ ರಾಜಧಾನಿಗೆ ವಾಪಸ್ ಹೋದ.
ನಮ್ಮದೇ ಅನುಮಾನದ ಬೇಲಿ ಧೈರ್ಯವಾಗಿ ದಾಟಿಬಿಟ್ರೆ ಮಿಕ್ಕಿದ್ದು ನಡೆದೇ ನಡೆಯುತ್ತೆ. ಕೆಲವೊಮ್ಮೆ ಪೂರ್ತಿ ಯಶಸ್ಸು ಕಾಣದಿದ್ರೂ ಪ್ರಯತ್ನ ಮಾಡಿದ ತೃಪ್ತಿಯಾದ್ರೂ ಇರುತ್ತೆ.
-ಚೇತನಾ ತೀರ್ಥಹಳ್ಳಿ