Thursday, March 5, 2026

 ಕಥೆ-1055

ಬಾಗುವುದೆಂದರೆ ಶರಣಾಗತಿಯಲ್ಲ


ಪಶ್ಚಿಮಘಟ್ಟಗಳ ಹಸಿರು ಒಡಲಿನಲ್ಲಿ ನದಿಯೊಂದು ಹುಟ್ಟಿ ಹರಿಯುತ್ತಿತ್ತು. ಹುಟ್ಟಿದಾಗಿನಿಂದಲೇ ಕೊಂಚ ರಭಸವಾಗಿ ಯಾವುದನ್ನೂ ಲೆಕ್ಕಿಸದೇ ಹರಿಯುತ್ತಿದ್ದ ನದಿಯದು. ತಿಳಿನೀರಿನ ಚುರುಕು ನದಿ ಬೆಟ್ಟದಿಂದ ರಭಸವಾಗಿ ಇಳಿದು ತನ್ನದೇ ಆದ ಜುಳುಜುಳು ನಿನಾದದೊಂದಿಗೆ ಸಾಗುತ್ತಿತ್ತು. ತಾನು ಬಲಶಾಲಿ, ತಾನು ಅತ್ಯಂತ ವೇಗದ ನದಿ, ಯಾರೂ ತನ್ನ ದಾರಿಗೆ ಅಡ್ಡ ಬರಲು ಸಾಧ್ಯವಿಲ್ಲ ಎಂದು ತನಗೆ ತಾನೇ ಹೇಳಿಕೊಂಡು ಹರಿಯುತ್ತಿತ್ತು. ಒಂದು ದಿನ ನದಿ ಹರಿಯುವಾಗ ಒಂದು ದೊಡ್ಡ ಬಂಡೆ ದಾರಿಗೆ ಅಡ್ಡವಾಗಿ ಬಿದ್ದಿತ್ತು. ಆ ಬಂಡೆ ಅಲ್ಲಿದ್ದು ಶತಮಾನಗಳೇ ಕಳೆದಿದ್ದವು. ಯಾವ ಮಳೆ, ಗಾಳಿ, ಸಮಯ ಅದನ್ನು ಏನೂ ಮಾಡಲು ಸಾಧ್ಯವಾಗಿರಲಿಲ್ಲ. ನದಿಗೋ ತನ್ನ ದಾರಿಗೆ ಅಡ್ಡಲಾಗುವ ಧೈರ್ಯ ಈ ಬಂಡೆಗೆಂಬ ಸಿಟ್ಟು. ದಾರಿ ಬಿಡು ಎಂದಿತು ನದಿ. ಬಂಡೆ ಅಲುಗಾಡಲಿಲ್ಲ. ಆದಷ್ಟೂ ಜೋರಾಗಿ ಬಂಡೆಗೆ ಅಪ್ಪಳಿಸಿತು ನದಿ. ಉಹೂಂ. ಬಂಡೆ ಜರುಗಲಿಲ್ಲ. ಮತ್ತೆ ಮತ್ತೆ ಅಪ್ಪಳಿಸಿದರೂ ಏನೂ ಪ್ರಯೋಜನವಾಗಲಿಲ್ಲ. ಇಡೀ ಕಣಿವೆ ಅಲ್ಲಾಡಿದರೂ ಬಂಡೆ ಒಂದಿಂಚೂ ಜರುಗಲಿಲ್ಲ. ನದಿಯ ನೀರು ಕೆಂಪಾಯಿತು. ನದಿ ದಣಿಯಿತು. ತಾನು ಯಾವ ಕಾರಣಕ್ಕೂ ಬಾಗುವುದಿಲ್ಲ ಎಂದು ನದಿ ತೀರ್ಮಾನಿಸಿಕೊಂಡಿತ್ತಲ್ಲ, ಹಾಗಾಗಿ ಅದು ಮತ್ತೆ ಮತ್ತೆ ಬಂಡೆಗೆ ಢಿಕ್ಕಿ ಹೊಡೆಯುತ್ತಲೇ ಇತ್ತು. ನದಿಯ ತಿಳಿನೀರನ್ನು ಕುಡಿಯುತ್ತಿದ್ದ ಪ್ರಾಣಿಗಳು ಬಾಯಾರಿದವು. 

ಒಂದು ಸಂಜೆ ನದಿಯೊಳಗಿನ ಪುಟ್ಟ ಮೀನೊಂದು ಮಾತಾಡಿತು. “ನೀನು ಬಹಳ ಗಟ್ಟಿಗಿತ್ತಿಯೇ. ಆದರೆ ಸಾಮರ್ಥ್ಯವೆಂದರೆ ಶಕ್ತಿ ಪ್ರದರ್ಶನ ಮಾತ್ರ ಎಂದು ನಿನಗೆ ಹೇಳಿದವರಾದರೂ ಯಾರು?” ಎಂದು ಕೇಳಿತದು. ಇನ್ನೇನು ಮತ್ತೊಮ್ಮೆ ಬಂಡೆಯನ್ನು ಗುದ್ದಲು ಹೋಗುತ್ತಿದ್ದ ನದಿ ಕೊಂಚ ತಡೆದು ಯೋಚಿಸಿತು. ಬಂಡೆಯನ್ನು ಎಚ್ಚರಿಕೆಯಿಂದ ನೋಡಿತು. ಅದೆಷ್ಟೋ ಕಾಲದಿಂದ ನೆಲಕ್ಕಂಟಿದ್ದ ಬಂಡೆಯದು. ಯಾವ ಕಾರಣಕ್ಕೂ ಅದನ್ನು ಅಲ್ಲಿಂದ ಕೀಳಲು ಸಾಧ್ಯವಿಲ್ಲವೆಂಬ ಸತ್ಯ ನದಿಗೆ ಹೊಳೆಯಿತು. ಸಣ್ಣ ನಿಟ್ಟುಸಿರಿಟ್ಟು ಮೀನಿಗೊಂದು ಧನ್ಯವಾದ ಹೇಳಿದ ನದಿ ಮೆಲ್ಲನೆ ಬಂಡೆಯನ್ನು ಎರಡೂ ತೋಳುಗಳಂತಹ ಅಲೆಗಳಿಂದ ಬಳಸಿತು. ಭೋರ್ಗರೆಯುತ್ತಿದ್ದ ನದಿ ಮೆಲ್ಲಗೆ ಹರಿಯತೊಡಗಿತು. 

ಕೆಲವೇ ವಾರದಲ್ಲಿ ವಾತಾವರಣ ತಿಳಿಯಾಯಿತು. ಸುತ್ತಲಿನ ಪ್ರಕೃತಿ ಹಸಿರು ಮುಕ್ಕಳಿಸಲಾರಂಭಿಸಿತು. ಪ್ರಾಣಿಗಳು ನೀರು ಕುಡಿದು ಚಿನ್ನಾಟವಾಡತೊಡಗಿದವು. ಹೊಸ ದಾರಿಯುದ್ದಕ್ಕೂ ಪುಟ್ಟ ಹಸಿರು ಹುಲ್ಲು ಚಿಗುರಿ ಬಣ್ಣ ಬಣ್ಣದ ಹೂಗಳು ಅರಳಿ ಪಾತರಗಿತ್ತಿಗಳು ವಾತಾವರಣವನ್ನು ಕಳೆಗಟ್ಟಿಸಿದವು. ಕಾಲಕಳೆದಂತೆ ನದಿಗೆ ಒಂದು ವಿಷಯ ಅರ್ಥವಾಯಿತು. ಬಂಡೆಗಲ್ಲನ್ನು ಬಳಸಿ ಮುಂದೆ ಬಂದಿದ್ದರಿಂದ ತಾನು ದುರ್ಬಲವಾಗಲಿಲ್ಲ, ಬದಲಾಗಿ ಮತ್ತಷ್ಟು ಬಲಶಾಲಿಯಾದೆ ಎಂಬುದು ಅದಕ್ಕೆ ಅರ್ಥವಾಯಿತು. ಎಲ್ಲ ಅಡೆತಡೆಗಳೂ ಸೋಲಿಸಲು ಇರುವುದಲ್ಲ, ಕೆಲವೊಂದು ನಮ್ಮನ್ನು ರೂಪುಗೊಳಿಸುತ್ತವೆ ಎಂದು ಸುತ್ತಲಿನ ಬೆಟ್ಟಗಳ ಹತ್ತಿರದ ಸಂಜೆಯ ಹರಟೆಯಲ್ಲಿ ನದಿ ಹೇಳಲಾರಂಭಿಸಿತು. ತನ್ನ ಕಣ್ಣು ತೆರೆಸಿದ ಪುಟಾಣಿ ಮೀನಿನ ಸಲಹೆಗೆ ಅದು ಯಾವಾಗಲೂ ಕೃತಜ್ಞವಾಗಿತ್ತು. 

ಅಹಂಕಾರದಿಂದ ಯಾವ ಪ್ರಯೋಜನವೂ ಇಲ್ಲ, ಬದಲಾಗಿ ಕೆಲವೊಮ್ಮೆ ಪರಿಸ್ಥಿತಿಗೆ ತಕ್ಕನಾಗಿ ಹೊಂದಿಕೊಳ್ಳುವುದರಿಂದ ಅನಾಹುತಗಳನ್ನು ತಪ್ಪಿಸಬಹುದು. ಸಮಸ್ಯೆಗಳನ್ನು ಶಕ್ತಿಯಿಂದ ಅಲ್ಲ ವಿವೇಚನೆಯಿಂದಲೂ ಪರಿಹರಿಸಬಹುದು. ಹೊಂದಿಕೊಳ್ಳುವುದು ನಮ್ಮ ಬಲಹೀನತೆಯಲ್ಲ, ಅದೇ ಕೆಲವೊಮ್ಮೆ ಸಾಮರ್ಥ್ಯವೂ ಹೌದು. 

-ದೀಪಾ ಹಿರೇಗುತ್ತಿ

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು