ಕಥೆ-1060
ಆರಡಿ ಭೂಮಿ ಮಾತ್ರ
https://basapurs.blogspot.com
ಲಿಯೋ ಟಾಲ್ ಸ್ಟಾಯ್ ರಷ್ಯಾದ ಶ್ರೀಮಂತ ಕುಟುಂಬವೊಂದರಲ್ಲಿ ಸುಮಾರು 200 ವರ್ಷಗಳ ಹಿಂದೆ ಜನಿಸಿದರು. ಬಾಲ್ಯದಲ್ಲೇ ತಂದೆ ತಾಯಿಯರನ್ನು ಕಳೆದುಕೊಂಡ ಅವರಿಗೆ ಕುಟುಂಬದ ಆಸ್ತಿ ಹಂಚಿಕೆಯಾದಾಗ ಮನೆತನದಿಂದ ಬಳುವಳಿಯಾಗಿ ಬಂದದ್ದು ಸುಮಾರು 5400 ಎಕರೆ ಭೂಮಿ, ಮತ್ತು 330 ಜೀತದಾಳುಗಳು.!
ಆದರೆ ಟಾಲ್ ಸ್ಟಾಯ್ ಅವೆಲ್ಲವನ್ನೂ ತ್ಯಜಿಸಿ ಸಾಮಾನ್ಯ ಕೃಷಿಕನಾಗಿ ಗ್ರಾಮೀಣ ಜನರ ಉದ್ಧಾರಕ್ಕಾಗಿ ಜೀವನವನ್ನೇ ಮುಡಿಪಾಗಿಟ್ಟರು, ಮುಂದೆ ಲೇಖಕನಾಗಿ ಜಗತ್ತಿನ ಅಸಂಖ್ಯಾತ ಶ್ರೀಮಂತರಿಗೆ ಹೇಗೆ ಬದುಕಬೇಕು? ಬದುಕಿನ ಅಂತಿಮ ಸತ್ಯವೇನು? ಎಂಬುದನ್ನು ಮನವರಿಕೆ ಮಾಡಿಕೊಟ್ಟರು.
ಅವರ "ಒಬ್ಬ ಮನುಷ್ಯನಿಗೆ ಎಷ್ಟು ಭೂಮಿ ಬೇಕು?" ಎಂಬ ಸಣ್ಣ ಕಥೆಯ ಸಾರಾಂಶ ಹೀಗಿದೆ.
ಕಥೆಯ ನಾಯಕ ಪಾಹೋಮ್ ಒಂದು ಹಳ್ಳಿಯಲ್ಲಿ ಸುಖೀ ಜೀವನ ನಡೆಸುತ್ತಿದ್ದ ರೈತ. ಅವನು ತನ್ನ ಬದುಕಿನ ಬಗ್ಗೆ ತೃಪ್ತನಾಗಿರುತ್ತಾನೆ, ಆದರೆ ಒಮ್ಮೆ "ನನ್ನ ಬಳಿ ಸಾಕಷ್ಟು ಭೂಮಿ ಇದ್ದರೆ ನಾನು ಸೈತಾನನಿಗೂ ಹೆದರುವುದಿಲ್ಲ" ಎಂದು ಅಂದುಕೊಳ್ಳುತ್ತಾನೆ. ಅವನ ಈ ಮಾತನ್ನು ಕೇಳಿದ ಸೈತಾನನು ಅವನಿಗೆ ಹೆಚ್ಚು ಹೆಚ್ಚು ಭೂಮಿಯ ಆಸೆ ತೋರಿಸಿ ಪರೀಕ್ಷಿಸಲು ನಿರ್ಧರಿಸುತ್ತಾನೆ.
ಪಾಹೋಮ್ ಹೊಸ ಹೊಸ ಜಾಗಗಳಿಗೆ ಹೋಗಿ ಭೂಮಿ ಖರೀದಿಸುತ್ತಾ ಶ್ರೀಮಂತನಾಗುತ್ತಾನೆ. ಆದರೂ ಅವನಿಗೆ ತೃಪ್ತಿ ಸಿಗುವುದಿಲ್ಲ. ಕೊನೆಗೆ ಅವನು ಬಶ್ಕಿರ್ ಎಂಬ ಜನರ ಪ್ರದೇಶಕ್ಕೆ ಹೋಗುತ್ತಾನೆ. ಅಲ್ಲಿನ ಮುಖ್ಯಸ್ಥ ಒಂದು ವಿಚಿತ್ರ ಆಫರ್ ನೀಡುತ್ತಾನೆ: "ಒಂದು ದಿನದಲ್ಲಿ ನೀನು ನಡೆದು ಗುರುತು ಹಾಕಿದಷ್ಟು ಭೂಮಿ ನಿನಗೆ ಸೇರುತ್ತದೆ. ಆದರೆ ಸೂರ್ಯ ಮುಳುಗುವ ಮೊದಲು ನೀನು ಎಲ್ಲಿಂದ ಹೊರಟಿದ್ದೆಯೋ ಅದೇ ಜಾಗಕ್ಕೆ ವಾಪಸ್ ಬರಬೇಕು.!"
ಹೆಚ್ಚು ಭೂಮಿಯನ್ನು ಪಡೆಯುವ ಆಸೆಯಿಂದ ಪಾಹೋಮ್ ಬಹಳ ದೂರ ಓಡುತ್ತಾನೆ. ಸೂರ್ಯ ಮುಳುಗುವ ಸಮಯ ಹತ್ತಿರವಾದದ್ದನ್ನು ಕಂಡು ಗಾಬರಿಯಿಂದ ವೇಗವಾಗಿ ತಾನು ಹಿಂದೆ ಆರಂಭಿಸಿದ ಜಾಗಕ್ಕೆ ಓಡಿ ಬಂದು ತಲುಪುತ್ತಾನೆ. ಆದರೆ ಅತಿಯಾದ ಆಯಾಸ ಮತ್ತು ಒತ್ತಡದಿಂದಾಗಿ ಅಲ್ಲಿಯೇ ಕುಸಿದು ಬಿದ್ದು ರಕ್ತ ವಾಂತಿ ಮಾಡಿಕೊಂಡು ಸಾಯುತ್ತಾನೆ. ಕೊನೆಯಲ್ಲಿ ಅವನ ಸೇವಕನು ಪಾಹೋಮ್‌ನನ್ನು ಹೂಳಲು ಒಂದು ಸಣ್ಣ ಗುಂಡಿ ತೋಡುತ್ತಾನೆ.
ಆಗ ಟಾಲ್ ಸ್ಟಾಯ್ ಹೇಳುವ ಮರ್ಮದ ಮಾತು:
"ಅವನಿಗೆ ಬೇಕಾಗಿದ್ದು ಕೇವಲ ಆರಡಿ ಭೂಮಿ ಮಾತ್ರ!" (ತನ್ನ ದೇಹವನ್ನು ಹೂಳಲು ಬೇಕಾದಷ್ಟು ಜಾಗ).
ಕೃಪೆ: ನೆಟ್