ಕಥೆ-615
ವಿಶ್ರಾಂತಿ
ಒಂದು ದಿನ "ನೀತಿ ಕಥೆಗಳ ಜನಕ" ಇಸೋಪನ ಮನೆಯ ಮುಂದೆ ಮಕ್ಕಳು ಆಟವಾಡುತ್ತಿದ್ದರು. ಇಸೋಪ ಮನೆಯಲ್ಲಿ ಏನನ್ನೋ ಓದುತ್ತಲೋ, ಬರೆಯುತ್ತಲೋ ಇದ್ದ. ಮಕ್ಕಳ ಕಿರಿಚಾಟ ಹೆಚ್ಚಾಯಿತು. ಗದ್ದಲ ತಾರಕ್ಕೇರಿತು. ಇಸೋಪನ ಮನೆಯಲ್ಲಿದ್ದ ತರುಣನೊಬ್ಬ ಹೊರಗೆ ಹೋಗಿ ಗದ್ದಲ ಮಾಡದಂತೆ ಇರಲು ಮಕ್ಕಳಿಗೆ ಹೇಳಿ ಗದರಿ ಬಂದ. ಸ್ವಲ್ಪ ಹೊತ್ತು ಶಾಂತಿ ನೆಲೆಸಿತು. ಮಕ್ಕಳು ಎಷ್ಟು ಹೊತ್ತು ಸಮ್ಮನಿದ್ದಾರು ? ಪಿಸ, ಪಿಸ, ಗುಸ, ಗುಸ ಮಾತು ಶುರುವಾಯಿತು. ಅದು ಮುಂದುವರೆದು ಆಟ ಪ್ರಾರಂಭವಾದಾಗ ಕದನ ಕೋಲಾಹಲ ಮುಗಿಲು ಮುಟ್ಟಿತು.
ಈಗ ಇಸೋಪ ತಾನೇ ಹೊರಗೆ ಹೋದ. ಮಕ್ಕಳನ್ನು ನೋಡಿ ನಕ್ಕ. ಹೆದರಿದ್ದ ಮಕ್ಕಳು ನಿರಾಳವಾದರು. ಅವರೂ ನಕ್ಕರು. 'ಯಾವ ಆಟ ಆಡುತ್ತಿದ್ದೀರಿ? ಎಂದು ಅವರನ್ನು ಕೇಳಿದ. ಆಟವನ್ನು ಕೇಳಿ ತಿಳಿದುಕೊಂಡು, 'ನಾನೂ ನಿಮ್ಮೊಡನೆ ಆಟಕ್ಕೆ ಬರಲೇ? ಎಂದು ಪ್ರಶ್ನಿಸಿದ. ಮಕ್ಕಳು ಖುಷಿಯಿಂದ ಒಪ್ಪಿಕೊಂಡರು. ಆಟ ಪ್ರಾರಂಭವಾಯಿತು. ಹತ್ತು ನಿಮಿಷಗಳಲ್ಲಿ ಇಸೋಪ ತನ್ನ ವಯಸ್ಸು ಮರೆತ, ತನ್ಮಯನಾಗಿ ಅವರೊಂದಿಗೆ ಮಗುವಾಗಿ ಆಟವಾಡತೊಡಗಿದ. ಮಕ್ಕಳಲ್ಲಿ ನಾವು ಮಗುವಾಗದೇ ಅವರ ಪ್ರಪಂಚವನ್ನು ಅರ್ಥಮಾಡಿಕೊಳ್ಳುವುದು ಸಾಧ್ಯವಿಲ್ಲ. ಈಗ ಇಸೋಪ ಗದ್ದಲ ಮಾಡುವವರಲ್ಲಿ ಪ್ರಮುಖನಾದ.
ಆ ಹೊತ್ತಿನಲ್ಲಿ ಹಿರಿಯರೊಬ್ಬರು ಅದೇ ಮಾರ್ಗವಾಗಿ ನಡೆದಿದ್ದರು. ಮಕ್ಕಳ ಗದ್ದಲ ಅವರ ಮನಸ್ಸನ್ನು ಆಕರ್ಷಿಸಿತು. ಕ್ಷಣಕಾಲ ನಿಂತು ನೋಡಿದಾಗ ಆಶ್ಚರ್ಯವಾಯಿತು! ಆ ಮಕ್ಕಳಿಗಿಂತ ಪುಟ್ಟ ಮಗುವಾಗಿ ಆಟವಾಡುತ್ತಿದ್ದ ಹಿರಿಯ ಇಸೋಪ ಅವರಿಗೆ ಇಸೋಪನ ಮೇಲೆ ಅಪಾರ ಗೌರವ. ಅವರು ಅಲ್ಲಿಯೇ ನಿಂತರು. ಆಟ ಮುಗಿಸಿ ಮುಖದ ತುಂಬೆಲ್ಲ ಸಂತೃಪ್ತಿಯನ್ನು ಹರಡಿಕೊಂಡು ಹೊರಬಂದ ಇಸೋಪನಿಗೆ ಕೈಮುಗಿದರು. ಅವನೂ ಪ್ರತಿಯಾಗಿ ವಂದಿಸಿದ. ನಂತರ ಹಿರಿಯರು ಕೇಳಿದರು, 'ನನಗಿದು ವಿಚಿತ್ರವಾಗಿ ಕಾಣುತ್ತಿದೆ. ತಮ್ಮಂತಹ ಜ್ಞಾನಿಗಳು ಈ ಪುಟ್ಟ ಮಕ್ಕಳೊಂದಿಗೆ ಹೀಗೆ ಆಟವಾಡಿ ಸಮಯವನ್ನು ಹಾಳು ಮಾಡಿಕೊಳ್ಳುತ್ತೀರಿ ಎಂದು ನಾನು ಎಣಿಸಿರಲಿಲ್ಲ'. ಆಗ ಇಸೋಪ ಮರುಮಾತನಾಡದೇ ತನ್ನ ಮನೆಯೊಳಗೆ ಹೋಗಿ ದಾರ ಬಿಗಿದು ಕಟ್ಟಿ ಮಣಿಸಿದ ಬಿದಿರನ ಬಿಲ್ಲನ್ನು ತಂದ. ಹಿರಿಯರ ಮುಂದೆ ಇಟ್ಟು ದಾರವನ್ನು ಬಿಚ್ಚಿ ಬಿದಿರನ್ನು ನೇರಮಾಡಿ ಇಟ್ಟುಬಿಟ್ಟ. ಆ ಹಿರಿಯ ಅರ್ಥವಾಗದೇ ಕಣ್ಣು ಬಿಟ್ಟ. ಆಗ ಇಸೋಪ ಹೇಳಿದ, 'ಸ್ವಾಮೀ, ಬಿದಿರಿನ ಬಿಲ್ಲನ್ನು ಸದಾ ಬಿಗಿದು ಕಟ್ಟಿಯೇ ಇದ್ದರೆ ಅದು ತನ್ನ ಬಿಗಿತವನ್ನು ಕಳೆದುಕೊಳ್ಳುತ್ತದೆ. ಸಡಿಲವಾಗುತ್ತದೆ. ಆದ್ದರಿಂದ ಅದನ್ನು ಆಗಾಗ ಬಿಚ್ಚಿ ನೇರವಾಗಿ ಇಟ್ಟಾಗ, ಅವಶ್ಯ ಬಿದ್ದಾಗ ಅದನ್ನು ಬಗ್ಗಿಸಿದಾಗ ಬಿಗಿ ಉಳಿಸಿಕೊಳ್ಳುತ್ತದೆ. ಉತ್ತಮ ಬಿಲ್ಲಾಗುತ್ತದೆ. ಮನುಷ್ಯರೂ ಹಾಗೆಯೇ. ಸದಾ ದುಡಿತದಲ್ಲಿ, ಚಿಂತನೆಯಲ್ಲಿ ತೊಡಗಿದರೆ ಮಿದುಳು ತನ್ನ ತೀಕ್ಷ್ಯತೆಯನ್ನು ಕಳೆದುಕೊಳ್ಳುತ್ತದೆ. ಅದಕ್ಕಾಗಿ ಆಗಾಗ ವಿರಮಿಸುವುದು ಕ್ಷೇಮ. ಮುಗ್ಧ ಮನಸ್ಸಿನ ಮಕ್ಕಳೊಂದಿಗೆ ಆಟವಾಡಿ ವಿಶ್ರಮಿಸುವುದು ಬುದ್ಧಿಯನ್ನು ಸದಾ ಸಿದ್ಧತೆಯಲ್ಲಿಡುವ ವಿಧಾನ'.
ದೇಹದಂತೆಯೇ ಮನಸ್ಸು ಬುದ್ದಿಗಳು ವಿಶ್ರಾಂತಿಯನ್ನಪೇಕ್ಷಿಸುತ್ತವೆ. ಈ ವಿಶ್ರಾಂತಿ ಅವುಗಳನ್ನು ಸದಾ ಹೊಸದಾಗಿರುವಂತೆ ಕಾಪಾಡುತ್ತದೆ.
-ಗುರುರಾಜ ಕರ್ಜಗಿ