Tuesday, May 2, 2023

 *ಒಂದು ಸ್ಪೂರ್ತಿದಾಯಕ ಕಥೆ*

ಹಿಂದೆ ಬಂಗಾಳ ಪ್ರಾಂತ್ಯದಲ್ಲಿ ತುಂಬಾ ಬರಗಾಲ ಬಂದಿತು. ಎರಡ್ಮೂರು ವರ್ಷಗಳಿಂದ ಮಳೆ ಕಡಿಮೆಯಾಗಿ, ಆಹಾರದ ಕೊರತೆಯಾಗಿತ್ತು. ಮತ್ತೆ ಈ ವರ್ಷವೂ ಹಾಗೆ ಆದುದರಿಂದ ಕುಡಿಯುವ ನೀರಿಗೂ ತತ್ವಾರ, ಆಹಾರ ಪದಾರ್ಥಗಳಿಗೂ ಅದ್ವಾನವಾಗಿ ಬಡಬಗ್ಗರೀಗಂತು ಒಪ್ಪತ್ತು ಗಂಜಿ ಸಿಗುವುದು ಕಷ್ಟವಾಯಿತು. ದುಡಿಯಲು ಕೆಲಸವಿಲ್ಲ, ಹೊಲಗದ್ದೆಗಳೆಲ್ಲ ಒಣಗಿಹೋಗಿವೆ, ಸ್ವಲ್ಪ ಸ್ಥಿತಿವಂತರು ಹೇಗೋ ಕಾಲ ಹಾಕುತ್ತಿದ್ದಾರೆ. 

ಆ ಪ್ರಾಂತ್ಯದ ಒಂದು ಪುಟ್ಟ ಹಳ್ಳಿಯಲ್ಲಿ, ಒಬ್ಬ ತಾಯಿ ಏಳೆಂಟು ವರ್ಷದ ಮಗ ವಾಸವಾಗಿದ್ದರು. ಮೊದಲೇ ಬಡವರು ಈಗಂತೂ ಕೇಳುವುದೇ ಬೇಡ. ಆ ತಾಯಿ ಕೂಲಿನಾಲಿ ಮಾಡಿ ಮಗನನ್ನು ಸಾಕುತ್ತಿದ್ದಳು. ಜೀವನಕ್ಕೆ ತೊಂದರೆ ಇರಲಿಲ್ಲ. ಆದರೆ ಈ ಬರಗಾಲದಿಂದಾಗಿ ಮನೆಯಲ್ಲಿ ಒಂದು ಕಾಳು , ದವಸ ಧಾನ್ಯಗಳು ಇಲ್ಲದೆ ಎರಡು ದಿನಗಳಾಗಿದೆ . ತಾಯಿಯಂತೂ ನಿತ್ರಾಣಳಾಗಿ ಮಲಗಿದವಳು ಎದ್ದಿಲ್ಲ. ಪಾಪ ಸಣ್ಣ ಹುಡುಗ, ಎರಡು ದಿನಗಳಿಂದ ಹೊರಗೆ ಹೋಗಿ ಅವರಿವರನ್ನು ಕೇಳಿದರೂ ಒಂದು ಪೈಸೆ ಸಿಕ್ಕಿಲ್ಲ. ಇವತ್ತು ಒಂದು ದಿನ ನೋಡಿ ಬರುತ್ತೇನೆ, ಮುಂದೆ ಭಗವಂತ ಇಟ್ಟ ಹಾಗೆ ಆಗಲಿ ಎಂದುಕೊಂಡು ಬಸ್ಸು ಬರುವ ಸ್ಥಳದತ್ತ ಹೋಗಿ ನಿಂತುಕೊಂಡು ದಯಮಾಡಿ ಯಾರಾದರೂ ಒಂದು ಆಣೆ ಕೊಡಿ ಮೂರು ದಿನದಿಂದ ಆಹಾರವಿಲ್ಲ ಎಂದು ಕೇಳುತ್ತಿದ್ದ. ನೋಡಿದವರೆಲ್ಲಾ ಹಾಗೆ ಹೋಗುತ್ತಿದ್ದರು. ಆದರೂ ಪ್ರಯತ್ನ ನಿಲ್ಲಿಸಿರಲಿಲ್ಲ.      

ಬಿಸಿಲಿಗೆ ಬಸವಳಿದು ಹತಾಶೆ ಎದ್ದುಕಾಣುತ್ತಿದೆ. ಆ ಸಮಯಕ್ಕೆ ಅಲ್ಲಿಗೊಬ್ಬ ಯುವಕ ಬಂದನು. ಈ ಹುಡುಗ ಅವರ ಹತ್ತಿರ ಸಾರ್ ಒಂದಾಣಿ ಕೊಡಿ ನಾನು ನಮ್ಮ ತಾಯಿ ಮೂರು ದಿನದಿಂದ ಏನೂ ತಿಂದಿಲ್ಲ ಎಂದು ಕೇಳಿದ. ಆಗ ಆ ತರುಣ , ಹುಡುಗನ ಮುಖ ನೋಡಿ ನೋಡು ಮಗು ನಾನು ನಿನಗೆ ಎರಡು ಆಣೆ ಕೊಡುತ್ತೇನೆ ಏನು ಮಾಡುತ್ತಿ ಎಂದರು. ಅದಕ್ಕೆ ಹುಡುಗ ಸಾರ್ ಒಂದು ಆಣೆಗೆ ನನಗೊಂದು, ನಮ್ಮ ತಾಯಿಗೊಂದು (ಬ್ರೆಡ್ ) ಬನ್ ತೆಗೆದುಕೊಂಡು ಇವತ್ತು ತಿನ್ನುತ್ತೇವೆ. ಇನ್ನೊಂದು ಆಣೆಗೆ ನಾಳೆಗೆ ಕೊಂಡುಕೊಳ್ಳುತ್ತೇನೆ ಎಂದಾಗ, ಆ ತರುಣನು ನಾಲ್ಕಾಣೆ ಕೊಟ್ಟರೆ ಏನು ಮಾಡುತ್ತಿ ಎಂದರು. ಸಾರ್ ಒಂದು ಆಣೆಗೆ ಎರಡು ಬನ್ನು, ಹಾಗೆ ಸ್ವಲ್ಪ ಹಾಲು ತೆಗೆದುಕೊಂಡು ನಮ್ಮ ತಾಯಿಗೂ ಕೊಟ್ಟು ನಾನು ಕುಡಿಯುತ್ತೇನೆ . ಉಳಿದ ಎರಡು ಆಣಿಗಳನ್ನು ಹಾಗೆ ಇಟ್ಟುಕೊಂಡು ಇನ್ನೊಂದು ದಿನಕ್ಕೆ ಬರಬಹುದು ಎಂದು ಯೋಚಿಸುತ್ತೇನೆ ಎಂದನು. ಕೂಡಲೆ ಆ ಯುವಕನು ಎಂಟು ಆಣಿ ಕೊಟ್ಟರೆ ಏನು ಮಾಡುತ್ತೀಯಾ? ಆಗ ಹುಡುಗ ಬೇಸರದಿಂದ ಸರ್ ನೀವು ಕೊಡದಿದ್ದರೂ ಪರವಾಗಿಲ್ಲ ನಾನು ಈಗಾಗಲೇ ನಿಲ್ಲಲಾರದಷ್ಟು ಸೋತಿದ್ದೇನೆ. ದಯವಿಟ್ಟು ಆಸೆ ತೋರಿಸಬೇಡಿ ಎಂದು ಕೈಮುಗಿದನು. ತಕ್ಷಣ ಆ ಯುವಕನು ಕ್ಷಮಿಸಿಬಿಡು ಮಗು ತಗೋ ಎಂದು ಒಂದು ರೂಪಾಯಿ ಕೊಟ್ಟು , ದೊಡ್ಡದಾದ ಎರಡು ಬಾಳೆಹಣ್ಣುಗಳನ್ನು ಕೊಟ್ಟರು, ಅದನ್ನು ನೋಡಿ ಹುಡುಗನು ಸಾರ್ ಎಂದು ಅಳುತ್ತಾ ಏನು ಹೇಳದೆ ಕಾಲಿಗೆ ನಮಸ್ಕರಿಸಿದನು. 

ಯುವಕನು ಬಸ್ಸು ಬಂತೆಂದು ಹೇಳಿ ಹೊರಟರು. ಹುಡುಗನು ಅವರು ಕೊಟ್ಟ ಹಣದಲ್ಲಿ , ಸ್ವಲ್ಪ ಹಾಲು ಬನ್ನು ತೆಗೆದುಕೊಂಡು ಮನೆಗೆ ಬಂದು ತಾನು ತಿಂದು ತಾಯಿಗೂ ಕೊಟ್ಟನು. ನಂತರ ಪಕ್ಕದ ಹಳ್ಳಿಯ ಸಂತೆಗೆ ಹೋಗಿ ನಾಲ್ಕಾಣೆಗೆ ಬರುವಷ್ಟು ಮಾವಿನ ಹಣ್ಣುಗಳನ್ನು ಕೊಂಡು ತಂದನು. ಜನಸಂದಣಿ ಇರುವ ಜಾಗದಲ್ಲಿ ಗುಡ್ಡೆಹಾಕಿಕೊಂಡು ಕುಳಿತನು. ಒಂದು ಹತ್ತು ನಿಮಿಷದಲ್ಲಿ ಎಲ್ಲಾ ಹಣ್ಣುಗಳು ಖಾಲಿಯಾಯಿತು ಕೈಗೆ ಎರಡಾಣಿ ಲಾಭ ಬಂದಿತು. ಮರುದಿನ ಬನ್ನು, ಹಾಲು ತಂದು ತಾಯಿಗೂ ಕೊಟ್ಟು, ತಾನು ತಿಂದು ಸಂತೆಗೆ ಹೋಗಿ ಎಂಟಾಣಿಗೆ ಮಾವಿನ ಹಣ್ಣು, ಬಾಳೆಹಣ್ಣು ತಂದನು. ಮತ್ತೆ ಅದೇ ರೀತಿ ಗುಡ್ಡೆಹಾಕಿ ಮಾರಲು ಕುಳಿತನು. ಒಂದು ಇಪ್ಪತ್ತು ನಿಮಿಷದಲ್ಲಿ ಎಲ್ಲವು ಖಾಲಿಯಾಗಿ ಕೈಗೆ ಮತ್ತಷ್ಟು ಲಾಭ ಬಂದಿತು. ಅದೇ ದಿನ ಮತ್ತೆ ಸಂತೆಗೆ ಹೋಗಿ ಮತ್ತಷ್ಟು ಹಣ್ಣುಗಳನ್ನು ತಂದು ಮಾರಿದನು ಮತ್ತೆ ನಾಲ್ಕು ಕಾಸು ಜಾಸ್ತಿ ಸಿಕ್ಕಿತು. ಒಂದು ಹೂತ್ತಿಗಾಗುವಷ್ಟು ಮನೆಗೆ ಅಕ್ಕಿ ಬೇಳೆ ಅಗತ್ಯ ಸಾಮಾನುಗಳನ್ನುಕೊಂಡೊಯ್ದು ತಾಯಿಗೆ ಕೊಟ್ಟನು.ಇಷ್ಟು ದಿನಗಳ ಮೇಲೆ ಒಲೆ ಹಚ್ಚಿ ಅಡುಗೆ ಮಾಡಿದಳು. ಇಬ್ಬರೂ ಹೊಟ್ಟೆ ತುಂಬಾ ಊಟ ಮಾಡಿದರು. ಹೀಗೇ ಸಂತೆಯಿಂದ ಹಣ್ಣುಗಳನ್ನು ತರುವುದು , ಮಾರುವುದು ಮಾಡಿ ಪುಟ್ಟದಾದ ಪೆಟ್ಟಿಗೆ ಅಂಗಡಿಯನ್ನು ಮಾಡಿದನು. ಕೆಲವೇ ತಿಂಗಳುಗಳಲ್ಲಿ ಸಾಕಷ್ಟು ಲಾಭವಾಗಿ, ಅಂಗಡಿ ಮಳಿಗೆಯನ್ನು ಬಾಡಿಗೆ ತೆಗೆದುಕೊಂಡನು. ತಾಯಿಯ ಆರೋಗ್ಯ ಸುಧಾರಿಸಿತು. ಅಮ್ಮನಿಗೆ, ಕೂಲಿ ಕೆಲಸಕ್ಕೆ ಹೋಗಬೇಡ ಮನೆಯಲ್ಲಿಯೇ ಇರುವಂತೆ ಹೇಳಿದನು. ಕ್ರಮೇಣ ದೊಡ್ಡ ಹಣ್ಣಿನ ಅಂಗಡಿಯ ಮಾಲೀಕನಾದನು. ಹಣ್ಣಿನ ವ್ಯಾಪಾರ ಶುರು ಮಾಡಿ ಇಪ್ಪತ್ತೈದು ವರ್ಷ ಕಳೆದಿದೆ. ಒಂದು ದಿನ ಹೀಗೆ ವ್ಯಾಪಾರ ಮಾಡುತ್ತಿರುವಾಗ ಅಂಗಡಿ ಮುಂದೆ ಒಂದು ಕಾರು ಬಂದು ನಿಂತಿತು. ಅದರಲ್ಲಿ ಕಪ್ಪು ಕನ್ನಡಕ , ಬಿಳೀ ಕಚ್ಚೆ ಪಂಚೆ ,ಜುಬ್ಬ ,ತೋಳಿಲ್ಲದ ಕೋಟು, ಧರಿಸಿದ್ದ ಸ್ವಲ್ಪ ವಯಸ್ಸಾದ ಶ್ರೀಮಂತರಂತೆ ಕಾಣುತ್ತಿದ್ದ ವ್ಯಕ್ತಿಯೊಬ್ಬರು ಕುಳಿತಿದ್ದು, ಕಾರಿನ ಕಿಟಕಿ ತೆರೆದು ಹಣ್ಣು ಮಾರುತ್ತಿದ್ದ ಯುವಕನನ್ನು ಹತ್ತಿರ ಕರೆದರು. ಅವನಿಗೆ ಕೆಲವೊಂದು ಹಣ್ಣುಗಳು ಬೇಕೆಂದು ತಿಳಿಸಿ ಪ್ಯಾಕ್ ಮಾಡಿ ತರಲು ಹೇಳಿದರು. ಯುವಕನು ಒಳ್ಳೆಯ ಹಣ್ಣುಗಳನ್ನೆಲ್ಲಾ ಆರಿಸಿ ಚೆನ್ನಾಗಿ ಪಟ್ಟಣ ಕಟ್ಟಿಕೊಂಡು ಕಾರಿನಲ್ಲಿ ಕುಳಿತಿದ್ದ ವ್ಯಕ್ತಿಗೆ ಕೊಟ್ಟನು. ಹಣ ಎಷ್ಣು ಎಂದು ಕೇಳಿದಾಗ ಬೇಡ ಸಾರ್ ಎಂದ. ಯಾಕೆ ಎಂದು ಕೇಳಿದಾಗ, ಸಾರ್ ಆಗಲೇ ನಿಮ್ಮ ಗುರುತು ನನಗೆ ಸಿಕ್ಕಿತು. ಈಗ್ಗೆ ಇಪ್ಪತ್ತು ವರ್ಷಗಳ ಹಿಂದೆ ಇಲ್ಲಿ ತುಂಬಾ ಬರಗಾಲ ಬಂದಿತ್ತು ಎಂದನು. ಆಗ ಕಾರಿನಲ್ಲಿದ್ದ ವ್ಯಕ್ತಿ ಹೌದು ನೆನಪಿದೆ ಎಂದರು. ತಕ್ಷಣ ಯುವಕ ಸಾರ್ ಆ ದಿನ ನೀವು ಹಸಿದಿದ್ದ ನನಗೆ ನನ್ನ ತಾಯಿಗೆ ಒಂದು ರೂಪಾಯಿ ಮತ್ತು ಎರಡು ಬಾಳೆಹಣ್ಣುಗಳನ್ನು ಕೊಟ್ಟಿದ್ದೀರಿ. ಆ ಹಣದಿಂದ ಈ ಮಟ್ಟಕ್ಕೆ ಬೆಳೆಯುವಷ್ಟು ಆಯಿತು. ಇಂದು ನಾವು ಬದುಕಿರುವುದು ನಿಮ್ಮ ದಯದಿಂದ , ನಮಗೆ ಬದುಕು ಕೊಟ್ಟ ಈ ಹಣ್ಣಿನ ಅಂಗಡಿ ನೀವು ಕೊಟ್ಟ ಒಂದು ರೂಪಾಯಿ ಹಣದಿಂದ ಆಗಿದ್ದು. ಅಂಗಡಿಗೆ ಬಂದು ನೋಡಿ, ಎಂದನು. ಆಗ ಆ ವ್ಯಕ್ತಿಗೆ ಹಿಂದಿನದೆಲ್ಲಾ ನೆನಪಾಯಿತು. ಅವನ ಜೊತೆ ಅಂಗಡಿಗೆ ಬಂದರು. ಅವರನ್ನು ಗೌರವದಿಂದ ಕೂರಿಸಿ ಹಣ್ಣಿನರಸ ಕುಡಿಯಲು ಕೊಟ್ಟನು. ಹಣ್ಣಿನ ರಸ ಕುಡಿದರು, ಯುವಕ ಬೇಡ ಎಂದರೂ, ತೆಗೆದುಕೊಂಡಿದ್ದ ಹಣ್ಣಿನ ಬೆಲೆಯನ್ನು ಕೊಟ್ಟು , ಇದು ನಾನು ನಿನಗೆ ಕೊಡುತ್ತಿರುವ ಬೆಲೆಯಲ್ಲ. ನಾನು ಕೊಟ್ಟ ಒಂದು ರೂಪಾಯಿಯಿಂದ ಶ್ರಮಪಟ್ಟು ಈ ಮಟ್ಟಕ್ಕೆ ಬೆಳೆದು ನಿಂತಿರುವುದಕ್ಕೆ , ನಿನ್ನ ಬುದ್ಧಿವಂತಿಕೆಗೆ ಸಂದ ಹಣ ಎಂದರು. ಆಗಲೇ ದೇಶದ ಮೂಲೆ, ಮೂಲೆಯಲ್ಲೂ ಅವರ ಹೆಸರು ಚಿರಪರಿಚಿತವಾಗಿತ್ತು. ಅವರಿಗೆ ನಮಸ್ಕರಿಸಿ, ಅವರ ಒಂದು ಫೋಟೋ ಕೇಳಿ ತೆಗೆದುಕೊಂಡು, ಕಾರಿನ ವರೆಗೂ ಹೋಗಿ ಬೀಳ್ಕೊಟ್ಟನು. ಅವರ ಫೋಟೋಗೆ ಚಂದದ ಕಟ್ಟು ಹಾಕಿಸಿ, ಹಣ್ಣಿನ ಅಂಗಡಿಗೆ ಬಂದವರಿಗೆಲ್ಲ ಕಾಣುವಂತೆ ಮೊಳೆ ಹೊಡೆದು ಸಿಕ್ಕಿಸಿದನು. 

ಆ ಮಹಾನ್ ವ್ಯಕ್ತಿ, ನವೋದಯ ಕಾಲಘಟ್ಟದ, ಸಮಾಜ ಸುಧಾರಕರು, ದೇಶಭಕ್ತರು, ಹೋರಾಟಗಾರರು, ಶಿಕ್ಷಣ ತಜ್ಞರು, ತತ್ವ ಜ್ಞಾನಿಗಳು, ಬರಹಗಾರರು, ದಾನಿಗಳು ಎಂಬ ಖ್ಯಾತಿಗೆ ಭಾಜನರಾಗಿದ್ದ , ಭಾರತದ ಹೆಮ್ಮೆಯ ಪುತ್ರ "ಬಂಗಾಲದ ಮಹಾಪುರುಷ ಪಂಡಿತ ಈಶ್ವರ ಚಂದ್ರ ವಿದ್ಯಾಸಾಗರ್" ರವರು ಆಗಿದ್ದರು. 

"ಜನನಿ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರಿಯಸಿ." 

ಕೃಪೆ,ಬರಹ: ಆಶಾ ನಾಗಭೂಷಣ

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು