ಧನಿಕನ ಅಹಂಕಾರ ಮುರಿದ ಬುದ್ಧ
ಬುದ್ಧನು ಒಂದು ದಿನ ಭಿಕ್ಷೆಗಾಗಿ ಒಬ್ಬ ಧನಿಕನ ಮನೆಗೆ ಹೋದ. ಸಿರಿತನದ ಅಹಂಭಾವದಿಂದ ಕೊಬ್ಬಿದ್ದ ಧನಿಕನು, ‘ಭಿಕ್ಷುವೇ, ನಿನಗೇನು ಬೇಕೋ ಕೋರಿಕೋ.! ಚಿನ್ನದ ನಾಣ್ಯಗಳೇ, ರತ್ನಾರಣಗಳೇ, ಹೊಟ್ಟೆ ತುಂಬ ಮೃಷ್ಟಾನ್ನದೂಟವೇ? ಏನು ಬೇಕಿದ್ದರೂ ಸಂಕೋಚವಿಲ್ಲದೆ ಕೇಳು, ಕೊಡುತ್ತೇನೆ’ ಎಂದ. ‘ನನಗೆ ಅಂಥ ಮಹತ್ತರವಾದ ಬೇಡಿಕೆಗಳು ಏನೂ ಇಲ್ಲ. ಆದರೂ ನಿನ್ನದು ಅಂತ ಇದ್ದರೆ ಏನಾದರೂ ಒಂದು ತಂದುಕೊಡು. ಅದನ್ನೇ ಸ್ವೀಕರಿಸುತ್ತೇನೆ’ ಬುದ್ಧ ಮುಗುಳ್ನಗುತ್ತ ಹೇಳಿದ. ‘ಇಲ್ಲಿರುವುದೆಲ್ಲ ನನ್ನದೇ ತಾನೆ! ಏನು ಬೇಕಿದ್ದರೂ ಕೊಡಬಲ್ಲೆ. ತೆಗೆದುಕೋ, ಈ ರತ್ನಖಚಿತ ಒಡವೆಯೊಂದನ್ನು ನಿನಗೆ ತಂದುಕೊಡುತ್ತೇನೆ’ ಧನಿಕ ಒಡವೆಯನ್ನು ಅವನೆದುರು ಚಾಚಿದ. ಆದರೆ ಬುದ್ಧ ಅದನ್ನು ಸ್ವೀಕರಿಸಲಿಲ್ಲ. ‘ಇದು ನಿನ್ನದು ಹೇಗಾಗುತ್ತದೆ? ಬಡವರಿಗೆ ಹಣ ಸಾಲ ಕೊಟ್ಟು ಬಡ್ಡಿ ವಿಧಿಸಿ ಅವರಿಂದ ಅದನ್ನು ಮರಳಿಸಲಾಗದೆ ಬಿಟ್ಟುಹೋದ ಒಡವೆ ಇದಲ್ಲವೆ? ನಿನ್ನದಲ್ಲದ್ದು ನನಗೂ ಬೇಡ’ ಎಂದು ನಿರಾಕರಿಸಿದ. ‘ಹೋಗಲಿ, ಪೆಟ್ಟಿಗೆ ತುಂಬ ಹಣ ಇದೆ. ಇದು ನನ್ನದೇ,ಇನ್ನೊಬ್ಬರದಲ್ಲ. ತೆಗೆದುಕೋ’ ಧನಿಕ ಹಣವನ್ನು ತಂದು ಬುದ್ಧನ ಎದುರಿಗಿರಿಸಿದ. ಬುದ್ಧ ಸಂತೃಪ್ತನಾಗಿರಲಿಲ್ಲ . ‘ಇದು ನಿನ್ನದಲ್ಲ. ಹಿರಿಯರು ಗಳಿಸಿಟ್ಟದ್ದು ನಿನ್ನದಾಗುವುದು ಹೇಗೆ? ನಿನ್ನದು ಮಾತ್ರ ನನಗೆ ಬೇಕು’ ಎಂದ ಆತ. ಧನಿಕನು ಒಂದೊಂದಾಗಿ ವಸ್ತುಗಳನ್ನು ತಂದು ಕೊಡುತ್ತಲೇ ಹೋದ. ಬುದ್ಧನು ಅದನ್ನು ತಿರಸ್ಕರಿಸುತ್ತಲೇ ಇದ್ದ. ಧನಿಕನಿಗೆ ಕೋಪ ಬಂತು. ಕೈಯೆತ್ತಿ ಬುದ್ಧನ ಕೆನ್ನೆಗೆ, ಬಲವಾಗಿ ಹೊಡೆದುಬಿಟ್ಟ. ಹೊಡೆತದಿಂದ ಬುದ್ಧನು ಒಂದು ಚೂರು ವಿಚಲಿತನಾಗಲಿಲ್ಲ. ‘ನಿಜ, ಇದು ನಿನ್ನದು ಕೋಪ. ಕೋಪ, ಕಾಮ, ಮದ, ಮೋಹ, ಲೋಭ ಮಾತ್ಸರ್ಯ ಮೊದಲಾದ ಆರು ಕೆಟ್ಟ ಗುಣಗಳು ನಿನ್ನಲ್ಲಿದ್ದರೆ, ಅದರಲ್ಲಿ ಒಂದನ್ನು ಈಗ ನನಗೆ ಕೊಟ್ಟಿದ್ದೀಯಾ.ಸಂತೋಷದಿಂದ ಅದನ್ನು ಸ್ವೀಕರಿಸಿದ್ದೇನೆ’ ಎಂದು ಶಾಂತಭಾವದಿಂದ ಆ ಮಾತು ಧನಿಕನ ಹೃದಯವನ್ನು ತಟ್ಟಿತು. ಮನಃಸಾಕ್ಷಿಯನ್ನು ಕೊರೆಯಿತು.ಏನೂ ಹೇಳಲಾಗದೆ ಅವನು, ‘ಅಯ್ಯೋ ಹೌದ! ಇದು ನನ್ನದೆಂದಾದರೆ “ನೀನು ನಿನ್ನದು ಅಂತ ನನಗೆ ಏನು ಕೊಡಬಲ್ಲೆ?,’ ಎಂದು ಕೇಳಿದ. ಮುಗುಳ್ನಗುತ್ತಲೇ ನುಡಿದ. ಅದೇ ಸುಪ್ರಸನ್ನತೆಯಲ್ಲಿ, ಬುದ್ಧ ಧನಿಕನನ್ನು ಹೂವಿನಂತೆ ತಬ್ಬಿ ಕೊಂಡ ಮಧುರವಾದ ಪ್ರೀತಿ ತುಂಬಿದ ಭಾವದಿಂದ ಆ ಧನಿಕ ಮನುಷ್ಯನಿಗೆ ಹೇಳಿದ , ‘ಒಬ್ಬ ಮನುಷ್ಯ ಇನ್ನೊಬ್ಬ ಮನುಷ್ಯನಿಗೆ ನನ್ನದು ಅಂತ ಕೊಡಲು ಅವನಲ್ಲಿರುವ ಶ್ರೇಷ್ಠವಾದ ವಸ್ತುವೆಂದರೆ ಪ್ರೀತಿ ಮಾತ್ರ. ನಿನಗೆ ನಾನು ಅದನ್ನು ಈಗ ಕೊಟ್ಟಿದ್ದೇನೆ’ ಎಂದ ಧನಿಕನಿಗೆ ತನ್ನ ವರ್ತನೆಗೆ ಪಶ್ಚಾತ್ತಾಪವಾಯಿತು. ಬುದ್ಧನ ಕ್ಷಮಾಗುಣ ಕಂಡು ಆತ ನಾಚಿದ. ಬುದ್ಧನ ಪಾದಗಳ ಮೇಲೆ ಶಿರವನ್ನಿರಿಸಿ ಅವನ ಅನುಯಾಯಿಯಾದ. ಸಂಪತ್ತನ್ನು ಬಡಬಗ್ಗರಿಗೆ ಹಂಚಿ ಬುದ್ಧನ ಪ್ರೀತಿಗೆ ಪಾತ್ರನಾದ..
ಕೃಪೆ: ಪ್ರದೀಪ್.ಕನ್ನಡ ಕವನಗಳು ವಾಟ್ಸ್ ಆ್ಯಪ್ ಗ್ರೂಪ್
No comments:
Post a Comment