Thursday, June 22, 2023

 *ಮಹಾರಾಜರು ತಿನ್ನುತ್ತಿದ್ದುದು ಮೃಷ್ಟಾನ್ನವೋ? ತಂಗಳನ್ನವೋ?*

ಮಹಾರಾಜರು ಏಕೆ ತಂಗಳನ್ನ ತಿನ್ನುತ್ತಿದ್ದರು ಎಂಬುದನ್ನು ಅರಿಯಲು ಇಲ್ಲಿರುವ ನಿಜಜೀವನದ ಪ್ರಸಂಗವನ್ನು ಓದಬೇಕು.

ಇಲ್ಲೊಂದು ಪ್ರೇಮ್ ಕಹಾನಿ ಇದೆ. ಆತ ಮಾಜಿ ಮಹಾರಾಜರ ಒಬ್ಬನೇ ಮಗ. ಆಗರ್ಭ ಶ್ರೀಮಂತ. ಆಕೆ ಬಡವರ ಮನೆಯ ಹೆಣ್ಣುಮಗಳು. ಅಪರೂಪದ ರೂಪವತಿ ಮತ್ತು ಒಳ್ಳೆಯ ವಿದ್ಯಾರ್ಥಿನಿ. ಕಾಲೇಜಿನಲ್ಲಿ ಕಂಡಾಕ್ಷಣವೇ ರಾಜಕುಮಾರ ಮರುಳಾದ. ಪ್ರೀತಿಸಿದ. ಮದುವೆಯ ಪ್ರಸ್ತಾಪವನ್ನೂ ಮಾಡಿದ. ಆದರೆ ಎರಡೂ ಕಡೆಯಿಂದ ವಿರೋಧಗಳು ಬಂದವು. ಆದರೆ ರಾಜಕುಮಾರ ಪಟ್ಟು ಹಿಡಿದದ್ದರಿಂದ ಮದುವೆ ನಡೆದೇ ಹೋಯಿತು. ಮದುವೆಗೆ ಮುಂಚೆ ಹುಡುಗಿಯ ತಂದೆ ‘ನಮ್ಮ ಮಗಳು ಬೆಳೆದು ಬಂದ ವಾತಾವರಣವೇ ಬೇರೆ. ಈಗ ಮಹಾರಾಜರ ಮನೆಗೆ ಸೇರಿದ ಮೇಲೆ ಆಕೆಯಿಂದ ಏನಾದರೂ ತಪ್ಪಾದರೆ, ಮಹಾರಾಜರು ಸಿಟ್ಟಿನಲ್ಲಿ ಏನೂ ಕ್ರಮ ತೆಗೆದುಕೊಳ್ಳಬಾರದು. ಆಕೆಯ ವಿವರಣೆ ಕೇಳಿ ನಂತರ ಕ್ರಮ ತೆಗೆದುಕೊಳ್ಳಬೇಕು’ ಎಂಬ ಷರತ್ತು ಹಾಕಿದ್ದರಂತೆ. ಹುಡುಗಿ ಬುದ್ಧಿವಂತೆಯಾದದ್ದರಿಂದ ಆಕೆ ಮಾವನ ಮನೆಯಲ್ಲಿ ಚೆನ್ನಾಗಿ ಹೊಂದಿಕೊಂಡಳು. ಎಲ್ಲವೂ ಚೆನ್ನಾಗಿಯೇ ನಡೆಯುತ್ತಿತ್ತು.

ಒಂದು ದಿನ ಮಹಾರಾಜರು ಊಟಕ್ಕೆ ಕುಳಿತಿದ್ದಾಗ ಸೊಸೆಯೇ ಬಡಿಸುತ್ತಿದ್ದಳು. ಬೇಸಿಗೆಯ ಮಧ್ಯಾಹ್ನ. ಬಿಸಿಬಿಸಿ ಮೃಷ್ಟಾನ್ನ ಭೋಜನ. ಮಹಾರಾಜರು ‘ಉಫ್ ಉಫ್’ ಎನ್ನುತ್ತ ಊಟವನ್ನು ಸವಿಯುತ್ತಿದ್ದರು. ಆಗ ಒಬ್ಬ ಭಿಕ್ಷುಕ ಅರಮನೆಯ ಮುಂದೆ ನಿಂತು ಗಟ್ಟಿಯಾಗಿ ಭಿಕ್ಷೆ ಬೇಡತೊಡಗಿದ. ‘ಅಮ್ಮಾ! ಹೊಟ್ಟೆ ಹಸಿವು. ಊಟದ ಸಮಯ. ಏನಾದರೂ ಕೊಡಿಯಮ್ಮ’ ಎಂದು ದೀನನಾಗಿ ಬೇಡಿದ. ಸೊಸೆಯ ಕರಳು ಚುರುಕ್ ಎಂದಿತು. ಆದರೆ ಮಾವನವರು ಬಿಸಿಯೂಟ ಸವಿಯುವುದರಲ್ಲಿ ಮಗ್ನರಾಗಿದ್ದರು. ಭಿಕ್ಷುಕನ ಬೇಡುವಿಕೆ ಅವರಿಗೆ ಕೇಳಿಸಿತೋ ಇಲ್ಲವೋ ಸೊಸೆಗೆ ಗೊತ್ತಾಗಲಿಲ್ಲ. ತಾನೇ ಮುಂದೆ ಹೋಗಿ ಭಿಕ್ಷೆ ಕೊಡುವುದು ಸರಿಯೋ, ತಪ್ಪೋ ಎನ್ನುವುದೂ ಗೊತ್ತಾಗಲಿಲ್ಲ. ಸುಮ್ಮನಿದ್ದಳು.

ಆದರೆ ಭಿಕ್ಷುಕ ದೀನಾತಿದೀನನಾಗಿ ಬೇಡುತ್ತಿದ್ದ. ಮಹಾರಾಜರಿಗೂ ಅದು ಕೇಳಿಸಿದ್ದರೂ ಅವರು ತಮ್ಮ ಊಟ ಸವಿಯುತ್ತಿದ್ದರು. ಭಿಕ್ಷುಕ ‘ಅಮ್ಮಾ! ಹಸಿವೆ ತಾಳಲಾರೆ. ಏನಾದರೂ ಕೊಡಿ. ಪುಣ್ಯ ಕಟ್ಟಿಕೊಳ್ಳಿ’ ಎನ್ನುತ್ತಲೇ ಇದ್ದ. ಕೊನೆಗೆ ಸೊಸೆಗೆ ತಡೆಯಲಾಗಲಿಲ್ಲ. ಆಕೆ ಭಿಕ್ಷುಕನೇ, ಮಹಾರಾಜರಾದ ನಮ್ಮ ಮಾವನವರೇ ನಿನ್ನೆ ಮೊನ್ನೆಯ ತಂಗಳು ತಿನ್ನುತ್ತಿದ್ದಾರೆ. ತಂಗಳು, ಮಹಾತ್ಮರಿಗೆ ಕೊಡಲು ಯೋಗ್ಯವಲ್ಲ. ಇಲ್ಲಿ ಎಲ್ಲರೂ ಕಿವುಡರು. ಮುಂದಕ್ಕೆ ಹೋಗಿ’ ಎಂದುಬಿಟ್ಟಳು. ಈ ಮಾತುಗಳನ್ನು ಕೇಳಿ ಮಹಾರಾಜರಿಗೆ ಸಿಟ್ಟು ಬಂತು. ‘ನಾನು ತಂಗಳು ತಿನ್ನುತ್ತಿದ್ದೇನೆ ಎಂದು ಅವಮಾನ ಮಾಡುತ್ತಿದ್ದೀಯೆ! ಅದೂ ಅಲ್ಲದೆ, ನಾನು ಕಿವುಡನೆಂದು ಏಕೆ ಹೇಳುತ್ತಿದ್ದೀಯೆ?’ ಎಂದು ರೇಗಾಡಿದರು.

ಸೊಸೆ ತಾಳ್ಮೆಯಿಂದ ‘ಇಂದು ನೀವು ತಿನ್ನುತ್ತಿರುವ ಮೃಷ್ಟಾನ್ನ ಭೋಜನ ನಿಮ್ಮ ತಂದೆ, ತಾತಂದಿರು ಮಾಡಿಟ್ಟ ಆಸ್ತಿಯ ಫಲ. ಅವರ ಪುಣ್ಯದ ಫಲ. ನೀವು ಈಗ ಏನೂ ದಾನಧರ್ಮ ಮಾಡುತ್ತಿಲ್ಲ. ಪುಣ್ಯದ ಗಳಿಕೆಯನ್ನೂ ಮಾಡುತ್ತಿಲ್ಲ. ಹಾಗಾಗಿ ಇದೆಲ್ಲ ತಂಗಳೇ ಅಲ್ಲವೇ? ನೀವು ಉಣ್ಣುವಾಗ ಭಿಕ್ಷುಕನ ಕೂಗು ಕೇಳಿಸಿದರೂ ಕೇಳಿಸದಂತಿದ್ದೀರಿ. ಅದಕ್ಕೇ ಕಿವುಡರು’ ಎಂದೆ ಎಂದು ಸುಮ್ಮನಾದಳು. ಸಿಟ್ಟಿನಿಂದ ಕೆಂಪಾಗಿದ್ದ ಮಹಾರಾಜರ ಮುಖ ನಿಧಾನವಾಗಿ ಬೆಳ್ಳಗಾಯಿತು.

ಬದುಕಿನಲ್ಲೂ ಇಂತಹ ಸಂದರ್ಭ ಎದುರಾಯಿತು ಎಂದುಕೊಳ್ಳೋಣ. ನಾವು ಆ ಮಹಾರಾಜರ ಜಾಗದಲ್ಲಿ ಇದ್ದಿದ್ದರೆ, ನಮ್ಮ ಪ್ರತಿಕ್ರಿಯೆ ಏನಿರುತ್ತಿತ್ತು? ಈಗ ನಾವೂ ಏನಾದರೂ ಪುಣ್ಯ ಗಳಿಸುತ್ತಿದ್ದೇವೆಯೋ ಅಥವಾ ತಂಗಳು ತಿನ್ನುತ್ತಿದ್ದೇವೆಯೋ ಯೋಚಿಸೋಣ! ನಾವು ಕಿವುಡರಂತೂ ಅಲ್ಲ ಎಂಬುದನ್ನು ತೋರಿಸಿಕೊಡುವುದು ಕಷ್ಟವೇನಲ್ಲ ಅಲ್ಲವೇ?

ಕೃಪೆ ಷಡಕ್ಷರಿ.ವಿಶ್ವ ವಾಣಿ.

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು