ಪರಿಪೂರ್ಣತೆಯತ್ತ ಸಾಗೋಣ.
ಕುದುರೆಯೊಂದು ಸುಂದರ, ಸುವಾಸನೆ ಬೀರುವ ಹೂಗಳನ್ನು ತುಂಬಿದ್ದ ಗಾಡಿಯನ್ನು ಎಳೆಯುತ್ತಿತ್ತು. ಗಾಡಿಯೊಳಗಿನ ಹೂಗಳ ಪರಿಮಳ ಮತ್ತು ಅತಿ ಭಾರವಿಲ್ಲದ ಗಾಡಿಯನ್ನು ಎಳೆಯುವಾಗ ಕುದುರೆ ಅತಿಯಾದ ಅಹಂನಿಂದ ಬೀಗುತ್ತಿತ್ತು. ಹೀಗೆಯೇ ದಾರಿ ಮಧ್ಯೆ ಬೀಗುತ್ತ ಸಾಗುತ್ತಿದ್ದ ಕುದುರೆ ಸೌದೆ ತುಂಬಿದ ಗಾಡಿಯನ್ನು ಎಳೆಯುತ್ತಿದ್ದ ಇನ್ನೊಂದು ಕುದುರೆಯನ್ನು ತಿರಸ್ಕಾರದಿಂದ ನೋಡಿ- ‘ನನ್ನನ್ನು ನೋಡು, ನನ್ನ ಸುತ್ತಮುತ್ತಲಿರುವಂಥ ಸುಗಂಧ ನಿನ್ನ ಬಳಿ ಇದೆಯೇ? ನಾನು ರಸ್ತೆ ತುಂಬ ಸುಗಂಧ ಬೀರುತ್ತಿದ್ದೇನೆ, ಎಳೆಯುವ ಕಸರತ್ತಿನ ಅನುಭವವೇ ಆಗುತ್ತಿಲ್ಲ. ಎಷ್ಟು ಹಗುರವಾಗಿದೆ ನನ್ನ ಗಾಡಿ’ ಎಂದು ಮೂದಲಿಸಿತು.
ಸೌದೆಗಳಿಂದ ಭಾರವಾಗಿದ್ದ ಗಾಡಿಯನ್ನು ಪ್ರಯಾಸದಿಂದ ಎಳೆಯುತ್ತಿದ್ದ ಕುದುರೆ ಪೆಚ್ಚು ಮೋರೆ ಹಾಕಿಕೊಂಡು ಹೋಯಿತು. ಇತ್ತ ಹೂವಿನ ಗಾಡಿಯ ಮಾಲೀಕ ಸಂತೆಯಲ್ಲಿ ಹೂಗಳನ್ನು ಮಾರಿ ಹಿಂದಿರುಗುವಾಗ ಗಾಡಿಯಲ್ಲಿ ಗೊಬ್ಬರ ತುಂಬಿಕೊಂಡು ಬಂದನು. ಈಗ ಮತ್ತೆ ದಾರಿಯಲ್ಲಿ ಸೌದೆ ಹೊತ್ತಿದ್ದ ಅದೇ ಕುದುರೆಯನ್ನು ಭೇಟಿ ಮಾಡಬೇಕಾಗಿ ಬಂದಾಗ ಅಹಂಕಾರದಿಂದ ಬೀಗಿದ್ದ ಕುದುರೆ ತಲೆತಗ್ಗಿಸಿತು.
ಇಂಥ ಅಹಂ ಪ್ರವೃತ್ತಿ ಮನುಷ್ಯರಲ್ಲಿ ಹೆಚ್ಚಾಗಿ ಕಾಣುತ್ತೇವೆ. ಜೀವನ ಎನ್ನುವುದೊಂದು ಚಕ್ರದ ರೀತಿ. ಮೇಲೆ ಹೋದವನು ಒಮ್ಮೆಯಾದರೂ ಕೆಳಗೆ ಬರಲೇಬೇಕು. ಆಗ ಮೇಲಿದ್ದವ ಕೆಳಗಿನವನನ್ನು ನೋಡಿ ಅಪಹಾಸ್ಯ ಮಾಡಬಾರದು. ಹಾಗೇ ಮಾಡಿದ್ದೇ ಆದಲ್ಲಿ ತನ್ನ ಜೀವನಬಂಡಿ ಕೆಳಗಿಳಿದಾಗ ಅವರನ್ನು ನೋಡಿ ತಲೆತಗ್ಗಿಸಬೇಕಾಗುವುದು ನಿಶ್ಚಿತ. ಇನ್ನೊಬ್ಬರನ್ನು ಹಿಂದಿನಿಂದ ನಿಂದಿಸಿದರೆ ಮುಂದೊಂದು ದಿನ ಅದೇ ಸ್ಥಿತಿ ನಾವು ಎದುರಿಸಬೇಕಾಗಿ ಬರಬಹುದು. ಆಗ ಅವಮಾನದಿಂದ ತಲೆ ತಗ್ಗಿಸಬೇಕಾಗಬಹುದು. ಮನುಷ್ಯನಲ್ಲಿರುವ ಅಹಂಕಾರ ಮತ್ತು ‘ನಾನು’ ಎನ್ನುವುದು ಮರದ ಒಳಗೆ ಸೇರಿರುವ ಗೆದ್ದಲು ಹುಳುವಿನ ತರಹ, ಇಂಚಿಂಚಲ್ಲೂ ಸೇರಿಕೊಂಡು ಸರ್ವನಾಶಕ್ಕೆ ಕಾರಣವಾಗುತ್ತದೆ. ಎದ್ದಾಗ ಬೀಗದೆ, ಬಿದ್ದಾಗ ಕುಗ್ಗದೆ ಪ್ರೌಢತೆಯಿಂದ ಸಮತೋಲನ ಕಾಯ್ದುಕೊಂಡು ಪರಿಪೂರ್ಣತೆಯಿಂದ ಬದುಕೋಣ.
ಕೃಪೆ:ರಾಗಿಣಿ.
No comments:
Post a Comment