ಒಳ್ಳೆಯ ಸಂಗತಿಗಳನ್ನು ಗಮನಿಸೋಣ*
ಮಾನವನ ಸಹಜಗುಣವೇ ಆಗಿ ಕುತೂಹಲ ಪ್ರವೃತ್ತಿ ನಮ್ಮೊಂದಿಗೇ ಇದೆ. ಅವರಿವರನ್ನು ನೋಡುವುದು, ಅವರ ಗುಣಗಳಿಗಿಂತ ಹೆಚ್ಚಾಗಿ ಅವಗುಣಗಳನ್ನು ಗುರುತಿಸುವುದು, ಅದರ ಬಗ್ಗೆ ಅವರಿವರ ಬಳಿ ಮಾತನಾಡೋದು… ಇವೆಲ್ಲವನ್ನು ಮೀರಲು ಕೆಲವರು ಇಷ್ಟಪಡುವುದಿಲ್ಲ. ಮತ್ತಿದು ಎಲ್ಲರಿಂದಲೂ ಸಾಧ್ಯವೂ ಇಲ್ಲ.
ಒಂದು ಕಾಡಿನಲ್ಲಿ ಒಬ್ಬ ಸನ್ಯಾಸಿ ಇದ್ದ. ಆತ ಸಾತ್ವಿಕನೇನೋ ನಿಜ. ಆದರೆ ಆತನಿಗೆ ಇನ್ನೊಬ್ಬರ ಜೀವನದ ಕುರಿತು ಕುತೂಹಲ ಜಾಸ್ತಿ. ಆತನ ಆಶ್ರಮದ ಎದುರೇ ಒಬ್ಬ ದರೋಡೆಕೋರ ಇದ್ದ. ಆತ ಸಂಪೂರ್ಣ ತಾಮಸಿ. ಸಂನ್ಯಾಸಿಗೆ ಈ ದರೋಡೆಕೋರನ ಕಳ್ಳತನ, ಇತರರನ್ನು ಹಿಂಸಿಸುವುದು, ಕೊಲೆ ಮಾಡುವ ಪ್ರವೃತ್ತಿ ಬಗ್ಗೆ ಕುತೂಹಲವಿತ್ತು. ಹಲವು ವರ್ಷಗಳ ನಂತರ ಈತ ಆ ದರೋಡೆಕೋರನನ್ನು ಕರೆದು- ‘ನೀನು ಮಾಡುತ್ತಿರುವುದು ತಪ್ಪು, ಇದರಿಂದ ನರಕ ಪ್ರಾಪ್ತಿಯಾಗುತ್ತದೆ’ ಎಂದು ಹೇಳಿದನಲ್ಲದೆ, ‘ಜೀವ ಕೊಡಲು ಸಾಧ್ಯವಿಲ್ಲದವರು ಜೀವ ತೆಗೆಯುವುದು ಸರಿಯಲ್ಲ’ ಎಂದು ಉಪದೇಶ ಮಾಡಿದ. ಅಲ್ಲದೆ ಪಾಪ-ಪುಣ್ಯಗಳ ಬಗ್ಗೆ ಮನವರಿಕೆ ಮಾಡಿದ. ಪುರಾಣ ಕತೆಗಳ ಮೂಲಕ ವಿವೇಕ ಮೂಡಿಸಿದ. ತಾನು ಅಲ್ಲಿಯವರೆಗೆ ಮಾಡುತ್ತಿದ್ದ ತಪ್ಪಿನ ಅರಿವಾಗಿ ದರೋಡೆಕೋರ ಕಣ್ಣೀರು ಸುರಿಸಿದ. ಸನ್ಯಾಸಿಯ ಕಾಲಿಗೆರಗಿ, ದೇವರ ಪಾದಕ್ಕೆರಗಿ ತಾನು ಬದಲಾಗುತ್ತೇನೆಂದು ಪ್ರಮಾಣ ಮಾಡಿದ. ಮುಂದೆ ಅದರಂತೇ ನಡೆಯಲು ಪ್ರಾರಂಭಿಸಿದ. ಆದರೆ ಸನ್ಯಾಸಿಗೆ ಮಾತ್ರ ಅನುಮಾನ. ತಾನು ಹೇಳಿದ್ದನ್ನು ಪಾಲಿಸುತ್ತಿದ್ದಾನೋ ಇಲ್ಲವೋ ಎಂದು ಆತನನ್ನು ಗಮನಿಸಲು ಪ್ರಾರಂಭಿಸಿದ. ಕಾಲ ಉರುಳಿತು. ಸನ್ಯಾಸಿ ಮತ್ತು ಮಾಜಿ ದರೋಡೆಕೋರ ಇಬ್ಬರೂ ಒಂದೇ ದಿನ ನಿಧನರಾದರು.
ಆಶ್ಚರ್ಯ ಎನ್ನುವಂತೆ ಸನ್ಯಾಸಿಯನ್ನು ಯಮದೂತರು ನರಕದೆಡೆಗೆ ಕೊಂಡೊಯ್ಯಲು ಮುಂದಾದರು. ಮಾಜಿ ದರೋಡೆಕೋರನನ್ನು ಸ್ವರ್ಗದ ಕಡೆ ಕೊಂಡೊಯ್ಯಲು ಸಿದ್ಧರಾದರು. ಸನ್ಯಾಸಿಗೆ ಭಾರಿ ಆಶ್ಚರ್ಯ. ‘ಇದೇಕೆ ಹೀಗೆ’ ಎಂದು ಪ್ರಶ್ನಿಸಿದ. ಅದಕ್ಕೆ ಬಂದ ಉತ್ತರ ಅನುಪಮವಾದುದಾಗಿತ್ತು. ‘ನೋಡು ಸನ್ಯಾಸಿ, ಆ ದರೋಡೆಕೋರನಿಗೆ ತಾನು ಮಾಡುವುದು ತಪ್ಪು ಅಂತ ಗೊತ್ತೇ ಇರಲಿಲ್ಲ. ಯಾವಾಗ ಆತನನ್ನು ಕರೆದು ಬುದ್ಧಿ ಹೇಳಿದೆಯೋ ಅಂದಿನಿಂದ ಆತ ಜ್ಞಾನೋದಯವಾದ ಕಾರಣ ಸಂಪೂರ್ಣ ಬದಲಾದ. ಆದರೆ ನೀನು ಮಾತ್ರ ನಿನ್ನ ಕರ್ತವ್ಯ ಬಿಟ್ಟು ಆತನ ಬಗ್ಗೆಯೇ ಕುತೂಹಲ ಹೆಚ್ಚಿಸಿಕೊಂಡು ನಿನ್ನ ಕರ್ತವ್ಯದಲ್ಲಿ ಲೋಪಮಾಡಿದೆ. ಹಾಗಾಗಿ ಆತನಿಗೆ ನೇರ ಸ್ವರ್ಗ, ನಿನಗೆ ನರಕ’ ಈ ಉತ್ತರದಿಂದ ಸಂlನ್ಯಾಸಿ ಮೌನಿಯಾದ.
ನಾವು ಹುಡುಕುತ್ತ ಹೋದರೆ ನಮಗೆ ನಕಾರಾತ್ಮಕ ಸಂಗತಿಗಳು ತುಂಬ ಕಾಣಬಹುದು.
ಧರ್ಮರಾಯನಿಗೆ ಹಸ್ತಿನಾಪುರದಲ್ಲಿ ಯಾರೂ ಕೆಟ್ಟವರು ಕಾಣಲಿಲ್ಲ. ದುರ್ಯೂೕಧನನಿಗೆ ಯಾರೂ ಒಳ್ಳೆಯವರು ಕಾಣಲಿಲ್ಲ.
ನಾನೂ ಚಂದ, ಪ್ರಪಂಚವೂ ಚಂದ ಎನ್ನುವುದು ಶ್ರೇಷ್ಠ ಮನೋಭಾವ. ಆ ಹಂತ ತಲುಪಲು ಸ್ಥಿತಪ್ರಜ್ಞ ಬದುಕು ಸಾಗಿಸಬೇಕು. ಕೃಪೆ: ರೇಖಾ ನಾಗರಾಜರಾವ್.
No comments:
Post a Comment