Wednesday, August 16, 2023

 ಮಾತಿನ ಮಾಣಿಕ್ಯದ ದೀಪ್ತಿ!

ಮಾಣಿಕ್ಯದ ದೀಪ್ತಿಯಂಥ ಮೂರು ಮಾತುಗಳಿಂದ ಕಳ್ಳನೊಬ್ಬನ ಬದುಕು ಬದಲಾದ ಪವಾಡಸದೃಶ ಜೆನ್ ಕತೆಯೊಂದು ಇಲ್ಲಿದೆ! ಶತಮಾನಗಳ ಹಿಂದೆ ಜಪಾನಿನಲ್ಲಿ ಒಬ್ಬ ಜೆನ್ ಗುರುಗಳಿದ್ದರು. ಸಣ್ಣದೊಂದು ಕುಟೀರದಲ್ಲಿ ವಾಸವಿದ್ದವರು. ಸದಾ ಅಧ್ಯಯನ ಮತ್ತು ಧ್ಯಾನಮಗ್ನರು. ಒಂದು ರಾತ್ರಿ ಅವರು ಅಧ್ಯಯನದಲ್ಲಿದ್ದಾಗ ಕುಟೀರದೊಳಕ್ಕೆ ಒಬ್ಬ ಕಳ್ಳ ನುಗ್ಗಿದ. ಆತ ಕೈಯಲ್ಲಿದ್ದ ಕತ್ತಿಯಿಂದ ಗುರುಗಳ ಎದೆಗೆ ತಾಕಿಸಿ ‘ನಿಮ್ಮಲಿರೋ ಹಣವನ್ನೆಲ್ಲ ಕೊಟ್ಟುಬಿಡಿ. ಇಲ್ಲದಿದ್ದರೆ ನಿಮ್ಮನ್ನು ಕೊಂದು ಹಾಕುತ್ತೇನೆ’ ಎಂದು ಅಬ್ಬರಿಸಿದ. ಗುರುಗಳು ಪುಸ್ತಕದಿಂದ ತಲೆಯೆತ್ತಿ ನೋಡಲಿಲ್ಲ. ಶಾಂತವಾದ ದನಿಯಲ್ಲಿ ‘ತಮ್ಮಾ! ನಿನಗೆ ಕಾಣುವುದಿಲ್ಲವೇ? ನಾನು ಓದಿನಲ್ಲಿ ಮಗ್ನನಾಗಿದ್ದೇನೆ.

ನಿನಗೆ ಬೇಕಿರುವುದು ಹಣವಲ್ಲವೇ? ಆ ಮೇಜಿನ ಮೇಲೆ ಹಣವಿದೆ. ಅದನ್ನು ತೆಗೆದುಕೊಂಡು ಹೋಗು. ನನ್ನ ಓದಿಗೆ ಭಂಗ ತರಬೇಡ’ ಎಂದರು. ಆಶ್ಚರ್ಯಗೊಂಡ ಕಳ್ಳ ಕತ್ತಿಯನ್ನು ಎತ್ತಿಟ್ಟುಕೊಂಡ. ಮೇಜಿನ ಮೇಲಿದ್ದ ನಾಣ್ಯಗಳನ್ನೆಲ್ಲಾ ಬಾಚಿಕೊಂಡ. ಆಗಲೂ ಗುರುಗಳು ತಲೆಯೆತ್ತದೆಯೇ ‘ಎಲ್ಲವನ್ನೂ ತೆಗೆದುಕೊಂಡು ಹೋಗಬೇಡಯ್ಯಾ. ನಾಳೆ ನನಗೆ ಕಂದಾಯ ಕಟ್ಟಬೇಕಿದೆ. ಅದಕ್ಕೆ ಹತ್ತು ನಾಣ್ಯಗಳು ಬೇಕು. ಅಷ್ಟನ್ನು ಅಲ್ಲಿಟ್ಟು ಉಳಿದುದನ್ನು ತೆಗೆದುಕೊಂಡು ಹೋಗು. ನಾನೇ ಅದನ್ನು ನಿನಗೆ ಕೊಡುತ್ತಿದ್ದೇನೆಂದು ತಿಳಿದುಕೋ’ ಎಂದರು.

ಕಳ್ಳನಿಗೆ ಮತ್ತೂ ಆಶ್ಚರ್ಯ. ಕತ್ತಿಗೆ ಹೆದರದ, ಮಾಡುತ್ತಿದ್ದ ಕೆಲಸದಿಂದ ವಿಮುಖರಾಗದ, ಕಳ್ಳನಿಗೂ ಧಾರಾಳವಾಗಿ ಕೊಡುವ, ನಾಳೆ ಕಟ್ಟಬೇಕಾಗಿದ್ದ ಕಂದಾಯದ ಜವಾಬ್ದಾರಿಯನ್ನೂ ಮರೆಯದ ಇಂಥ ವ್ಯಕ್ತಿಯನ್ನು ಕಳ್ಳ ತನ್ನ ಜೀವಮಾನದಲ್ಲೇ ಕಂಡಿರಲಿಕ್ಕಿಲ್ಲ. ಆಶ್ಚರ್ಯದಿಂದ ಆತ ಮೂಕನಾಗಿಬಿಟ್ಟಿದ್ದ! ಆತ ನಿಶ್ಶಬ್ದವಾಗಿ ನಾಣ್ಯಗಳನ್ನು ಎತ್ತಿಕೊಂಡು ಹೊರಟ. ಆಗ ಗುರುಗಳು ಅವನತ್ತ ತಲೆಯೆತ್ತಿ ನೋಡದೆಯೇ ‘ನೀನು ಕಳ್ಳನಿರಬಹುದು. ಆದರೆ ಯಾರಾದರು ಏನನ್ನಾದರು ಕೊಟ್ಟಾಗ ಅವರಿಗೆ ಧನ್ಯವಾದಗಳನ್ನು ಹೇಳುವ ಸಭ್ಯತೆ ಕಲಿತುಕೋ. ನಾನೀಗ ನನ್ನೆಲ್ಲಾ ನಾಣ್ಯಗಳನ್ನು ಕೊಟ್ಟಿದ್ದೇನೆ. ಧನ್ಯವಾದಗಳನ್ನು ಹೇಳಿ ಹೋಗು’ ಎಂದರು. ಕಳ್ಳ ತಡವರಿಸುತ್ತ ‘ಧ..ಧ..ಧನ್ಯವಾದಗಳು..’ ಎಂದು ಹೇಳಿ ಅಲ್ಲಿಂದ ಕಾಲ್ಕಿತ್ತ!

ಆದರೆ ಅದಾದ ಸ್ವಲ್ಪ ದಿನಗಳಲ್ಲಿ ಕಳ್ಳ ರಾಜಭಟರ ಕೈಗೆ ಸಿಕ್ಕಿಬಿದ್ದ. ಕದ್ದ ಮಾಲುಗಳೊಂದಿಗೆ ಆತನನ್ನು ನ್ಯಾಯಾಲಯದಲ್ಲಿ ಹಾಜರು ಪಡಿಸಲಾಯಿತು. ನ್ಯಾಯಾಲಯದಲ್ಲಿ ಸಾಕ್ಷಿ ನುಡಿಯಲು ಕಳ್ಳನು ಎಲ್ಲೆಲ್ಲಿ ಕಳ್ಳತನ ಮಾಡಿದ್ದನೋ ಆ ಮನೆಗಳವರನ್ನೆಲ್ಲಾ ಕರೆಸಲಾಗಿತ್ತು. ಹಾಗೆಯೇ ಜೆನ್ ಗುರುಗಳನ್ನೂ ಕರೆಸಲಾಗಿತ್ತು. ನ್ಯಾಯಾಲಯದಲ್ಲಿ ಒಂದೊಂದು ಮನೆಯವರೂ ಕಳ್ಳನ ವಿರುದ್ಧ ಬಲವಾದ ಸಾಕ್ಷ್ಯಗಳನ್ನು ಹೇಳಿದರು. ಗುರುಗಳ ಸರತಿ ಬಂದಾಗ ಅವರು ‘ಆತ ನನ್ನಿಂದ ಏನೂ ಕದಿಯಲಿಲ್ಲ. ನಾನೇ ಆತನಿಗೆ ಹಣವನ್ನು ಕೊಟ್ಟೆ.ಆತ ಅದನ್ನು ಸ್ವೀಕರಿಸಿ ನನಗೆ ಧನ್ಯವಾದಗಳನ್ನೂ ಹೇಳಿ ಹೋದ’ ಎಂಬ ಮೂರೇ ಮಾತುಗಳ ಸಾಕ್ಷ್ಯ ಹೇಳಿದರು. 

ಅದರೆ ಉಳಿದ ಮನೆಯವರು ಹೇಳಿದ ಸಾಕ್ಷಿಗಳ ಆಧಾರದಲ್ಲಿ ಕಳ್ಳನಿಗೆ ಶಿಕ್ಷೆಯಾಯಿತು. ಆತ ಸೆರೆಮನೆಗೆ ದೂಡಲ್ಪಟ್ಟ. ಈ ಕತೆ ಇಲ್ಲಿಗೆ ಮುಗಿಯಲಿಲ್ಲ! ಕತೆಗೊಂದು ವಿಚಿತ್ರ ತಿರುವು ಬರುವುದು ಈಗ! ಸೆರೆಮನೆಯ ಶಿಕ್ಷೆ ಅನುಭವಿಸಿ, ಮುಗಿಸಿದ ನಂತರ ಕಳ್ಳ ಓಡಿ ಬಂದದ್ದು ಎಲ್ಲಿಗೆ ಗೊತ್ತೆ? ಆತ ಜೆನ್ ಗುರುಗಳ ಆಶ್ರಮಕ್ಕೆ ಧಾವಿಸಿದ. ಗುರುಗಳಿಗೆ ಶರಣಾದ. ತನ್ನ ಬದುಕನ್ನು ಬದಲಾಯಿಸಿಕೊಳ್ಳಲು ಗುರುಗಳ ಸಹಾಯ ಕೇಳಿಕೊಂಡ. ಗುರುಗಳು ಆತನನ್ನು ಶಿಷ್ಯನನ್ನಾಗಿ ಸ್ವೀಕರಿಸಿದರು.

ಆತನಿಗೆ ಶಿಷ್ಯತ್ವದ ದೀಕ್ಷೆ ಕೊಟ್ಟರು. ಧರ್ಮದ ಬೋಧನೆ ಮಾಡಿದರು. ಹಲವಾರು ವರ್ಷಗಳ ಸಾಧನೆಯ ನಂತರ ಆತನೂ ಒಬ್ಬ ಜೆನ್ ಭಿಕ್ಷುವಾಗಿಬಿಟ್ಟ!

 ನೂರಾರು ಕಾನೂನುಗಳೂ, ಸೆರೆಮನೆಯ ಶಿಕ್ಷೆಗಳೂ ತರಲಾಗದ ಬದಲಾವಣೆಗಳನ್ನು ಒಬ್ಬ ಕರುಣಾಮಯಿ ಗುರುಗಳ ಮೂರು ಮಾಧುರ್ಯ ತುಂಬಿದ ಮಾತುಗಳು ತಂದಿದ್ದವು! ಇದೇ...ಮಾತಿನ ಮಾಣಿಕ್ಯದ ದೀಪ್ತಿ! ಕೃಪೆ: ಅಂತರ್ಜಾಲ.

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು