ಭಾರತೀಯ ಚೆಸ್ ನ ಭರವಸೆ ಪ್ರಜ್ಞಾನಂದ..
ಚೆಸ್ ವಿಶ್ವಕಪ್ ಮುಕ್ತಾಯಗೊಂಡಿದೆ. ನಾರ್ವೆಯ ಮ್ಯಾಗ್ನಸ್ ಕಾರ್ಲ್‌ಸನ್ ಚಾಂಪಿಯನ್ ಆಗಿದ್ದರೆ, ಭಾರತದ ಕಿರಿಯ ಆಟಗಾರ ಆರ್ ಪ್ರಜ್ಞಾನಂದ ರನ್ನರ್ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ ಆದರೆ ಇಬ್ಬರಿಗೂ ಸಿಕ್ಕಿರುವ ಬಹುಮಾನ ಮೊತ್ತ ಎಷ್ಟು?
ಚೆಸ್ ವಿಶ್ವಕಪ್ ಫೈನಲ್ನಲ್ಲಿ ಭಾರತದ ಕಿರಿಯ ಗ್ರ್ಯಾಂಡ್ ಮಾಸ್ಟರ್ ಆರ್ ಪ್ರಜ್ಞಾನಂದ ವಿರುದ್ಧ ವಿಶ್ವದ ನಂಬರ್ 1 ಶ್ರೇಯಾಂಕಿತ ನಾರ್ವೆ ದೇಶದ ಮ್ಯಾಗ್ನಸ್ ಕಾರ್ಲ್‌ಸನ್ ಜಯಭೇರಿ ಬಾರಿಸಿದ್ದಾರೆ. ಅಜರ್ಬೈಜಾನ್ನ ಬಾಕುವಿನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಜರುಗಿದ ಫಿಡೆ ಚೆಸ್ ವಿಶ್ವಕಪ್ನಲ್ಲಿ 18ರ ವಿರೋಚಿತ ಸೋಲು ಕಂಡರೂ ಭಾರತೀಯ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.
ಟೈ ಬ್ರೇಕರ್‌ನ ಮೊದಲ ಗೇಮ್ನಲ್ಲಿ 1-0ರಲ್ಲಿ ಮುನ್ನಡೆ ಸಾಧಿಸಿದ್ದ ಕಾರ್ಲಸನ್, 2ನೇ ಗೇಮ್ನಲ್ಲಿ ಡ್ರಾ ಸಾಧಿಸಿದರು. ಪರಿಣಾಮ ಚೊಚ್ಚಲ ವಿಶ್ವಕಪ್ ಚಾಂಪಿಯನ್ ಪಟ್ಟ ಅಲಂಕರಿಸಿದರು. ಆದರೆ 2000, 2002ರ ನಂತರ ಭಾರತಕ್ಕೆ ಚೆಸ್ ವಿಶ್ವಕಪ್ ಕೊಡುವ ಹೋರಾಟದಲ್ಲಿ ಆರ್ ಪ್ರಜ್ಞಾನಂದ ಹೋರಾಡಿ ಸೋತರು. ದಿಗ್ಗಜ ಆಟಗಾರನಿಗೆ ಬೆವರು ಬರುವಂತೆ ಮಾಡಿದ್ದ ಪ್ರಜ್ಞಾನಂದನ ಆಟ ಎಲ್ಲರ ಮನಗೆದ್ದಿತು.
ಯಾರಿಗೆಷ್ಟು ಬಹುಮಾನ ಮೊತ್ತ
ಚಾಂಪಿಯನ್ ಪಟ್ಟ ಅಲಂಕರಿಸಿದ ಕಾರ್ಲ್‌ಸನ್ ಸುಮಾರು 90, 93,551 ಲಕ್ಷ ರೂಪಾಯಿ ಪಡೆಯಲಿದ್ದಾರೆ. ದ್ವಿತೀಯ ಸ್ಥಾನ ಪಡೆದ ಪ್ರಜ್ಞಾನಂದ 66,13,444 ರೂಪಾಯಿ ನಗದು ಬಹುಮಾನವನ್ನು ಪಡೆಯಲಿದ್ದಾರೆ. ಫ್ಯಾಬಿಯಾನೋ ಕರುವಾನಾ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.
ಟೂರ್ನಿಯಲ್ಲಿ ಪ್ರಜ್ಞಾನಂದ ಪ್ರದರ್ಶನ
ಚೆಸ್ ವಿಶ್ವಕಪ್ನಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ ಪ್ರಜ್ಞಾನಂದ 3 ಸಲ ಟೈ ಬ್ರೇಕರ್ನಲ್ಲಿ ಜಯಿಸಿದ್ದಾರೆ. ಲೀಗ್ ಹಂತದಲ್ಲಿ ವಿಶ್ವ ನಂಬರ್ 2 ಹಿಕರು ನಕಮುರಾ ಎದುರು, ಕ್ವಾರ್ಟರ್ ಫೈನಲ್ನಲ್ಲಿ ಭಾರತದ ಅರ್ಜುನ್ ಎರಿಗೈಸಿ ವಿರುದ್ಧ ಟೈ ಬ್ರೇಕರ್‌ನ ಸಡನ್ ಡೆತ್‌ನಲ್ಲಿ ಜಯಿಸಿದ್ದರು. ಬಳಿಕ ಸೆಮಿಫೈನಲ್ನಲ್ಲಿ ವಿಶ್ವ ನಂಬರ್ 3 ಫ್ಯಾಬಿಯಾನೋ ವಿರುದ್ಧ ಟೈ ಬ್ರೇಕರ್‌ನಲ್ಲೇ ಜಯಿಸಿ ಫೈನಲ್ಗೆ ಲಗ್ಗೆ ಇಟ್ಟಿದ್ದರು. ಆದರೆ, ಫೈನಲ್ನಲ್ಲಿ ಪ್ರಜ್ಞಾನಂದನಿಗೆ ಅದೃಷ್ಟ ಒಲಿಯಲಿಲ್ಲ.
ಚೆಸ್ ವಿಶ್ವಕಪ್ ಫೈನಲ್‌ಗೇರಿದ ಅತಿ ಕಿರಿಯ ಆಟಗಾರ ಎನಿಸಿದ್ದಾರೆ 18 ವರ್ಷದ ಆರ್ ಪ್ರಜ್ಞಾನಂದ. ಮತ್ತೊಂದೆಡೆ 32 ವರ್ಷದ ಕಾರ್ಲ್‌ಸನ್ ಕೂಡಾ ಇದೇ ಮೊದಲ ಬಾರಿಗೆ ಚೆಸ್ ವಿಶ್ವಕಪ್ ಫೈನಲ್ ಪ್ರವೇಶಿಸಿದ್ದರು. ಕಳೆದ ಬಾರಿ ಜಾನ್-ಕ್ರಿಸ್ಜ್ಟೋಫ್ ದುಡಾ ಚಾಂಪಿಯನ್ ಆಗಿದ್ದರು.
ಪ್ರಜ್ಞಾನಂದ ವಿಶ್ವಕಪ್ ಗೆಲ್ಲದಿದ್ದರೂ, ಇಡೀ ದೇಶದ ಹೃದಯ ಗೆದ್ದಿದ್ದಾರೆ. ಅವರ ಹೆಸರೀಗ ಎಲ್ಲರ ಮನೆ ಮಾತಾಗಿದೆ. 2005ರ ಆ.10ರಂದು ರಮೇಶ್‌ಬಾಬು-ನಾಗಲಕ್ಷ್ಮೀದಂಪತಿಯ ಪುತ್ರನಾಗಿ ಚೆನ್ನೈನಲ್ಲಿ ಜನಿಸಿದ ಪ್ರಜ್ಞಾನಂದ ಅವರನ್ನು, ಹೆಚ್ಚಾಗಿ ಟೀವಿ ನೋಡುವುದನ್ನು ತಪ್ಪಿಸಬೇಕು ಎಂಬ ಕಾರಣಕ್ಕೆ ಅವರ ಪೋಷಕರು ಚೆಸ್ ತರಬೇತಿಗೆ ಕಳುಹಿಸಲು ಶುರು ಮಾಡಿದರಂತೆ. ಹೀಗಾಗಿ, ನಾಲ್ಕೂವರೆ ವರ್ಷಕ್ಕೇ ಚೆಸ್ ಆಡಲು ಶುರುವಿಟ್ಟ ಪ್ರಜ್ಞಾನಂದ, 12ನೇ ವರ್ಷದಲ್ಲೇ ಗ್ರಾಂಡ್‌ಮಾಸ್ಟರ್ ಪಟ್ಟ ಅಲಂಕರಿಸಿದರು.
ಚೆಸ್ ಆಟದ ಕೌಶಲ್ಯಗಳನ್ನು ಬಾಲ್ಯದಲ್ಲೇ ಕರಗತಮಾಡಿಕೊಂಡ ಪ್ರಜ್ಞಾನಂದ, 2013ರಲ್ಲಿ ಅಂಡರ್ -8 ವಿಭಾಗದಲ್ಲಿ ವಿಶ್ವ ಯುವ ಚಾಂಪಿಯನ್‌ಶಿಪ್ ಗೆದ್ದರು. ಅಲ್ಲದೇ 10ನೇ ವರ್ಷದಲ್ಲೇ ಇಂಟರ್‌ನ್ಯಾಷನಲ್ ಮಾಸ್ಟರ್ ಆಗಿ, ಈ ಸಾಧನೆ ಮಾಡಿದ ಅತಿ ಕಿರಿಯ ಎನಿಸಿಕೊಂಡರು. 2017ರಲ್ಲಿ ಗ್ಯಾಂಡ್‌ಮಾಸ್ಟರ್ ಆಗಿ ಹೊರಹೊಮ್ಮಿದ ಅವರು ಈ ಸಾಧನೆ ಮಾಡಿದ 5ನೇ ಅತಿ ಕಿರಿಯ ಎಂಬ ಖ್ಯಾತಿ ಸಂಪಾದಿಸಿದರು. 2022ರಲ್ಲಿ ವಿಶ್ವ ನಂ.1 ಕಾರ್ಲ್ ಸನ್‌ರನ್ನೇ ಸೋಲಿಸಿ ಎಲ್ಲರ ಹುಬ್ಬೇರಿಸಿದ್ದರು. ಈ ಮೂಲಕ ವಿಶ್ವನಾಥನ್ ಹಾಗೂ ಪಿ.ಹರಿಕೃಷ್ಣ ಬಳಿಕ ಕಾರ್ಲ್‌ಸನ್‌ರನ್ನು ಸೋಲಿಸಿದ 3ನೇ ಭಾರತೀಯ ಎನಿಸಿಕೊಂಡಿದ್ದರು.
No comments:
Post a Comment