ಮಗಳು ಎರಡನೇ ತಾಯಿ...
ಗಂಡ ಹೆಂಡತಿಯರ ಮುದ್ದಾದ ಸಂಸಾರ. ಹೆಂಡತಿ ಗರ್ಭವತಿಯಾಗಿದ್ದಳು. ಹುಟ್ಟುವ ಮಗು ಗಂಡೋ ಅಥವಾ ಹೆಣ್ಣೋ ಎನ್ನುವ ಕುತೂಹಲ ಆಕೆಗೆ. ಗಂಡನನ್ನು ಕೇಳಿದಾಗ ಯಾವುದಾದರೂ ಹುಟ್ಟಲಿ ಬಿಡು. ನಮಗೆ ಗಂಡು ಮಗು-ಹೆಣ್ಣು ಮಗು ಎರಡೂ ಒಂದೇ ಅಲ್ಲವೆ ಎಂದನು. ಅದಕ್ಕೆ ಹೆಂಡತಿಯು ಹೌದು, ಆದರೆ ನಮಗೆ ಗಂಡು ಮಗು ಹುಟ್ಟಿದರೆ ನೀವು ಹೇಗೆ ಬೆಳೆಸುತ್ತೀರಿ ಅವನನ್ನು? ಎಂದು ಕೇಳಿದಳು.
ಗಂಡ ಕಿಟಕಿಯಿಂದ ಹೊರಗೆ ಬಾನಿನತ್ತ ನೋಡುತ್ತಾ ಅವನನ್ನು ಮಹಾ ತುಂಟನನ್ನಾಗಿ ಬೆಳೆಸುತ್ತೇನೆ. ಅವನು ಚೆನ್ನಾಗಿ ಈಜಬೇಕು. ಸೈಕಲ್ ಹೊಡೆಯ ಬೇಕು. ಮರ ಹತ್ತಬೇಕು. ಕ್ರಿಕೆಟ್ ಆಡಬೇಕು. ಕರಾಟೆ ಕಲಿಯಬೇಕು. ಬೆಟ್ಟಗುಡ್ಡ ಹತ್ತಬೇಕು. ಬೈಕ್ ಓಡಿಸಬೇಕು. ನಕ್ಷತ್ರ ವೀಕ್ಷಣೆಯನ್ನು ಮಾಡಿಸ ಬೇಕು. ಲೆಕ್ಕವನ್ನು ಚೆನ್ನಾಗಿ ಕಲಿಸಬೇಕು. ಗಿಟಾರ್ ನುಡಿಸೋಕೆ ಬರಬೇಕು. ಹಾಡೋಕೆ ಕಲಿತ್ರೆ ಇನ್ನೂ ಚೆನ್ನಾಗಿರುತ್ತೆ ಎಂದ...
ಗಂಡ ಇನ್ನೂ ಮಗನಿಗೆ ಕಲಿಸಬೇಕಾದ ಪಟ್ಟಿಯನ್ನು ಮುಂದುವರೆಸುತ್ತಿದ್ದನೋ ಏನೋ?. ಹೆಂಡತಿಯು ಮಧ್ಯೆ ತಲೆಹಾಕಿದಳು. ಸರಿ, ಹೆಣ್ಣು ಮಗು ಹುಟ್ಟಿದರೆ ಅವಳಿಗೇನು ಕಲಿಸುತ್ತೀರಿ? ಕುತೂಹಲದಿಂದ ಕೇಳಿದಳು.
ಹೆಣ್ಣು ಮಗಳೆ? ಹೆಣ್ಣು ಮಗಳು ಹುಟ್ಟಿದರೆ ಅವಳಿಗೆ ನಾನ್ಯಾಕೆ ಕಲಿಸಬೇಕು? ಎಂದ ಗಂಡ. ಆಘಾತವಾಯಿತು ಹೆಂಡತಿಗೆ, ಅವಳಿಗರಿವಿಲ್ಲದಂತೆಯೇ ಕಣ್ಣಿನಲ್ಲಿ ನೀರು ಉಕ್ಕಿತು. ಯಾಕ್ರಿ ನಮಗೆ ಗಂಡು ಮಗು ಹೆಣ್ಣು ಮಗು ಎರಡೂ ಒಂದೇ ಅಲ್ವಾ...
ಹೆಣ್ಣು ಮಗುವಿಗೆ ಯಾಕೆ ಏನನ್ನೂ ಕಲಿಸಲ್ಲ! ಎಂದಳು.
ಗಂಡನು ನಗುತ್ತಾ, ಅಯ್ಯೋ..ಹುಚ್ಚಿ...
ಹೆಣ್ಣು ಮಕ್ಕಳಿಗೆ ನಾವು ಏನೂ ಕಲಿಸಬೇಕಾಗಿಲ್ಲ ಕಣೆ. ಅವರಿಗೆ ಅದು ಹುಟ್ಟಿನಿಂದಲೇ ಬಂದಿರು ತ್ತದೆ ಎಂದನು. ಅರ್ಥವಾಗಲಿಲ್ಲ. ಬಿಡಿಸಿ ಹೇಳಿ ಎಂದಳು ಹೆಂಡತಿ.
ಹೆಣ್ಣು ಮಗಳಿಗೆ ನಾವು ಕಲಿಸಬೇಕಾಗಿಲ್ಲ. ಅವಳು ನಮಗೆ ಎಲ್ಲವನ್ನೂ ಕಲಿಸುತ್ತಾಳೆ. ನಾನು ಹೇಗೆ ಬಟ್ಟೆ ಹಾಕ್ಕೋಬೇಕು, ಏನನ್ನು ತಿನ್ನಬೇಕು, ಹೇಗೆ ತಿನ್ನಬೇಕು, ಏನನ್ನು ಮಾತಾಡಬೇಕು, ಏನನ್ನು ಮಾತನಾಡಬಾರದು, ಎಲ್ಲಿಗೆ ಹೋಗಬೇಕು, ಎಷ್ಟು ಹೊತ್ತಿಗೆಲ್ಲ ಮನೆಗೆ ಬರಬೇಕು. ಒಟ್ಟಿನಲ್ಲಿ ಹೇಳುವುದಾದರೆ ಅವಳು ನನಗೆ ಎರಡನೆಯ ಅಮ್ಮನಾಗಿಬಿಡುತ್ತಾಳೆ. ಮಗಳಿಗೆ ತಂದೆಯೇ ಹೀರೋ!. ನಾನು ಬದುಕಿನಲ್ಲಿ ಏನನ್ನೂ ಸಾಧಿಸದಿದ್ದರೂ ಅವಳ ಪಾಲಿಗೆ ನಾನೇ ಹೀರೊ. ಅವಳಿಗೆ ಏನನ್ನಾದರೂ ಕೊಡಿಸಲಾಗದಿದ್ದರೆ, ಅವಳೇ ನನಗೆ ಸಮಾಧಾನ ಹೇಳಿ ಮುಂದಿನ ತಿಂಗಳು ಕೊಡಿಸುವಿಯಂತೆ ಬಿಡಪ್ಪ ಎನ್ನುತ್ತಾಳೆ.
ಅವಳ ಮನಸ್ಸಿನಲ್ಲಿ ತನ್ನ ಅಪ್ಪನಂತಹ ಗಂಡ ಸಿಗಬೇಕು ಎನ್ನುವ ಆಸೆ ಸುಪ್ತವಾಗಿ ಬೆಳೆಯುತ್ತಿರುತ್ತದೆ. ಅವಳಿಗೆ ಮಕ್ಕಳು ಮೊಮ್ಮೊಕ್ಕಳಾದರೂ, ನಾನು ಮಾತ್ರ ಅವಳನ್ನು ಮುದ್ದು ಪುಟಾಣಿಯಂತೆ ಮಾತನಾಡಿಸಬೇಕು.... ನೋಡಿಕೊಳ್ಳಬೇಕು, ಮುದ್ದು ಮಾಡಬೇಕು. ಅವಳು ಬೆಳೆಯುವುದೇ ಇಲ್ಲ.
ಅಪ್ಪನ ಮನಸ್ಸನ್ನು ನೋಯಿಸುವವರನ್ನು ಅವಳು ಯಾವ ಕಾರಣಕ್ಕೂ ಕ್ಷಮಿಸಲ್ಲ.
ಓ ಮಗಳು ಮಾತ್ರ ನಿಮ್ಮನ್ನು ನೋಡ್ಕೋತಾಳ? ಮಗ ನೋಡ್ಕಳ್ಳಲ್ಲ ಅಂತ ನಿಮ್ಮ ಅಭಿಪ್ರಾಯಾನ?
ಇಲ್ಲ ಇಲ್ಲ. ಗಂಡು ಮಕ್ಕಳೂ ನೋಡ್ಕೋತಾರೆ. ಆದರೆ ಅವರಿಗೆ ನಾವೇ ಎಲ್ಲವನ್ನೂ ಕಲಿಸಬೇಕು. ಹೆಣ್ಣು ಮಕ್ಕಳಿಗೆ ಯಾರೂ ಕಲಿಸಬೇಕಾಗಿಲ್ಲ. ಎಲ್ಲ ಹುಟ್ಟಿನೊಡನೆಯೇ ಬಂದಿರುತ್ತದೆ ಎಂದನು ಗಂಡ. ಇರಬಹುದುರೀ, ಆದರೆ ಅವಳು ಒಂದಲ್ಲ ಒಂದು ದಿನ ನಮ್ಮನ್ನೆಲ್ಲ ಬಿಟ್ಟು ಗಂಡನ ಮನೆಗೆ ಹೋಗಲೇಬೇಕಲ್ಲವೆ? ವಿಷಾದದಿಂದ ನುಡಿದಳು ಹೆಂಡತಿ. ಹೂಂ, ಹೋಗಲೇಬೇಕು. ಆದರೆ, ನಾವು ಸದಾ ಅವಳ ಹೃದಯದಲ್ಲಿ ಬೆಚ್ಚಗೆ ಇರುತ್ತೇವೆ. ಸದಾ ಕಾಲಕ್ಕೂ! ಎಂದನು. ಗಂಡನ ಕಣ್ಣಂಚು ತುಸು ತೇವವಾಗಿತ್ತು. ಕೃಪೆ: ಸಣ್ಣ ಕಥೆ.ವಾಟ್ಸ್ ಆಪ್ ಗ್ರೂಪ್.
No comments:
Post a Comment