Saturday, October 21, 2023

 (ಕಥೆ-188) ಸಾಧಿಸುವ ದೃಢ ಮನಸ್ಸು ಮತ್ತು ಛಲವಿದ್ದರೆ...


ಕೇವಲ 5 ರೂ. ನಿಂದ ದಿನಗೂಲಿ ಕೆಲಸ ಆರಂಭಿಸಿದ ಅನಾಥ ಹುಡುಗಿ ಜ್ಯೋತಿ ರೆಡ್ಡಿ ಪ್ರಸ್ತುತ 15 ಮಿಲಿಯನ್ ಡಾಲರ್ ಲಾಭವುಳ್ಳ ಕಂಪನಿಯ ಒಡತಿ..!*

ಬರಿಗಾಲಿನಲ್ಲಿ ಓಡುತ್ತ ಶಾಲೆಗೇ ಹೋಗುತ್ತಿದ್ದ ಹುಡುಗಿ ಈಗ ಮರ್ಸಿಡಿಸ್ ಬೆಂಝ್ ಕಾರನ್ನು ಓಡಿಸುತ್ತಿದ್ದಾಳೆ, ಮತ್ತು ಸಾಫ್ಟವೇರ್ ಕಂಪೆನಿಯ 15 ಮಿಲಿಯನ್ ಡಾಲರ್ ನ ವಹಿವಾಟು ನಡೆಸುತ್ತಿದ್ದಾರೆ. 

 ಬಡತನದ ಬೇಗೆಯಲ್ಲಿ ಬೆಂದು, ಪೆಟ್ಟು ಬಿದ್ದ ಕಲ್ಲು ಶಿಲೆಯಾದಂತೆಯೇ, ಜೀವನದಲ್ಲಿ ಬರುವಂತಹ ಅಡೆತಡೆಗಳನ್ನು ಮೀರಿ ಸಾಧನೆಮಾಡಿದ ಅದೆಷ್ಟೋ ಮಹಿಳೆಯರಿದ್ದಾರೆ. ಅದರಲ್ಲಿ ಜ್ಯೋತಿ ರೆಡ್ಡಿ ಕೂಡ ಒಬ್ಬರು.

1970 ರಲ್ಲಿ ಆಂಧ್ರಪ್ರದೇಶದ ವಿಶಾಖಪಟ್ಟಣದ ವರಂಗಲ್ ನ ಹನುಮಕೊಂಡ ಮಂಡಲದ ನರಸಿಂಹುಲ ಗುಡ್ಡದ ಅತೀ ಬಡಕುಟುಂಬದಲ್ಲಿ ಎರಡನೇ ಮಗಳಾಗಿ ಜನಿಸಿದ ಡಿ. ಅನಿಲ ಜ್ಯೋತಿ ರೆಡ್ಡಿ (ಜ್ಯೋತಿ ರೆಡ್ಡಿ) ಅವರ ಜೀವನದ ಕಥೆ ನಮ್ಮ ನಿಮ್ಮೆಲ್ಲರಿಗೆ ಆದರ್ಶ.

ತಮ್ಮ ಸಣ್ಣ ವಯಸ್ಸಿನಲ್ಲಿ ತಾಯಿಯನ್ನು ಕಳೆದುಕೊಂಡು ಅನಾಥಾಶ್ರಮದ ಪಾಲಾದ ಜ್ಯೋತಿ ರೆಡ್ಡಿ ಹಾಗೋ ಹೀಗೂ ಹತ್ತನೇ ತರಗತಿಯನ್ನು ಪೂರೈಸಿದಳು. ನಂತರ ಹಿರಿಯರ ಬಲವಂತದಿಂದಾಗಿ ತನ್ನ 16 ರ ಹರೆಯದಲ್ಲಿ ಮದುವೆಯಾದರು. ನಂತರ 2 ಮಕ್ಕಳಿಗೆ ಜನ್ಮ ನೀಡುತ್ತಾರೆ. ಪತಿ ಇದ್ದರೂ ಇಲ್ಲದಂತೆ ಅನ್ನುವ ಪರಿಸ್ಥಿತಿ ಅವಳದು. ಮಕ್ಕಳನ್ನು ಸಾಕಲು 5 ರೂ. ದಿನಗೂಲಿ ಸಂಬಳಕ್ಕೆ ಕೆಲಸ ಮಾಡತೊಡಗಿದರು. ಎಷ್ಟೇ ಕಷ್ಟ ಬಂದರೂ ಎದೆಗುಂದದೆ ಮುಂದೆ ಸಾಗುವ ಮನೋಧೈರ್ಯದಿಂದ ಜೀವನವನ್ನು ಸವಾಲಾಗಿ ಸ್ವೀಕರಿಸಿ . 1988-89 ರಲ್ಲಿ ನೆಹರೂ ಯುವ ಕೇಂದ್ರದ ವಯೋಜನ ವಿದ್ಯಾಲಯದಲ್ಲಿ ನೈಟ್ ಸ್ಕೂಲ್ ಶಿಕ್ಷಕರಾಗಿ ಕೆಲಸ ಮಾಡಲು ಪ್ರಾರಂಭಿಸಿದರು. ಆವಾಗ ಅವರಿಗೆ ಸಿಗುತ್ತಿದ್ದದ್ದು ಮಾಸಿಕ 120/- ರೂ. ಸಂಬಳ. ಇಷ್ಟರಲ್ಲಿ ತನ್ನ ಮತ್ತು ಇಬ್ಬರ ಮಕ್ಕಳ ಜೀವನ ಸಾಗಿಸುತ್ತಿದ್ದರು. 1989-90 ರಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ವೃತ್ತಿಗೆ ಸೇರಿದರು. ಆವಾಗಿನ ಸಂಬಳ 190/- ರೂ. ಇಷ್ಟಕ್ಕೆ ಸುಮ್ಮನಾಗದ ಜ್ಯೋತಿ ರೆಡ್ಡಿ ದುಡಿಯಬೇಕು ದುಡಿದು ಮಕ್ಕಳಿಗೆ ಒಳ್ಳೆ ಭವಿಷ್ಯವನ್ನು ಕಟ್ಟಿ ಕೊಡಬೇಕು ಎನ್ನುವ ಉದ್ದೇಶದಿಂದ ರಾತ್ರಿ ಸಮಯ ಮನೆಯಲ್ಲಿ ಕೂತು ಪೆಟಿಕೋಟ್ ಹೊಲಿದು ಅದನ್ನು ಮಾರಿ ಜೀವನ ಕಳೆದರು.

ಇಷ್ಟೆಲ್ಲ ಕಷ್ಟಪಡುತ್ತಿದ್ದ ಜ್ಯೋತಿ ರೆಡ್ಡಿ ಮುಂದಿನ ದಿನಗಳಲ್ಲಿ ಗಂಡನ ಕಿರುಕುಳಕ್ಕೆ ಬಲಿಯಾಗಿ ಅವನಿಂದ ಬೇರ್ಪಟ್ಟು ಇಬ್ಬರು ಮಕ್ಕಳ ಜೊತೆ ಮೈಲಾರನ್ ಗ್ರಾಮದಿಂದ ಹನುಮಕೊಂಡ ಪೇಟೆಗೆ ವಾಸ್ತವ್ಯ ಬದಲಾಯಿಸಿದರು. ಅಲ್ಲಿ ಜ್ಯೋತಿ ರೆಡ್ಡಿ ಟೈಪ್ ರೈಟಿಂಗ್ ಕಲಿಯುತ್ತಾರೆ. ಕ್ರಾಫ್ಟ್ ವರ್ಕ್ ಕಲಿಯುತ್ತಾರೆ. ಹೀಗೆ ಕಷ್ಟ ಪಟ್ಟು 1991-94 ರಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಿಶ್ವ ವಿದ್ಯಾಲಯದಲ್ಲಿ ಬಿ.ಎ. ಪದವಿ ಮಾಡುತ್ತಾರೆ. ಇವೆಲ್ಲವೂ ತನ್ನ ಹೊಟ್ಟೆಪಾಡಿನ ಕೆಲಸದ ಜೊತೆ ಜೊತೆಯಲ್ಲಿ ನಡೆಯುತ್ತದೆ. 1999 ರಲ್ಲಿ ಕಕಾಟಿಯಾ ಯೂನಿವರ್ಸಿಟಿಯಲ್ಲಿ “ಸಮಾಜಸೇವೆ” ವಿಷಯದಲ್ಲಿ ಪಿ.ಎಚ್.ಡಿ. ಮಾಡಿ ಸ್ನಾತ್ತಕೋತ್ತರ ಪದವಿ ಪಡೆಯುತ್ತಾರೆ. ಆವಾಗ ಇವರಿಗೆ ಸ್ಪೆಷಲ್ ಟೀಚರ್ ಕೆಲಸ ಸಿಗುತ್ತದೆ. ಮಾಸಿಕ ಸಂಬಳ ಕೇವಲ 398/- ರೂ. ಅವರು ಈ ಕೆಲಸಕ್ಕಾಗಿ 70 ಕಿ.ಮೀ. ದೂರದ ಅಮೀನ್ ಪೇಟೆಯ ಶಾಲೆಗೆ ದಿನನಿತ್ಯ ಕೆಲಸಕ್ಕೆ ಹೋಗಬೇಕಾಗಿತ್ತು.

ಹೀಗೆ ಪ್ರಯಾಣದ ವೇಳೆ ಬಸ್ ನಲ್ಲಿರುವ ಸಹ ಪ್ರಯಾಣಿಕರಿಗೆ ಸೀರೆ, ವಸ್ತ್ರಗಳನ್ನು ಮಾರಿ ಅದರಿಂದ ಬರುವ ಲಾಭದಿಂದ ಮಕ್ಕಳ ಹೊಟ್ಟೆ ತುಂಬಿಸುತ್ತಿದ್ದರು. ನಂತರ ಅವರ ವೃತ್ತಿ ಖಾಯಂ ಆಗುತ್ತದೆ. ತನ್ನೂರ ಶಾಲೆಯಲ್ಲಿ 2,750/- ರೂ. ಸಂಬಳಕ್ಕೆ ದುಡಿಯುತ್ತಾರೆ. ಬಳಿಕ ಸರಕಾರಿ ಶಿಕ್ಷಕಿಯಾಗುವ ಮೂಲಕ ಅವರ ಮಾಸಿಕ ಸಂಬಳ 6,000/- ಕ್ಕೇರುತ್ತದೆ. 1996-2000 ದಲ್ಲಿ ಬಡ್ತಿ ಪಡೆದು 16,000/- ರೂ. ಸಂಬಳಕ್ಕೆ ದುಡಿಯುತ್ತಾರೆ. ಹೀಗೇ ಜೀವನದ ಒಂದೊಂದೇ ಮೆಟ್ಟಿಲೇರಿದ ಜ್ಯೋತಿ ರೆಡ್ಡಿ 2000 ನೇ ಇಸವಿ ಮಹತ್ತರ ತಿರುವನ್ನು ಕಂಡುಕೊಳ್ಳುತ್ತಾರೆ.

ಆಮೆರಿಕಾದಿಂದ ತನ್ನ ಸಂಬಂಧಿ ಮಹಿಳೆ ಒಬ್ಬರು ಊರಿಗೆ ಬಂದಾಗ ಅವರ ಮಾತಿನ ಮೇಲೆ ಪ್ರಭಾವಿತರಾಗಿ ಅಮೆರಿಕಕ್ಕೆ ಹೋಗಿ ಉದ್ಯೋಗ ಮಾಡುವ ಆಸೆ ಹುಟ್ಟುತ್ತದೆ. ಅಮೆರಿಕಾದ ಕೆಲಸದ ಆಸೆಯಿಂದ ಜ್ಯೋತಿ ರೆಡ್ಡಿ ಮಾಡುತ್ತಿದ್ದ ಸರಕಾರಿ ಕೆಲಸಕ್ಕೆ ರಾಜೀನಾಮೆ ನೀಡಿ ಹೈದರಾಬಾದಿನಲ್ಲಿ ಸಾಫ್ಟ್ ವೇರ್ ಕೋರ್ಸ್ ಗೆ ಸೇರಿಕೊಳ್ಳುತ್ತಾರೆ. ನಂತರ ಮಕ್ಕಳನ್ನು ಹಾಸ್ಟೆಲ್ ಗೆ ದಾಖಲಿಸಿ ಜ್ಯೋತಿ ರೆಡ್ಡಿ ಅಮೆರಿಕದ ವಿಮಾನ ಏರುತ್ತಾರೆ. ಪ್ರಾರಂಭದಲ್ಲಿ ದಿನನಿತ್ಯ 60 ಯುಎಸ್ ಡಾಲರ್ ಗೆ 12 ಗಂಟೆ ದುಡಿಯುತ್ತಾರೆ. ಅಮೆರಿಕಾದ ಗುಜರಾತಿ ಕುಟುಂಬದ ಮನೆಯಲ್ಲಿ ಪೇಯಿಂಗ್ ಗೆಸ್ಟ್ ಆಗಿ ವಾಸ್ತವ್ಯ ಹೂಡುತ್ತಾರೆ. ಅಮೆರಿಕದಲ್ಲಿ ಗ್ಯಾಸ್ ಸ್ಟೇಷನ್ ಕೆಲಸ, ಗೋಡಾನ್ ನಲ್ಲಿ ಲೋಡ್/ಅನ್ ಲೋಡ್ ಕೆಲಸ, ಬೇಬಿ ಸಿಟ್ಟಿಂಗ್ ನಲ್ಲಿ ವೃತ್ತಿ, ವೀಡಿಯೋ ಶಾಪ್ ನಲ್ಲಿ ಶಾಪ್ ಕೀಪರ್ ಕೆಲಸ ಮಾಡುತ್ತಾರೆ. ಇದರ ಮದ್ಯೆ ಒಂದೆರಡು ಕಂಪೆನಿಯಿಂದ ಉದ್ಯೋಗದ ಆಫರ್ ಬಂದರೂ ಅದಕ್ಕೆ ಸೇರದ ಜ್ಯೋತಿ ಸಣ್ಣಪುಟ್ಟ ಕೆಲಸದಲ್ಲೇ ತೃಪ್ತಿಪಡುತ್ತಾರೆ.

ಅಷ್ಟು ದಿನದಿಂದ ದುಡಿದು ಕೂಡಿಟ್ಟ ಹಣದಿಂದ 2001 ಅಕ್ಟೋಬರ್ ನಲ್ಲಿ ಅಮೆರಿಕದಲ್ಲಿ ಸಣ್ಣಮಟ್ಟದಲ್ಲಿ ತನ್ನ ಸ್ವಂತ ಉದ್ಯಮ “ಕೀ ಸಾಫ್ಟವೇರ್ ಸೊಲ್ಯುಷನ್ಸ್” ಕಂಪೆನಿಯನ್ನು ಸ್ಪಷ್ಟವಾಗಿ ಇಂಗ್ಲೀಷ್ ಮಾತನಾಡಲೂ ಬರದಿದ್ದಿದ್ದರು ಎದೆಗುಂದದೆ ಪ್ರಾರಂಭಿಸುತ್ತಾರೆ. ಅಂದು ಶುರುಮಾಡಿದ ಕಂಪನಿ ಇಂದು 15 ಮಿಲಿಯನ್ ಡಾಲರ್ ನ ವಹಿವಾಟು ನಡೆಸುತ್ತಿದೆ. ಜ್ಯೋತಿ ರೆಡ್ಡಿ ಆ ಕಂಪೆನಿಯ ಅಧ್ಯಕ್ಷೆ ಮತ್ತು ಸಿ.ಇ.ಓ. ಅರ್ಥಾತ್ ಬಹುಕೋಟಿ ಒಡೆತನದ ಕೀ ಸಾಫ್ಟವೇರ್ ಸೊಲ್ಯುಷನ್ಸ್ ನ ಏಕೈಕ ಒಡತಿ!

ಸಾಧಿಸುವ ದೃಢ ಮನಸ್ಸು ಮತ್ತು ಛಲವಿದ್ದರೆ ಉನ್ನತವಾದುದನ್ನು ಸಾಧಿಸಬಹುದು ಎಂಬುದಕ್ಕೆ ಇವರೊಂದು ಉದಾಹರಣೆ.

ಕೃಪೆ: ಸುದ್ದಿ ಕನ್ನಡ.

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು