ಹೊಸ ವರ್ಷದ ಸಂಭ್ರಮಕ್ಕೆ ಕ್ಷಣಗಣನೆ ಆರಂಭವಾಗಿದೆ. ಒಂದು ದಿನದಲ್ಲಿ ಹಳೆ ಕ್ಯಾಲೆಂಡರ್ ಮೂಲೆ ಸೇರಬಹುದು. ಹೊಸ ಕ್ಯಾಲೆಂಡರ್ ಗೋಡೆ ಏರಬಹುದು. ಆದರೆ, ಕಳೆದುಹೋದ ಆ ಮಧುರ 365 ದಿನ, ಸುಂದರ 52 ವಾರ, ಅಪೂರ್ವ 8760 ಗಂಟೆ, ಅಮೂಲ್ಯ 525600 ನಿಮಿಷ, ಕಳೆದು ಹೋದ ಆ 31536000 ಸೆಕೆಂಡುಗಳ ನೋವು ನಲಿವಿನ ಕ್ಷಣಗಳನ್ನು ಮರೆಯುವುದುಂಟೆ. ಹೊಸ ವರ್ಷಕ್ಕೆ ಕಾಲಿಡುವ ಮುನ್ನ ಈ ವರ್ಷ ನಾನೇನು ಮಾಡಿದೆ? ನನ್ನ ಬದುಕಿನ ಗುರಿಗಳು ಈಡೇರುವ ಪಥದಲ್ಲಿವೆಯೇ? ಒಂದು ವರ್ಷದ ಸಾಧನೆಗಳೇನು? ವೇದನೆಗಳೇನು? ಖುಷಿ ಕೊಟ್ಟ ಕ್ಷಣಗಳು ಯಾವುವು? ಯಾರಿಗೂ ತಿಳಿಯದಂತೆ ಬಿಕ್ಕಳಿಸಿದ ಕ್ಷಣಗಳು ಇವೆಯೇ? ಹೀಗೆಲ್ಲ ಯೋಚಿಸುವಂತೆ ಮಾಡುವ ದಿನವಿದು.ಈ ವರ್ಷ ಏನೆಲ್ಲ ನಡೆಯಿತು ಎಂದು ಯೋಚಿಸಿದಾಗ ಹಲವು ಅಂಶಗಳು ಕಣ್ಮುಂದೆ ಬರುತ್ತವೆ. ಖುಷಿಕೊಟ್ಟ ಸಣ್ಣಸಣ್ಣ ವಿಷಯಗಳು, ಹೊಸ ಕಲಿಕೆಗಳು, ಸಂಭ್ರಮದ ದಿನಗಳು ನೆನಪಾಗುತ್ತವೆ. ಅದೇ ಸಮಯದಲ್ಲಿ ನಿನ್ನೆ ನಗುತ್ತ ಇದ್ದವರು ಇವತ್ತು ಇಲ್ಲ ಎಂಬ ಆಪ್ತರ ಅಗಲಿಕೆಯ ಸುದ್ದಿಗಳು ನೆನಪಾಗದೆ ಇರದು. ಈ ವರ್ಷ ನನಗೆ ಖುಷಿಕೊಟ್ಟ ಕ್ಷಣಗಳನ್ನು ವಿಷಯಗಳನ್ನು ಮೆಲುಕು ಹಾಕಲು ಹೊರಟರೆ ನೆನಪುಗಳು ಮೆರವಣಿಗೆ ಹೊರಡುತ್ತವೆ.
1. ನನ್ನ ಇಷ್ಟದ ಪುಸ್ತಕ
ಈ ವರ್ಷ ಓದಿದ್ದು ಕೆಲವೇ ಪುಸ್ತಕ. ಹಲವು ವರ್ಷಗಳ ಹಿಂದೆ ಇಡೀ ಲೈಬ್ರರಿಯನ್ನೇ ಖಾಲಿ ಮಾಡುವಷ್ಟು ಓದುವ ಹಸಿವಿತ್ತು. ಈ ಡಿಜಿಟಲ್ ಜಗತ್ತು ಮೊಬೈಲ್, ಕಂಪ್ಯೂಟರ್‌ನಲ್ಲಿಯೇ ಎಲ್ಲವನ್ನೂ ನೀಡುವುದರ ಫಲವೋ ಕಾರ್ಯಭಾರದ ಒತ್ತಡವೋ ಕಾಣೆ ಈ ವರ್ಷ ಸ್ಪೂರ್ತಿದಾಯಕ ಪುಸ್ತಕ ಶ್ರೀ ಯಂಡುಮುರಿ ವೀರೇಂದ್ರನಾಥ್ ಅವರು ಬರೆದ " ಯಶಸ್ಸಿನ ಸೂತ್ರಗಳು" ಹೆಚ್ಚು ಇಷ್ಟವಾಯ್ತು. ಈ ಪುಸ್ತಕದಲ್ಲಿ ಯಶಸ್ಸು ಪಡೆಯಲು, ಜೀವನವನ್ನು ಇನ್ನೂ ಚೆನ್ನಾಗಿ ನಡೆಸಲು ಬೇಕಾದ ಸ್ಪೂರ್ತಿದಾಯಕ ಮಾತುಗಳಿವೆ. ನೀವಿನ್ನೂ ಓದಿಲ್ಲವೆಂದಾದರೆ ತಪ್ಪದೇ ಓದಿ.
2. ನನಗೆ ಇಷ್ಟವಾದ ವ್ಯಕ್ತಿ
ವೈಯಕ್ತಿಕವಾಗಿ ಅಮ್ಮ, ಅಪ್ಪ, ಹೆಂಡ್ತಿ, ಮಗ, ಸಹೋದ್ಯೋಗಿಗಳು, ಸ್ನೇಹಿತರು ಎಂದಿನಂತೆ ಇಷ್ಟವಾಗುತ್ತಾರೆ. ಇದರಾಚೆಗೆ ನೋಡಿದರೆ ಈ ವರ್ಷ ತುಂಬಾ ಇಷ್ಟವಾದ ವ್ಯಕ್ತಿ ಶ್ರೀ ಪ್ರಕಾಶ್ ಮುಖ್ಯಾಧಿಕಾರಿಗಳು ಪಟ್ಟಣ ಪಂಚಾಯತಿ ಯಲಬುರ್ಗಾ MLA ಚುನಾವಣೆಗೆ ತರಬೇತಿ ಸಂಬಂಧ ನನ್ನನ್ನು ಮಾಸ್ಟರ್ ಟ್ರೈನರ್ ಆಗಿ ನೇಮಿಸಿದಾಗ ಶ್ರೀ ಪ್ರಕಾಶ್ ಸರ್ ಅವರು ಸೆಕ್ಟರ್ ಆಫೀಸರ್ ಆಗಿದ್ದರು ಅವರು ಒಬ್ಬ ಆಫೀಸರ್ ಆಗಿದ್ದರೂ ನಮ್ಮ ಜೊತೆಗೆ ಸ್ನೇಹಿತರಂತೆ ವರ್ತಿಸಿ ನಮ್ಮ ಟ್ರೇನಿಂಗ ಮೆಚ್ಚಿ ಟ್ರೈನಿಂಗ್ ಕೊಟ್ಟರೆ ಈ ರೀತಿ ಇರಬೇಕೆನ್ನುವುದು
ಚುನಾವಣೆಗೆ ಸಂಬಂಧಿಸಿದ ಅವರ ಸ್ಪೂರ್ತಿದಾಯಕ ಮಾತುಗಳು ಇಷ್ಟವಾದವು.
3. ಈ ವರ್ಷ ಕೈಗೊಂಡ ಪ್ರವಾಸ
ಈ ವರ್ಷ ಅನೇಕ ಸ್ಥಳಗಳಿಗೆ ಹೋಗಿದ್ದೇನೆ. ನಮ್ಮ ಶಾಲೆ ವಿಜ್ಞಾನದಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿ ಕೇರಳದ ತ್ರಿಶೂರಿನಲ್ಲಿ ಭಾಗಿಯಾಗುವ ಅವಕಾಶ ಸಿಕ್ಕಿತ್ತು. ಕೇಳದ ಭವ್ಯ ಬಂಗಲೆಗಳು ಬಹಳಷ್ಟು ಮನಸೂರೆಗೊಂಡವು. ವಿಶೇಷವಾಗಿ ಅಲ್ಲಿನ ಮನೆಯ ಕಾಂಪೌಂಡ್ ಗಳು ನೋಡಲು ಮನಮೋಹಕವಾಗಿರುತ್ತಿದ್ದವು ಮತ್ತು ಎಲ್ಲಿ ನೋಡಿದರೂ ತೆಂಗಿನ ಮರಗಳ ಸಾಲೆ ಸಾಲು. ಆದರೆ ನನಗೆ ಅದರ ಹೊರತಾಗಿಯೂ 2023 ರಲ್ಲಿ ಮೈಸೂರು ಮಾತ್ರ ಅತ್ಯಂತ ಇಷ್ಟವಾದ ಸ್ಥಳವಾಯಿತು. ನಾನು ಈ ಮೊದಲು ಮೈಸೂರು ನೋಡಿದ್ದೆ. ಆದರೆ ದಸರಾ ಸಂದರ್ಭದಲ್ಲಿ ಮೈಸೂರನ್ನು ನೋಡಿರಲಿಲ್ಲ ಈ ಬಾರಿ ನನಗೆ ದಸರಾ ಸಂದರ್ಭದಲ್ಲಿ ಮೈಸೂರ ನೋಡಲು ಅವಕಾಶ ಸಿಕ್ಕಿತ್ತು. ಹೀಗಾಗಿ ರಾತ್ರಿ ಸಮಯದಲ್ಲಿ ಮೈಸೂರು ನೋಡೋದೇ ಒಂದು ಸೌಭಾಗ್ಯ. ಮೈಸೂರಲ್ಲಿ ದೇವನೂರು ಮಹದೇವರ ಭೇಟಿ ಇನ್ನು ಖುಷಿ ನೀಡಿತು.
4.2023ರಲ್ಲಿ ನಾನು ನೋಡಿದ ಸಿನಿಮಾ
ನಾನು ಅವನಲ್ಲ ಅವಳು
ಮಂಗಳಮುಖಿಯರು ಅನುಭವಿಸುವ ನೋವುಗಳನ್ನು ಈ ಚಿತ್ರ ನಮಗೆ ತೋರಿಸುತ್ತದೆ..
ಅದ್ಭುತ ನಟನೆ ಮತ್ತು ನಿರ್ದೇಶನ ಈ ಚಿತ್ರದಲ್ಲಿ ಎದ್ದು ಕಾಣುತ್ತಿದೆ.
5. ಇಷ್ಟವಾದ ಸುದ್ದಿ- ಚಂದ್ರಯಾನ
ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋದ ಅಂತರಿಕ್ಷ ಯೋಜನೆಗಳ ಬಗ್ಗೆ ಮೊದಲಿನಿಂದಲೂ ಒಂದು ಕುತೂಹಲದ ಕಣ್ಣಿಟ್ಟಿದ್ದೆ. ಈ ಹಿಂದೆ ಲೂನರ್ ಮಿಷನ್ ವೈಫಲ್ಯವಾದಗ ತುಂಬಾ ಬೇಸರಪಟ್ಟಿದ್ದೆ. ಈ ಬಾರಿ ಆಗಸ್ಟ್‌ನಲ್ಲಿ ಚಂದ್ರಯಾನ ಯಶಸ್ವಿಯಾದ ಸುದ್ದಿ ಕೇಳಿ ಸಖತ್ ಖುಷಿಯಾಗಿತ್ತು. ದಕ್ಷಿಣ ಧ್ರುವದಲ್ಲಿ ರೋವರ್ ಲ್ಯಾಂಡ್ ಆದ ಕ್ಷಣ ನಿಜಕ್ಕೂ ಹೆಮ್ಮೆ ಪಡುವಂತಹದ್ದು.
6. ಇಷ್ಟವಾದ ತಂತ್ರಜ್ಞಾನ: ಚಾಟ್ ಜಿಪಿಟಿ ಮತ್ತು ಎಐ
ಈ ಬಾರಿ ನನಗೆ ಅಚ್ಚರಿ, ಖುಷಿ ಕೊಟ್ಟ ತಂತ್ರಜ್ಞಾನ ಬೆಳವಣಿಗೆಯಿದು. ತಂತ್ರಜ್ಞಾನವು ಎಷ್ಟು ವೇಗವಾಗಿ ಬದಲಾಗುತ್ತಿದೆ? ನಾವು ಏನಾದರೂ ಸೂಚನೆ ನೀಡಿದರೆ ನಮಗಾಗಿ ಲೇಖನ, ಚಿತ್ರ, ಹಾಡು, ಪ್ರಬಂಧ ಬರೆಯುವ ಚಾಟ್‌ಜಿಪಿಟಿ ಬೆರಗು ಹುಟ್ಟಿಸಿತು. ಇದರ ಸದ್ಯದ ದುರ್ಬಳಕೆ ಬೇಸರ ಹುಟ್ಟಿಸಿದರೂ ನೆಲದ ಕಾನೂನುಗಳು ಸರಿಪಡಿಸಬಲ್ಲದು ಎಂಬ ನಿರೀಕ್ಷೆ.
ಮುಂದಿನ ವರ್ಷದಲ್ಲಿ ತಂತ್ರಜ್ಞಾನ ಜಗತ್ತಿನಲ್ಲಿ ಏನೆಲ್ಲ ಬದಲಾವಣೆಯಾಗಬಹುದು ಎಂಬ ಕೌತುಕವೂ ಜತೆಯಾಗಿದೆ.
7. 2023 ರಲ್ಲಿ ಖುಷಿಕೊಟ್ಟ ಆಹಾರ
ಕೇರಳದ ಕ್ಯೂಸಿ ಸಿಹಿ ಪದಾರ್ಥ ಈ ವರ್ಷದ ಖುಷಿ ಕೊಟ್ಟ ಆಹಾರ.
8. ನೋವಿನ ಸಂದರ್ಭ 98 ವರ್ಷ ವಯಸ್ಸಿನ
ನಮ್ಮ ಅಮ್ಮ ತೀರಿಕೊಂಡಾಗ ನನಗೆ ಹಿರಿಯ ಜೀವವನ್ನು ಕಳೆದುಕೊಂಡ ನೋವು ನನ್ನದಾಗಿತ್ತು.
9. 2023 ರಲ್ಲಿ ಮಾದರಿ ಪ್ರಯೋಗಾಲಯ ಸ್ಥಾಪನೆಗೆ ಪ್ರಯತ್ನ
ನನ್ನ ಕನಸು... ಹಿರೇಮ್ಯಾಗೇರಿ ಪ್ರೌಢಶಾಲೆಗೆ ವಿಜ್ಞಾನ ಪ್ರಯೋಗಾಲಯ ಮಾಡುವುದೇ ಆಗಿತ್ತು. SDMC, ಮುಖ್ಯೋಪಾಧ್ಯಾಯರು ಮತ್ತು ಸಿಬ್ಬಂದಿಗಳ ಸಹಕಾರದಿಂದ ಪ್ರಯೋಗಾಲಯದ ಸ್ಥಾಪನೆಗೆ ಪ್ರಯತ್ನ ಮಾಡಿರುವುದು ಖುಷಿ ನೀಡಿದೆ.. ಅದಕ್ಕೆ ದಾನಿಗಳು ಶಿಕ್ಷಣ ಪ್ರೇಮಿಗಳು ಮತ್ತು ಸರ್ಕಾರದ ವಿಶೇಷ ಅನುದಾನ ಸಿಕ್ಕರೆ ಮಾದರಿ ಪ್ರಯೋಗಾಲಯ ಹಿರೇಮ್ಯಾಗೇರಿಯಲ್ಲಿ ಖಂಡಿತ.
10.ದಿನ ಕಥೆ : 2023 ರಲ್ಲಿ ಮಕ್ಕಳಿಗಾಗಿ ದಿನ ಕಥೆ ಬಿಡುವುದನ್ನು ಪ್ರಾರಂಭಿಸಲಾಗಿತ್ತು. ಮಕ್ಕಳು ಓದುವ ಹವ್ಯಾಸ ಮತ್ತು ಅಭ್ಯಾಸ ಬೆಳೆಸಿಕೊಳ್ಳಲು, ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಲು ಮತ್ತು ಏನನ್ನಾದರೂ ಸಾಧಿಸಬೇಕೆಂಬ ಛಲ ಬೆಳೆಸಿಕೊಳ್ಳಲು ಅವರಿಗೆ ದಿನಾಲು ಒಂದು ಕಥೆಯನ್ನು ಬಿಡಲಾಗುತ್ತಿದೆ.ಅದು 258 ದಿನಗಳನ್ನು ತಲುಪಿ ಮಕ್ಕಳ ಗಮನ ಸೆಳೆಯುತ್ತಿರುವುದು ಖುಷಿ ನೀಡಿದೆ..
11. ಆನ್ಲೈನ್ Cashbook.
ನಮ್ಮ ಶಾಲೆಯ ಗಾರ್ಡನ್ ಗೆ ಮರು ಜೀವ ತುಂಬಲು ಶಿಕ್ಷಕರು ಮತ್ತು ದಾನಿಗಳ ಸಹಕಾರದಿಂದ ತಂತಿ ಬೇಲಿ ಮತ್ತು ಕಂಬಗಳ ನಿರ್ಮಾಣಕ್ಕೆ ಅದರ ಖರ್ಚು ವೆಚ್ಚಕ್ಕಾಗಿ ಆನ್ಲೈನ್ Cashbook. ತಯಾರಿಸಿದ್ದು ಖುಷಿ ನೀಡಿದೆ ಇದೇ ಕ್ಯಾಶ್ಬಕನ್ನು ಹಿರೇಮ್ಗೆರೆ ಜಾತ್ರಾ ಮಹೋತ್ಸವದಲ್ಲಿ ಬಳಸಿದ್ದು ಸಹ ಖುಷಿ ನೀಡಿದೆ
12.DQ5 : 2023ರಲ್ಲಿ 10ನೇ ತರಗತಿ ವಿದ್ಯಾರ್ಥಿಗಳು ವಿಜ್ಞಾನ ವಿಷಯದಲ್ಲಿ ಅತಿ ಹೆಚ್ಚು ಅಂಕ ಪಡೆಯುವಂತಾಗಲು ದಿನಾಲು ಸಂಜೆ ಐದು ಪ್ರಶ್ನೆಗಳನ್ನು ಬಿಡಲಾಗುತ್ತಿತ್ತು ಮಕ್ಕಳು ಅವುಗಳಿಗೆ ಉತ್ತರ ಬರೆಯುವಂತೆ ಹೇಳಲಾಗಿತ್ತು ನಂತರ ಮರುದಿನ ಬೆಳಿಗ್ಗೆ ಉತ್ತರ ಬಿಡಲಾಗುತ್ತಿತ್ತು ಮಕ್ಕಳು ತಾವು ಬರೆದ ಉತ್ತರಗಳನ್ನು ಪರೀಕ್ಷಿಸಲು ಅನುಕೂಲವಾಗುತ್ತಿತ್ತು.. ಈಗ ಆ ಪ್ರಶ್ನೆಗಳ ಸಂಖ್ಯೆ 300 ರ ಗಡಿಯನ್ನು ದಾಟಿದೆ..
ಕರಿಯರ್‌ನಲ್ಲೂ ನಿಂತ ನೀರಾಗದೆ ಹಲವು ಹೊಸ ಸಂಗತಿಗಳನ್ನು ಕಲಿತ ಖುಷಿ ನನ್ನದು. ಆನ್‌ಲೈನ್ ಮತ್ತು ಯೂಟ್ಯೂಬ್‌ನಲ್ಲಿ ಕಲಿತಿರುವುದು. ಖುಷಿಕೊಟ್ಟ ಕಲಿಕೆ
ಈ ವರ್ಷ ಡಿಜಿಟಲ್ ಜಗತ್ತಿನಲ್ಲಿ ಹಲವು ಹೊಸ ವಿಷಯಗಳನ್ನು ಕಲಿತ ಸಮಧಾನ ನನ್ನಲ್ಲಿದೆ. ಈ 2023 ವರ್ಷವನ್ನು ಸಾರ್ಥಕಗೊಳಿಸಿದೆ.
ಹೀಗೆ 2023 ನನಗೆ ಮರೆಯಲಾಗದ ವರ್ಷ ಅದರಿಂದ ನಾನು ಬಹಳಷ್ಟು ಕಲಿತಿದ್ದೇನೆ...
Thank you so.. much..2023...
Good bye..🙏🙏🙏💐💐💐

No comments:
Post a Comment