Thursday, December 7, 2023

Report

ನಮ್ಮ ಪರಿಸರ 

 ಕಥೆ-235

ಹೊಟ್ಟೆ ತುಂಬಿದ್ದರೆ ಬೇಟೆಯಾಡುವುದಿಲ್ಲ...

ಅರ್ಥಪೂರ್ಣವಾದ ಥಾಯ್ಲೆಂಡ್ ದೇಶದ ಜಾನಪದ ಕತೆಯೊಂದು ಇಲ್ಲಿದೆ. ಅಲ್ಲೊಬ್ಬ ಮಹಾರಾಜರಿದ್ದರಂತೆ. ಒಮ್ಮೆ ಅವರು ಬೇಟೆಗೆ ಹೋಗಿದ್ದರು. ಕಾಡಿನಲ್ಲಿ ಹುಲಿ, ಸಿಂಹ ಮುಂತಾದ ಕ್ರೂರ ಪ್ರಾಣಿಗಳನ್ನು ಧೈರ್ಯವಾಗಿ ಬೇಟೆಯಾಡಿದರು. ಅವರಿಗೆ ಬಹಳ ಖುಷಿಯಾಯಿತು. ಅಂದು ಸಂಜೆ ಅವರ ವಿಶ್ರಾಂತಿಗಾಗಿ ಕಾಡಿನಲ್ಲೇ ಒಂದು ಗುಡಾರ ಸಿದ್ಧವಾಗಿತ್ತು. ಅವರು ಗುಡಾರದಲ್ಲಿ ಮಲಗಿಕೊಂಡರು. ಗಡದ್ದಾದ ನಿದ್ರೆಯನ್ನೂ ಮಾಡಿದರು. ಆದರೆ ಇದ್ದಕ್ಕಿದ್ದಂತೆ ಮಧ್ಯರಾತ್ರಿ ಎಚ್ಚರವಾಯಿತು.

ಕಣ್ಣುಬಿಟ್ಟು ನೋಡಿದಾಗ ಅಲ್ಲೊಂದು ಕಾಡಿನ ಇಲಿ ಕಂಡಿತು. ಅದು ಫಳ-ಫಳ ಹೊಳೆಯುವ ಕಣ್ಣುಗಳಿಂದ ಮಹಾರಾಜರನ್ನೇ ದಿಟ್ಟಿಸಿ ನೋಡುತ್ತಾ ಕುಳಿತಿತ್ತು. ಹಗಲಿನಲ್ಲಿ ಹುಲಿ, ಸಿಂಹಗಳನ್ನು ಧೈರ್ಯವಾಗಿ ಬೇಟೆಯಾಡಿದ್ದ ರಾಜರಿಗೆ ರಾತ್ರಿಯಲ್ಲಿ ಕಾಡಿಲಿಯನ್ನು ನೋಡಿ ಹೆದರಿಕೆಯಾಯಿತು. ಅದು ತನ್ನನ್ನು ಕಚ್ಚಿಬಿಟ್ಟರೆ ಎಂಬ ಹೆದರಿಕೆ! ಮಹಾರಾಜರು ತಕ್ಷಣ ಚಪ್ಪಾಳೆ ತಟ್ಟಿದರು. ಆಳುಗಳು ಬಂದರು. ಮಹಾರಾಜರು ಕಾಡಿಲಿಯನ್ನು ತೋರಿಸಿದರು.

ಆಳುಗಳು ಅದ್ಯಾವ ಮಹಾ ಎಂದುಕೊಂಡು ಇಲಿಯನ್ನು ಹೊಡೆಯಲು ಹೋದರು. ಆದರೆ ಇಲಿ ತಪ್ಪಿಸಿಕೊಂಡು ಬಿಟ್ಟಿತು. ಆಳುಗಳು ಎಷ್ಟು ಕಷ್ಟಪಟ್ಟರೂ ಅವರ ಏಟಿಗೆ ಕಾಡಿಲಿ ಸಿಗಲಿಲ್ಲ. ಆಳುಗಳು ಅಯ್ಯೋ ಮಹಾಸ್ವಾಮಿ, ಈ ಕಾಡಿಲಿ ನಮ್ಮ ಕೈಗೆ ಸಿಗುತ್ತಿಲ್ಲ ಎಂದು ಕೈಚೆಲ್ಲಿಬಿಟ್ಟರು. ಮಹಾರಾಜರು ಸೇನಾಧಿಪತಿಯನ್ನು ಕರೆಸಿದರು. ಸೇನಾಧಿಪತಿಯವರೂ ಕೈಯಲ್ಲಿ ಕತ್ತಿ ಹಿಡಿದು ಕಾಡಿಲಿಯನ್ನು ಕೊಲ್ಲಲು ಪ್ರಯತ್ನಿಸಿದರು. ಅವರ ಕೈಗೂ ಕಾಡಿಲಿ ಸಿಗಲಿಲ್ಲ. ಆ ಪಾಪಿಷ್ಠ ಕಾಡಿಲಿ ಗುಡಾರವನ್ನು ಬಿಟ್ಟು ಹೋಗುತ್ತಲೂ ಇಲ್ಲ. ಏಟಿಗೂ ಸಿಗುತ್ತಿರಲಿಲ್ಲ. ಮಹಾರಾಜರು ಮಲಗುವುದಾದರೂ ಹೇಗೆ? ಕೊನೆಗೆ ಮಂತ್ರಿಗಳನ್ನು ಕರೆಸಿದರು. ಮಂತ್ರಿಗಳು ಅದ್ಯಾವ ಮಹಾ ಕೆಲಸ ಮಹಾಸ್ವಾಮಿ. ಅರಮನೆಯ ಬೆಕ್ಕನ್ನು ಕರೆಸಿದರಾಯಿತು.

ಅದು ಕಾಡಿಲಿಯನ್ನು ತಿಂದುಹಾಕುತ್ತದೆ ಎಂದರು. ಅರಮನೆಯ ಬೆಕ್ಕನ್ನು ಕರೆಸಿದರು. ಅರಮನೆಯಲ್ಲಿ ದಷ್ಟಪುಷ್ಟವಾಗಿ ಬೆಳೆದಿದ್ದ ಅರಮನೆಯ ಬೆಕ್ಕಿನ ಮೇಲೆ ಕಾಡಿಲಿಯೇ ಎಗರಿಬಿಟ್ಟಿತು. ಅದರ ರಭಸಕ್ಕೆ ಅರಮನೆಯ ಬೆಕ್ಕು ಗಾಬರಿಯಾಗಿಬಿಟ್ಟಿತು. ಅದು ಗುಡಾರದಿಂದ ಹೊರಕ್ಕೆ ಓಡಿಹೋಯಿತು. ಎಲ್ಲರಿಗೂ ಆಶ್ಚರ್ಯ. ಮಂತ್ರಿಗಳು ಬಹಳ ಯೋಚಿಸಿದರು. ಆಗ ಅವರಿಗೆ ಹತ್ತಿರದಲ್ಲೇ ಇದ್ದ ಬಡವರ ಗುಡಿಸಲೊಂದು ಕಂಡಿತು. ಅವರು ಆ ಗುಡಿಸಲ ನಿವಾಸಿಗಳಿಂದ ಗುಡಿಸಲ ಬೆಕ್ಕನ್ನು ಕರೆಸಿದರು. ಕೊಂಚ ಹೊತ್ತು ಆ ಗುಡಿಸಲ ಬೆಕ್ಕು ಕಾಡಿಲಿಯನ್ನೂ, ಕಾಡಿಲಿಯು ಗುಡಿಸಲ ಬೆಕ್ಕನ್ನೂ ಪರಸ್ಪರ ದಿಟ್ಟಿಸಿ ನೋಡತೊಡಗಿದವು. ಆನಂತರ ಇದ್ದಕ್ಕಿದಂತೆ ಗುಡಿಸಲ ಬೆಕ್ಕು ಕಾಡಿಲಿಯ ಮೇಲೆ ಎಗರಿತು.ಅನಿರೀಕ್ಷಿತವಾದ ಮತ್ತು ಧೈರ್ಯವಾದ ದಾಳಿಯಿಂದ ಕಾಡಿಲಿ ಕಂಗಾಲಾಗಿ ನಿಂತಿತು. ನಿಮಿಷ ಮಾತ್ರದಲ್ಲಿ ಗುಡಿಸಲ ಬೆಕ್ಕು ಕಾಡಿಲಿಯನ್ನು ತಿಂದುಹಾಕಿತು! ಆನಂತರ ಮಹಾರಾಜರೂ ಸೇರಿದಂತೆ ಎಲ್ಲರೂ ಆರಾಮವಾಗಿ ಮಲಗಿದರಂತೆ.

ಗುಡಿಸಲು ಬೆಕ್ಕು ಹಿಂತಿರುಗಿ ಹೋಗುವಾಗ ಗುಡಾರದ ಹೊರಗಡೆ ಅಡಗಿ ಕುಳಿತಿದ್ದ ಅರಮನೆಯ ಬೆಕ್ಕು ಹೇ ಗುಡಿಸಲ ಬೆಕ್ಕೇ! ಮಹಾರಾಜರ ಆಳುಗಳಿಂದ ಆಗದ, ಸೇನಾಧಿಪತಿಗಳಿಂದ ಆಗದ, ಕೊನೆಗೆ ಅರಮನೆಯ ಬೆಕ್ಕಾದ ನನ್ನಿಂದಲೂ ಆಗದ ಆ ಕಾಡಿಲಿಯನ್ನು ನೀನು ಹೇಗೆ ಕೊಂದೆ? ಎಂದು ಕೇಳಿದಾಗ, ಗುಡಿಸಲ ಬೆಕ್ಕು ಗಟ್ಟಿಯಾಗಿ ನಕ್ಕು ಅದ್ಯಾವ ಮಹಾ ವಿಷಯ? ನಿಮಗೆಲ್ಲಾ ಹೊಟ್ಟೆ ತುಂಬಿತ್ತು. ಹೊಟ್ಟೆ ತುಂಬಿದವರಿಂದ ಬೇಟೆಯಾಡಲು ಸಾಧ್ಯವಾಗುವುದಿಲ್ಲ!

ನನಗೆ ಹೊಟ್ಟೆ ಹಸಿಯುತ್ತಿತ್ತು. ಹೊಟ್ಟೆ ಹಸಿವು ಇರುವುವರಿಂದ ಮಾತ್ರ ಬೇಟೆಯಾಡಲು ಸಾಧ್ಯ! ಎಂದು ಹೇಳಿ ಅಲ್ಲಿಂದ ಹೋಯಿತು. ಅರಮನೆಯ ಬೆಕ್ಕು ಕಕ್ಕಾಬಿಕ್ಕಿಯಾಗಿ ನಿಂತಿತ್ತು. ಆ ಗುಡಿಸಲ ಬೆಕ್ಕಿನ ಮಾತುಗಳು ನಿಜವಲ್ಲವೇ? ಹೊಟ್ಟೆ ತುಂಬಿದವರಿಂದ ಬೇಟೆಯೇ ಏಕೆ, ಯಾವ ಕೆಲಸವೂ ಆಗುವುದಿಲ್ಲ ಅಲ್ಲವೇ? ಹೊಟ್ಟೆ ಹಸಿದವರಿಗೆ ಇರುವ ಕೆಚ್ಚು, ಕಿಚ್ಚು ಹೊಟ್ಟೆ ತುಂಬಿದವರಿಗೆ ಇರುವುದಿಲ್ಲ ಅಲ್ಲವೇ? ಇದು ಥಾಯ್ ನಾಡಿನಲ್ಲೂ ಸತ್ಯ! ನಮ್ಮ ತಾಯಿನಾಡಿನಲ್ಲೂ ಸತ್ಯ! ಅಲ್ಲವೇ?

ಅದೇ ರೀತಿ ವಿದ್ಯಾರ್ಥಿಗಳಲ್ಲಿ ಜ್ಞಾನದ ಹಸಿವು ಬೇಕೇ ಬೇಕು ಇಲ್ಲದಿದ್ದರೆ ಪುಸ್ತಕ ನೋಡಿ ಅರಮನೆ ಬೆಕ್ಕಿನಂತೆ ಪುಸ್ತಕದಿಂದ ದೂರ ಕೂಡುವುದಾಗುತ್ತದೆ, ವಿದ್ಯಾರ್ಥಿಗಳಾದವರು ಜ್ಞಾನದ ಹಸಿವು ಮತ್ತು ಓದುವ ಹವ್ಯಾಸ ಬೆಳೆಸಿಕೊಳ್ಳಲೇಬೇಕು.. ಆಗ ಮಾತ್ರ ವಿಷಯದ ಬೇಟೆಯಾಡಬಹುದು..

ಕೃಪೆ :ವಿಶ್ವವಾಣಿ.

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು