Thursday, January 11, 2024

ಕಥೆ-271 

ಭೂ ತಾಯಿ ಆರಾಧಿಸುವ ರೈತರ ಹಬ್ಬ, ಎಳ್ಳು ಅಮಾವಾಸ್ಯೆ


ಭೂ ತಾಯಿಗೆ ಚೆರಗ ಚೆಲ್ಲುವ ಮೂಲಕ ಭೂ ತಾಯಿಯನ್ನು ಪೂಜಿಸುವ ಹಬ್ಬ ಎಳ್ಳು ಅಮಾವಾಸ್ಯೆ,ಈ ಹಬ್ಬಕ್ಕೆ ಮನದಲ್ಲಿ ಸಂಭ್ರಮ, ಸಡಗರ ಮನೆಮಾಡಿರುತ್ತದೆ. 

ನನ್ನ ಬಾಲ್ಯದ ನೆನಪಿನಲ್ಲಿ ಅಮಾವಾಸ್ಯೆಯ ದಿನ ನಮ್ಮ ಮನೆಯ 'ಬಿಜಕಲ್ ಹೋರಿ' ಮತ್ತು 'ಸೀಮೆ ಹೋರಿ' ಈ ಎರಡು ಎತ್ತುಗಳು ದೋಟಿಹಾಳದಲ್ಲಿ ಪ್ರಸಿದ್ಧವಾಗಿದ್ದವು. ಏಕೆಂದರೆ ಇವೆರಡರ ಜೋಡಿ ಬಂಡಿಯ ಓಟವನ್ನು ಹಿಂಬಾಲಿಸುವುದು ಕಷ್ಟಕರ ಆ ರೀತಿ ಓಡುವ ಎತ್ತುಗಳಾಗಿದ್ದವು. ಅದರಲ್ಲೂ ಬೀಜಕಲ್ ಹೋರಿ ಅತ್ಯಂತ ಸಾಧು, ಅಷ್ಟೇ ಹುಷಾರು.. ಒಂದು ಸಣ್ಣ ಮಗು ಅದರ ಮುಂದೆ ಹೋದರೂ ಅದು ಅತ್ಯಂತ ಸಭ್ಯನಾಗಿ ವರ್ತಿಸುತ್ತಿತ್ತು.. ಅದನ್ನು "ರಾಮ" ಎಂದು ಕರೆಯುತ್ತಿದ್ದರು

 ಆದರೆ ಇನ್ನೊಂದು ಸೀಮೆ ಹೋರಿ ಭಯಂಕರ ಉಗ್ರ, ಅದಕ್ಕೆ ಬಾರ್ಕೋಲ್ ಬೆದರಿಕೆ ತೋರಿಸಿದಾಗ ಮಾತ್ರ ಸುಮ್ಮನೆ ಇರುತ್ತಿತ್ತು.. ಇಲ್ಲದಿದ್ದರೆ ಉಗ್ರ ರೂಪ ತಾಳುತ್ತಿತ್ತು. ಅಂದರೆ ಹಾಯಲು ಬರುತ್ತಿತ್ತು... ಅದನ್ನು "ಬಸ್ಯಾ" ಎಂದು ಕರೆಯುತ್ತಿದ್ದರು.

ನಮ್ಮ ಕಾಕನಿಗೆ ಅವುಗಳೆಂದರೆ ಪಂಚಪ್ರಾಣ..

ಹಬ್ಬದ ದಿನ ಅವುಗಳನ್ನು ತೊಳೆದು ಮೈ ತುಂಬಾ ಬಣ್ಣದಿಂದ ಸಿಂಗರಗೊಳಿಸುತ್ತಿದ್ದ ನಮ್ಮ ಕಾಕ, ಮತ್ತು ಆತನಿಗೆ ಸಹಾಯಕರು ಇರುತ್ತಿದ್ದರು.. ಕೊಂಬುಗಳಿಗೆ ಕೋಡಣಸು, ಬಣ್ಣಬಣ್ಣದ ರಿಬ್ಬನ್ ಕಟ್ಟಿ, ಕೊರಳಲ್ಲಿ ಗುಮ್ಮರಿ ಸರ ಕಟ್ಟಿ, ಹಣೆಗೆಜ್ಜೆ ಹಾಕಿ, ಎತ್ತಿನ ಮೈ ತುಂಬಾ ಚಿತ್ತಾರದ ಝೂಲ ಹಾಕಿ, ಎತ್ತಿನ ಬಂಡಿಗೆ ಬಣ್ಣ ಬಣ್ಣದ ಸಿಂಗಾರ ಮಾಡುತ್ತಿದ್ದ ನಮ್ಮ ಕಾಕ. 

ನಮ್ಮ ಮನೆಯಲ್ಲಿ ವಾರದ ಹಿಂದೆ ಎಳ್ಳು ಹಚ್ಚಿದ ಸಜ್ಜೆಯ ರೊಟ್ಟಿ ಎಳ್ಳು ಹಚ್ಚಿದ ಜೋಳದ ರೊಟ್ಟಿ ತಯಾರಿ ಜೋರಾಗಿರುತ್ತಿತ್ತು..ಎಳ್ಳು ಹೋಳಿಗೆ, ಶೇಂಗಾ ಹೋಳಿಗೆ ಉರುಣದ ಹೋಳಿಗೆ,ಚಾಪಾತಿ ಪಲ್ಯ,ಚಟ್ನಿ ಹಾಗೂ ತಿಂಡಿ ತಿನಿಸುಗಳ ತಯಾರಿ ಚೆನ್ನಾಗಿ ನಡೆಯುತ್ತಿತ್ತು. ನಮ್ಮ ಹೊಲಕ್ಕೆ ಅನೇಕರು ಬರುತ್ತಿದ್ದ ಕಾರಣ ನಮ್ಮ ಚಿಕ್ಕಮ್ಮನವರು ದೊಡ್ಡ ಬುತ್ತಿ ಮಾಡುತ್ತಿದ್ದರು. ಬಂಧುಗಳನ್ನು ಮಹಿಳೆಯರನ್ನು, ಸಣ್ಣ ಮಕ್ಕಳನ್ನು ಬಂಡಿ ಮೂಲಕ, ಪುರುಷರು ಸೈಕಲ್ ಅಥವಾ ನಡೆದುಕೊಂಡು ಹೊಲಕ್ಕೆ ಬರುತ್ತಿದ್ದರು.

 ಆ ಬಂಡಿಯ ಗರಗರ ಸದ್ದು, ಎತ್ತುಗಳ ಗುಮರಿಗಳ ನಾದ, ಗೆಜ್ಜೆಗಳ ಸದ್ದು, ಅವುಗಳ ಮೈ ಮೇಲಿನ ಝೂಲ, ಅವುಗಳ ಸಿಂಗಾರ ನೋಡಲು ಸುಂದರವಾದ ದೃಶ್ಯ ಈಗಲೂ ಮತ್ತೆ ಮತ್ತೆ ನೆನಪಾಗುತ್ತಿದೆ.

ಹೊಲದಲ್ಲಿ 5 ಸಣ್ಣ ಕಲ್ಲುಗಳನ್ನು ಹುಡುಕಿಕೊಂಡು ಬನ್ನಿಗಿಡದ ಕೆಳಗಡೆ ಇಟ್ಟು ಭೂ ತಾಯಿಗೆ ಪೊಜೆ ಮಾಡುವುದು ಭಕ್ತಿ ಭಾವವನ್ನು ಎತ್ತಿ ತೋರುತ್ತಿತ್ತು. ಹಾಗೂ ತಾವು ತಯಾರಿಸಿದ ಹಲವು ರೀತಿಯ ನೈವೇಧ್ಯವನ್ನು ಭೂ ತಾಯಿಗೆ ಅರ್ಪಿಸುತ್ತಿದ್ದರು ನಮ್ಮ ಚಿಕ್ಕಮ್ಮ. ಜೊತೆಗೆ ಹೋಳಿಗೆ,ಅನ್ನ ಈ ರೀತಿ ನೈವೇದ್ಯವನ್ನು ಭೂ ತಾಯಿಗೆ, ಬನ್ನಿ ಗಿಡದ ಸುತ್ತ 5 ಸುತ್ತು ಸುತ್ತುತ್ತಾ “ಹುಲ್ಲು ಹುಲ್ಲಿಗೋ, ಚೆಲ್ಲ ಚೆಲ್ಲಂಬರಿಗೋ” ಎಂದು ಹೇಳುತ್ತಾ ನಾವೂ ಕೂಡಾ ಸುತ್ತು ಹಾಕುತ್ತಾ ಪೊಜೆ ಮಾಡುತ್ತಿದ್ದೆವು.. ಕುಟುಂಬದ ಸದಸ್ಯರು ಬಂಧುಗಳು ಸ್ನೇಹಿತರು ಎಲ್ಲರೂ ಒಂದೇ ಕಡೆ ಕುಳಿತುಕೊಂಡು ಊಟ ಮಾಡಿ ಆಟ ಆಡಿ ಸಂಭ್ರಮಿಸುತ್ತ ನಂತರ ಹಸಿ ಕಡಲೆ ಗಿಡಗಳನ್ನು ಕಿತ್ತಿ ಕಾಯಿಗಳ ಸ್ವಾದವನ್ನು ಆಸ್ವಾದಿಸುತ್ತ, ಬಂದಿರುವ ಬಂಧುಗಳಿಗೆ, ಸ್ನೇಹಿತರಿಗೂ ಸಹ ಕಡಲೆ ಗಿಡಗಳನ್ನು ಕೊಟ್ಟು ಸಂಭ್ರಮಿಸಿದ ರೀತಿ ತುಂಬಾ ಸುಂದರ.

ನಂತರ ನಮ್ಮ ಮನೆಯಲ್ಲಿ ಬಂಧುಗಳ ಮತ್ತು ಕುಟುಂಬದ ಸದಸ್ಯರ ಸಂಖ್ಯೆ ಹೆಚ್ಚಾಯಿತು.. ಚರಗ ಚೆಲ್ಲುವ ವಿಧಾನ ಬದಲಾಯಿತು ಹೊಸದಾಗಿ ತೆಗೆದುಕೊಂಡ ಟ್ರ್ಯಾಕ್ಟರ್ ಚರಗಾ ಚೆಲ್ಲಲು ವಾಹನವಾಯಿತು..

ನಂತರದ ದಿನಗಳಲ್ಲಿ ಟಾಟಾ ಎಸಿ, ಕ್ರಷರ್ ಗಳು ಆ ಸ್ಥಾನವನ್ನು ತುಂಬಲು ಶುರು ಮಾಡಿದವು.. ಆದರೆ ಆ ಎತ್ತು ಬಂಡಿ ಸ್ಥಾನವನ್ನು ಯಾರಿಂದಲೂ ತುಂಬಲು ಸಾಧ್ಯವಿಲ್ಲ ಎಂದೆನಿಸುತ್ತಿದೆ..

ಈಗೀಗ ಅನ್ಯ ಕಾರ್ಯಗಳ ನಿಮಿತ್ತ ಕೆಲವೊಂದು ಸಂದರ್ಭದಲ್ಲಿ ದೋಟಿಹಾಳ ಚರಗ ನನಗೆ ಮಿಸ್ ಆಗುತ್ತಿದೆ.. ಈ ಸಾರಿ ಮಿಸ್ ಆಯ್ತು..

ಈ ಸಾರಿ ಮಗಳಾದ ತನು'ಳನ್ನು ನವೋದಯ ವಿದ್ಯಾಲಯದವರು ಇದೆ ಅಮಾವಾಸ್ಯೆಯ ದಿನ ಮಧ್ಯಾಹ್ನ 12:00 ನಂತರ ಸಂಕ್ರಮಣ ರಜೆಗೆ ಕಳಿಸಿದ ಕಾರಣ ಈ ವರ್ಷನೂ ದೋಟಿಹಾಳ ಚರಗ ಸಾಧ್ಯವಾಗಲಿಲ್ಲ..

ಕೆಲವೊಮ್ಮೆ ಮುಧೋಳದಲ್ಲಿ ನಮ್ಮ ಶಾಲೆಯ ವೃತ್ತಿ ಶಿಕ್ಷಕರಾದ ಶ್ರೀ ಶರಣಪ್ಪ ಶಿಳ್ಳಿನ ಇವರ ಹೊಲದಲ್ಲಿ ಎಳ್ಳು ಅಮವಾಸ್ಯೆ ಆಚರಣೆಯಾಗುತ್ತದೆ..

 ಪ್ರತಿ ವರ್ಷದಂತೆ ಈ ವರ್ಷನೂ ನಮ್ಮ ಹಿರೇಮ್ಯಾಗೇರಿಯ ಕೆಲವು ವಿದ್ಯಾರ್ಥಿಗಳು ಎಳ್ಳು ಅಮಾವಾಸ್ಯೆ ಹಬ್ಬಕ್ಕಾಗಿ ಅಹ್ವಾನ ನೀಡಿದ್ದರು. 

ಯಥಾ ಪ್ರಕಾರ ಈ ವರ್ಷನೂ ನಮ್ಮ ಶಿಳ್ಳಿನ ಸರ್ ಅವರು ಕುಟುಂಬ ಸಮೇತ ಬರಲು ಅಹ್ವಾನ ನೀಡಿದ್ದರು..

 ಈ ವರ್ಷ ಕೂಡ ಅವರ ಹೊಲದಲ್ಲಿಯೇ ನಮ್ಮ ಕುಟುಂಬ ಪರಿವಾರ ಸಮೇತ ಎಳ್ಳು ಅಮವಾಸ್ಯೆ ಆಚರಿಸಲಾಯಿತು.. ಅವರು ನಮ್ಮನ್ನು ಸ್ವಾಗತಿಸಿದ ರೀತಿ ನಿಜಕ್ಕೂ ಖುಷಿ ನೀಡಿತು ಮತ್ತು ನನ್ನ ಬಾಲ್ಯವನ್ನು ನೆನಪಿಗೆ ತಂದಿತು. ನಿರುಪಾದಿ ಸರ್ ಸಾತ್ ನೀಡಿದರು. 

ಶಿಳ್ಳಿನ ಸರ್ ಹೊಲದಲ್ಲಿ ಅವರ ಕುಟುಂಬ ಬಂಧುಗಳು ಅವರಕ್ಕ, ಅಕ್ಕನ ಮಕ್ಕಳಾದ ಶಿವು ಮತ್ತು ಪ್ರಶಾಂತ್ ಭಾಗಿಯಾಗಿದ್ದರು.

ಶಿವು ಅವರು ಪತ್ರಿಕೆ ವರದಿಗಾರರು, ಅವರ ಸ್ನೇಹಕ್ಕೆ ಅತಿಥಿಗಳಾಗಿ ಪೊಲೀಸ್ ಸ್ನೇಹಿತರು ಭಾಗಿಯಾಗಿದ್ದರು.

ಪ್ರಶಾಂತ್ ಅವರು ಅಪ್ಪಟ ರೈತ. ತಾವು ಒಬ್ಬರೇ ಸುಮಾರು 70 ಎಕರೆ ಹೊಲದ ಉಳುಮೆಯನ್ನು ಟ್ರಾಕ್ಟರ್ ಸಹಾಯದಿಂದ ಮಾಡುತ್ತಾರೆ.. ತಮ್ಮ ಪರಿಶ್ರಮದಿಂದ ಲಕ್ಷಾಂತರ ಬೆಳೆಯನ್ನು ಬೆಳೆಯುತ್ತಾರೆ. ಇವರು ಮಾದರಿ ರೈತರಾಗಿ ಕಂಡು ಬರುತ್ತಾರೆ.. ಬಂದ ಅತಿಥಿಗಳಿಗೆ ಅತಿಥಿ ದೇವೋಭವ ಎನ್ನುವಂತೆ ಸತ್ಕಾರ ಮಾಡಿದ ರೀತಿ ತುಂಬಾ ಚೆನ್ನಾಗಿತ್ತು. ಅವರು ಮಾಡಿಸಿದ ಊಟದಿಂದಾಗಿ ರಾತ್ರಿ ಊಟ ಬೇಡವೇ ಬೇಡ ಎನ್ನುವಂತಾಗಿತ್ತು..

ಅವರಿಗೆ ಹೃದಯಪೂರ್ವಕ ನಮನಗಳು..

ಇವತ್ತಿನ ಎಳ್ಳು ಅಮಾವಾಸ್ಯೆ ಅಹ್ವಾನ ನೀಡಿದ ಶಿಳ್ಳಿನ ಸರ್ ಗೂ ಅವರ ಕುಟುಂಬಕ್ಕೂ ಹೃದಯಪೂರ್ವಕ ಧನ್ಯವಾದಗಳು🙏🙏🙏


ವೈಜ್ಞಾನಿಕತೆ : 

5 ಕಲ್ಲುಗಳ ಪೂಜೆ, ಪಾಂಡವರನ್ನು ಪೂಜ್ಯ ಭಾವನೆಯಿಂದ ಕಾಣುವ ರೀತಿಯಾಗಿದೆ..

ಬನ್ನಿ ಮರ ಅತ್ಯಂತ ಪವಿತ್ರ ಮರ ಎಂಬ ನಂಬಿಕೆ ಇದೆ.

“ಹುಲ್ಲು ಹುಲ್ಲಿಗೋ ಚೆಲ್ಲ ಚೆಲ್ಲಂಬರಿಗೋ.. ಎಂಬುದು

ತಳದಲ್ಲಿರುವ ಹುಲ್ಲಿಗೂ ಮತ್ತು ಅಂಬರಕ್ಕೂ ನೈವೇದ್ಯ ಅರ್ಪಣೆ ಎನ್ನುವ ಧನ್ಯತಾ ಭಾವನೆ ರೈತರದ್ದು.. ಅದರ ವೈಜ್ಞಾನಿಕ ಹಿನ್ನೆಲೆ ನೋಡಿದಾಗ

ಎಳ್ಳು ಅಮಾವಾಸ್ಯೆಯ ಸಮಯದಲ್ಲಿ ಹಿಂಗಾರು ಪೈರುಗಳು ಬೆಳೆದಿರುತ್ತವೆ. ಉತ್ತರ ಕರ್ನಾಟಕದಲ್ಲಿ ಹೆಚ್ಚಾಗಿ ಜೋಳ ಮತ್ತು ಕಡಲೆಯನ್ನು ಬೆಳೆಯುತ್ತಾರೆ. ಹಾಗಾಗಿ ಜೋಳದ ಮಧ್ಯೆ ಕಡಲೆ ಬೆಳೆಗೆ ಕಾಯಿಕೊರಕ ಹುಳುವು ಬಿದ್ದು ಬೆಳೆಯ ನಾಶಕ್ಕೆ ಕಾರಣವಾಗುತ್ತದೆ. ಆದ್ದರಿಂದ ನಾನಾ ಬಗೆಯ ಖಾದ್ಯಗಳನ್ನು ಚರಗ ಚೆಲ್ಲಿದಾಗ ಅವುಗಳನ್ನು ತಿನ್ನುವ ಸಲುವಾಗಿ ಹಕ್ಕಿಗಳು ಹೊಲಕ್ಕೆ ಬಂದಾಗ ಈ ಹುಳಗಳನ್ನು ಕಂಡು ಅವುಗಳನ್ನು ತಿನ್ನುತ್ತವೆ. ಇದರಿಂದ ಕಾಯಿಕೊರಕದ ಹುಳುಗಳ ನಿಯಂತ್ರಣವಾಗುತ್ತದೆ. 

ಹೊಲಗಳಲ್ಲಿ ಬೆಳೆದು ನಿಂತ ಪೈರು ಹಾಗೂ ಭೂಮಿ ತಾಯಿಗೆ ಪೂಜೆ ಸಲ್ಲಿಸಿ ನೈವೇದ್ಯ ಅರ್ಪಿಸುವುದನ್ನು ಚರಗ ಎನ್ನುತ್ತಾರೆ.

ಚರಗ ಚೆಲ್ಲುವ ಆಚರಣೆ ರೈತರು ತಾವು ಬೆಳೆದ ಬೆಳೆಗೆ ಸಂತೃಪ್ತಿ ಪಡಿಸಲು ಚರಗವನ್ನು ಚೆಲ್ಲುತ್ತಾರೆ.

ಸಾಮಾಜಿಕತೆ:

ನಮ್ಮ ಪ್ರತಿಯೊಂದು ಹಬ್ಬವೂ ಸಹ ಒಂದು ಭಾವೈಕ್ಯತೆಯನ್ನು ಸಾರುತ್ತದೆ..

ಎಳ್ಳು ಅಮಾವಾಸ್ಯೆ ಹಬ್ಬ, ರೈತರ ಹಬ್ಬವಾಗಿದ್ದು, ಜಾತಿ, ಮತ ಭೇದವಿಲ್ಲ.ಈ ಹಬ್ಬ ಬಾಂಧವ್ಯಗಳನ್ನು ಬೆಸೆಯುವುದರ ಜೊತೆಗೆ ಸಹೋದರರಲ್ಲಿ ಏಕತೆಯನ್ನು ನೆರೆಯವರೊಂದಿಗೆ ಉತ್ತಮ ಬಾಂಧವ್ಯವನ್ನು ಮೂಡಿಸುವ ಒಂದು ರೀತಿಯ ಪಿಕ್ನಿಕ್ ಆಗಿದೆ..

ಎಲ್ಲರೂ ಭೂತಾಯಿಗೆ ತೋರುವ ಗೌರವದ ಹಬ್ಬವಾಗಿದೆ

💐💐💐💐💐

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು