ಕಥೆ-273
ನನ್ನ ನಮಸ್ಕಾರ ನಿಮಗಲ್ಲ ! ನಿಮ್ಮೊಳಗಿನ ಹೃದಯಾತ್ಮಕ್ಕೆ!
ಕುತೂಹಲಕಾರಿಯಾದ ಪುಟ್ಟ ಪ್ರಸಂಗವೊಂದು ಇಲ್ಲಿದೆ. ಅದು ನಮಸ್ಕಾರ ಪ್ರಕ್ರಿಯೆಯ ಬಗ್ಗೆ ಇದೆ. 1967ರ ಸುಮಾರಿನಲ್ಲಿ ಮೈಸೂರಿನ ಸರಸ್ವತಿಪುರಂನಲ್ಲಿ ಗಾಂಧಿ ಸ್ಮಾರಕ ನಿಧಿಯವರು ನಡೆಸುತ್ತಿದ್ದ ವಿದ್ಯಾರ್ಥಿ ನಿಲಯವೊಂದಿತ್ತು. ಅದಕ್ಕೆ ಹಿರಿಯ ಗಾಂಧೀವಾದಿಗಳಾದ ಕೆ.ಎಸ್.ನಾರಾಯಣ ಸ್ವಾಮಿಯವರು ಎಂಬ ಮಹನೀಯರು ಅಧ್ಯಕ್ಷರಾಗಿದ್ದರು. ಅವರು ಆಗಾಗ್ಗೆ ವಿದ್ಯಾರ್ಥಿ ನಿಲಯಕ್ಕೆ ಬರುತ್ತಿದ್ದರು. ವಿದ್ಯಾರ್ಥಿಗಳೊಂದಿಗೆ ಮಾತ ನಾಡುತ್ತಿದ್ದರು. ಒಂದಷ್ಟು ಒಳ್ಳೆಯ ವಿಚಾರಗಳನ್ನು ತಿಳಿಸಿ ಕೊಡುತ್ತಿದ್ದರು. ಅವರನ್ನು ಕಂಡಾಕ್ಷಣ ಅಲ್ಲಿದ್ದ ವಿದ್ಯಾರ್ಥಿಗಳು ‘ಗುಡ್ ಮಾರ್ನಿಂಗ್ ಸಾರ್’ಎನ್ನುತ್ತ ಸ್ವಾಗತಿಸುತ್ತಿದ್ದರು.
ನಾರಾಯಣ ಸ್ವಾಮಿಯವರು ಮಾತ್ರ ತಮ್ಮ ಎರಡು ಕೈಗಳನ್ನು ಜೋಡಿಸಿ ‘ನಮಸ್ಕಾರ ಮಕ್ಕಳೇ’ಎನ್ನುತ್ತಿದ್ದರು. ಒಮ್ಮೆ ವಿದ್ಯಾರ್ಥಿಯೊಬ್ಬರು ಅವರನ್ನು ‘ಸರ್, ನಾವೆಲ್ಲರೂ ಕೈಬೀಸಿ ಗುಡ್ ಮಾರ್ನಿಂಗ್ ಎನ್ನುತ್ತೇವೆ. ತಾವು ಎರಡೂ ಕೈಗಳನ್ನು ಮುಗಿದು ಚಿಕ್ಕವರಾದ ನಮಗೆ ನಮಸ್ಕರಿಸುತ್ತೀರಿ. ಏಕೆ?’ಎಂದು ಕೇಳಿದರು. ಅವರು ಆಗ ಈ ಕತೆ ಹೇಳಿದ್ದರು.
ಒಮ್ಮೆ ಚಕ್ರವರ್ತಿಯೊಬ್ಬರು ರಾಜಧಾನಿಯಲ್ಲಿ ಮೆರವಣಿಗೆ ಹೋಗುತ್ತಿದ್ದರಂತೆ. ಅವರ ಪಕ್ಕದಲ್ಲಿ ಅವರ ಹತ್ತು ವರ್ಷ ವಯಸ್ಸಿನ ಮಗ ರಾಜಕುಮಾರನೂ ಇದ್ದ. ರಸ್ತೆಯಲ್ಲಿ ಕುದುರೆ ಗಾಡಿಗಳಲ್ಲಿ ಹೋಗುತ್ತಿದ್ದವರು,
ಕಾಲ್ನಡಿಗೆಯಲ್ಲಿ ಹೋಗುವ ನಾಗರಿಕರು, ಎಲ್ಲರೂ ನಿಂತು ಕೈಬೀಸಿ ಗೌರವ ಸೂಚಿಸುತ್ತಿದ್ದರು. ಚಕ್ರವರ್ತಿಗಳೂ ಮುಗುಳ್ನಗೆಯೊಂದಿಗೆ ತಾವೂ ಕೈ ಬೀಸುತ್ತಿದ್ದರು. ರಾಜಕುಮಾರನೂ ಸಂತೋಷದಿಂದ ತನ್ನ ಪುಟ್ಟ ಕೈಗಳನ್ನು ಬೀಸುತ್ತ ಸಂಭ್ರಮದಲ್ಲಿ ಭಾಗಿಯಾಗಿದ್ದ. ಮೆರವಣಿಗೆ ಹೀಗೆಯೇ ಸಾಗುತ್ತಿದ್ದಾಗ, ರಸ್ತೆಯ ಬದಿಯಲ್ಲಿ ಹರಕು ಬಟ್ಟೆಯನ್ನುಟ್ಟಿದ್ದ ಭಿಕ್ಷುಕನೊಬ್ಬ ನಿಂತಿದ್ದ.
ಆತನ ತಲೆಯ ಮೇಲೊಂದು ಮುದುಡಿದ್ದ ಹ್ಯಾಟ್ ಇತ್ತು. ಕೈಯಲ್ಲಿ ಭಿಕ್ಷಾಪಾತ್ರೆಯೂ ಇತ್ತು. ಆ ಭಿಕ್ಷುಕ ತನ್ನ ಹ್ಯಾಟನ್ನು ತೆಗೆದು ಕೈಯಲ್ಲಿಟ್ಟು ಕೊಂಡು, ತಲೆ ಬಗ್ಗಿಸಿ ನಮಸ್ಕರಿಸುತ್ತಾ ಗೌರವ ತೋರಿಸಿದ. ಆತನ ಹರಕು ಬಟ್ಟೆಗಳನ್ನೂ, ಕೈಯಲ್ಲಿನ ಭಿಕ್ಷಾಪಾತ್ರೆಯನ್ನೂ ನೋಡಿದ ರಾಜಕುಮಾರ ತನ್ನ ಮುಖ ಕಿವುಚಿಕೊಂಡ. ಆದರೆ ಭಿಕ್ಷುಕನ ನಮಸ್ಕಾರವನ್ನು ಗಮನಿಸಿದ ಚಕ್ರವರ್ತಿಗಳು, ತಕ್ಷಣ ತಮ್ಮ ತಲೆಯ ಮೇಲಿದ್ದ ಚಿನ್ನದ ಕಿರೀಟ ತೆಗೆದು ಕೈಯಲ್ಲಿಟ್ಟುಕೊಂಡು, ತಲೆ ಬಾಗಿಸಿ ಭಿಕ್ಷುಕನಿಗೆ ಪ್ರತಿವಂದಿ ಸಿದರು. ಆನಂತರ ಮತ್ತೆ ಕಿರೀಟವನ್ನು ತಲೆಯ ಮೇಲಿಟ್ಟುಕೊಂಡು ಮೆರವಣಿಗೆಯಲ್ಲಿ ಮುಂದುವರಿದರು.
ಮೆರವಣಿಗೆ ಮುಗಿಸಿ, ಅರಮನೆ ತಲುಪಿದ ತಕ್ಷಣ ರಾಜಕುಮಾರ ಚಕ್ರವರ್ತಿಗಳನ್ನು ಕುರಿತು ‘ನನಗೊಂದು ಸಂದೇಹ ಕಾಡುತ್ತಿದೆ. ಚಕ್ರವರ್ತಿಗಳಾದ ನೀವು, ಆ ಭಿಕಾರಿ ಭಿಕ್ಷುಕನಿಗೆ ಕಿರೀಟ ತೆಗೆದು ತಲೆ ಬಾಗಿಸಿ ವಂದಿಸಿ ಆತನಿಗಿಂತ ಚಿಕ್ಕವರಾಗಿದ್ದೇಕೆ?’ಎಂದು ಕೇಳಿದ. ಚಕ್ರವರ್ತಿಗಳು ನಸುನಗುತ್ತ, ಮಗನ ತಲೆ ಸವರುತ್ತ ‘ಮಗೂ, ನಮಗೂ ಆ ಭಿಕ್ಷುಕನಿಗೂ ಹೋಲಿಕೆಯೇ ಇಲ್ಲ. ಆದರೆ ಆತ ತನ್ನ ಹ್ಯಾಟನ್ನು ತೆಗೆದು ತಲೆಬಾಗಿಸಿ ನಮಗೆ
ವಂದಿಸಿದಾಗ, ನಾವು ಸುಮ್ಮನಿದ್ದರೆ ಸಭ್ಯತೆಯಲ್ಲಿ ನಾವು ಆತನಿಗಿಂತ ಚಿಕ್ಕವರು ಆಗುತ್ತಿರಲಿಲ್ಲವೇ?’ಎಂದಾಗ, ರಾಜಕುಮಾರನ ಸಂದೇಹ ಪರಿಹಾರವಾಗಿತ್ತಂತೆ.
ಕತೆ ಹೇಳಿದ ನಾರಾಯಣ ಸ್ವಾಮಿಯವರು ‘ಚಕ್ರವರ್ತಿಯಂ ತವರೇ ತಲೆಬಾಗಿ ಗೌರವ ತೋರಿಸುವುದರಿಂದ ಚಿಕ್ಕವರಾಗಲಿಲ್ಲ ಅಲ್ಲವೇ? ನಾನು ಎರಡೂ ಕೈಗಳನ್ನು ಎತ್ತಿ ನಮಸ್ಕರಿಸಿದಾಗ ನಾನು ನನ್ನ ಮುಂದಿರುವ ಕಿರಿಯ ವಿದ್ಯಾರ್ಥಿಗೆ ನಮಸ್ಕರಿಸುತ್ತೇನೆ ಎಂದುಕೊಳ್ಳುವುದಿಲ್ಲ. ಆ ವಿದ್ಯಾರ್ಥಿಯ ಹೃದಯದೊಳಗಿರುವ ಪರಮಾತ್ಮನಿಗೆ ನಮಸ್ಕರಿಸುತ್ತೇನೆ ಎಂದುಕೊಳ್ಳುತ್ತೇನೆ.
ಅದೂ ಅಲ್ಲದೆ ಎರಡೂ ಕೈಗಳನ್ನು ಎತ್ತುವುದರಿಂದ, ತಲೆ ಬಾಗುವುದರಿಂದ ನಮಗೂ ಸ್ವಲ್ಪ ವ್ಯಾಯಾಮವಾಗುತ್ತದಲ್ಲವೇ?’ಎಂದು ಹೇಳಿ ಸತ್ಸಂಪ್ರದಾಯವೊಂದರ ಪರಿಚಯ ಮಾಡಿಕೊಟ್ಟರು. ನಾರಾಯಣ ಸ್ವಾಮಿಯವರ ಪುಣ್ಯಸ್ಮರಣೆಗೆ ಪ್ರಣಾಮಗಳು. ಸಂಸ್ಕೃತದ ಶ್ಲೋಕವೊಂದು ‘ಆಕಾಶಾತ್ ಪತಿತಂ ತೋಯಂ ಯಥಾ ಗಚ್ಚತಿ ಸಾಗರಂ ತಥಾ ಸರ್ವದೇವ ನಮಸ್ಕಾರಂ ಕೇಶವಂ ಪ್ರತಿಗಚ್ಚತಿ॥’ಎಂದರೆ ಆಕಾಶದಿಂದ ಬೀಳುವ ಪ್ರತಿ ಹನಿಯೂ ಹೇಗೆ ಕೊನೆಗೆ ಸಾಗರವನ್ನೇ ಸೇರುತ್ತದೋ ಹಾಗೆ ನಾವು ಮಾಡುವ ನಮಸ್ಕಾರವು ಹೃದಯಕ್ಕೆ ಸೇರುತ್ತದೆ ಎಂದು ತಿಳಿಸುತ್ತದೆ. ಹಾಗೆಯೇ ನಾವು ಯಾರಿಗೆ ನಮಸ್ಕರಿಸಿದರೂ ಆ ನಮಸ್ಕಾರವು ನಮ್ಮ ವ್ಯಕ್ತಿತ್ವದ ಅಂತರಾಳದಿಂದ ಸಲ್ಲುತ್ತದಲ್ಲವೇ?
*ಕೃಪೆ :ಷಡಕ್ಷರಿ*.
No comments:
Post a Comment