ಕಥೆ-317
ರೀನಿಯಂ ಅನ್ವೇಷಕಿ ಐಡಾ
ರೀನಿಯಂ ಮೂಲವಸ್ತುವನ್ನು ಪತ್ತೆ ಮಾಡಿದವಳು. ಅಣು ವಿಭಜನೆಯಿಂದ ಸರಪಳಿ ಕ್ರಿಯೆ ಆಗುತ್ತದೆಂದು ಮೊತ್ತಮೊದಲಿಗೆ ತರ್ಕಿಸಿದವಳು. ಐಡಾ ನಡಾಕ್ ಜರ್ಮನಿಯ ಲಾಕ್ ಹೌಸೆನ್ ಎನ್ನುವ ಪಟ್ಟಣದಲ್ಲಿ ಫೆಬ್ರವರಿ 25, 1896 ರಲ್ಲಿ ಜನಿಸಿದಳು. ಅದೇ ವರ್ಷ ಹೆನ್ರಿ ಬೆಕೆರೆಲ್ ಎಂಬ ವಿಜ್ಞಾನಿ ಕಣ್ಣಿಗೆ ಕಾಣದ ಬೆಳಕು ಅರ್ಥಾತ್ ವಿಕಿರಣಗಳು ಇರುತ್ತದೆ ಎಂದು ಪತ್ತೆ ಮಾಡಿದ್ದ. ಜರ್ಮನಿಯ ರಾಂಟ್ಜನ್ ಎಂಬಾತ ಕ್ಷಕಿರಣಗಳನ್ನು ಪತ್ತೆ ಮಾಡಿದ್ದ. ಈ ಶೋಧಗಳು ನಡೆದ ವರ್ಷದಲ್ಲಿಯೇ ಹುಟ್ಟಿದ ಐಡಾ ಕೂಡ ಇದೇ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದು ಕಾಕತಾಳೀಯವಾದರೂ ನಿಜ.
ಕ್ಷಕಿರಣಗಳನ್ನು ಬಳಸುವ ಎಕ್ಸ್‌ರೇ ಡಿಫ್ರಾಕ್ಷನ್ ತಂತ್ರಗಳನ್ನು ಬಳಸಿಕೊಂಡು ರೀನಿಯಂ ಎನ್ನುವ ಮೂಲವಸ್ತುವನ್ನು ಪತ್ತೆ ಮಾಡಿದಳು. ಹಾಗೆಯೇ ಯುರೇನಿಯಂನ ಧಾತು ವಿಕಿರಣ ಸೂಸಿದಾಗ ಮತ್ತೊಂದು ಧಾತುವಾಗುವುದಕ್ಕೆ ಕಾರಣ ಪರಮಾಣುಗಳು ಒಡೆಯುವುದರಿಂದಲೇ ಹೊರತು, ಹೊಸ ವಸ್ತುವಿನ ಸೃಷ್ಟಿಯಿಂದಲ್ಲ ಎಂದು ವಾದಿಸಿದ್ದಳು..
ಹೀಗೆ ಪರಮಾಣು ಬೈಜಿಕ ವಿದಳನ ಎನ್ನುವ ಪ್ರಕ್ರಿಯೆಯ ಬಗ್ಗೆ ಪ್ರಪ್ರಥಮವಾಗಿ ತರ್ಕಿಸಿದವಳಾದಳು. ಐಡಾಳ ತಂದೆ ಒಬ್ಬ ರಸಾಯನಿಕ ತಯಾರಕ. ವಾರ್ನಿಷು ತಯಾರಿಸಿ ಮಾರುತ್ತಿದ್ದ. ಈ ದಂಪತಿಗಳ ಒಬ್ಬಳೇ ಮಗಳಾಗಿ ಐಡಾ ಹುಟ್ಟಿದ್ದಳು. ವಿಜ್ಞಾನವನ್ನು ಮಹಿಳೆಯರು ಹೆಚ್ಚಾಗಿ ವ್ಯಾಸಂಗ ಮಾಡದೇ ಇದ್ದಂತಹ ಕಾಲದಲ್ಲಿ ಐಡಾ ರಸಾಯನ ವಿಜ್ಞಾನದಲ್ಲಿ ಪದವಿ ಪಡೆದಳು. ಬರ್ಲಿನ್ನಿನ ಟೆಕ್ನಿಕೆ ಹೌಸಿಯಲ್ಲಿ ಖನಿಜರಸಾಯನ ವಿಜ್ಞಾನದಲ್ಲಿ ಪದವಿ ಪಡೆದ ನಂತರ ಒಂದೆರಡು ಮೇದಾಮ್ಲಗಳ ಕುರಿತು ಸಂಶೋಧನೆಯಲ್ಲಿ ತೊಡಗಿದಳು. ಈ ಸಂದರ್ಭದಲ್ಲಿ ಅವಳಿಗೆ ವಾಲ್ಟರ್ ನೊಡಾಕನ ಪರಿಚಯವಾಯಿತು. ಎರಡು ವರ್ಷಗಳ ನಂತರ ಅಂದರೆ ೧೯೨೪ರಲ್ಲಿ ತಾನು ಕೆಲಸ ಮಾಡುತ್ತಿದ್ದ ಬರ್ಲಿನ್ ಟರ್ಬೈನ್ ಫ್ಯಾಕ್ಟರಿಯ ಕೆಲಸಕ್ಕೆ ರಾಜೀನಾಮೆ ಕೊಟ್ಟು, ವಾಲ್ಟರ್ ಕೆಲಸ ಮಾಡುತ್ತಿದ್ದ ಇಂಪೀರಿಯಲ್ ಕೆಮಿಕಲ್ ಇನ್ಸ್‌ಟಿಟ್ಯೂಟಿನಲ್ಲಿ ತಾನೂ ಸಂಶೋಧನಾ ಸಹಾಯಕಿಯಾಗಿ ಸೇರಿಕೊಂಡಳು. ವಾಲ್ಟರನ ಸಹಾಯಕಿಯಾಗಿ ಉಚಿತವಾಗಿ ಕೆಲಸ ಮಾಡಿದಳು. ಮರುವರ್ಷವೇ ವಾಲ್ಟರ್ ಹಾಗೂ ಐಡಾ ರೀನಿಯಂ ಲೋಹವನ್ನು ಪತ್ತೆ ಮಾಡಿದರು. ರೀನಿಯಂ ಐಡಾಳ ತವರಿನ ಪ್ರದೇಶದ ಹೆಸರನ್ನು ನೆನಪಿಸುವ ಹೆಸರು. ಅದರ ಜೊತೆಗೇ ಮೌಸೋರಿಯಂ ಎನ್ನುವ ಮತ್ತೊಂದು ಮೂಲವಸ್ತುವನ್ನೂ ಪತ್ತೆ ಮಾಡಿದ್ದಾಗಿ ಇವರು ಪ್ರಕಟಿಸಿದ್ದರೂ, ಯಾರೂ ಅದನ್ನು ಪುರಸ್ಕರಿಸಲಿಲ್ಲ.
ರೀನಿಯಂ ಮೂಲವಸ್ತುಗಳ ಪಟ್ಟಿಯಲ್ಲಿ ಎಪ್ಪತ್ತೈದನೆಯ ಮೂಲವಸ್ತುವಾಗಿತ್ತು. ಮೌಸೋರಿಯಂ ನಲವತ್ತಮೂರನೆಯ ಸ್ಥಾನದಲ್ಲಿರುವ ವಸ್ತು. ಮೂಲವಸ್ತುಗಳ ಪಟ್ಟಿಯಾದ ಪೀರಿಯಾಡಿಕ್ ಟೇಬಲ್ಲಿನಲ್ಲಿ ಇವೆರಡೂ ಜಾಗ ಖಾಲಿ ಇದ್ದವು. ಇದನ್ನು ಹುಡುಕಲು ಮ್ಯಾಂಗನೀಸಿನ ಅದಿರನ್ನು ಎಲ್ಲರೂ ಸಂಶೋಧಿಸುತ್ತಿದ್ದರು. ಆದರೆ ಅದರಲ್ಲಿ ಹುಡುಕುವುದಕ್ಕಿಂತಲೂ ಪೀರಿಯಾಡಿಕ್ ಟೇಬಲ್ಲಿನಲ್ಲಿ ಮ್ಯಾಂಗನೀಸಿನ ಆಸು ಪಾಸಿನ ಇತರೆ ಲೋಹಗಳ ಖನಿಜಗಳನ್ನು ಹುಡುಕಿದರೆ ಸಿಗಬಹದು ಎಂದು ಐಡಾ ತರ್ಕಿಸಿದ್ದಳು. ಇದು ನಿಜವಾಯಿತು.
ಹೀಗೆಯೇ ಎಲ್ಲ ವಿಷಯದಲ್ಲಿಯೂ ಅಂದಿನ ಪ್ರಚಲಿತ ನಂಬಿಕೆಗಳಿಂದ ಭಿನ್ನವಾಗಿ ಯೋಚಿಸುತ್ತಿದ್ದ ಮಹಿಳೆ ಐಡಾ. ವಾಲ್ಟರ್ ಹಾಗೂ ಐಡಾ ರಸಾಯನವಿಜ್ಞಾನದಲ್ಲಿ ಹಲವಾರು ಪ್ರಮುಖ ಕೊಡುಗೆಗಳನ್ನು ಜೊತೆಯಾಗಿ ಹಾಗೂ ವೈಯಕ್ತಿಕವಾಗಿ ಕೊಟ್ಟಿದ್ದಾರೆ. 1934ರಲ್ಲಿ ಎನ್ರಿಕೋ ಫರ್ಮಿ ಯುರೇನಿಯಂ ಪರಮಾಣುಗಳನ್ನು ನ್ಯೂಟ್ರಾನುಗಳಿಂದ ಹೊಡೆದಾಗ, ಅವು ಬೇರೆಯೇ ಧಾತುವಾಗಿ ಬದಲಾಗುತ್ತವೆ ಎಂದು ಪತ್ತೆ ಮಾಡಿದ್ದ. ನ್ಯೂಟ್ರಾನನ್ನು ತನ್ನೊಳಗೆ ಸೇರಿಸಿಕೊಂಡು ಧಾತು ಬದಲಾಗುತ್ತದೆ ಎಂದು ತರ್ಕಿಸಿದ್ದ. ಆದರೆ ಐಡಾ ಅದನ್ನು ತಪ್ಪು ಎಂದು ವಾದಿಸಿದಳು. ನ್ಯೂಟ್ರಾನು ಬಡಿದಾಗ ಪರಮಾಣುವಿನ ಬೀಜ ಒಡೆಯುತ್ತದೆ. ಹೀಗಾಗಿ ಹೊಸ ಧಾತುವಾದಂತೆ ತೋರುತ್ತದೆ ಎಂದು ವಾದಿಸಿದ್ದಳು. ಇದನ್ನು ಅಂದು ಬೈಜಿಕ ವಿದಳನ ಎಂದು ಕರೆಯುತ್ತೇವೆ. ಅದೇ ಪರಮಾಣಣ ಶಕ್ತಿ
ಹಾಗೂ ಪರಮಾಣಣ ಬಾಂಬುಗಳ ತಯಾರಿಕೆಯಲ್ಲಿ ಇದರ ಬಳಕೆಯಾಗುತ್ತದೆ. ಆದರೆ ಐಡಾ ಈ ವಾದವನ್ನು ಮುಂದಿಟ್ಟಾಗ ಅವಳನ್ನು ಹೀಗಳೆದವರೇ ಹೆಚ್ಚು. ಆಕೆ ಮೌಸೋರಿಯಂ ಎನ್ನುವ ವಸ್ತುವನ್ನು ಪತ್ತೆ ಮಾಡಿದ್ದೇನೆಂದು ಹೇಳಿದ್ದರೂ, ಅದನ್ನು ಮತ್ತೆ ಯಾರೂ ಪತ್ತೆ ಮಾಡಲಾಗಿರಲಿಲ್ಲವಾದ್ದರಿಂದ ಈ ರೀತಿ ಅವಗಣಿಸಿದರೋ ಏನೋ ಗೊತ್ತಿಲ್ಲ. ಅಥವಾ ಮಹಿಳೆ ಅಂತಲೋ ತಿಳಿಯದು. ಆದರೆ ಆನಂತರ ಜರ್ಮನಿಯವರೇ ಆದ ಆಟೋ ಹಾನ್ ಹಾಗೂ ಲೀಸೆ ಮೈಟ್ನರ್ ಈ ವಿದ್ಯಮಾನವನ್ನು ಹಲವಾರು ವರ್ಷಗಳ ನಂತರ ನಿರೂಪಿಸಿದರು. ಲೀಸೆ ಮೈಟ್ನರಳನ್ನೂ ಅಂದಿನ ವಿಜ್ಞಾನಿಗಳು ಅವಗಣಿಸಿದ್ದು ಈಗ ಚರಿತ್ರೆ. ಐಡಾಳ ಮತ್ತೊಂದು ಕೊಡುಗೆ ಎಂದರೆ ಅದಿರಿನಲ್ಲಿರುವ ಖನಿಜಾಂಶಗಳು ವಿಶ್ವದಲ್ಲಿ ಖನಿಜಗಳು ಇರುವ ಪ್ರಮಾಣವನ್ನು ಬಿಂಬಿಸುತ್ತದೆ ಎನ್ನುವ ವಾದ. ಈ ತರ್ಕದಂತೆ ಕೆಲವು ಮೂಲವಸ್ತುಗಳನ್ನು ಪತ್ತೆ ಮಾಡಲು ಆಗದೇ ಇರುವಷ್ಟು ಅಲ್ಪ ಪ್ರಮಾಣದಲ್ಲಿ ಅವು ಇರುತ್ತವೆ. ಅವು ಇದ್ದರೂ ನಮಗೆ ಪತ್ತೆ ಮಾಡಲು ಆಗುವುದಿಲ್ಲ ಎನ್ನುವುದು. ಮೌಸೋರಿಯಂ ಧಾತು ಪತ್ತೆಯಾಗದಿದ್ದಾಗ ಆಕೆ ಈ ವಾದವನ್ನು ಮಂಡಿಸಿದ್ದಳಾದರೂ, ಇದನ್ನು ಯಾರೂ ಪುರಸ್ಕರಿಸಲಿಲ್ಲ.
ಕೃಪೆ, ಜಾಣ ಸುದ್ದಿ
ಸಂಗ್ರಹ: ಶ್ರೀ ಖಾದರಭಾಷಾ ಶಿಕ್ಷಕರು
No comments:
Post a Comment