Saturday, March 30, 2024

 ಕಥೆ-351

ಮಳೆ ಬಂದಾಗ ಕೊಡೆ ಹಿಡಿಯಲು ಕಲಿಯಬೇಕು

ಮಳೆ ಬಂದಾಗ ಜನರು ಕೊಡೆ ಹಿಡಿಯಲು ಕಲಿಯಬೇಕು ಎಂಬ ಮಾತಿಗೆ ಅರ್ಥವೇನೆಂದರೆ, ನಾವು ವಿಪತ್ತು ಬಂದಾಗ ಅದನ್ನು ಎದುರಿಸಲು ಕಲಿಯಬೇಕು. ಮಳೆ ಬಂದಾಗ ಕೊಡೆ ಖರೀದಿಸಲು ಹೊರಡುವುದಲ್ಲ. ಅದಕ್ಕೆ ಪೂರ್ವಭಾವಿಯಾಗಿಯೇ ವಿಪತ್ತನ್ನು ಎದುರಿಸಲು ಬೇಕಾದ ಎಲ್ಲ ವ್ಯವಸ್ಥೆಗಳನ್ನು ಮಾಡಿಟ್ಟುಕೊಳ್ಳಬೇಕು. ಆದರೆ ಕೆಲವರು ಅಹಂಕಾರದಿಂದ ಪ್ರೇರಿತರಾಗಿ ಯಾವುದೇ ಸೂಕ್ತ ಸಿದ್ಧತೆ ಹಾಗಿರಲಿ, ಯಾರದೇ ಸಲಹೆ, ಮಾರ್ಗದರ್ಶನಗಳನ್ನು ಸ್ವೀಕರಿಸಲೂ ಸಿದ್ಧರಿರುವುದಿಲ್ಲ. ಅಂಥ ಜನರ ಕಣ್ತೆರೆಸುವ ಒಂದು ಪ್ರೇರಕ ಪ್ರಸಂಗ ಇಲ್ಲಿದೆ.ಒಂದೂರಿನಲ್ಲಿ ಒಬ್ಬ ವಿಖ್ಯಾತ ಭಕ್ತರಿದ್ದರು. ಅವರಿಗೆ ಭಗವಂತನೇ ಪ್ರತ್ಯಕ್ಷ ನಾಗಿ ಅನುಗ್ರಹಿಸಿದ್ದಾನೆ ಎಂದು ಜನರು ನಂಬಿದ್ದರು. ಹಾಗೂ ವಿಶೇಷ ಗೌರವ ನೀಡುತ್ತಿದ್ದರು. ಒಮ್ಮೆ ಆ ಊರಿನಲ್ಲಿ ನೆರೆಯ ಪ್ರವಾಹದ ಹಾವಳಿಯುಂಟಾದಾಗ, ಊರ ಜನರು ಊರು ಖಾಲಿ ಮಾಡಿ ಸುರಕ್ಷಿತ ಸ್ಥಳಕ್ಕೆ ಹೋಗಲು ನಿಶ್ಚಯಿಸಿದರು. ಆ ಭಕ್ತರೊಡನೆ, 'ಸ್ವಾಮಿ, ತಾವು ಕೂಡ ಈ ಊರು ಬಿಟ್ಟು ನಮ್ಮ ಜತೆಗೆ ಬನ್ನಿ' ಎಂದು ವಿನಂತಿಸಿದರು. ಆಗ ಆ ಭಕ್ತ ಮನದಲ್ಲೇ ಯೋಚಿಸಿದ- 'ನಾನು ಊರು ಬಿಟ್ಟರೆ, ನನಗೆ ದೇವರ ಮೇಲೆ ನಂಬಿಕೆ ಇಲ್ಲವೆಂದಾದೀತು'. ಆದ್ದರಿಂದ ಅವರು ಊರ ಜನರಿಗೆ ಹೇಳಿದರು- 'ಮೇಲಿರುವ ಭಗವಂತನು ನಮ್ಮನ್ನು ಕಾಪಾಡುತ್ತಾನೆ, ನೀವು ತೆರಳಿರಿ'. ಆದರೆ ನೆರೆಯ ಪ್ರವಾಹದ ನೀರು ಉಕ್ಕೇರುತ್ತಾ ಬಂತು. ಆಗ ಅವರನ್ನು ರಕ್ಷಿಸಲೆಂದು ಊರ ಜನರು ದೋಣಿಯೊಂದನ್ನು ತಂದು ವಿನಂತಿಸಿದರು- 'ನಾವು ನಿಮ್ಮನ್ನು ಪಾರು ಮಾಡಲೆಂದೇ ದೋಣಿ ತಂದಿದ್ದೇವೆ. ಬನ್ನಿರಿ'. ಆದರೆ ಭಕ್ತನ ಉತ್ತರ ಅದೇ ಆಗಿತ್ತು. 'ನನ್ನನ್ನು ಪಾರು ಮಾಡಲು ಭಗವಂತನಿದ್ದಾನೆ. ನೀವು ಹೋಗಿ'. ತುಸು ಹೊತ್ತಿನಲ್ಲಿ ಭಕ್ತನಿದ್ದ ಧಾರ್ಮಿಕ ಸ್ಥಳದೊಳಕ್ಕೂ ನೆರೆಯ ನೀರು ನುಗ್ಗಿ ಬಿಟ್ಟಿತು. ಭಕ್ತನ ದೇಹದ ಸುತ್ತ ನೀರು ಆವರಿಸತೊಡಗಿತು. ಇಷ್ಟರಲ್ಲಿ ಮುಳುಗುತ್ತಿರುವ ಭಕ್ತನನ್ನು ರಕ್ಷಿಸಲೆಂದು ಒಂದು ಹೆಲಿಕಾಪ್ಟರ್‌ ಬಂತು. ಭಕ್ತರ ಬಳಿಗೊಂದು ಹಗ್ಗವನ್ನು ಎಸೆಯಲಾಯಿತು. ಆದರೆ ಭಗವಂತನ ಭರವಸೆಯ ಭಕ್ತನದು ಒಂದೇ ಮಾತು-'ನಮಗೆ ಆ ಮೇಲಿನ ಭಗವಂತನಲ್ಲಿ ಪೂರ್ಣ ಭರವಸೆ ಇದೆ. ನಾನವನ ಭಕ್ತ. ಅವನೇ ನನ್ನ ರಕ್ಷ ಣೆ ಮಾಡುತ್ತಾನೆ'. ನೆರೆಯ ನೀರು ಮೇಲೇರುತ್ತಾ ಬಂತು ಮತ್ತು ಭಕ್ತನು ಉಸಿರುಗಟ್ಟಿ ತೀರಿಕೊಂಡ. ಬಳಿಕ ಭಕ್ತರ ಆತ್ಮವು ಭಗವಂತನ ಬಳಿ ತಲುಪಿದಾಗ ಅವರು ಪ್ರಶ್ನಿಸಿದರು- 'ಹೇ ಪ್ರಭು, ನಾನಾದರೋ ಪೂರ್ತಿ ನಿಮ್ಮನ್ನೇ ನಂಬಿ ಕುಳಿತಿದ್ದೆ. ಹಾಗಿದ್ದರೂ ನಾನು ಸಾಯಬೇಕಾಯಿತಲ್ಲ!'. ಆಗ ಭಗವಂತ ನುಡಿದ- 'ನಾನಾದರೋ ನಿನ್ನ ನೆರವಿಗೆಂದು ಮೂರು ಬಾರಿ ಬಂದಿದ್ದೆ. ಆದರೆ ಅರ್ಥ ಮಾಡಿಕೊಳ್ಳಲಿಲ್ಲ' ಎಂದಾಗ ಭಕ್ತರು ಚಕಿತರಾದರು. ಭಗವಂತ ವಿಶದೀಕರಿಸಿದರು -'ನಾನು ನಿನ್ನ ರಕ್ಷಿಸಲೆಂದು ದೋಣಿ ತಗೊಂಡು ಬಂದೆ. ಮತ್ತೊಮ್ಮೆ ಹೆಲಿಕಾಪ್ಟರ್‌ ತಗೊಂಡು ಬಂದೆ. ಆದರೆ ನೀನಾದರೋ ನಿನ್ನದೇ ಮೂಢನಂಬಿಕೆಯಲ್ಲಿ ಮುಳುಗಿ ಬಿಟ್ಟೆ. ಸ್ವತಃ ಪ್ರಯತ್ನಿಸಲು ಸಿದ್ಧನಿಲ್ಲ. ಕೇವಲ ನನ್ನನ್ನೇ ಗುರಿ ಮಾಡಿದೆ. ಅನೇಕ ರೂಪದಿಂದ ನಿನ್ನ ಪ್ರಾಣ ಉಳಿಸಲು ಬಂದೆ. ಆದರೆ ನೀನು ನನ್ನನ್ನು ಗುರುತಿಸಲೇ ಇಲ್ಲ. ಇದನ್ನು ಕೇಳಿದ ಭಕ್ತನಿಗೆ ಜ್ಞಾನೋದಯವಾಯಿತು. 

ಕಥೆ ಭಕ್ತ ಮತ್ತು ದೇವರ ಕುರಿತಾಗಿರಬಹುದು ಆದರೆ ಅದು ನಿಮಗೂ ಅನ್ವಯವಾಗುತ್ತದೆ.. ನಾವು ವರ್ಷಗಟ್ಟಲೆ ಓದದೆ ದೇವರು ನಮ್ಮನ್ನು ಪಾಸ್ ಮಾಡುತ್ತಾನೆಂದರೆ ಅದು ಸಾಧ್ಯವಿಲ್ಲ. ಪರೀಕ್ಷೆಗೆ ಸಂಬಂಧಿಸಿದ ಸಿದ್ಧತೆ ಬಹಳ ಮುಖ್ಯವಾಗುತ್ತದೆ.. ಪರೀಕ್ಷೆಯ ಮಹಿಮೆ ಈಗೀಗ ಅರ್ಥವಾಗುತ್ತಿದೆ. ಕಾಲ ಇನ್ನು ಮಿಂಚಿಲ್ಲ ಉಳಿದ ವಿಷಯಗಳ ಸಿದ್ಧತೆ, ತಯಾರಿ ಚೆನ್ನಾಗಿ ಮಾಡಿ ಉತ್ತಮ ಪರೀಕ್ಷೆ ಬರೆಯಿರಿ..

    👍💐

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು