Friday, April 5, 2024

 ಕಥೆ-357

ಬದುಕಿನಲ್ಲಿ ಪಡೆದ ಅತಿ ದೊಡ್ಡ ಬಹುಮಾನ!

ಅತಿ ಸಹಜವಾದ ಈ ಪ್ರಶ್ನೆಗೆ ಆಶ್ಚರ್ಯವೆನಿಸಬಹುದಾದ ಉತ್ತರವನ್ನು ಕೊಟ್ಟವರು ಅಂತಿಂಥವರಲ್ಲ! ಅವರು ಬೂಕರ್ ಟಿ ವಾಷಿಂಗ್ಟನ್(1856-1915). ಅಮೆರಿಕದ ಅಧ್ಯಕ್ಷರಿಗೆ ಸಲಹೆಗಾರರಾಗಿದ್ದವರು. ಅಮೆರಿಕನ್- ಆಫ್ರಿಕನ್ ಜನಾಂಗದವರ ವಿದ್ಯಾಭ್ಯಾಸಕ್ಕಾಗಿ ಶ್ರಮಿಸಿದವರು. ಗ್ರಂಥಕರ್ತರೂ, ಉತ್ತೇಜಕ ಉಪನ್ಯಾಸಕಾರರೂ ಆಗಿದ್ದ ಅವರ ಅನವರತ ಸೇವೆಗಾಗಿ ಹಲವಾರು ಪ್ರಶಸ್ತಿ-ಪುರಸ್ಕಾರಗಳನ್ನು ಪಡೆದವರು. ಅವರು ಕೊಟ್ಟ ಉತ್ತರ ಈ ನೈಜಘಟನೆಯಲ್ಲಿದೆ. ನೋಡಿ!

ಕಳೆದ ಶತಮಾನದಲ್ಲಿ ಕಪ್ಪು ಜನಾಂಗಕ್ಕೆ ಸೇರಿದ ಯುವಕನೊಬ್ಬ ಕಲ್ಲಿದ್ದಲು ಗಣಿಯಲ್ಲಿ ಕೂಲಿಗೆಲಸ ಮಾಡುತ್ತಿದ್ದರು. ಅವರು ಗುಲಾಮಗಿರಿಯಲ್ಲಿ ನರಳುತ್ತಿದ್ದ ಮಹಿಳೆಯೊಬ್ಬರ ಮಗ. ಹ್ಯಾಮ್ಟನ್ ಎಂಬಲ್ಲಿ ಕರಿಯ ಜನಾಂಗದವರ ವಿದ್ಯಾಭ್ಯಾಸಕ್ಕಾಗಿಯೇ ಶಾಲೆಯೊಂದು ಪ್ರಾರಂಭವಾಗಿದೆಯೆಂದು ಯಾರೋ ಮಾತನಾಡಿಕೊಳ್ಳುವುದನ್ನು ಆತ ಕೇಳಿಸಿಕೊಂಡ. ಹ್ಯಾಮ್ಟನ್ ಎಲ್ಲಿದೆಯೆಂಬುದರ ಕಲ್ಪನೆಯೂ ಇಲ್ಲದ ಆ ಯುವಕ, ತಾನೂ ಅಲ್ಲಿ ವಿದ್ಯಾಭ್ಯಾಸ ಪಡೆಯಬೇಕೆಂದು ತೀರ್ಮಾನಿಸಿದ. ಕೂಲಿ ಕೆಲಸದಿಂದ ಬರುತ್ತಿದ್ದ ಹಣದಲ್ಲಿ ಜೀವನ ನಡೆಸುವುದೇ ಕಷ್ಟವಾಗಿತ್ತು. 500 ಮೈಲಿ ದೂರದ ಹ್ಯಾಮ್ಟನ್‌ಗೆ ರೈಲಿನಲ್ಲಿ ಪ್ರಯಾಣ ಮಾಡಲು ಆತನಲ್ಲಿ ಹಣವಿರಲಿಲ್ಲ. ಆತ ಬಹುಪಾಲು ದೂರವನ್ನು ಕಾಲ್ನಡಿಗೆಯಲ್ಲೇ ಕ್ರಮಿಸಿದರು. ಹ್ಯಾಮ್ಟನ್ ತಲುಪಿದಾಗ ದೀರ್ಘ ಪ್ರಯಾಣ ಮತ್ತು ಹಸಿವಿನಿಂದ ಸೋತು ಸೊರಗಿದ್ದ. ಉಟ್ಟ ಬಟ್ಟೆಗಳೆಲ್ಲ ಕೊಳಕಾಗಿದ್ದವು. ಕಾಲಲ್ಲಿ ಚಪ್ಪಲಿಯಿರಲಿಲ್ಲ. ಜೇಬಿನಲ್ಲಿದ್ದದ್ದು ಅರ್ಧ ಡಾಲರ್!

ಆತ ಕಾಲೇಜಿನ ಮುಖ್ಯೋಪಾಧ್ಯಾಯಿನಿಯನ್ನು ಕಂಡು ತನ್ನ ಪರಿಸ್ಥಿತಿಯನ್ನು ವಿವರಿಸಿದ. ಕಾಲೇಜಿನಲ್ಲಿ ಪ್ರವೇಶ ಕೋರಿದಾಗ ಮುಖ್ಯೋಪಾಧ್ಯಾಯಿನಿ ಆತನನ್ನೂ, ಆತನ ಕೊಳಕು ಬಟ್ಟೆಗಳನ್ನೂ ದಿಟ್ಟಿಸಿ ನೋಡಿದರು. ಪ್ರವೇಶ ಕೊಡುತ್ತೇನೆಂದಾಗಲೀ, ಕೊಡುವುದಿಲ್ಲವೆಂದಾಗಲೀ ಹೇಳಲಿಲ್ಲ. ಪೂರ್ಣಪ್ರವೇಶ ಧನ ಕೊಡಲು ಶಕ್ತಿಯಿದ್ದ ವಿದ್ಯಾರ್ಥಿಗಳೆಲ್ಲರೂ ಬಂದು ಪ್ರವೇಶ ಪಡೆದುಕೊಳ್ಳುತ್ತಿದ್ದರು. ಆತ ಉತ್ತರಕ್ಕೆ ಕಾಯುತ್ತ ಮೂಲೆಯಲ್ಲಿ ನಿಂತೇ ಇದ್ದ. ಮಧ್ಯಾಹ್ನದ ಊಟದ ಸಮಯವಾಯಿತು. ಮುಖ್ಯೋಪಾಧ್ಯಾಯಿನಿ ಆತನಿಗೆ ‘ಈಗ ಊಟದ ಬಿಡುವು. ಈ ಕೋಣೆಯನ್ನು ಶುಭ್ರಗೊಳಿಸು’ ಎಂದು ಹೇಳಿ ಹೋದರು.

ಯುವಕ ಬೇಸರವಿಲ್ಲದೆ ಕಸವನ್ನು ಅಚ್ಚುಕಟ್ಟಾಗಿ ಗುಡಿಸಿದ. ಮೇಜುಗಳನ್ನು, ಕಿಟಕಿ-ಬಾಗಿಲುಗಳನ್ನು ಶುಭ್ರ ಗೊಳಿಸಿದ. ಕಸ ಗುಡಿಸಿದರೆ ಊಟ ಸಿಗುತ್ತದೇನೋ ಎನ್ನುವಾಸೆ! ಏಕೆಂದರೆ ಆತ ಊಟ ಮಾಡಿ ಮೂರು ದಿನಗಳಾಗಿತ್ತು! ಒಂದು ಗಂಟೆಯ ನಂತರ ಮುಖ್ಯೋಪಾಧ್ಯಾಯಿನಿ ಬಂದರು. ಕೋಣೆಯ ಶುಭ್ರತೆಯನ್ನು ನೋಡಿ ಅವರಿಗೆ ಆಶ್ಚರ್ಯವಾಯಿತು. ಅವರು ತಮ್ಮ ಬಿಳಿಯ ಕರವಸ್ತ್ರ ತೆಗೆದು ಅದರಿಂದ ತಮ್ಮ ಮೇಜನ್ನೂ, ನೆಲವನ್ನೂ ಒರೆಸಿದರು. ಕರವಸ್ತ್ರಕ್ಕೆ ಒಂದು ಚೂರು ಧೂಳೂ ಅಂಟಿಕೊಳ್ಳಲಿಲ್ಲ. ನೆಲ-ಮೇಜುಗಳು ಅಷ್ಟು ಶುಭ್ರವಾಗಿದ್ದವು. ಅವರು ತಕ್ಷಣ ‘ನಿನಗೆ ಕಾಲೇಜಿನಲ್ಲಿ ಪ್ರವೇಶ ಕೊಡುತ್ತಿದ್ದೇನೆ. ಶಾಲೆಯ ವಾರ್ಷಿಕ ಶುಲ್ಕ 70 ಡಾಲರ್‌ಗಳನ್ನು ಮನ್ನಾ ಮಾಡಿದ್ದೇವೆ.

ವಿದ್ಯಾರ್ಥಿ ನಿಲಯಕ್ಕೆ ಮಾಸಿಕ 10 ಡಾಲರ್ ಕೊಡದೆಯೇ ನೀನು ಉಚಿತವಾಗಿ ವಾಸಿಸಬಹುದು. ಆದರೆ ನಿನ್ನ ಬಿಡುವು ಸಮಯದಲ್ಲಿ ನಿನಗೆ ಶಾಲೆಯನ್ನು ಶುಭ್ರಗೊಳಿಸುವ ಅರೆ ಕಾಲಿಕ ಕೆಲಸ ಕೊಡುತ್ತೇನೆ’ ಎಂದು ಹೇಳಿದಾಗ, ಆತನಿಗೆಷ್ಟು ಸಂತೋಷವಾಗಿತ್ತೆಂದರೆ ಊಟ ಮಾಡಿಲ್ಲವೆನ್ನುವುದನ್ನೂ ಮರೆತು ಬಿಟ್ಟಿದ್ದ. 1 ಲಕ್ಷ ಡಾಲರ್ ಬಹುಮಾನ ಸಿಕ್ಕಷ್ಟು ಸಂತೋಷವಾಗಿತ್ತು. ಆ ಯುವಕನ ಹೆಸರು ಬೂಕರ್ ಟಿ. ವಾಷಿಂಗ್ಟನ್. ಮುಂದೆ ಕಪ್ಪು ಜನಾಂಗದವರ ವಿದ್ಯಾಭ್ಯಾಸಕ್ಕಾಗಿ ಅತಿ ದೊಡ್ಡ ಸೇವೆ ಸಲ್ಲಿಸಿದ ಅವರು ಬಹು ದೊಡ್ಡ ಮನ್ನಣೆಗೂ ಪಾತ್ರರಾದವರು. ಅನೇಕ ಪ್ರಶಸ್ತಿ-ಪಾರಿತೋಷಕಗಳನ್ನು ಗಳಿಸಿ ಪ್ರಖ್ಯಾತರಾದವರು. ಆದರೆ ಅವರು ‘ನನಗೆ ಬದುಕಿನಲ್ಲಿ ಸಿಕ್ಕ ಅತಿ ದೊಡ್ಡ ಬಹುಮಾನವೆಂದರೆ ಕಸ ಗುಡಿಸುವುದರ ಮೂಲಕ ಕಾಲೇಜಿನ ಪ್ರವೇಶ ದೊರಕಿದ್ದು’ ಎನ್ನುತ್ತಿದ್ದರು. ಈ ಹೃದಯಸ್ಪರ್ಶಿ ಪ್ರಸಂಗ ಬೂಕರ್ ಅವರ ‘ಅಪ್ ಫ್ರಮ್ ಸ್ಲೇವರಿ’ ಎಂಬ ಆತ್ಮಕಥನದಲ್ಲಿ ನಿರೂಪಣೆಗೊಂಡಿದೆ. ‘ಇರುವ ಕೆಲಸವ ಮಾಡು ಕಿರಿದೆನದೆ ಮನಸಿಟ್ಟು! ದೊರೆತುದ ಪ್ರಸಾದವೆಂದುಣ್ಣು ಗೊಣಗಿಡದೆ!’ ಎಂಬ ಮಂಕುತಿಮ್ಮನ ಕಗ್ಗದ ಸಾಲುಗಳು ನೆನಪಾಗುತ್ತವಲ್ಲವೇ? ಕೃಪೆ: ವಿಶ್ವ ವಾಣಿ.  

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು