ಕಥೆ-399
ಏನ ಬೇಡಲಿ ನಿನ್ನ ಬಳಿ ಬಂದು! ಸ್ಮಶಾನದಲ್ಲಿ ನಿಂದು!
ಸ್ಮಶಾನದಲ್ಲಿ ಸತ್ತವರ ಅಂತ್ಯಸಂಸ್ಕಾರ ಮಾಡಲು ಬಂದವರ ಬಳಿ ಏನು ಬೇಡಬಹುದು? ಒಂದಷ್ಟು ಹಳೆಯ ಬಟ್ಟೆ, ದಕ್ಷಿಣೆ ಇತ್ಯಾದಿಗಳನ್ನಲ್ಲವೇ? ಆದರೆ ವಿಚಿತ್ರ ಬೇಡಿಕೆಯೊಂದನ್ನು ಮುಂದಿಡುತ್ತಿದ್ದ ವೈದ್ಯರೊಬ್ಬರ ನಿಜಜೀವನದ ಕತೆಯೊಂದು ಇಲ್ಲಿದೆ. ಅವರ ಹೆಸರು ಡಾಕ್ಟರ್ ಭಗವಾನ್ ದಾಸ್ ಕಾಲಿದಾಸ್ ಶೇಟ್. ಅವರ ಚಿಕಿತ್ಸಾಲಯ ಗುಜರಾತಿನ ಸಿದ್ಧಪುರದಲ್ಲಿನ ಸರಸ್ವತಿ ನದಿ ತೀರದ ಸ್ಮಶಾನದ ಪಕ್ಕದಲ್ಲಿತ್ತು. ಅಲ್ಲಿಗೆ ಯಾವುದೇ ಹೆಣ ಅಂತ್ಯಕ್ರಿಯೆಗೆ ತರಲ್ಪಟ್ಟರೂ, ತಕ್ಷಣ ಈ ವೈದ್ಯರು ಅಲ್ಲಿಗೆ ಧಾವಿಸುತ್ತಿದ್ದರು.
ಸತ್ತವರ ಕುಟುಂಬದವರನ್ನು ಬೇಡಿಕೊಳ್ಳುತ್ತಿದ್ದರು. ಕೆಲವು ಕುಟುಂಬದವರು ನಮ್ಮ ಗೋಳು ನಮಗೇ ಹಾಸಿಹೊದ್ದುಕೊಳ್ಳುವಷ್ಟು ಇರುವಾಗ ನಿಮ್ಮದೇನು ವಿಚಿತ್ರ ಬೇಡಿಕೆ? ಇಲ್ಲಿಂದ ತೊಲಗಿ ಎಂದು ಬೈಯುತ್ತಿದ್ದರು. ಜಗಳಕ್ಕಿಳಿಯುತ್ತಿದ್ದರು. ಹೊಡೆಯಲು ಕೈಯೆತ್ತುತ್ತಿದ್ದರು. ಆದರೆ ವೈದ್ಯರು ಇದಾವುದನ್ನೂ ಲೆಕ್ಕಿಸದೇ, ಬೇಡುತ್ತಿದ್ದರು. ಬಹಳಷ್ಟು ಬಾರಿ ಬೇಡಿದುದನ್ನು ಪಡೆಯುತ್ತಲೂ ಇದ್ದರು. ಈಗ ಅವರು ಬೇಡುತ್ತಿದ್ದುದಾದರೂ ಏನೆಂಬ ಕುತೂಹಲವೇ? ವೈದ್ಯರು ಬೇಡುತ್ತಿದ್ದುದು, ಸತ್ತು ಹೋದವರ ಕಣ್ಣುಗಳನ್ನು! ಸತ್ತು ಹೋದವರ ಕುಟುಂಬ ದವರಿಗೆ ನೇತ್ರದಾನದ ಮಹತ್ವದ ಬಗ್ಗೆ ವಿವರಿಸುತ್ತಿದ್ದರು. ಆದರೆ ಕೆಲವರಿಗೆ ನೇತ್ರದಾನ ಮಾಡಿದವರು ಮುಂದಿನ ಜನ್ಮದಲ್ಲಿ ಕುರುಡರಾಗಿ ಹುಟ್ಟುತ್ತಾರೆಂಬ ಮೂಢನಂಬಿಕೆ ಇರುತ್ತಿತ್ತು.
ಅಂತಹವರು ಖಡಾಖಂಡಿತ ವಾಗಿ ನೇತ್ರದಾನ ಮಾಡಲು ನಿರಾಕರಿಸುತ್ತಿದ್ದರು. ಆದರೆ ವೈದ್ಯರು ಬೇಡುವುದನ್ನು ಬಿಡುತ್ತಿರಲಿಲ್ಲ. ಹನ್ನೆರಡು ವರ್ಷಗಳ ಅವಧಿಯಲ್ಲಿ ಅವರು ಆರು ಸಾವಿರಕ್ಕೂ ಹೆಚ್ಚು ಬಾರಿ ಹೆಣಗಳ ನೇತ್ರದಾನ ಮಾಡಲು ಕೇಳಿಕೊಂಡಿದ್ದರು. ಸುಮಾರು ಮೂರು ಸಾವಿರ ಜೋಡಿ ನೇತ್ರಗಳನ್ನು ಪಡೆದೂ ಇದ್ದರು! ಹಾಗೆ ಪಡೆದ ನೇತ್ರಗಳನ್ನು ಸೂಕ್ತ ರೀತಿಯಲ್ಲಿ ಶೇಖರಿಸಿ, ಅಹಮದಾಬಾದಿನ ರೆಡ್-ಕ್ರಾಸ್ ಸಂಸ್ಥೆಗೆ ಉಚಿತವಾಗಿ ಕಳುಹಿಸುತ್ತಿದ್ದರು. ರೆಡ್-ಕ್ರಾಸ್ ಸಂಸ್ಥೆಯವರು ಆ ಕಣ್ಣುಗಳನ್ನು ದೇಶಾದ್ಯಂತ ನೇತ್ರದಾನಕ್ಕಾಗಿ ಕಾಯುತ್ತಾ ಕುಳಿತವರಿಗೆ ಕಳುಹಿಸಿಕೊಡುತ್ತಿದ್ದರು. ನಮ್ಮೂರಿನಲ್ಲಿ ಸತ್ತವರ ಕಣ್ಣುಗಳು, ಮತ್ತಾವುದೋ ಊರಿನ ಜನರಿಗೆ ಜಗತ್ತನ್ನು ನೋಡಲು ಸಹಾಯ ಮಾಡುತ್ತಿವೆ ಎಂಬುದೇ ದೊಡ್ಡ ಸಮಾಧಾನ! ಎಂದು ಡಾ.ಶೇಟ್ ಹೇಳುತ್ತಿದ್ದರು.
ಡಾ.ಶೇಟರ ಶ್ರೇಷ್ಠ ಕಾಯಕಕ್ಕೆ ಕಾರಣವಾದದ್ದು ಅವರ ಬದುಕಿನಲ್ಲೇ ನಡೆದ ಒಂದು ದುರಂತ. ಅವರ ಇಪ್ಪತ್ತೇಳು ವರ್ಷ ವಯಸ್ಸಿನ ಮಗ ದೀಪಕ್ ರಸ್ತೆ ಅಪಘಾತದಲ್ಲಿ ತೀರಿಕೊಂಡರು. ದೀಪಕ್ ಸಾಯುವ ಮುಂಚೆ ತನ್ನ ಕಣ್ಣುಗಳನ್ನು ದಾನ ಮಾಡಬೇಕೆಂದು ಬೇಡಿಕೊಂಡು ಸತ್ತರಂತೆ. ಡಾ.ಶೇಟ್ ಆತನ ಅಂತಿಮ ಬೀಡಿಕೆಯನ್ನು ಈಡೇರಿಸಿದರು. ಆತನ ಕಣ್ಣುಗಳನ್ನು ದಾನ ಮಾಡಿದರು. ನಂತರ ಅವರು ‘ದೀಪಕ್ ಚಕ್ಷು ಕುಟೀರ್’ ಎಂಬ ಹೆಸರಿನಲ್ಲಿ ಒಂದು ಚಿಕಿತ್ಸಾಲಯವನ್ನು ಪ್ರಾರಂಭಿಸಿದರು. ಇವರದ್ದು ಹುಚ್ಚಾಟವೆಂದು ಊರವರೆಲ್ಲಾ ನಕ್ಕರೂ, ತಿರಸ್ಕರಿಸಿದರೂ, ತಲೆ ಕೆಡಿಸಿಕೊಳ್ಳದೆ ತಮ್ಮ ಕಾಯಕವನ್ನು ಮುಂದುವರೆಸಿ ದರು. ಅವರ ಬದ್ಧತೆ ಎಷ್ಟು ತೀವ್ರವಾಗಿತ್ತೆಂದರೆ ಅವರ ಎರಡನೆಯ ಮಗನ ಮದುವೆಯ ಶುಭದಿನದಂದೂ ಅವರು ಸ್ಮಶಾನಕ್ಕೆ ಹೋಗಿದ್ದರು.
ಎರಡು ಜೋಡಿ ನೇತ್ರಗಳನ್ನು ದಾನ ಪಡೆದಿದ್ದರು. ಅವುಗಳನ್ನು ರೆಡ್ ಕ್ರಾಸ್ ಸಂಸ್ಥೆಗೆ ಕಳುಹಿಸಿದ್ದರು. ಆನಂತರ ಏನೂ ಆಗಿಲ್ಲವೋ ಏನೋ ಎಂಬಂತೆ ಮದುವೆಯ ಸಮಾರಂಭದಲ್ಲಿ ಭಾಗವಹಿಸಿದ್ದರು. ಡಾ.ಶೇಟ್ ತಮ್ಮ ಬದುಕಿನ ದುರಂತ ಸನ್ನಿವೇಶದಲ್ಲಿ, ಅಳುತ್ತಾ ಕೂರಲಿಲ್ಲ. ಅದರ ಬದಲು ಉದಾತ್ತ ಸೇವೆಯನ್ನು ಕೈಗೆತ್ತಿಕೊಂಡರು. ನಾನು ಬೇಡಿ ಪಡೆದಿರುವ ಮೂರು ಸಾವಿರಕ್ಕೂ ಹೆಚ್ಚು ಕಣ್ಣುಗಳು ಹಿಂದುಗಳದ್ದೋ, ಮುಸಲ್ಮಾನರದ್ದೋ, ಜೈನರದ್ದೋ ಯಾರದ್ದೋ ಗೊತ್ತಿಲ್ಲ! ಆದರೆ ನನಗೆ ಎಲ್ಲಾ ಕಣ್ಣುಗಳೂ ಒಂದೇ ಬಗೆಯಾಗಿ ಕಾಣಿಸುತ್ತವೆ! ಎಂಬ ಡಾ.ಶೇಟರ ಮಾತು ಗಮನಾರ್ಹ ಅಲ್ಲವೇ? ಹಾಗೆಯೇ ಅವರು ಸಹ ಮಹಾಪುರುಷರು ಪ್ರತಿಯೊಂದು ಊರಿನಲ್ಲೂ ಇದ್ದರೆ ಒಳ್ಳೆಯದಲ್ಲವೇ? ನಮಗೂ ಇಂತಹದ್ದೊಂದು ಕಾಯಕವಿದ್ದರೆ ಇನ್ನೂ ಒಳ್ಳೆಯದಲ್ಲವೇ?
ಕೃಪೆ: ವಿಶ್ವ ವಾಣಿ.
No comments:
Post a Comment