ಕಥೆ-401
ಆತ್ಮೀಯತೆಯ ಸ್ನೇಹ-ಭಾವ
ನಗರಗಳಲ್ಲಿರುವ ಜನ ಆಧುನಿಕ ವಿಜ್ಞಾನದ ಫಲವಾಗಿ ದೊರೆತಂಥ ಸೌಲಭ್ಯಗಳನ್ನು ಬಳಸಿ, ಸುಖಮಯವಾದ ವಾತಾವರಣದಲ್ಲಿ ಬೆಳೆಯುತ್ತಾರೆ.
ಆದರೆ ಗ್ರಾಮವಾಸಿಗಳು ಇಂತಹ ಸೌಕರ್ಯಗಳ ಕೊರತೆಯಿಂದಾಗಿ, ತಾತ್ಸಾರಕ್ಕೆ ಗುರಿಯಾಗುತ್ತಾರೆ. ಆದರೆ ಆದರ್ಶಪ್ರಾಯಕ್ಕೆ ಔದಾರ್ಯವಂತಿಕೆಗೆ ಕಡಿಮೆ ಇರುವುದೆಲ್ಲ.
ಹಳ್ಳಿ ರೈತನೊಂದಿಗೆ, ಹಳೆಯ ಸ್ನೇಹಿತರೊಂದಿಗೆ ಹೇಗೆ ವರ್ತಿಸಬೇಕೆಂಬುದನ್ನು ಅಬ್ರಹಾಂ ಲಿಂಕನ್ನರ ನಿದರ್ಶನದಿಂದ ಗುರುತಿಸಬಹುದಾಗಿದೆ.
ಅಮೆರಿಕಾ ದೇಶದ ಜನಪ್ರಿಯ ಅಧ್ಯಕ್ಷರಾಗಿದ್ದ ಅಬ್ರಹಾಂ ಲಿಂಕನ್ ಅವರು ಅಧ್ಯಕ್ಷರಾಗುವ ಮೊದಲೇ ತಮ್ಮ ಸಾರ್ವಜನಿಕ-ಸಂಪರ್ಕ, ಸಮಾಜಸೇವೆ, ಭಾಷಣ-ಕಲೆ ಮೊದಲಾದ ಗುಣಗಳಿಂದಾಗಿ ಸುಪ್ರಸಿದ್ಧರಾಗಿದ್ದರು. ಅವರನ್ನು ನಗರದ ನಾನಾ ಸಂಘ ಸಂಸ್ಥೆಗಳು ಉಪನ್ಯಾಸಕ್ಕಾಗಿ ಆಹ್ವಾನಿಸುತ್ತಿದ್ದವು ಹಾಗೂ ಅವರ ವಿದ್ವತ್-ಪೂರ್ಣ ಉಪನ್ಯಾಸಗಳನ್ನು ಕೇಳುವುದಕ್ಕಾಗಿ ಅಪಾರ ಸಂಖ್ಯೆಯಲ್ಲಿ ಜನರು ನೆರೆಯುತ್ತಿದ್ದರು.
ಒಮ್ಮೆ ಬೃಹತ್ ನಗರ ಟೌನ್ ಹಾಲಿನಲ್ಲಿ ಅವರ ಭಾಷಣ ನಡೆದಾಗ ಅವರ ಹಳ್ಳಿಯ ರೈತನೊಬ್ಬನು ಅದನ್ನು ಕೇಳಲೆಂದು ಆಗಮಿಸಿದ್ದ. ಲಿಂಕನ್ನರ ಭಾಷಣದಿಂದ ಪ್ರಭಾವಿತನಾದ ಆ ರೈತನು ಉಪನ್ಯಾಸ ಮುಕ್ತಾಯವಾಗುತ್ತಿದ್ದಂತೆಯೇ ವೇದಿಕೆಯ ಮೇಲೇರಿ ಬಿಟ್ಟ. 'ಯಾರೀತ'? ಎಂದು ಎಲ್ಲರಿಗೂ ಅಚ್ಚರಿಯೆನ್ನಿಸಿತು! ಆ ರೈತನಾದರೋ ಲಿಂಕನ್ನರ ಹೆಗಲ ಮೇಲೆ ಕೈಯಿರಿಸಿ, ಆತ್ಮೀಯತೆಯಿಂದ ನುಡಿದ-'ಲೋ ಅಬ್ರಹಾಂ ನಮ್ಮೂರಿನ ಹುಡುಗ ನೀನು. ಈ ಊರಿನಲ್ಲಿ ಎಷ್ಟು ದೊಡ್ಡ ಮನುಷ್ಯ ಆಗಿದ್ದೀಯಾ? ನಿನ್ನ ಉಪನ್ಯಾಸ ಕೇಳಲು ಎಷ್ಟೊಂದು ಜನ ಸೇರಿದ್ದಾರೆ! ನನಗೆ ಭಾರಿ ಅಭಿಮಾವೆನ್ನಿಸುತ್ತಿದೆ.
ಲಿಂಕನ್ನರೂ ಬಹು ಸಂತೋಷದಿಂದ ಹಸ್ತ ಲಾಘವ ಮಾಡುತ್ತಾ 'ಅರೆ ನೀವಾ? ನಮ್ಮೂರಿಂದ ನನ್ನ ಭಾಷಣ ಕೇಳಲೆಂದು ಬಂದಿರಾ? ಊರಿನಲ್ಲೆಲ್ಲ ಕ್ಷೇಮವೇ? - ಎಂದು ವಿಚಾರಿಸಿ ಇತರ ಗಣ್ಯರಿಗೆ ರೈತನನ್ನು ಪರಿಚಯಿಸಿದರು. ರೈತನೋ ಭಾರಿ ಖುಷಿಯಿಂದ, 'ನನಗೆಷ್ಟು, ಗೌರವ ನೀಡಿದೆ ನೀನು! ಎಂದು ನುಡಿದ. ಇದನ್ನು ಗಮನಿಸಿದ ಜನರು ಗಣ್ಯ ನೇತಾರನಾಗಿದ್ದೂ, ಹಳ್ಳಿಯ ಸಾಮಾನ್ಯ ರೈತನಿಗೆ ಮನ್ನಣೆ ನೀಡಿದ ಲಿಂಕನ್ನರ ಔದಾರ್ಯವನ್ನು ಮೆಚ್ಚಿಕೊಂಡರು.
ಎಷ್ಟೇ ಉನ್ನತ ಸ್ಥಾನವನ್ನೇರಿದವನಾಗಿದ್ದರೂ ತನ್ನ ಮೂಲಸ್ಥಾನದ ಮಹತ್ವವನ್ನು ಮರೆಯದೆ ತನ್ನ ಹಳೆಯ ಪರಿಚಿತರನ್ನೂ, ಗೆಳೆಯರನ್ನೂ ನೆನಪಿನಲ್ಲಿರಿಸಿಕೊಂಡು, ಗೌರವಾದರದಿಂದ ಕಾಣಬಲ್ಲವರು ಆದರ್ಶ ಪ್ರಾಯರೆನಿಸಿಕೊಳ್ಳುವರು.
ಜನನಿಯೂ ಜನ್ಮಭೂಮಿಯೂ ಸ್ವರ್ಗಕ್ಕಿಂತಲೂ ಮಿಗಿಲಾದುದು -ಎಂಬ ಮಾತು ಇಂತಹ ಮಹಾಪುರುಷರಿಂದಾಗಿಯೇ ಸಾರ್ಥಕವೆನ್ನಿಸಿದೆ.
ಕೃಪೆ:ಡಾ. ಡಿ. ವೀರೇಂದ್ರ ಹೆಗ್ಗಡೆ
No comments:
Post a Comment