ಕಥೆ-409
ಪರಿಶ್ರಮಹೀನ ಧನ ವಿಷ
ಭಗವಾನ್ ಬುದ್ಧ ಒಂದು ದಿನ ಕಾಡಿನಲ್ಲಿ ಸಂಚರಿಸುತ್ತಿದ್ದ. ದಾರಿಯಲ್ಲಿ ಒಬ್ಬ ವ್ಯಕ್ತಿ ನೆಲ ಅಗೆಯುತ್ತಿದ್ದ. ಬುದ್ಧ ವಿಶ್ರಾಂತಿಗಾಗಿ ಒಂದು ಮರದ ಕೆಳಗೆ ಕುಳಿತ. ಅದೇ ಹೊತ್ತಿನಲ್ಲಿ ಆ ವ್ಯಕ್ತಿಗೆ ನೆಲದಲ್ಲಿ ಒಂದು ಕಲಶ ಸಿಕ್ಕಿತು. ಅದರಲ್ಲಿ ವಜ್ರ ವೈಡೂರ್ಯಗಳಿದ್ದವು. ಆತ ಇಂದು ತನ್ನ ಭಾಗ್ಯೋದಯವೇ ಆಗಿದೆ ಎಂದುಕೊಂಡು ಆ ಕಲಶವನ್ನು ಬುದ್ದನ ಚರಣಗಳಲ್ಲಿಟ್ಟು, ‘ನಿಮ್ಮ ಆಶೀರ್ವಾದದಿಂದ ನನಗೆ ಈ ಅಪಾರ ಸಂಪತ್ತು ದೊರಕಿದೆ. ಇದರಲ್ಲಿ ಸ್ವಲ್ಪ ರತ್ನಗಳನ್ನು ತಮಗೆ ಅರ್ಪಿಸಿ ಮಿಕ್ಕಿದ್ದನ್ನು ನಾನು ಇಟ್ಟುಕೊಳ್ಳುತ್ತೇನೆ ಸ್ವಾಮಿ' ಎಂದನು. ಬುದ್ಧ “ನಿನಗೆ ಇದು ಸಂಪತ್ತು ಎನ್ನಿಸಬಹುದು. ಆದರೆ ನನ್ನ ದೃಷ್ಟಿಯಲ್ಲಿ ಇದು ವಿಷ. ಪರಿಶ್ರಮ ಪಡದೇ ದೊರಕಿದ ಹಣ ವಿಷವೇ ಆಗಿರುತ್ತದೆ' ಎಂದ. ಆ ವ್ಯಕ್ತಿಗೆ ಅಸಾಧ್ಯ ಕೋಪ ಬಂತು. ಅವನು ಬುದ್ಧನನ್ನು ಬೈದುಕೊಳ್ಳುತ್ತಾ, ಆ ಕಲಶದೊಂದಿಗೆ ಹೊರಟು ಹೋದ. ನಂತರ ಅದನ್ನೆಲ್ಲಾ ಮಾರಿ ಜಮೀನು ಕೊಂಡುಕೊಂಡು ಸಾಹುಕಾರನಾದ. ಯಾರೋ ಹೊಟ್ಟೆಕಿಚ್ಚಿನವನೊಬ್ಬ ರಾಜನ ಬಳಿಗೆ ಹೋಗಿ, 'ಜಮೀನಿನಲ್ಲಿ ದೊರಕಿದ ಸಂಪತ್ತು ರಾಜಕೋಶ ಸೇರಬೇಕು. ಇವನು ಸ್ವಂತಕ್ಕೆ ಬಳಸಿಕೊಂಡಿದ್ದಾನೆ' ಎಂದು ದೂರು ಕೊಟ್ಟನು. ರಾಜ ಆ ವ್ಯಕ್ತಿಯನ್ನು ಕರೆಸಿ, ಅವನು ಪಡೆದಿದ್ದ ರತ್ನಗಳನ್ನು ವಾಪಸ್ಸು ಕೊಡಲು ಹೇಳಿದನು. ಆ ಬಡಪಾಯಿ ದುಃಖದಿಂದ, 'ಪ್ರಭೂ, ನಾನು ಅವುಗಳನ್ನು ಮಾರಿಕೊಂಡು ಜಮೀನು ಕೊಂಡುಕೊಂಡೆ' ಎಂದನು. ರಾಜ ಕೋಪದಿಂದ ಅವನನ್ನು ಪರಿವಾರಸಮೇತ ಬಂದೀಖಾನೆಯಲ್ಲಿಟ್ಟು ಅವನ ಸಂಪತ್ತನ್ನೆಲ್ಲಾ ತಾನೇ ಇಟ್ಟುಕೊಂಡನು.
ಒಂದು ದಿನ ರಾಜ ಜೈಲಿನ ಪರೀಕ್ಷೆಗಾಗಿ ಬಂದನು. ಆಗ ಆ ವ್ಯಕ್ತಿ, 'ರಾಜರೇ, ನನಗೆ ಆ ಕಲಶ ನೆಲದಲ್ಲಿ ಸಿಕ್ಕಿದಾಗ ಭಗವಾನ್ ಬುದ್ಧ 'ಇದರಲ್ಲಿರುವುದು ರತ್ನವಲ್ಲ ವಿಷ' ಎಂದಿದ್ದರು. ಆ ಮಾತಿನ ಅನುಭವ ನನಗಾಗಿದೆ. ಪರಿಶ್ರಮವಿಲ್ಲದೆ ಪಡೆದ ಹಣ ನಿಜವಾಗಿಯೂ ವಿಷವೇ. ನಾನು ಅವರ ದರ್ಶನ ಮಾಡಿ, ಅವರಲ್ಲಿ ಕ್ಷಮಾಪಣೆ ಕೇಳಿಕೊಳ್ಳಬೇಕು' ಎಂದನು. ರಾಜನು ಭಗವಾನ್ ಬುದ್ಧನನ್ನು ಸನ್ಮಾನ ಪೂರ್ವಕವಾಗಿ ಆಸ್ಥಾನಕ್ಕೆ ಕರೆಸಿಕೊಂಡನು. ಆ ವ್ಯಕ್ತಿಯನ್ನು ಕರೆದೊಯ್ದರು. ಅವನು ಬುದ್ಧನ ಕಾಲಿಗೆ ಬಿದ್ದು, 'ನಿಮ್ಮ ಮಾತು ನಿಜ. ಕಲಶದಲ್ಲಿ ವಿಷವೇ ಇದ್ದುದ್ದು. ಅದೇ ನನ್ನನ್ನು ಜೈಲಿಗೆ ಕಳುಹಿಸಿತು' ಎಂದನು. ಆ ವ್ಯಕ್ತಿಗೆ ಬಿಡುಗಡೆ ನೀಡುವಂತೆ ಬುದ್ದನು ರಾಜನಿಗೆ ಸೂಚಿಸಿದನು.
ಅತಿಕ್ಷೇಷನ ಯೇ ಬಾರ್ಧಾ ಧರ್ಮಸಾತ್ಮಕ್ರಮೇಣ ತು। ಶಕ್ರೂಣಾಂ ಪ್ರಣಿಪಾತೇನ ತೇ ಹೃರ್ಥಾ ಮಾ ಭವಂತು ಮೇ॥
'ಬೇರೆಯವರನ್ನು ಸುಲಿದು ಸಂಪಾದಿಸಿದ, ಬೇರೆಯವರಿಗೆ ನೋವು ಕೊಟ್ಟು ಗಳಿಸಿದ, ಧರ್ಮಕ್ಕೆ ವಿರುದ್ಧವಾಗಿ ಶೇಖರಿಸಿದ ಮತ್ತು ಶತ್ರುವಿನಿಂದ ಬೇಡಿಕೊಂಡು ಬಂದ ಹಣ ನನಗೆ ಬೇಡ ಎಂಬರ್ಥ ಆಗಿದೆ..
ದುಡಿದು ತಿನ್ನುವುದರಲ್ಲಿರುವ ಖುಷಿ ಮತ್ತೊಂದರಲ್ಲಿಲ್ಲ..
ಅನ್ಯಾಯ ಮತ್ತು ಪಾಪದ ದುಡ್ಡಿನಲ್ಲಿ ವೈಭೋಗದ ಜೀವನ ನಡೆಸುವುದು ಹುಲಿಯ ಮೇಲೆ ಕುಳಿತು ಸವಾರಿ ಮಾಡಿದಂತೆ. ನೋಡುವವರು ಭಯ ಪಡುವುದು ಕೇವಲ ಆತ ಕುಳಿತಿರುವ ಹುಲಿಯನ್ನು ನೋಡಿ. ಜೀವನದ ಯಾವುದೇ ಕ್ಷಣದಲ್ಲಿ ಹುಲಿಯ ಮೇಲಿನಿಂದ ಕೆಳಗಿಳಿದರೆ ಸ್ವತಃ ಆ ಹುಲಿ ಆತನನ್ನು ತಿಂದು ಹಾಕುತ್ತದೆ. ಯಾಕೆಂದರೆ ಜೀವನ ಎಂಬ ಪಯಣದಲ್ಲಿ ಮಾಡಿದ ಪಾಪಗಳು ನಮ್ಮ ಜೊತೆಗೆ ಪಯಣಿಸುತ್ತಿರುತ್ತವೆ. ನಮ್ಮನ್ನು ನುಂಗಲು ಸೂಕ್ತ ಸಮಯಕ್ಕಾಗಿ ಕಾಯುತ್ತಿರುತ್ತವೆ. ಮಾಡಿದ ಒಳ್ಳೆಯ ಕೆಲಸಗಳು ಶ್ರೀರಕ್ಷೆಯಾಗಿ ಸದಾ ನಮ್ಮನ್ನು ಕಾಯುತ್ತಿರುತ್ತವೆ ( ಸಿದ್ದೇಶ್ವರ ಶ್ರೀಗಳು)
ಡಾ.ವಿ.ಎಚ್.ಮೂಲಿಮನಿ
No comments:
Post a Comment